National Award ಮಹಾಲಿಂಗಪುರದ ಸಪನಾ ಅನಿಗೋಳ; ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕಿ
ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿಗೆ ಸಂದ ರಾಷ್ಟ್ರಮಟ್ಟದ ಗೌರವ
Team Udayavani, Aug 27, 2023, 10:54 PM IST
ಮಹಾಲಿಂಗಪುರ : ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಸಪನಾ ಶ್ರೀಶೈಲ ಅನಿಗೋಳ ಅವರಿಗೆ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ನೀಡುವ 2023ನೇ ಸಾಲಿನ ಅತ್ಯುತ್ತಮ ಶಿಕ್ಷಕಿ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ದೇಶಾದ್ಯಂತ 50 ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ರಾಜ್ಯದ ಇಬ್ಬರು ಶಿಕ್ಷಕರಲ್ಲಿ ಮಹಾಲಿಂಗಪುರದ ಸಪನಾ ಅನಿಗೋಳ ಅವರು ಒಬ್ಬರು ಎಂಬುವದು ವಿಶೇಷ.
ಪರಿಚಯ
ಎಂ.ಎಸ್ಸಿ. ಬಿ.ಇಡಿ ಪದವಿಧರರಾದ ಅನಿಗೋಳ ಅವರು ಕಳೆದ 19 ವರ್ಷಗಳಿಂದ ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಧುನಿಕತೆಗೆ ತಕ್ಕಂತೆ ಹೊಸ ಬೋಧನಾ ಕೌಸಲ್ಯಗಳನ್ನು ಅಳವಡಿಸಿಕೊಂಡು ಸ್ಮಾರ್ಟಕ್ಲಾಸ್, ಶೈಕ್ಷನೀಕ ಆ್ಯಪ್, ಕಂಪ್ಯೂಟರ್ ಬಳಕೆ ಮಾಡಿಕೊಂಡು ಅತ್ಯಂತ ಕಠಿಣ ವಿಷಯಗಳನ್ನು ಮಕ್ಕಳ ಮನಮುಟ್ಟುವಂತೆ ತಿಳಿಸುತ್ತಾ ಸಾವಿರಾರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ವಿಜ್ಞಾನ ಶಿಕ್ಷಕಿಯಾಗಿದ್ದಾರೆ.
ಚಟುವಟಿಕೆಯ ಚಿಲುಮೆ
ಅತ್ಯಂತ ಸರಳ ಮತ್ತು ಮುಗ್ಧ ಸ್ವಭಾವದ ಶಿಕ್ಷಕಿ ಸಪನಾ ಅನಿಗೋಳ ಅವರು ಆಧುನೀಕತೆಯ ಆಡಂಬರದ ಜೀವನ ಶೈಲಿಯಿಂದ ಬಹುದೂರ ಇರುವಂತವರು. ಮುಖ್ಯವಾಗಿ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರಕ್ಕೆ ಹೆಚ್ಚಿನ ಮಹತ್ವ ನೀಡಿದವರಾಗಿದ್ದಾರೆ. ಶಿಕ್ಷಣದ ಜೊತೆಗೆ ಮಕ್ಕಳಿಗೆ ನಮ್ಮ ನೆಲದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ನೀಡುತ್ತಾ ಮಕ್ಕಳನ್ನು ಜ್ಞಾನಭಂಡಾರವನ್ನಾಗಿಸಲು ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವಂತಹ ಮಾದರಿ ಶಿಕ್ಷಕಿಯಾಗಿದ್ದಾರೆ.
ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಜಾಗೃತಿ
ತಮ್ಮ ಹತ್ತಿರ ಕಲಿಯುವ ಗ್ರಾಮೀಣ ಭಾಗದ ಯಾವುದಾದರೂ ವಿದ್ಯಾರ್ಥಿನಿಯರು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದರೇ, ಸ್ವತಃ ತಾವೇ ಗ್ರಾಮಗಳಿಗೆ ತೆರಳಿ, ವಿದ್ಯಾರ್ಥಿನಿಯರ ಪಾಲಕರಿಗೆ ಹೆಣ್ಣುಮಕ್ಕಳಿಗೆ ಶಿಕ್ಷಣದ ಅಗತ್ಯತೆಯ ಕುರಿತು ಮನವರಿಕೆ ಮಾಡಿಸಿ, ಅದೇಷ್ಟೋ ವಿದ್ಯಾರ್ಥಿನಿಯರು ಶಿಕ್ಷಣವನ್ನು ಮುಂದುವರೆಸುವಲ್ಲಿ ಅನಿಗೋಳ ಶಿಕ್ಷಕಿಯ ಪಾತ್ರವು ಬಹುದೊಡ್ಡದಾಗಿದೆ.
ಸ್ಕೌಟ್ಸ್ ಮತ್ತು ಗೈಡ್ಸ್ ಮಾರ್ಗದರ್ಶಕಿ
ವಿಜ್ಞಾನ ವಿಷಯದ ಬೋಧನೆಯ ಜೊತೆಗೆ ಕಳೆದ 8 ವರ್ಷಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದ ಮಾರ್ಗದರ್ಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಇಲ್ಲಿಯವರೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಮಾರ್ಗದರ್ಶನ ಪಡೆದ 28 ವಿದ್ಯಾರ್ಥಿಗಳು ಗರ್ವನರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂಬುವದು ಇವರ ಸಾಧನೆಗೆ ಸಾಕ್ಷಿಯಾಗಿದೆ.
ರಾಜ್ಯಮಟ್ಟದವರೆಗೆ ಹಲವಾರು ಪ್ರಶಸ್ತಿ
ಪ್ರತಿವರ್ಷ ನಡೆಯುವ ಜಿಲ್ಲಾ, ವಿಭಾಗ ಮತ್ತು ರಾಜ್ಯಮಟ್ಟದ ಪ್ರತಿಯೊಂದು ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿ ಜಿಲ್ಲಾದಿಂದ ರಾಜ್ಯಮಟ್ಟದವರೆಗೆ ಹತ್ತಾರು ಪ್ರಶಸ್ತಿಗಳನ್ನು ಗಳಿಸುವಲ್ಲಿ ಸಪನಾ ಶಿಕ್ಷಕಿಯ ಅವಿರತ ಪರಿಶ್ರಮ ಮತ್ತು ವಿಶಿಷ್ಠ ವಿಜ್ಞಾನ ಪ್ರಯೋಗಗಳನ್ನು ವಿದ್ಯಾರ್ಥಿಗಳಿಂದ ಮಾಡಿಸುವಲ್ಲಿ ಸಿದ್ದಹಸ್ತರಾಗಿದ್ದಾರೆ.
ನಿರಂತರ ಸೇವಾಕಾರ್ಯ
ವಿಜ್ಞಾನ ಶಿಕ್ಷಕಿಯಾಗಿರುವ ಸಪನಾ ಅನಿಗೋಳ ಅವರು ಕಳೆದ ಒಂದುವರೆ ದಶಕಗಳಿಂದಲೂ ಪಟ್ಟಣದ ಬಸವ ಬಳಗದ ಸದಸ್ಯೆಯಾಗಿ ಪ್ರತಿತಿಂಗಳು ನಡೆಯುವ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಶರಣರ ವಚನಗಳಲ್ಲಿ ಆರೋಗ್ಯ ಚಿಂತನೆ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯದ ಮೇಲೆ ಆಗುವ ಪರಿಣಾಮದ ಕುರಿತು ಸಮಗ್ರ ಮಾಹಿತಿ ತಿಳಿಸುವ ಜೊತೆಗೆ, ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣದ ಜಾಗೃತಿಗಾಗಿ ಪ್ರತಿತಿಂಗಳು ತಮ್ಮ ಸ್ವಂತ ಖರ್ಚಿನಲ್ಲಿ ಕಾಟನ್ ಬಟ್ಟೆಯ ಚೀಲಗಳನ್ನು ಹೊಲೆಸಿ, ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ನೀಡುತ್ತಾ ನಿರಂತರವಾಗಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.
ಕೊರೊನಾ ವಾರಿಯರ್ ಗೆ ಉಚಿತ ಸೇವೆ
ಕಳೆದ ಎರಡು ವರ್ಷಗಳ ಕೋವಿಡ್ ಲಾಕ್ ಡೌನ್ ಸಮಯದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ನಿರುದ್ಯೋಗಿ ಮಹಿಳೆಯರಿಗೆ ಮಾಸ್ಕ್ ಹೊಲೆಯಲು ಅವಕಾಶ ನೀಡಿ, ಕೊರೊನಾ ವಾರಿಯರ್ ಗಳಾದ ಪೊಲೀಸ್, ಆರೋಗ್ಯ ಇಲಾಖೆ, ಪುರಸಭೆ, ಅಂಗನವಾಡಿ, ಆಶಾಕಾರ್ಯಕರ್ತೆಯರು, ಪತ್ರಕರ್ತರು, ಪೌರಕಾರ್ಮಿಕರು ಸೇರಿದಂತೆ ಪ್ರತಿಯೊಬ್ಬರಿಗೂ ಮಾಸ್ಕ್, ಸ್ಯಾನಿಟೈಜರ್, ಬಟ್ಟೆಚೀಲಗಳು, ಮುಖ ಮತ್ತು ಕೈಗವಸಗಳ್ನು ಉಚಿತವಾಗಿ ನೀಡಿ, ಕೊರೊನಾ ಜಾಗೃತಿ ಮೂಡಿಸುವಲ್ಲಿಯೂ ಮುಂಚೂಣಿಯಲ್ಲಿದ್ದರು.
ಸಂತಸದೊಂದಿಗೆ ಜವಾಬ್ದಾರಿ ಹೆಚ್ಚಿಸಿದೆ
19 ವರ್ಷಗಳ ಕಾಲ ನಾನು ಸಲ್ಲಿಸಿದ ಶೈಕ್ಷಣಿ ಕ ಸೇವೆಯನ್ನು ಗುರುತಿಸಿ, ನನಗೆ ಕೇಂದ್ರ ಸರ್ಕಾರದಿಂದ ಪ್ರಸಕ್ತ ಸಾಲಿನ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಬಂದಿದ್ದು ಬಹಳ ಸಂತಸವಾಗಿದೆ. ಈ ಪ್ರಶಸ್ತಿಯು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಭವಿಷ್ಯದಲ್ಲಿ ಮಕ್ಕಳಿಗೆ ಇನ್ನಷ್ಟು ಉತ್ತಮವಾಗಿ ಶಿಕ್ಷಣ ನೀಡಲು ಹಾಗೂ ಸಾಮಾಜಿಕ ಸೇವೆ ಸಲ್ಲಿಸಲು ಮತ್ತಷ್ಟು ಹುಮ್ಮಸ್ಸು ನೀಡಿದೆ. ನನ್ನ ಸಾಧನೆಗೆ ಸಹಕರಿಸಿದ ಶಾಲೆಯ ಸಮಸ್ತ ಸಹಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಮಕ್ಕಳ ಮತ್ತು ನನ್ನ ಕುಟುಂಬದ ಸಹಕಾರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಸಪನಾ ಶ್ರೀಶೈಲ ಅನಿಗೋಳ
–ಚಂದ್ರಶೇಖರ ಮೋರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.