ವಾತಾಪಿಯಲ್ಲಿ ಸಾಹಿತ್ಯ ಸಮ್ಮೇಳನ ಸಂಭ್ರಮ
Team Udayavani, Mar 2, 2020, 11:59 AM IST
ಬಾದಾಮಿ (ರವಿಕೀರ್ತಿ ವೇದಿಕೆ): ಕನ್ನಡ ನೆಲ, ಜಲ, ಭಾಷೆಯಲ್ಲಿ ಅಧ್ಯಯನ ಮಾಡಿದ ಅನೇಕರು ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ಪಟ್ಟಣದ ಶ್ರೀ ವೀರಪುಲಿಕೇಶಿ ಸಂಸ್ಥೆಯ ಬಸವಭವನದಲ್ಲಿ ರವಿವಾರ ಕಸಾಪ ವತಿಯಿಂದ ಹಮ್ಮಿಕೊಂಡಿದ್ದ ಬಾದಾಮಿ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಈ ನಾಡಿನ ಕನ್ನಡದ ಶಕ್ತಿ ಬಹಳಷ್ಟಿದೆ. ಕನ್ನಡ ಬಳಕೆ ಶಾಶ್ವತವಾಗಿಸುವ ಪ್ರಯತ್ನವಾಗಬೇಕು. ಕನ್ನಡ ಭಾಷೆ ಉಳಿಸಿ ಬೆಳೆಸುವ ಕ್ರಮ್ನ ಎಲ್ಲರೂ ಮಾಡುತ್ತಿದ್ದು, ಕನ್ನಡ ಭಾಷೆಯನ್ನು ಸಂಪೂರ್ಣ ಅರಿಯಬೇಕು. ಅರಿತುಕೊಂಡಾಗ ಮಾತೃಭಾಷೆ ಅಭಿಮಾನ ಮತ್ತು ಬೆಳೆಸುವ ಕ್ರಮ ಕೈಗೊಳ್ಳಲು ಸಾಧ್ಯ ಎಂದರು.
ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಮಾತನಾಡಿ, ಕನ್ನಡವನ್ನು ಹೆತ್ತ ತಾಯಿಯಂತೆ ಪ್ರೀತಿ ಗೌರವದಿಂದ ಕಾಣಬೇಕು. ಕನ್ನಡ ಬಳಕೆ ಕ್ರಮ ಮಾಡಿದಲ್ಲಿ ಮಾತ್ರ ಇನ್ನೊಬ್ಬರು ಮಾಡಲು ಸಾಧ್ಯ. ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಓದಿಸುತ್ತಿದ್ದಾರೆ. ನಾವುಗಳು ಆಂಗ್ಲಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಕನ್ನಡವನ್ನು ಕನಿಷ್ಠ ಬಳಕೆ ಮಾಡುವ ಯತ್ನಗಳು ದೂರವಾಗಿ ಮೊದಲು ನಾವು ನಂತರ ಎಲ್ಲರೂ ಬಳಕೆ ಮಾಡುವಂತಾಗಬೇಕು ಎಂದರು.
ನಿಕಟಪೂರ್ವ ಸರ್ವಾಧ್ಯಕ್ಷೆ ಮಲ್ಲಿಕಾ ಘಂಟಿ ಧ್ವಜವನ್ನು ಸರ್ವಾಧ್ಯಕ್ಷ ಡಾ| ಶೀಲಾಕಾಂತ ಪತ್ತಾರ ಅವರಿಗೆ ಹಸ್ತಾಂತರಿಸಿ ಮಾತನಾಡಿ, ಗುರುವಿನ ದಾರಿಯಿಂದಾಗಿ ಶಿಷ್ಯನ ಭವಿಷ್ಯ ರೂಪಿತವಾಗುತ್ತದೆ. ಕನ್ನಡ ಭಾಷೆಯನ್ನು ಕರಾವಳಿ ಪ್ರದೇಶದಲ್ಲಿ ಅರ್ಥಪೂರ್ಣವಾಗಿ ಬಳಕೆ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಅದು ನಡೆಯುತ್ತಿಲ್ಲ ಎಂಬುದು ನನಗೆ ನೋವು ತಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಮಾತನಾಡಿ, ಕನ್ನಡದ ಅಭಿಮಾನ ಎಲ್ಲರಲ್ಲೂ ಇರಬೇಕು. ಇಂತಹ ಸಮ್ಮೇಳನಕ್ಕೆ ಕನ್ನಡದ ಎಲ್ಲ ಮನಸ್ಸುಗಳು ಪಾಲ್ಗೊಳ್ಳಬೇಕಿತ್ತು. ಕನ್ನಡ ಭಾಷೆ ನಮ್ಮೆಲ್ಲರ ಉಸಿರಾಗಬೇಕು. ಈ ನಿಟ್ಟಿನಲ್ಲಿ ಸಾಹಿತಿಗಳು, ಶಿಕ್ಷಕರು ಸೇರಿದಂತೆ ಇತರರು ಜನರಲ್ಲಿ ಅರಿವು ಮೂಡಿಸಬೇಕು ಎಂದರು.
ವೀರಪುಲಿಕೇಶಿ ವಿದ್ಯಾ ಸಂಸ್ಥೆ ಚೇರಮನ್ ಎ.ಸಿ.ಪಟ್ಟಣದ ಮಾತನಾಡಿ, ಉದಯಗೊಂಡ ಕನ್ನಡ ರಾಜ್ಯದ ಕನ್ನಡ ಭಾಷೆ ಉಳಿವಿಗೆ ಶ್ರಮಿಸುತ್ತಿರುವುದು ವಿಪರ್ಯಾಸ. ಹಲವು ರಾಜ್ಯಗಳಲ್ಲಿ ಆಯಾ ಭಾಷೆಗಳ ಬಳಕೆಗೆ ಆಡಳಿತ ಸರಕಾರಗಳು ಆದೇಶಿಸಿವೆ. ಆದರೆ, ಇಲ್ಲಿ ಉಳಿಸಿ-ಬೆಳೆಸಬೇಕು ಎಂಬ ಮನೋವೃತ್ತಿ ಸಲ್ಲದು ಎಂದು ಹೇಳಿದರು.
ಸಮ್ಮೇಳನದ ಅಧ್ಯಕ್ಷ ಡಾ| ಶೀಲಾಕಾಂತ ಪತ್ತಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾದಾಮಿ ಚಾಲುಕ್ಯರ ಇತಿಹಾಸ ಪರಂಪರೆ, ಸಾಹಿತ್ಯ ನಡೆದು ಬಂದ ದಾರಿಯನ್ನು ವಿವರಿಸಿ ಬಾದಾಮಿ ತಾಲೂಕಿನ ಸಾಹಿತಿಗಳನ್ನು ಪರಿಚಯಿಸಿದರು.
ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸರ್ವಾಧ್ಯಕ್ಷ ಡಾ| ಶೀಲಾಕಾಂತ ಪತ್ತಾರ ದಂಪತಿಯನ್ನು ಸನ್ಮಾನಿಸಲಾಯಿತು.
ಕೆರೂರ ಚರಂತಿಮಠದ ಡಾ| ಶಿವಕುಮಾರ ಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸಿದ್ದರು. ವೀರಯ್ಯ ಸ್ವಾಮೀಜಿ ಅನುವಾದಿತ ಕೃತಿ ಶ್ರೀà ರೇವಣಾರಾಧ್ಯ ಲೀಲಾ ಸಂಯುಕ್ತ ಹಾಲ್ಮತೋತ್ತೇಜಕ ಪುರಾಣ ಪುಸ್ತಕವನ್ನು ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ, ರವಿ ಕಂಗಳ ಅವರ ವಚನರಸಾಯನ (ಆಧುನಿಕ ವಚನ) ಕೃತಿಯನ್ನು ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಸದಾಶಿವ ಮರಡಿ ವಿರಚಿತ ಮಲಗಿಹಳು ಮುಗುದೆ ಪುಸ್ತಕವನ್ನು ಎ.ಸಿ.ಪಟ್ಟಣದ, ಪಿ.ಡಿ.ವಾಲಿಕಾರ ವಿರಚಿತ ಕೃತಿ ಮಳೆ-ಬೆಳೆ ಪುಸ್ತಕವನ್ನು ಜಿಪಂ ಸದಸ್ಯ ಶರಣಬಸಪ್ಪ ಹಂಚಿನಮನಿ ಬಿಡುಗಡೆಗೊಳಿಸಿದರು.
ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಸಮ್ಮೇಳನ ಯಶಸ್ಸಿಗೆ ಶುಭ ಹಾರೈಸಿದ ಪತ್ರವನ್ನು ವೆಂಕಟೇಶ ಇನಾಮದಾರ ಓದಿದರು. ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ತಹಶೀಲ್ದಾರ್ ಸುಹಾಸ ಇಂಗಳೆ, ಹೊಳಬಸು ಶೆಟ್ಟರ, ಜಿಪಂ ಸದಸ್ಯೆ ಇಂದ್ರವ್ವ ನಾಯ್ಕರ್, ಕನ್ನಡ ಪ್ರಾ ಕಾರ ಸದಸ್ಯ ಮಹಾಂತೇಶ ಹಟ್ಟಿ, ಎಂ.ಡಿ.ಯಲಿಗಾರ, ಮಹೇಶ ಹೊಸಗೌಡ್ರ, ನಿಕಟಪೂರ್ವ ಅಧ್ಯಕ್ಷ ಶಂಕರ ಹೂಲಿ, ರಮೇಶ ಅಥಣಿ, ಆರ್.ಬಿ.ಸಂಕದಾಳ, ಬಿಇಒ ರುದ್ರಪ್ಪ ಹುರಳಿ, ತಾಪಂ ಇಒ ಡಾ| ಪುನೀತ, ಮುಖ್ಯಾಧಿಕಾರಿ ಜ್ಯೋತಿ ಗಿರೀಶ, ಸಿಪಿಐ ರಮೇಶ ಹಾನಾಪುರ, ಸಿಡಿಪಿಒ ಕುಬಕಡ್ಡಿ, ಸಂತೋಷ ಪಟ್ಟಣಶೆಟ್ಟಿ, ಮಹಾಂತೇಶ ಈಳಗೇರ, ನಾಗರಾಜ ಕಾಚೆಟ್ಟಿ ಸೇರಿದಂತೆ ಇತರರಿದ್ದರು.
ತಾಲೂಕು ಅಧ್ಯಕ್ಷ ರವಿ ಕಂಗಳ ಸ್ವಾಗತಿಸಿದರು. ಉಜ್ವಲ ಬಸರಿ ನಿರೂಪಿಸಿದರು. ಸಿ.ಎಸ್.ನಾಗನೂರ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.