![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 26, 2022, 3:04 PM IST
ಕೆರೂರ: ಪ್ರತಿ ಮಂಗಳವಾರ ಜರುಗುವ ಕುರಿ-ಜಾನುವಾರು ಸಂತೆಗೆ ಪ್ರಸಿದ್ಧಿ ಪಡೆದ ಪಟ್ಟಣ ಬೇಸಿಗೆಯಲ್ಲಿ ನಾಗರಿಕರು ಕುಡಿಯುವ ನೀರಿಗಾಗಿ ತತ್ವಾರ ಪಡುವ ಪ್ರಸಂಗಗಳಿಂದ ಅಪಖ್ಯಾತಿಗೆ ಸದಾ ಹೆಸರಾಗಿತ್ತು ಎಂದರೆ ಉತ್ಪ್ರೇಕ್ಷೆಯಲ್ಲ.
ಹೌದು. ಕಳೆದ ಎರಡ್ಮೂರು ವರ್ಷಗಳ ಹಿಂದೆ ಕಡು ಬೇಸಿಗೆಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಸುವ ಸಲುವಾಗಿ ಪಟ್ಟಣ ಪಂಚಾಯಿತಿ ಆವರಣ ಪ್ರತಿನಿತ್ಯ ಸಾರ್ವಜನಿಕರ ಪ್ರತಿಭಟನೆ, ಹೋರಾಟದ ತಾಣವಾಗಿ ಮಾರ್ಪಡುತ್ತಿದ್ದುದು ಸಾಮಾನ್ಯವಾಗಿತ್ತು.
ಕಳೆದ ಎರಡು ವರ್ಷಗಳಿಂದ ಬಿರು ಬೇಸಿಗೆಯಲ್ಲೂ ಪಟ್ಟಣದ ನಿವಾಸಿಗಳನ್ನು ಕುಡಿಯುವ ನೀರಿನ ಬವಣೆ ತಟ್ಟಿಲ್ಲ. ಕಾರಣ ಜಿಲ್ಲೆಯ ರಾಜಕೀಯ ನಾಯಕರ ದೂರದೃಷ್ಟಿ ಹಾಗೂ ಕುಡಿಯುವ ನೀರಿನ ಅಗತ್ಯತೆ ಪೂರೈಕೆಗೆ ಸರಕಾರ ಜಾರಿಗೊಳಿಸಿದ ಕೆರೆ ತುಂಬುವ ಯೋಜನೆಯ ಫಲಶೃತಿ ಇಂದು 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯು ಬೇಸಿಗೆಯಲ್ಲೂ ಯಾವುದೇ ಸಮಸ್ಯೆ ಇಲ್ಲದೇ ನಿರಾಳ ಆಗಿರುವುದಕ್ಕೆ ಸಾಕ್ಷಿಯಾಗಿದೆ.
ಹೆರಕಲ್ ಯೋಜನೆ ಸಹಕಾರಿ: ನೀರಾವರಿ ಸೌಲಭ್ಯವೇ ಮರೀಚಿಕೆಯಾಗಿದ್ದ ಬಾದಾಮಿ ತಾಲೂಕಿನ ಬೀಳಗಿ ಮತಕ್ಷೇತ್ರದ ಸುಮಾರು 30 ಕ್ಕೂ ಹೆಚ್ಚು ಹಳ್ಳಿಗಳ ಒಣ ಬೇಸಾಯ ಜಮೀನುಗಳಿಗೆ ಕಾಲುವೆಗಳ ಮೂಲಕ ನೀರುಣಿಸುವ ಹೆರಕಲ್ ಏತ ನೀರಾವರಿ ಯೋಜನೆಯೊಂದಿಗೆ ತಾಲೂಕಿನ 8 ಪ್ರಮುಖ ಕೆರೆಗಳನ್ನು ತುಂಬುವ (ಪ್ರವಾಹ ಕಾಲಕ್ಕೆ) ಉಪಯುಕ್ತ ಯೋಜನೆಯಿಂದ ಎಲ್ಲೆಡೆ ಸಾಕಷ್ಟು ಅನುಕೂಲವಾಗಿದೆ.
ಘಟಪ್ರಭೆ ನೀರು: ಕಲಾದಗಿ ಗ್ರಾಮದ ಬಳಿಯ ಘಟಪ್ರಭಾ ನದಿಯಿಂದ ಕೊಳವೆ ಮಾರ್ಗದ ಮೂಲಕ ಈ 8 ಕೆರೆಗಳನ್ನು ತುಂಬುವ ಯೋಜನೆ ಚಾಲನೆ ಪಡೆಯಿತು.ಪ್ರಾರಂಭದಲ್ಲಿ ಕೊಳವೆ ಮಾರ್ಗದ ಅಲ್ಲಲ್ಲಿ ಪೈಪ್‌ಗ್ಳು ಒಡೆದು ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೂ ಸಹ, ಅಂದಿನ ಶಾಸಕ ಜೆ.ಟಿ. ಪಾಟೀಲ ಹಾಗೂ ಅಧಿಕಾರಿಗಳು ಮತ್ತೆ ಅವುಗಳನ್ನು ಸರಿಪಡಿಸಿ ಬೇಸಿಗೆಯಲ್ಲಿ ಬರಿದಾಗುವ ಕೆರೆಗಳು ತುಂಬಿಸುವಲ್ಲಿ ಮುಂದಾದರು. ಇದರಿಂದ ಕಲಾದಗಿ ಬಳಿಯ ಕಳಸಕೊಪ್ಪ, ಬಾದಾಮಿ ತಾಲೂಕಿನ ಕೆರೂರ, ಕಟಗೇರಿ, ಜಮ್ಮನ ಕಟ್ಟಿ, ಕಲಬಂದಕೇರಿ, ಹೂಲಗೇರಿ ಸೇರಿದಂತೆ ಪ್ರಮುಖ ಕೆರೆಗಳಲ್ಲಿ ಬೇಸಿಗೆಯಲ್ಲೂ ನೀರು ಸಂಗ್ರಹವಿದೆ.ಇದರಿಂದ ಪಟ್ಟಣ ಹಾಗೂ ಗ್ರಾಮಗಳಲ್ಲಿ ಕಡು ಬೇಸಿಗೆಯಲ್ಲೂ ಕುಡಿಯುವ ನೀರಿಗಾಗಿ ಜನ, ಜಾನುವಾರು ಹಾಗೂ ಪಕ್ಷಿ ಸಂಕುಲಕ್ಕೆ ಯಾವುದೇ ತೊಂದರೆ ಎದುರಾಗಿಲ್ಲ.
ಸಫಲವಾಗದ ಜೆಜೆಎಂ ಕಾಮಗಾರಿ: ಬಾದಾಮಿ ತಾಲ್ಲೂಕಿನ ಬೀಳಗಿ ಮತಕ್ಷೇತ್ರದ ಬಹುತೇಕ ಎಲ್ಲ ಗ್ರಾಮಗಳಿಗೂ ಜಾರಿಗೊಳಿಸಿರುವ ಜಲ ಜೀವನ ಮಿಷನ್ ಯೋಜನೆ ಇನ್ನೂ ಕುಂಟುತ್ತಾ ಸಾಗಿದೆ ಎನ್ನುವುದಕ್ಕೆ ಅನೇಕ ನಿದರ್ಶನಗಳುಂಟು. ಯಂಕಂಚಿ, ಮಣಿನಾಗರ ಸೇರಿ ಹಲವಾರು ಗ್ರಾಮಗಳಲ್ಲಿ ಈ ಜೆಜೆಎಂ ಕಾಮಗಾರಿ ಯಶಸ್ವಿಗೊಂಡಿಲ್ಲ. ಪೈಪ್ ಲೈನ್ ಹಾಕಿದ್ದರೂ ನೀರು ಬಂದಿಲ್ಲ. ಕಾಮಗಾರಿ ಪಡೆದ ಗುತ್ತಿಗೆದಾರರು ಅರ್ಧಕ್ಕೆ ಕೆಲಸ ನಿಲ್ಲಿಸಿ ಹೋಗಿದ್ದಾರೆ. ವಿವಿಧ ಕಾರಣಗಳಿಂದ ಹಲವು ಮನೆಗಳವರೆಗೆ ಬಾರದೇ ಹಳ್ಳಿಗಳ ಜನತೆ ಇನ್ನೂ ಬವಣೆ ಪಡುವುದು ತಪ್ಪಿಲ್ಲ ಎನ್ನುತ್ತಾರೆ ಮಣಿನಾಗರ ಯುವ ಧುರೀಣ ಆನಂದ ಪಾಟೀಲ. ಇನ್ನಾದರೂ ಸಂಬಂ ಧಿಸಿದ ಜನಪ್ರತಿನಿಧಿ ಗಳು, ಅಧಿಕಾರಿಗಳು ಜೆಜೆಎಂ ಕಾಮಗಾರಿ ಪೂರ್ಣಗೊಳಿಸಿ ಹಳ್ಳಿಗರಿಗೆ ಜಲಮುಕ್ತಗೊಳಿಸುವುದು ಅವಶ್ಯಕವಾಗಿದೆ.
ಕೆಲವೆಡೆ ಅನಿವಾರ್ಯ ಕಾರಣಗಳಿಂದ ಕಾಮಗಾರಿಗೆ ತೊಡಕಾಗಿದೆ.ಅಂಥಹ ಕಡೆಗಳಲ್ಲಿ ಕೂಡಲೇ ನಿಗಾ ವಹಿಸಿ ಕ್ರಮ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಶೀಘ್ರ ಪೂರ್ಣಗೊಳಿಸುತ್ತೇವೆ. -ಜಿ.ಎನ್. ಜಿರಲಿಮಠ ಎಇಇ (ಗ್ರಾಮೀಣ ಕುಡಿಯುವ ನೀರು ವಿಭಾಗ ಬಾದಾಮಿ)
ಮಣಿನಾಗರ ಸೇರಿ ಹಲವೆಡೆ ಜೆಜೆಎಂ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಪಡೆದ ಗುತ್ತಿಗೆದಾರರು ಅರ್ಧಕ್ಕೆ ಕೆಲಸ ನಿಲ್ಲಿಸಿ ಹೋಗಿದ್ದಾರೆ. ಹಲವು ಮನೆಗಳವರೆಗೆ ಬಾರದೇ ಹಳ್ಳಿಗಳ ಜನತೆ ಇನ್ನೂ ಬವಣೆ ಪಡುವುದು ತಪ್ಪಿಲ್ಲ. -ಆನಂದ ಪಾಟೀಲ, ಯುವ ಧುರೀಣ ಮಣಿನಾಗರ
ಕೆರೂರಲ್ಲಿ ಈ ಹಿಂದೆ ಕುಡಿಯುವ ನೀರಿನ ಸಮಸ್ಯೆ ಬೇಸಿಗೆಯಲ್ಲಿ ಅಧಿಕವಾಗಿತ್ತು.ಆದರೆ, ಈಗ ಘಟಪ್ರಭೆ ನದಿಯಿಂದ ಕೆರೆ ತುಂಬಲು ಪ್ರಾರಂಭಿಸಿದ ಮೇಲೆ ಸಮಸ್ಯೆ ಎದುರಾಗಿಲ್ಲ. ಪಟ್ಟಣದ ಕೆರೆಯಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹಗೊಂಡಿದ್ದು ಪೂರೈಕೆ ವ್ಯವಸ್ಥೆ ಸುಸ್ಥಿತಿಯಲ್ಲಿದೆ.-ಎನ್.ಕೆಂಚಪ್ಪ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ ಕೆರೂರ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.