ಮುಧೋಳ: ಅಪಘಾತಕ್ಕೆ ಆಹ್ವಾನ ನೀಡುವ ಜಾಲರಿ
ಎರಡೂ ಬದಿ ಓಡಾಡುವ ವಾಹನಗಳು ತೀರಾ ಹತ್ತಿರ ಬರುವವರೆಗೆ ಕಾಣಿಸಲ್ಲ.
Team Udayavani, Jul 5, 2023, 5:55 PM IST
ಮುಧೋಳ: ನಗರದ ಪ್ರಮುಖ ರಸ್ತೆಗಳಲ್ಲಿನ ಡಿವೈಡರ್ ನಲ್ಲಿ ಅಳವಡಿಸಿರುವ ಕಬ್ಬಿಣದ ಜಾಲರಿಯಿಂದಾಗಿ ಹಲವಾರು ಅಪಘಾತಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಸಾರ್ವಜನಿಕರಿಗೆ ಆಕ್ರೋಶಕ್ಕೆ ಕಾರಣವಾಗಿದೆ.
ನಗರದಲ್ಲಿ ಚತುಷ್ಪಥಗಳ ಮಧ್ಯೆ ನಿರ್ಮಿಸಿರುವ ಡಿವೈಡರ್‌ನಲ್ಲಿ ಎತ್ತರದ ಕಬ್ಬಿಣದ ಜಾಲರಿ ಅಳವಡಿಸಿರುವುದರಿಂದ ರಸ್ತೆ ಎರಡೂ ಬದಿ ವಾಹನಗಳು ಸಂಚರಿಸುವುದರಿಂದ ರಸ್ತೆ ದಾಟುವ ಪಾದಚಾರಿಗಳಿಗೆ, ವಾಹನ ಸವಾರರಿಗೆ ತೀವ್ರ ತೊಂದರೆಯುಂಟಾಗಿದೆ.
ನಗರದ ಕೆ.ಆರ್. ಲಕ್ಕಂ ಶಾಲೆಯಿಂದ ರನ್ನ ವೃತ್ತದವರೆಗೆ, ಮಂಡಬಸಪ್ಪನ ದೇವಸ್ಥಾನದಿಂದ ರನ್ನ ವೃತ್ತದವರೆಗೂ ಅದೇ ರೀತಿ ಬಸ್ ಉತ್ತೂರು ಗೇಟ್ ನಿಂದ ಕೃಷಿ ಇಲಾಖೆ ಕಚೇರಿವರೆಗೆ ಅಳವಡಿಸಿರುವ ಕಬ್ಬಿಣದ ಜಾಲರಿ ಗ್ಯಾಲರಿ ಎತ್ತರ ಮಟ್ಟದಲ್ಲಿ ಇರುವುದರಿಂದ ಎರಡೂ ಬದಿ ಓಡಾಡುವ ವಾಹನಗಳು ತೀರಾ ಹತ್ತಿರ ಬರುವವರೆಗೆ ಕಾಣಿಸಲ್ಲ.
ಒಂದು ಕ್ಷಣ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಇಂಗಳಗಿ ರಸ್ತೆ ಹಾಗೂ ಕೆ.ಆರ್. ಲಕ್ಕಂ ಶಾಲೆ ರಸ್ತೆಯ ಎರಡೂ ಬದಿಯಲ್ಲಿ ತಹಸೀಲ್ದಾರ್ ಕಚೇರಿ ಗೇಟ್‌ಗಳು ಇರುವುದರಿಂದ ಈ ಮಾರ್ಗದಲ್ಲಿ ಹೆಚ್ಚು ಜನಸಂದಣಿಯಿರುತ್ತದೆ. ಇದೇ ಮಾರ್ಗದಲ್ಲಿ ಹಲವು ಬಾರಿ ಅಪಘಾತಗಳು ಸಂಭವಿಸಿವೆ.
ರಸ್ತೆ ಸೌಂದರ್ಯೀಕರಣಕ್ಕಾಗಿ ಕಬ್ಬಿಣದ ಜಾಲರಿ ಹಾಕಿರುವುದರಿಂದ ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸದಿದ್ದರೂ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಸಣ್ಣಪುಟ್ಟ ರಸ್ತೆಗಳು ವಿಲೀನವಾಗುವಲ್ಲಿ ಕನಿಷ್ಠ ಮೀಟರ್‌ವರೆಗೆ ಜಾಲರಿ ತೆರವುಗೊಳಿಸಿದರೆ ಅಪಘಾತ ತಡೆಗಟ್ಟಬಹುದು. ಅದೂ ಸಾಧ್ಯವಾಗದಿದ್ದರೆ ಅಂತಹ ಕಡೆಗಳಲ್ಲಿ ರೋಡ್ ಹಂಪ್ ಹಾಕಿದರೆ ಅಪಘಾತ ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ರಸ್ತೆಯಲ್ಲಿನ ಡಿವೈಡರ್ ನಲ್ಲಿ ಅಳವಡಿಸಿರುವ ಕಬ್ಬಿಣದ ಜಾಲರಿಯಿಂದ ಎರಡೂ ಬದಿಯಲ್ಲಿ ಓಡಾಡುವ ವಾಹನಗಳು ತೀರಾ ಹತ್ತಿರ ಬರುವವರೆಗೆ ಕಾಣಲ್ಲ. ಇದರಿಂದಾಗಿ ರಸ್ತೆ ದಾಟುವಾಗ ಹೆಚ್ಚು ತೊಂದರೆಯಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಪ್ರಮುಖ ಕ್ರಾಸ್‌ಗಳಲ್ಲಿ ವಾಹನದ ವೇಗ ತಗ್ಗಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಕಲ್ಪಿಸಿಕೊಡಬೇಕು.
*ಅಶೋಕ ಮುತ್ತೂರ,
ವಾಹನ ಸವಾರ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.