ಮುಧೋಳ: 36 ಹಳ್ಳಿಗಳಿಗೆ ಒಂದೇ ಒಂದು ಪೊಲೀಸ್ ಠಾಣೆ
50000ಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ.
Team Udayavani, Oct 25, 2024, 4:37 PM IST
ಉದಯವಾಣಿ ಸಮಾಚಾರ
ಮುಧೋಳ: ನಾಗಾಲೋಟದಲ್ಲಿ ಬೆಳೆಯುತ್ತಿರುವ ಮುಧೋಳ ತಾಲೂಕಿಗೆ ಅವಶ್ಯವಿರುವ ಗ್ರಾಮೀಣ ಪೊಲೀಸ್ ಠಾಣೆಯ ನಿರೀಕ್ಷೆ ಇದೀಗ ಮತ್ತಷ್ಟು ಹೆಚ್ಚಾಗಿದೆ. ಅ.21ರಂದು ಬೆಂಗಳೂರಿನಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರು ರಾಜ್ಯಕ್ಕೆ 100 ಹೊಸ ಪೊಲೀಸ್ ಠಾಣೆ ಮಂಜೂರು ಮಾಡುವ ಇಂಗಿತ ವ್ಯಕ್ತಪಡಿಸಿರುವ ಬೆನ್ನಲ್ಲೇ ಮುಧೋಳ ಮತಕ್ಷೇತ್ರದ ಶಾಸಕರು, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರ್.ಬಿ. ತಿಮ್ಮಾಪುರ ಅವರು ಮುಧೋಳಕ್ಕೆ ಗ್ರಾಮೀಣ ಪೋಲೀಸ್ ಠಾಣೆ ಮಂಜೂರು ಮಾಡಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಮುಧೋಳದಲ್ಲಿ ಒಂದೇ ಪೊಲೀಸ್ ಠಾಣೆಯಿರುವುದರಿಂದ ಇಲ್ಲಿನ ಪೊಲೀಸ್ ಸಿಬ್ಬಂದಿ ಒತ್ತಡದಲ್ಲಿಯೇ ಕಾರ್ಯ ನಿರ್ವಹಿಸಬೇಕಿದೆ. ಪ್ರತಿನಿತ್ಯ ಕುಂದುಕೊರತೆ ಹೇಳಿಕೊಂಡು ಠಾಣೆಗೆ ಬರುವ ನೂರಾರು ಜನರನ್ನು ನಿಭಾಯಿಸುವಲ್ಲಿ
ಹೈರಾಣಾಗಿರುವ ಪೊಲೀಸ್ ಸಿಬ್ಬಂದಿ ವಿಶ್ರಾಂತಿರಹಿತ ಕೆಲಸ ಮಾಡುವಂತಾಗಿದೆ. ಕ್ಷೇತ್ರದ ಸಮಸ್ಯೆ ಅರಿತಿರುವ ಜಿಲ್ಲಾ ಉಸ್ತುವಾರಿ ಸಚಿವರು ಇದೀಗ ಗ್ರಾಮೀಣ ಪೊಲೀಸ್ ಠಾಣೆ ಮಂಜೂರಿಗೆ ಪ್ರಯತ್ನಿಸುತ್ತಿರುವುದು ಶೀಘ್ರವೇ ಸಿಹಿ ಸುದ್ದಿ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾತ್ರಿ ಗಸ್ತಿಗೆ ತೊಂದರೆ: ಮುಧೋಳದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಇರದ ಕಾರಣ ಕನಿಷ್ಠ 36 ಹಳ್ಳಿಗಳಿಗೆ ಒಂದೇ ಪೊಲೀಸ್ ಠಾಣೆಯಿಂದ ಕಾರ್ಯ ನಿರ್ವಹಿಸುವ ಅನಿವಾರ್ಯತೆ ಇದೆ. ಇನ್ನು ನಗರ 31ವಾರ್ಡ್‌ಗಳನ್ನು ಹೊಂದಿದ್ದು, 50000ಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಇದರಿಂದ ನಗರದಲ್ಲಿ ರಾತ್ರಿ ಗಸ್ತಿಗೆ ಸಿಬ್ಬಂದಿ ನೇಮಿಸುವುದೇ ಇಲ್ಲಿನ ಸಿಬ್ಬಂದಿಗೆ ದೊಡ್ಡ ತಲೆನೋವಾಗಿದೆ. ಗ್ರಾಮೀಣ ಪೊಲೀಸ್ ಠಾಣೆ ಮಂಜೂರಾದರೆ ಗಸ್ತು ಪ್ರಮಾಣ ಹೆಚ್ಚಿಸಿ ಕಳ್ಳತನದಂತಹ ಪ್ರಕರಣಗಳನ್ನು ಹತೋಟಿಗೆ ತರಬಹುದು ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.
ಬಂದೋಬಸ್ತ್ ಕಿರಿಕಿರಿ: ಮುಧೋಳ ರಾಜ್ಯದಲ್ಲಿಯೇ ಸೂಕ್ಷ್ಮ ಪ್ರದೇಶವೆಂದು ಗುರುತಿಸಿಕೊಂಡಿದೆ. ಇಲ್ಲಿನ ಪ್ರತಿಯೊಂದು ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಬಂದೋಬಸ್ತ್ ಅವಶ್ಯಕತೆಯಿರುತ್ತದೆ. ಗಣೇಶ ಹಬ್ಬ, ಈದ್ ಮಿಲಾದ್ ಸೇರಿದಂತೆ ಎಲ್ಲ ಧರ್ಮಗಳ ಹಬ್ಬದ ಸಂಭ್ರಮಾಚರಣೆ ವೇಳೆ ಮುಧೋಳ ತಾಲೂಕನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಇಲ್ಲಿನ
ಬಂದೋಬಸ್ತ್ ಗಾಗಿ ರಾಜ್ಯದ ಬೇರೆ ಬೇರೆ ಕಡೆಯಿಂದ ಸಿಬ್ಬಂದಿ ನಿಯೋಜಿಸುವ ಅನಿವಾರ್ಯತೆ ಇದೆ. ಒಂದೇ ಒಂದು ಠಾಣೆಯಿರುವುದರಿಂದ ಬಂದೋ ಬಸ್ತ್ ನಂತಹ ಸಂದರ್ಭದಲ್ಲಿ ಇಲ್ಲಿನ ಸಿಬ್ಬಂದಿತೀವ್ರ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾರೆ.
ಗ್ರಾಮೀಣ ಪೊಲೀಸ್ ಠಾಣೆ ನಿರ್ಮಿಸಿದರೆ ಸಿಬ್ಬಂದಿ ಮೇಲಿನ ಒತ್ತಡ ಕಡಿಮೆಗೊಳಿಸಬಹುದು.
ಟ್ರಾಫಿಕ್ ಕಿರಿಕಿರಿ: ಮುಧೋಳ ನಗರ ವಾಣಿಜ್ಯೀಕರಣದಿಂದ ಹೆಚ್ಚು ಅಭಿವೃದ್ಧಿ ಹೊಂದಿದೆ. ಸಕ್ಕರೆ, ಸಿಮೆಂಟ್, ಸುಣ್ಣ, ಬೆಲ್ಲ ತಯಾರಿಕೆಯಲ್ಲಿ ರಾಜ್ಯದಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ನಗರದಲ್ಲಿ ಸಂಚರಿಸುವುದರಿಂದ ಇಲ್ಲಿನ ಪೊಲೀಸ್ ಸಿಬ್ಬಂದಿಗೆ ಟ್ರಾಫಿಕ್ ನಿವಾರಣೆಯೇ ದೊಡ್ಡ ತಲೆನೋವಾಗಿದೆ. ಇನ್ನು ನವೆಂಬರ್‌ದಿಂದ ಕಬ್ಬು ನುರಿಸುವ ಹಂಗಾಮು ಶುರುವಾದರೆ ಮಿತಿಮೀರಿದ ಟ್ರಾಕ್ಟರ್‌ಗಳ ಓಡಾಟದಿಂದ ನಗರ ಪ್ರತಿನಿತ್ಯ ಜನಜಂಗುಳಿಯಿಂದ ಕೂಡಿರುತ್ತದೆ. ಬಂದೋಬಸ್ತ್, ಗಸ್ತು, ಬೀಟ್ ವ್ಯವಸ್ಥೆಯನ್ನು ಸರಿದೂಗಿಸಿಕೊಂಡು ಟ್ರಾಫಿಕ್ ಸಮಸ್ಯೆ ನಿವಾರಿಸುವುದು ಪೊಲೀಸ್ ಸಿಬ್ಬಂದಿಗೆ ಅಸಾಧ್ಯದ ಕೆಲಸವಾಗಿದೆ. ಗ್ರಾಮೀಣ ಠಾಣೆ ಮಂಜೂರಾದರೆ ಸಿಬ್ಬಂದಿ ಹೆಚ್ಚಳದಿಂದ ಟ್ರಾಫಿಕ್ ಕಿರಿಕಿರಿಯನ್ನು ಸರಾಗವಾಗಿ ನಿಭಾಯಿಸಬಹುದು. ಇದರಿಂದ ರಸ್ತೆ ಅಪಘಾತಗಳನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.
ಮನೆಮಠ ಮರೆತು ಕೆಲಸ ನಿರ್ವಹಿಸುವ ಅನಿವಾರ್ಯತೆ:
ರಾಜಕೀಯವಾಗಿ, ಧಾರ್ಮಿಕವಾಗಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಿಕೊಂಡಿರುವ ಮುಧೋಳ ತಾಲೂಕಿನ ಜನರು ನೆಮ್ಮದಿ ಜೀವನ ನಡೆಸುತ್ತಿರುವುದರ ಹಿಂದೆ ಇಲ್ಲಿನ ಪೊಲೀಸ್ ಸಿಬ್ಬಂದಿಯ ಅವಿರತ ಶ್ರಮ ಅಡಗಿದೆ. ಪ್ರತಿಯೊಂದು ಕಾರ್ಯಕ್ರಮದಲ್ಲೂ ನಗರವನ್ನು ಹದ್ದಿನ ಕಣ್ಣಿನಿಂದ ಅವಲೋಕಿಸುವ ಇಲ್ಲಿನ ಸಿಬ್ಬಂದಿ ಹಬ್ಬ ಹರಿದಿನದಂತಹ ಸಂದರ್ಭದಲ್ಲಿ ರಜೆ, ಮನೆ-ಮಠ ಮರೆತು ಕಾರ್ಯ ನಿರ್ವಹಿಸುತ್ತಾರೆ. ಅದಕ್ಕೆ ಉತ್ತಮ ಉದಾಹರಣೆಯೆಂದರೆ ಇತ್ತೀಚಿನ ಗಣೇಶ ಹಬ್ಬ. ಹಬ್ಬದ ವೇಳೆ ನಡೆಯುತ್ತಿದ್ದ ಪ್ರತಿಯೊಂದು ಘಟನೆಗಳ ಮೇಲೂ ನಿಗಾ ವಹಿಸಿದ್ದ ಪೊಲೀಸ್ ಇಲಾಖೆ ಹಬ್ಬವನ್ನು ಶಾಂತವಾಗಿ ಸಮಾರೋಪಗೊಳ್ಳುವಂತೆ ಮಾಡಿ ರಾಜ್ಯಕ್ಕೆ ಮುಧೋಳ ಪೊಲೀಸ್ ಠಾಣೆ ಸಿಬ್ಬಂದಿ ಮಾದರಿಯಾಗಿದ್ದಾರೆ.
ಒಟ್ಟಿನಲ್ಲಿ ಮುಧೋಳದ ಪೊಲೀಸರ ಒತ್ತಡ ಕಡಿಮೆಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮೀಣ ಠಾಣೆ ಮಂಜೂರು ಮಾಡುವಲ್ಲಿ ಯಶಸ್ವಿಯಾದರೆ ತಾಲೂಕಿನ ಜನರಿಗೆ ಹೆಚ್ಚು ಹಾಗೂ ಪರಿಣಾಮಕಾರಿಯಾಗಿ ಸೇವೆ ಒದಗಿಸಬಹುದು ಎಂಬ ಇಂಗಿತ ವ್ಯಕ್ತಪಡಿಸುತ್ತಾರೆ ಇಲ್ಲಿನ ಸಿಬ್ಬಂದಿ.
ಮುಧೋಳ ತಾಲೂಕಿಗೆ ಗ್ರಾಮೀಣ ಪೊಲೀಸ್ ಠಾಣೆ ಅವಶ್ಯಕತೆ ಕುರಿತು ಈಗಾಗಲೇ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗಿದೆ. ಈ ನಿಟ್ಟಿನಲ್ಲಿ ನಾನು ನಿರಂತರ ಪ್ರಯತ್ನದಲ್ಲಿದ್ದು, ಶೀಘ್ರವೇ ತಾಲೂಕಿನ ಜನತೆಗೆ ಸಿಹಿ ಸುದ್ದಿ ದೊರೆಯುವ ವಿಶ್ವಾಸವಿದೆ.
●ಆರ್.ಬಿ.ತಿಮ್ಮಾಪುರ,
ಜಿಲ್ಲಾ ಉಸ್ತುವಾರಿ ಸಚಿವರು.
*ಗೋವಿಂದಪ್ಪ ತಳವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri:ಆಸ್ಪತ್ರೆಯಿಂದ ಮರಳುತ್ತಿದ್ದಾಗ ರಿಕ್ಷಾ ಪಲ್ಟಿ; ರೋಗಿ ಮತ್ತೆ ಆಸ್ಪತ್ರೆಗೆ ದಾಖಲು!
T20; ಅಭಿಷೇಕ್ ಅಬ್ಬರದ ಶತಕ: ಇಂಗ್ಲೆಂಡ್ ವಿರುದ್ಧ 4-1 ರಿಂದ ಸರಣಿ ಗೆದ್ದ ಭಾರತ
JDS: ಜಿ.ಟಿ.ದೇವೇಗೌಡರ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ತಿಲ್ಲ: ಎಚ್.ಡಿ.ಕುಮಾರಸ್ವಾಮಿ
Gangolli: ತಿಂಗಳು ಕಳೆದರೂ ಸಿಗದ ಮೀನುಗಾರನ ಸುಳಿವು
Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ; ಸೂಚನೆ