ತಾಪಂ ಸದಸ್ಯರಿಂದ ಅಧಿಕಾರಿಗಳ ತರಾಟೆ
Team Udayavani, Dec 9, 2018, 4:57 PM IST
ಮುಧೋಳ: ಸರ್ಕಾರದ ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ವಿತರಿಸುವ ಸಂದರ್ಭದಲ್ಲಿ ನಮ್ಮ ಗಮನಕ್ಕೆ ತರುತ್ತಿಲ್ಲ ಹಾಗೂ ಸಭೆಯ ಮಾಹಿತಿ, ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಅಧಿಕಾರಿಗಳು ಸಮರ್ಪಕವಾಗಿ ನೀಡುತ್ತಿಲ್ಲ ಎಂದು ತಾಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಸಭೆಗೆ ಬರಲು ನಮಗೆ ನೋಟಿಸ್ ಹಾಗೂ ತಾಪಂ ಇಲಾಖೆವಾರು ಅಭಿವೃದ್ಧಿಪರ ಕಾರ್ಯಗಳ ಮಾಹಿತಿ ತಲುಪಿಲ್ಲ ಎಂದರು.
ಭಂಟನೂರ ಮತ್ತು ಚಿಕ್ಕೂರ ಶಾಲೆಯಲ್ಲಿ ಸೈಕಲ್ ವಿತರಣೆ ವೇಳೆ ನಮಗೆ ಆಹ್ವಾನಿಸದ ಮುಖ್ಯೋಪಾಧ್ಯಾಯರನ್ನು ಅಮಾನತು ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು. ಈ ಸಂಬಂಧ ಬಿಇಒ ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ತಾಪಂ ಇಒ ಹೇಳಿದರು.
ತಾಪಂಗೆ ಒಳಪಡುವ ತಾಲೂಕಿನ ಆಸ್ತಿ ಬಗ್ಗೆ ಮಾಹಿತಿ ಕೇಳಿದ್ದರೂ ಮಾಹಿತಿ ಏಕೆ ಕೊಟ್ಟಿಲ್ಲ ಎಂದು ಸದಸ್ಯರು ಪ್ರಶ್ನಿಸಿದರು. ಈ ಕುರಿತು ಈಗಾಗಲೇ ಮಾಹಿತಿ ರವಾನಿಸಲಾಗಿದೆ, ಅದನ್ನು ಪರಿಶೀಲಿಸಿ ತಿಳಿಸಲಾಗುವುದು ಎಂದು ಇಒ ಉತ್ತರಿಸಿದರು. ವರ್ಷದಿಂದ ಖಾಲಿ ಬಿದ್ದ ಮಳಿಗೆಗೆ ಬಾಡಿಗೆ ಏಕೆ ನೀಡಿಲ್ಲ ಎಂದು ಪ್ರಶ್ನಿಸಿದರು.
ಕೃಷಿ ಇಲಾಖೆ ಅಧಿಕಾರಿಗಳು ಅನುಕೂಲಸ್ಥರಿಗೆ ಸರ್ಕಾರಿ ಯೋಜನೆಗಳ ಸವಲತ್ತು ನೀಡುತ್ತಾರೆ, ಉಳಿದವರಿಗೆ ಕ್ಯಾರೆ ಎನ್ನುತ್ತಿಲ್ಲ ಎಂದು ಸದಸ್ಯ ಶ್ರೀಶೈಲ ಆರೋಪಿಸಿದರು. ಈ ವಿಷಯವನ್ನು ಅಧ್ಯಕ್ಷರ ಸಮ್ಮುಖದಲ್ಲಿ ಬಗೆಹರಿಸಲಾಗಿದೆ ಎಂದಾಗ ಮತ್ತೆ ವಿಷಯ ವಿಕೋಪಗೊಂಡಿತು. ಸದಸ್ಯರು ಏಕವಚನದಲ್ಲಿ ಮಾತನಾಡಬೇಡಿ ಎಂದು ಅಧಿಕಾರಿ ಹೇಳಿದಾಗ ವಿಷಯ ಅಧ್ಯಕ್ಷರಿಗೂ ಮೀರಿದಾಗ ಸಭೆಯಲ್ಲಿ ಚರ್ಚೆಯಾದ ಕೆಲಸಗಳು ಅನುಷ್ಠಾನಕ್ಕೆ ಬಾರದಿದ್ದರೆ ಸಭೆ ಏಕೆ ಎಂದು ಕೋಪಗೊಂಡ ಸದಸ್ಯ ಸಭಾತ್ಯಾಗ ಮಾಡಿದರು.
ತಾಲೂಕಿನಲ್ಲಿರುವ ಬ್ಯಾರೇಜುಗಳನ್ನು ಪಡಸಲಗಿ ಬ್ಯಾರೇಜ್ ಮಾದರಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಸದಸ್ಯರು ಈ ಕಾರ್ಯ ನಡೆದಿದೆ. ಸರ್ಕಾರವು ಸಮಾನಾಂತರ ಬ್ಯಾರೇಜ್ ಆರಂಭಿಸಲು ಚಿಂತನೆ ನಡೆಸಿದೆ ಎಂದರು. ತಾಪಂ ಅಧ್ಯಕ್ಷ ಟಿ.ಆರ್. ಬಟಕುರ್ಕಿ ಅಧ್ಯಕ್ಷತೆವಹಿಸಿದ್ದರು. ತಾಪಂ ಇಒ ಬಿ.ವಿ. ಅಡವಿಮಠ, ಸಾಮಾಜಿಕ ನ್ಯಾಯ ಸಮಿತಿ ರುಕ್ಮವ್ವ ಪಾಟೀಲ, ಸದಸ್ಯರಾದ ಸಂಗಪ್ಪ ಇಮ್ಮನವರ, ಯಶವಂತ ಹರಿಜನ, ಪರಪ್ಪ ಜನವಾಡ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.