9ಕ್ಕೆ ಮದುವೆ, 12ಕ್ಕೆ ವಿಧವೆ; ಈಗ ಜಾಗೃತಿ ಕಾಯಕ
Team Udayavani, Mar 5, 2018, 6:10 AM IST
ಆಕೆಗೆ ಇನ್ನೂ ಆಡಿ ನಲಿಯುವ ವಯಸ್ಸು. ಮದುವೆ, ಗಂಡ-ಹೆಂಡತಿ, ದಾಂಪತ್ಯ ಜೀವನ ಅಂದರೆ ಏನೆಂದೂ ಗೊತ್ತಿರಲಿಲ್ಲ. ಆದರೆ, 9ನೇ ವರ್ಷಕ್ಕೆ ಮದುವೆ ಮಾಡಿಬಿಟ್ಟರು. ಜೀವನದ ಗತಿ ಬದಲಾಯ್ತು ಅನ್ನುವಷ್ಟರಲ್ಲಿ ಗಂಡ ತೀರಿಕೊಂಡ. ಜನ ಅವಳನ್ನು ವಿಧವೆ ಎಂದು ಕರೆವಾಗ ಆಕೆಯಿನ್ನೂ 12ರ ಹುಡುಗಿ! ಅವಳ ಬದುಕೇ ಮುಗಿದು ಹೋಯಿತೆಂದೇ ಜನ ತಿಳಿದರು. ಆದರೆ, ಆಕೆ ಅಳುತ್ತಾ ಮೂಲೆ ಸೇರಲಿಲ್ಲ. ಸುತ್ತಮುತ್ತ ನಡೆಯುವ ಎಲ್ಲ ಬಾಲ್ಯ ವಿವಾಹ ಸಮಾರಂಭಕ್ಕೂ ಹಾಜರಾದಳು. ಊಟ ಮಾಡಲಲ್ಲ, ಮದುವೆ ನಿಲ್ಲಿಸಲು! ಹೀಗೆ ಆಕೆ ಬಾಲ್ಯ ವಿವಾಹದ ವಿರುದ್ಧ ಹೋರಾಟಕ್ಕೆ ನಿಂತಳು.
ಇದು ಬಾಗಲಕೋಟೆ ತಾಲೂಕಿನ ಶಿರೂರ ಗ್ರಾಮದ ಗುರಮ್ಮ ಹಂಪಯ್ಯ ಸಂಕೀನ ಎಂಬ 74 ವರ್ಷದ ವೃದ್ಧೆಯ ಕಥೆ. ಗುರಮ್ಮ ಸಂಕೀನ ಹೆಸರು ಕೇಳಿದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಭಯ. ಕಾರಣ, ಸದ್ದಿಲ್ಲದೆ ನಡೆಯುವ ಬಾಲ್ಯ ವಿವಾಹಗಳನ್ನು ಇವರು ತಡೆದು, ಅಧಿಕಾರಿಗಳಿಗೆ ಒಪ್ಪಿಸುತ್ತಾರೆ. ಕಿರಿಯ ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿದ್ದಾಗ, ಯಾವ ಹಿರಿಯ ಅಧಿಕಾರಿಯನ್ನು ಹಿಡಿಯಬೇಕು ಎಂಬುದು ಗುರಮ್ಮಗೆ ಗೊತ್ತು. ಹೀಗಾಗಿ ಎಲ್ಲರಿಗೂ ಗುರಮ್ಮ ಅಂದರೆ ಭಯಮಿಶ್ರಿತ ಗೌರವ.
9ರ ಬಾಲೆಗೆ 40ರ ವರ!: ಗುರಮ್ಮ ಸಂಕೀನ ಅವರ ಬದುಕಿನ ಪುಟಗಳು ಖುಷಿಯಿಂದ ಕೂಡಿಲ್ಲ. ತನಗೆ ಏನಾಗುತ್ತದೆ, ಅದನ್ನು ಹೇಗೆ ವಿರೋಧಿಸಬೇಕೆಂಬ ಅರಿವೂ ಇಲ್ಲದ 9ನೇ ವಯಸ್ಸಿಗೆ ಅವರ ಮದುವೆಯಾಯ್ತು. ವಿಚಿತ್ರ ಅಂದ್ರೆ, ಕೈ ಹಿಡಿದ ಗಂಡನಿಗೆ 40 ವರ್ಷ! ದುರ್ದೈವಕ್ಕೆ ಮದುವೆಯಾಗಿ ಮೂರು ವರ್ಷದೊಳಗೆ ಪತಿ ಕೊನೆಯುಸಿರೆಳೆದಿದ್ದ.ಆಘಾತ, ನೋವನ್ನು ಎದೆಯಲ್ಲಿ ಬಚ್ಚಿಟ್ಟುಕೊಂಡು ಹೊಸ ಜೀವನ ನಡೆಸಲು ನಿರ್ಧರಿಸಿದರು ಗುರಮ್ಮ.
4ನೇ ತರಗತಿಯಲ್ಲಿದ್ದಾಗಲೇ ಮದುವೆಯಾಗಿದ್ದರಿಂದ ಓದು ನಿಂತಿತ್ತು. ಪತಿ ತೀರಿದ ಬಳಿಕ ಬಾಹ್ಯ ವಿದ್ಯಾರ್ಥಿಯಾಗಿ 7ನೇ ತರಗತಿ ಪಾಸಾದರು. ಮುಂದೆ 30 ವರ್ಷಗಳ ಬಳಿಕ ಮತ್ತೆ ಬಾಹ್ಯ ವಿದ್ಯಾರ್ಥಿಯಾಗಿ 10ನೇ ತರಗತಿಯನ್ನೂ ಮುಗಿಸಿದರು. ಇದು ಅವರ ಹೊಟ್ಟೆಪಾಡಿಗೆ ಕೈ ಹಿಡಿಯಿತು. ಮುಂದೆ ಎನ್‌ಟಿಸಿ ಮುಗಿಸಿ, ಅಂಗನವಾಡಿ ಶಿಕ್ಷಕಿಯಾದರು. ಆಗ ಅವರಿಗೆ ಬರುತ್ತಿದ್ದದ್ದು ಕೇವಲ 50ರೂ. ಸಂಬಳ.
ಬಾಲ್ಯ ವಿವಾಹ ವಿರುದ್ಧ ಹೋರಾಟ: ತನಗಾದಂತೆ ಯಾರಿಗೂ ಆಗಬಾರದೆಂಬ ದೃಷ್ಟಿಯಿಂದ ಅವರು ಬಾಲ್ಯ ವಿವಾಹದ ವಿರುದಟಛಿ ಜಾಗೃತಿ ಮೂಡಿಸುತ್ತಿದ್ದಾರೆ. ಸಾಮೂಹಿಕ ವಿವಾಹಗಳು ನಡೆಯುವಲ್ಲಿ ಗುರಮ್ಮ ಇರುತ್ತಾರೆ. ಮೊದಲು ಸಾಮೂಹಿಕ ವಿವಾಹದಲ್ಲೂ ಬಾಲ್ಯ ವಿವಾಹಗಳು ಸದ್ದಿಲ್ಲದೆ ನಡೆಯುತ್ತಿದ್ದವಂತೆ. ಗುರಮ್ಮರ ಹೋರಾಟದಿಂದ ಈಗ ಸಾಮೂಹಿಕ ವಿವಾಹ ನಡೆಸುವ ರಾಜಕಾರಣಿಗಳು ಭಯಪಟ್ಟು, ಆ ಸಾಹಸಕ್ಕೆ ಕೈ ಹಾಕುತ್ತಲೇ ಇಲ್ಲ. ಹೋರಾಟ, ಸಂಕಷ್ಟ, ಬಡತನದಲ್ಲೂ ಮಾದರಿ ಬದುಕು ಸವೆಸಿದ ಇವರು, ಲಕ್ಷಾಂತರ ಬಾಲ್ಯ ವಿವಾಹ ತಡೆದಿದ್ದಾರೆ.
ನಡೆದಾಡುವ ವಿವಿ: ಗುರಮ್ಮ ಅವರು ಕೇವಲ ಹೋರಾಟಕ್ಕೆ ಮಾತ್ರ ಸೀಮಿತವಾಗಿಲ್ಲ. ನಿಂತಲ್ಲೇ ಜಾನಪದ ಗೀತೆ ರಚಿಸಿ, ಹಾಡುವ ಕೌಶಲ್ಯ ಅವರಲ್ಲಿದೆ. ಹೀಗಾಗಿ ಇವರನ್ನು ನಡೆದಾಡುವ ವಿವಿ ಎಂದೂ ಕೆಲವರು ಕರೆಯುತ್ತಾರೆ. ಜಿಲ್ಲಾಡಳಿತ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಇವರಿಗೆ ಹಲವು ಪ್ರಶಸ್ತಿ, ಗೌರವ ನೀಡಿ ಪುರಸ್ಕರಿಸಿವೆ.
– ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.