ತೆರಿಗೆ ಹೆಚ್ಚಳಕ್ಕೆ ವಿರೋಧ: ನೇಕಾರರಿಗೆ ಭರವಸೆ ನೀಡಿದ ಸಿಎಂ
Team Udayavani, Nov 30, 2021, 6:57 PM IST
ರಬಕವಿ-ಬನಹಟ್ಟಿ: ನೇಕಾರರಿಗೆ ವಿಧಿಸಿರುವ ಜಿಎಸ್‌ಟಿ ತೆರಿಗೆ ಶೇಕಡಾ 5 ರ ಬದಲಾಗಿ ಶೇಕಡಾ 12 ರಷ್ಟು ಹೆಚ್ಚಳಗೊಳಿಸಲು ಬರುವ ಜನೇವರಿ 1 ರಿಂದ ಅನ್ವಯವಾಗಲಿರುವದನ್ನು ನೇಕಾರರು ಖಡಾಖಂಡಿತವಾಗಿ ತಿರಸ್ಕರಿಸಿ ಬೆಂಗಳೂರಿಗೆ ತೆರಳಿದ್ದ ರಬಕವಿ-ಬನಹಟ್ಟಿ ತಾಲೂಕಿನ ನೇಕಾರ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಂಗಳವಾರ ಮನವಿ ಅರ್ಪಿಸಿ ನೇಕಾರರ ಜ್ವಲಂತ ಸಮಸ್ಯೆಗಳನ್ನು ಬಿಚ್ಚಿಟ್ಟರು.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ನೇಕಾರರ ಸಮಸ್ಯೆಗಳನ್ನು ಆಲಿಸಿದ್ದೇನೆ. ಈ ಕುರಿತು ಕೇಂದ್ರ ತೆರಿಗೆ ಇಲಾಖೆ ಹಾಗು ಕೇಂದ್ರ ಸಚಿವರಿಗೂ ಮಾಹಿತಿ ಒದಗಿಸಿ ಈಗಿರುವ ತೆರಿಗೆಯನ್ನೇ ಮುಂದುವರೆಸಲು ಸೂಚಿಸುತ್ತೇನೆಂದ ಭರವಸೆ ನೀಡಿದರು.
ಈಗಾಗಲೇ ಎರಡು ದಶಕಗಳಿಂದ ರಾಜ್ಯದಲ್ಲಿನ ಜವಳಿ ಕ್ಷೇತ್ರ ನೆಲಕಚ್ಚಿದೆ. ಒಂದೆಡೆ ಕಚ್ಚಾ ವಸ್ತುಗಳ ಬೆಲೆ ನಿಯಂತ್ರಣವಿಲ್ಲದೆ ಬೇಕಾಬಿಟ್ಟಿಯಾಗಿ ಹೆಚ್ಚಳಗೊಳ್ಳುತ್ತಿದ್ದರೆ, ಮತ್ತೊಂದೆಡೆ ಮಾರುಕಟ್ಟೆ ನೆಲೆ ಕಾಣುವಲ್ಲಿ ಹರಸಾಹಸ ಪಡುವಲ್ಲಿ ನೇಕಾರರ ಸಂಕಟವಾಗಿದೆ.
ಜವಳಿ ಕ್ಷೇತ್ರ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಹೊಸ ಆಯಾಮವನ್ನು ಸೃಷ್ಟಿಸಬೇಕಾದ ಅನಿವಾರ್ಯತೆಯಿದ್ದು, ನೇಕಾರರ ಪುನಶ್ಚೇತನಕ್ಕೆ ವಿನೂತನ ಯೋಜನೆಗಳನ್ನು ಒದಗಿಸಬೇಕೆಂದು ನೇಕಾರರು ಒಕ್ಕೊರಲಿನಿಂದ ಸಮಸ್ಯೆಗಳನ್ನು ಮುಖ್ಯಮಂತ್ರಿಗಳೊಂದಿಗೆ ತೋಡಿಕೊಂಡರು.
ಪ್ರತಿಭಟನೆಯಿಂದ ತಾತ್ಕಾಲಿಕ ಹಿಂದಕ್ಕೆ: ತೆರಿಗೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವದೆಂದು ತಿಳಿಸಿದ್ದ ಪಾವರ್‌ಲೂಮ್ ಮಾಲಿಕರ ಸಂಘವು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದೆ. ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳಿಗೆ ತೆರಿಗೆಯಿಂದ ವಿನಾಯ್ತಿಗೆ ಮನವರಿಕೆ ಮಾಡಲಾಗಿದ್ದು, ಪೂರಕವಾದ ಸ್ಪಂದನೆ ದೊರೆತಿರುವ ಹಿನ್ನಲೆ ತಾತ್ಕಾಲಿಕವಾಗಿ ಪ್ರತಿಭಟನೆ ಅಥವಾ ಹೋರಾಟಗಳನ್ನು ಹಿಂಪಡೆಯಲಾಗಿದೆ ಎಂದು ನೇಕಾರ ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಬಳಿ ನಿಯೋಗದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ಮಲ್ಲಿಕಾರ್ಜುನ ಬಾಣಕಾರ, ಶಂಕರ ಜುಂಜಪ್ಪನವರ, ರಾಜು ಅಂಬಲಿ, ಮಲ್ಲಿನಾಥ ಕಕಮರಿ, ಪ್ರಭಾಕರ ಮೊಳೇದ, ಪ್ರಭು ಕರಲಟ್ಟಿ, ಆನಂದ ಕಂಪು, ಮಹಾದೇವ ಚರ್ಕಿ, ತೆರಿಗೆ ಸಲಹೆಗಾರ ಪ್ರಭು ಉಮದಿ, ಚಂದ್ರು ಕುಲಗೋಡ ಸೇರಿದಂತೆ ಅನೇಕರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.