ತಿಂಗಳ ಅಂತ್ಯಕ್ಕೆ ಹೊಸ ಮರಳು ನೀತಿ ಜಾರಿ : ಸಚಿವ ನಿರಾಣಿ ಘೋಷಣೆ
Team Udayavani, Apr 5, 2021, 6:43 PM IST
ಬಾಗಲಕೋಟೆ : ಗಣಿಗಾರಿಕೆಯಲ್ಲಿ ಸ್ಪೋಟಗೊಂಡು ಆಗುವ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಕಾರ್ಮಿಕರಿಗೆ ಸೂಕ್ತವಾದ ತರಬೇತಿ ನೀಡುವ ಸ್ಕೂಲ್ ಆಪ್ ಮೈನಿಂಗ್ ಕೇಂದ್ರವನ್ನು ಬಳ್ಳಾರಿ ಜಿಲ್ಲೆಯ ಸೊಂಡೂರು ಮತ್ತು ಚಿತ್ರದುರ್ಗದಲ್ಲಿ ನಿರ್ಮಿಸಲಾಗುತ್ತಿದೆ. ಸಂಡೂರಿನಲ್ಲಿ ಈಗಾಗಲೇ 50 ಎಕರೆ ಖರೀದಿಸಲಾಗಿದೆ. ಏಪ್ರೀಲ್ ಮಾಹೆಯಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.
ಸೋಮವಾರ ಸಂಜೆ ಜಿಲ್ಲೆಯ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಗಣಿಗಾರಿಕೆ ಹಿತದೃಷ್ಠಿಯಿಂದ ಮತ್ತು ಆಡಳಿತಕ್ಕೆ ಅನುಕೂಲವಾಗುವ ದೃಷ್ಠಿಯಿಂದ ಖನಿಜ ಭವನವನ್ನು ನಿರ್ಮಿಸಲಾಗುತ್ತಿದೆ. ಗಣಿಗಾರಿಕೆಯಲ್ಲಿ ಅಕ್ರಮ ತಡೆಗೆ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನೌಕರರಿಗೂ ಸಮವಸ್ತ್ರ, ವಾಕಿಟಾಕಿ ಪೂರೈಸಲಾಗುತ್ತಿದೆ. ನಿವೃತ್ತ ಯೋದರನ್ನು ಈ ಕಾರ್ಯಕ್ಕೆ ನೇಮಿಸಿಕೊಳ್ಳಲಾಗುತ್ತಿದೆ. ಇದರಿಂದ ಅಕ್ರಮ ಮರಳು ತಡೆಗೆ ಅನುಕೂಲವಾಗಲಿದೆ. ಜಿ.ಪಿ.ಎಂ ವ್ಯವಸ್ಥೆ ಸಹ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜನ ಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಮರಳು ಪೂರೈಸುವ ನಿಟ್ಟಿನಲ್ಲಿ ಇದೇ ತಿಂಗಳ ಅಂತ್ಯಕ್ಕೆ ಹೊಸ ಮರಳು ನೀತಿ ಜಾರಿಗೆ ತರಲಾಗುವುದು. ಈ ಹೊಸ ನೀತಿಯನ್ವಯ 10 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳಿಗೆ ಪ್ರತಿ ಟನ್‌ಗೆ 100 ರೂ.ಗಳಿಗೆ ಆಯಾ ಭಾಗದ ಗ್ರಾಮ ಪಂಚಾಯಿತಿ, ನಗರಸಭೆಯ ಕಟ್ಟಡ ಅನುಮತಿಯಲ್ಲಿ ತೋರಿಸಿದಂತೆ ನಿಗದಿತ ಮರಳು ಪೂರೈಸಲಾಗುವುದು ಎಂದರು.
ಸರಕಾರದಿಂದ ಟೆಂಡರ್ ಕರೆಯಲಾದ ಕಾಮಗಾರಿಗಳಿಗೆ ಮರಳು ಸಂಗ್ರಹ ಹೊರತುಪಡಿಸಿ, ಗುತ್ತಿಗೆದಾರ ಕಾರ್ಯನಿರ್ವಹಿಸಿದಂತೆ ಹಂತ ಹಂತವಾಗಿ ಪೂರೈಸಲಾಗುವುದು ಎಂದರು. ಸಾರ್ವಜನಿಕರಿಗೆ ಉಪಯೋಗಿಸಲ್ಪಡುವಂತ ಕುಡಿಯುವ ನೀರಿನ ಸಂಬಂಧಿಸಿದ ಸ್ಥಳಗಳಲ್ಲಿ ಹಳ್ಳ, ಕೆರೆ ಹಾಗೂ ಅಣೆಕಟ್ಟೆನ ಹಿನ್ನೀರಿನ ಪ್ರದೇಶದಲ್ಲಿ ಮರಳು ತೆಗೆಯದಂತೆ ನಿರ್ಬಂಧ ಹೇರಲಾಗುತ್ತಿದೆ.
ಮರಳು ದರವನ್ನು ಪ್ರತಿದಿನ ಬಂಗಾರ, ಬೆಳ್ಳಿ ದರ ಪ್ರಕಟಗೊಂಡಂತೆ ಪ್ರತಿ ವಾರಕ್ಕೊಮ್ಮೆ ಮರಳಿನ ದರದ ಪಟ್ಟಿ ನೀಡಲಾಗುವುದು. ಇದರಿಂದ ಸರಕಾರಕ್ಕೆ ಆದಾಯ ಹೆಚ್ಚುವದರ ಜೊತೆಗೆ ಸಾರ್ವಜನಿಕರಿಗೆ ಮುಕ್ತವಾಗಿ ಮರಳು ದೊರೆಯಲಿದೆ ಎಂದು ತಿಳಿಸಿದರು.
ಏ.30 ರಂದು ಗಣಿ ಅದಾಲತ್ : ಕೆಲವು ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಪಂಚಾಯತಿಗಳೇ ಮರಳುಗಾರಿಕೆಯನ್ನು ನಿಯಂತ್ರಣ ಮಾಡಲಾಗುತ್ತಿದ್ದು, ಇದರಲ್ಲೂ ಕೂಡಾ ಅಕ್ರಮವಾಗದಂತೆ ಸರಕಾರ ಮದ್ಯ ಪ್ರವೇಶಿಸಲಿದೆ. ಮೈನಿಂಗ್ ಮಾಡಲು ಸರಕಾರದಲ್ಲಿ 2500 ಅರ್ಜಿಗಳು ಬಂದಿದ್ದು, ಎಲ್ಲವನ್ನು ಸರಳೀಕೃತಗೊಳಿಸಲಾಗುವುದು. ಪ್ರತಿ ಜಿಲ್ಲೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವರ ಅಧ್ಯಕ್ಷತೆಯಲ್ಲಿ ಗಣಿ ಅದಾಲತ್ ನಡೆಸಲಾಗುತ್ತಿದೆ. ಅದಕ್ಕಾಗಿ ಏಪ್ರಿಲ್ 30 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ.ರಾಜೇಂದ್ರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ರಾಹುಲ್‌ಕುಮಾರ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.