ಬ್ಯಾರೇಜ್ ಸದ್ಬಳಕೆಗೆ ಬೇಕಿದೆ ಅನುಮತಿ
Team Udayavani, Feb 27, 2020, 1:33 PM IST
ಬಾಗಲಕೋಟೆ: ಜಿಲ್ಲೆಯ ಸುಂದರ ಹಾಗೂ ಮಾದರಿ ಬ್ಯಾರೇಜ್ ಎಂದು ಕರೆಯಲಾಗುವ ಬೀಳಗಿ ತಾಲೂಕಿನ ಹೆರಕಲ್ ಬಳಿ ನಿರ್ಮಿಸಿದ ಬೃಹತ್ ಬ್ಯಾರೇಜ್‌ನ ಸದ್ಬಳಕೆಗೆ ಸರ್ಕಾರ ಅನುಮೋದನೆ ನೀಡುತ್ತಾ ಎಂಬ ಪ್ರಶ್ನೆ ಮೂರು ತಾಲೂಕಿನ ರೈತ ವಲಯದಲ್ಲಿ ಕೇಳಿ ಬರುತ್ತಿದೆ.
ಹೌದು, ಬೀಳಗಿ ತಾಲೂಕಿನ ಹೆರಕಲ್ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ 75.57 ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ಬ್ಯಾರೇಜ್ ನಿರ್ಮಿಸಿದ್ದು, ಜಿಲ್ಲೆಯ ಅಷ್ಟೂ ಬ್ಯಾರೇಜ್‌ಗಳಲ್ಲಿ ಇದೊಂದು ಮಾದರಿ ಬ್ಯಾರೇಜ್ ಆಗಿದೆ. ಕೃಷ್ಣಾ ಭಾಗ್ಯ ಜಲ ನಿಗಮದಿಂದ ಘಟಪ್ರಭಾ ನದಿಯ 503 ಮೀಟರ್ ನದಿ ತಳಮಟ್ಟದಿಂದ 528 ಮೀಟರ್ ಎತ್ತರದ ವರೆಗೆ ಈ ಬ್ಯಾರೇಜ್ ನಿರ್ಮಿಸಲಾಗಿದೆ. ಆದರೆ, 515 ಮೀಟರ್ ವರೆಗೆ ಮಾತ್ರ ನೀರು ನಿಲ್ಲಿಸಲು, ಕೆಬಿಜೆಎನ್ ಎಲ್ ಅನುಮತಿ ನೀಡಿದ್ದು, ಇದರಿಂದ ಸದ್ಯ ಬ್ಯಾರೇಜ್‌ನಲ್ಲಿ 1.80 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತಿದೆ.
ಬ್ಯಾರೇಜ್‌ನ ವಿಶೇಷತೆ: 503 ಮೀಟರ್ ನದಿಯ ಆಳವಾದ ತಳಮಟ್ಟ, 515 ಮೀಟರ್ ನೀರು ಸಂಗ್ರಹಿಸುವ ಮಟ್ಟ, 1.80 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ, 170 ಮೀಟರ್ ಉದ್ದ, 260 ಮೀಟರ್ ಸೇತುವೆ ಉದ್ದ, 7.50 ಮೀಟರ್ ಸೇತುವೆ ರಸ್ತೆಯ ಅಗಲ, 8.0/9.60 ಮೀಟರ್ ಅಳತೆ ಬ್ಯಾರೇಜ್‌ನ ಪ್ರತಿ ಗೇಟ್ ಹೊಂದಿದ್ದು, 506 ಮೀಟರ್‌ನಿಂದ 528 ಮೀಟರ್ ವರೆಗೆ ನೀರು ನಿಲ್ಲಿಸಲು ಅವಕಾಶವಿದೆ. ಒಟ್ಟು 18 ಗೇಟ್ ಹೊಂದಿರುವ ಈ ಬ್ಯಾರೇಜ್ ಅನ್ನು, ಜಿ.ಶಂಕರ ಕನ್ ಸ್ಟ್ರಕ್ಷನ್ ಕಂಪನಿಯಿಂದ ನಿರ್ಮಿಸಲಾಗಿದೆ.
ಸದ್ಬಳಕೆಗೆ ಆಗಬೇಕಿದೆ: ಬರ ನೀಗಿಸಲು ಭರಪುರ ಅವಕಾಶ ಈ ಬ್ಯಾರೇಜ್‌ನಿಂದ ಇದ್ದು, ಪೂರ್ಣ ಪ್ರಮಾಣದಲ್ಲಿ ಈ ಬ್ಯಾರೇಜ್‌ನಲ್ಲಿ ನೀರು ಸಂಗ್ರಹಿಸಿದರೆ, ಹೆರಕಲ್‌ದಿಂದ ಹಿಮ್ಮುಖವಾಗಿ ಕಲಾದಗಿವರೆಗೂ ಹಿನ್ನೀರು ಆವರಿಸಿಕೊಳ್ಳಲಿದೆ. ಇದರಿಂದ ಬಾಗಲಕೋಟೆ ಸಹಿತ ವಿವಿಧ ಪುನರ್ ವಸತಿ ಕೇಂದ್ರಗಳಿಗೆ ನೀರಿನ ಮೂಲವಾದ ಆನದಿನ್ನಿ ಬ್ಯಾರೇಜ್, ಕಲಾದಗಿ ಬ್ಯಾರೇಜ್‌ಗಳಿಗೂ ಇದರಿಂದ ನೀರು ಒದಗಲಿದೆ. ಮುಖ್ಯವಾಗಿ ಈ ಬ್ಯಾರೇಜ್ ನಂಬಿಕೊಂಡೇ ರೂಪಿಸಿರುವ ಹೆರಕಲ್ ದಕ್ಷಿಣ ಮತ್ತು ಉತ್ತರ ಏತ ನೀರಾವರಿ ಯೋಜನೆ, ಕಳಸಕೊಪ್ಪ ಸಹಿತ 7 ಕೆರೆಗಳಿಗೆ ನೀರು ತುಂಬಿಸಲು ನೀರಿನ ಕೊರೆತ ಆಗುವುದಿಲ್ಲ.
528 ಮೀಟರ್ ಎತ್ತರದವರೆಗೆ 18 ಗೇಟ್ ಗಳಿದ್ದರೂ ಕೇವಲ 515 ಮೀಟರ್‌ವರೆಗೆ ನೀರು ನಿಲ್ಲಿಸುತ್ತಿರುವುದರಿಂದ ಕೇವಲ 1.80 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತಿದೆ. ಬ್ಯಾರೇಜ್‌ನ ಮೂಲ ನಿರ್ಮಾಣದಂತೆ ಪೂರ್ಣ ಪ್ರಮಾಣದಲ್ಲಿ ನೀರು ನಿಲ್ಲಿಸಿದರೆ, ಇನ್ನೂ 3ರಿಂದ 4 ಟಿಎಂಸಿ ಅಡಿ ನೀರು ಲಭ್ಯವಾಗಲಿದೆ ಎಂಬುದು ಒಂದು ಅಂದಾಜಿದೆ.
ನೀರು ನಿಲ್ಲಿಸಲು ಸಮಸ್ಯೆ ಇಲ್ಲ: ಹೆರಕಲ್ ಬ್ಯಾರೇಜ್‌ನಲ್ಲಿ 519.60 ಮೀಟರ್ ವರೆಗೂ ಸದ್ಯ ನೀರು ನಿಲ್ಲಿಸಲು ಯಾವುದೇ ಸಮಸ್ಯೆ ಇಲ್ಲ. ಆಲಮಟ್ಟಿ ಜಲಾಶಯದ ಹಿನ್ನೀರ ವ್ಯಾಪ್ತಿಯಲ್ಲೇ (ಘಟಪ್ರಭಾನದಿ) ಈ ಬ್ಯಾರೇಜ್ ಬರುತ್ತಿದ್ದು, ಈಗಾಗಲೇ 519.60 ಮೀಟರ್ ಎತ್ತರದಲ್ಲಿ ನೀರು ನಿಲ್ಲಿಸಿದಾಗ ಹಿನ್ನೀರ ಪ್ರದೇಶದಲ್ಲಿ ಬರುವ ಎಲ್ಲ ಗ್ರಾಮ, ಭೂಮಿಗೆ ಪರಿಹಾರ ನೀಡಿ, ಸ್ವಾಧೀನಪಡಿಸಿಕೊಳ್ಳಲಾಗಿದೆ. ಹೀಗಾಗಿ 519.60 ಮೀಟರ್‌ವರೆಗೆ ನೀರು ನಿಲ್ಲಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಉನ್ನತಾಧಿಕಾರಿ ಸಮಿತಿಯಿಂದ ಅನುಮೋದನೆ ಅಗತ್ಯವಿದೆ.
ಪ್ರಸಕ್ತ ಬಜೆಟ್ ಅಥವಾ ಸಚಿವ ಸಂಪುಟದಲ್ಲಿ ಇದಕ್ಕಾಗಿ ಅನುಮೋದನೆ ನೀಡಲು, ಕೆಬಿಜೆಎನ್ ಎಲ್‌ನ ವ್ಯವಸ್ಥಾಪಕ ನಿರ್ದೇಶಕರಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇದಕ್ಕೆ ಸರ್ಕಾರ ಅನುಮತಿ ನೀಡುವ ಮೂಲಕ ನೀರು-ಬ್ಯಾರೇಜ್ ಸದ್ಬಳಕೆಗೆ ಅಸ್ತು ಎನ್ನಲಿ ಎಂಬುದು ಬೀಳಗಿ, ಬಾದಾಮಿ, ಬಾಗಲಕೋಟೆ ರೈತರ ಒತ್ತಾಸೆಯಾಗಿದೆ.
-ಎಸ್.ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Mahalingpur: ಎರಡು ವರ್ಷದ ಮಹಾಲಿಂಗಪುರದ ನೂತನ ಬಸ್ ನಿಲ್ದಾಣದಲ್ಲಿ ನೂರೆಂಟು ಸಮಸ್ಯೆಗಳು
ಬಾಗಲಕೋಟೆ: ಕುಳಗೇರಿ ಕೆರೆಗೆ ಸೋಮನಕೊಪ್ಪ ಚರಂಡಿ ನೀರು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.