ಸಾರ್ವಜನಿಕ ಸಮಸ್ಯೆಗೆ ಶೀಘ್ರ ಪರಿಹಾರ
ತಾಂತ್ರಿಕ ಸಮಸ್ಯೆ ಇದ್ದರೆ ಮೇಲಾಧಿಕಾರಿ ಗಮನಕ್ಕೆ ತನ್ನಿ; ಮುಂದಿನ ಸಭೆಯೊಳಗೆ ಅರ್ಜಿ ಬಾಕಿ ಇಲ್ಲದಂತೆ ನೋಡಿಕೊಳ್ಳಿ
Team Udayavani, Jul 28, 2022, 5:38 PM IST
ಬಾಗಲಕೋಟೆ: ಸಾರ್ವಜನಿಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ಆಯಾ ಇಲಾಖೆ ಅಧಿಕಾರಿಗಳು ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ತ್ವರಿತವಾಗಿ ವಿಲೇವಾರಿ ಮಾಡುವ ಮೂಲಕ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಕಾಲ, ಆರ್‌ಟಿಐ, ಐಪಿಜಿಆರ್ ಎಸ್ (ವಾಟ್ಸ್ ಆ್ಯಪ್ ಗ್ರುಪ್), ಗ್ರಾಮ್ ಒನ್ ಸೇವಾಸಿಂಧು ಪೋರ್ಟಲ್ ಹಾಗೂ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸ್ವೀಕೃತವಾದ ಅರ್ಜಿಗಳ ವಿಲೇವಾರಿ ಮಾಡುವ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಸಾರ್ವಜನಿಕರ ಕುಂದುಕೊರತೆಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಸ್ಪಂದಿಸುವ ಕಾರ್ಯವಾಗಬೇಕು. ಅರ್ಜಿ ಸಲ್ಲಿಸಲು ಆನ್‌ಲೈನ್ ವ್ಯವಸ್ಥೆ ಇರುವುದರಿಂದ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬರುವುದು ಸಹಜ. ಬಂದಂತಹ ಅರ್ಜಿಗಳನ್ನು ಶಿಸ್ತುಬದ್ಧವಾಗಿ ವಿಂಗಡಿಸಿ, ಸಮಂಜಸವಾದ ಹಿಂಬರಹ ಅಥವಾ ಸಮಸ್ಯೆ ಪರಿಶೀಲಿಸಿ ಪರಿಹಾರ ನೀಡುವ ಮೂಲಕ ಅರ್ಜಿದಾರರ ಸಂಖ್ಯೆ ಕಡಿತಗೊಳಿಸಬೇಕು ಎಂದರು.
ಅರ್ಜಿ ವಿಲೇವಾರಿಗೆ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಮೇಲಾಧಿ ಕಾರಿಗಳ ಗಮನಕ್ಕೆ ತರತಕ್ಕದ್ದು. ಪ್ರತಿ ಬಾರಿ ಸಾಫ್ಟ್‌ವೇರ್ ಸಮಸ್ಯೆ ಅನ್ನುವಂತಹದ್ದು ಸಮಂಜಸವಾದದ್ದಲ್ಲ. ಸಕಾಲ, ಗ್ರಾಮ ಒನ್ ಸೇವಾಸಿಂಧು ಪೋರ್ಟಲ್ ನಿರ್ವಹಿಸುವಂತಹ ಕನ್ಸಲ್ಟಂಟ್‌ಗಳು ಎಲ್ಲ ಇಲಾಖೆಗಳ ವೆಬ್‌ಸೈಟ್ಸ್, ತಂತ್ರಾಂಶಗಳ ಕುರಿತ ಸರಿಯಾದ ಮಾಹಿತಿ ಹೊಂದಿದ್ದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಪರಿಹಾರ ಕಂಡುಕೊಳ್ಳಬಹುದು ಎಂದರು.
ಬರುವ ಆಗಸ್ಟ್ ಮಾಹೆಯ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ತಾಲೂಕಿನ ಭಗವತಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಆ ಗ್ರಾಮಸ್ಥರಿಂದ ಸ್ವೀಕೃತವಾಗುವ ಅಹವಾಲುಗಳಿಗೆ ಅಲ್ಲಿಯೇ ಪರಿಹಾರ ನೀಡಬೇಕಾಗಿರುವುದರಿಂದ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಮಹಿಳೆಯರಲ್ಲಿ ಅಪೌಷ್ಟಿಕತೆ ಕುರಿತು ಅರಿವು ಮೂಡಿಸುವುದು, ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ವಿತರಿಸುವ ಕಾರ್ಯ ಅಂದಿನ ಕಾರ್ಯಕ್ರಮದಲ್ಲಿ ಆಗಬೇಕಾಗಿದ್ದು ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುವ ಮೂಲಕ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗ ಅಧಿಕಾರಿ ಶ್ವೇತಾ ಬೀಡಿಕರ, ಜಂಟಿ ಕೃಷಿ ನಿರ್ದೇಶಕಿ ಚೈತ್ರಾ ಪಾಟೀಲ ಸೇರಿದಂತೆ ಇತರರು ಇದ್ದರು.
ಅಂಕಿ ಅಂಶಗಳ ಅನುಸಾರ ಹಿಂದುಳಿದ ವರ್ಗ, ಆರ್‌ಟಿಒ ಗೃಹ ಇಲಾಖೆಗಳಲ್ಲಿ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಾಕಿ ಇರುವುದು ಕಂಡು ಬರುತ್ತಿದ್ದು, ಮುಂದಿನ ಸಭೆ ನಡೆಯುವುದರೊಳಗಾಗಿ ಎಲ್ಲ ಇಲಾಖೆಗಳು ಯಾವುದೇ ಅರ್ಜಿಗಳನ್ನು ಬಾಕಿ ಇಲ್ಲದಂತೆ ನೋಡಿಕೊಂಡು ವರದಿ ನೀಡಬೇಕು. –ಪಿ. ಸುನೀಲಕುಮಾರ, ಜಿಲ್ಲಾಧಿಕಾರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.