ರಬಕವಿ-ಬನಹಟ್ಟಿ: ನಡುಗಡ್ಡೆಯಾದ ಜಾಕ್‌ವೆಲ್‌ನಲ್ಲಿ ಐವರು ಕಾರ್ಮಿಕರ ಸೇವೆ ಅನನ್ಯ
15 ದಿನಗಳಿಂದ ಊಟ, ನೀರು ಎಲ್ಲವೂ ಅಲ್ಲೆ
Team Udayavani, Aug 7, 2024, 6:49 PM IST
ರಬಕವಿ-ಬನಹಟ್ಟಿ: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಗರಗಳಿಗೆ ನೀರು ಪೂರೈಕೆ ಮಾಡುವ ಘಟಕಗಳಲ್ಲಿ ಐವರು ಕಾರ್ಮಿಕರು ಕಳೆದ 15 ದಿನಗಳಿಂದ ಜೀವದ ಹಂಗು ತೊರೆದು ನೀರು ಪೂರೈಕೆಯಲ್ಲಿ ತೊಡಗಿದ್ದಾರೆ.
ರಬಕವಿ-ಬನಹಟ್ಟಿ ಸಮೀಪದ ಮಹಿಷವಾಡಗಿ ಸೇತುವೆ ಬಳಿಯಿರುವ ರಬಕವಿ ಹಾಗು ಬನಹಟ್ಟಿ ಪಟ್ಟಣಗಳಿಗೆ ನೀರು ಪೂರೈಕೆ ಘಟಕದಲ್ಲಿ ವಾಸ್ತವ್ಯ ಹೂಡಿರುವ ಕಾರ್ಮಿಕರು ಲಕ್ಷಕ್ಕೂ ಹೆಚ್ಚು ಜನರಿಗೆ ದಿನಂಪ್ರತಿ ನೀರು ಪೂರೈಕೆಯಲ್ಲಿ ತೊಡಗಿದ್ದಾರೆ.
ಜಾಕವೆಲ್‌ಗೆ ತೆರಳುವ ರಸ್ತೆ ಸುಮಾರು 1 ಕಿ.ಮೀ.ನಷ್ಟು ದೂರ ನೀರಿನಿಂದ ಮುಳುಗಿದೆ. 6-10 ಅಡಿಯಷ್ಟು ನೀರು ಇದ್ದು, ಎತ್ತರದಲ್ಲಿ ನಿರ್ಮಾಣವಾಗಿರುವ ಜಾಕವೆಲ್ ಮೇಲೆಯೇ ಎಲ್ಲರೂ ಇದ್ದು, ಮೋಟಾರ್ ಸೇರಿದಂತೆ ನದಿಯಿಂದ ನೀರು ಪೂರೈಕೆಯಲ್ಲಿ ಯಾವದೇ ತೊಂದರೆಯಾಗದಂತೆ ಕಾರ್ಯನಿರ್ವಹಣೆ ನಡೆಸುತ್ತಿರುವ ಮೆಹಬೂಬ್ ಮುಲ್ಲಾ, ಇಸ್ಮಾಯಿಲ್ ಜರ್ಮನ್, ರವಿ ಭಜಂತ್ರಿ, ಈರಪ್ಪ ಕೋಷ್ಠಿಯವರಿಗೆ ಸಹಾಯಕ ಅಭಿಯಂತರ ವೈಶಾಲಿ ಹಿಪ್ಪರಗಿ, ಪ್ರಕಾಶ ಪೂಜಾರಿ ಇವರ ಯೋಗಕ್ಷೇಮದ ಬಗ್ಗೆ ಮಾಹಿತಿ ಪಡೆಯುತ್ತ ನಿರಂತರ ಸೇವೆಯಲ್ಲಿ ಯಾವದೇ ತೊಂದರೆಯಾಗದ ರೀತಿಯಲ್ಲಿ ನಿಗಾವಹಿಸುತ್ತಿರುವದು ವಿಶೇಷ.
15 ದಿನಗಳಿಂದ ಮನೆ ಬಿಟ್ಟು ನೀರಿನ ಮಧ್ಯಭಾಗದ ಜಾಕವೆಲ್‌ನಲ್ಲಿದ್ದೇವೆ. ನಿರಂತರ ನೀರು ಪೂರೈಕೆಯಲ್ಲಿ ತೊಂದರೆಯಾಗದ ರೀತಿಯಲ್ಲಿ ಹಗಲಿರುಳು ಕೆಲಸ ಮಾಡುತ್ತಿದ್ದೇವೆ. ನಮಗೆ ಯಾವದೇ ತೊಂದರೆಯಿಲ್ಲ.
-ಮೆಹಬೂಬ್ ಮುಲ್ಲಾ, ನೀರು ಪೂರೈಕೆ ಕಾರ್ಮಿಕ.
ದಿನಂಪ್ರತಿ ಇಲ್ಲಿರುವ ಕಾರ್ಮಿಕರಿಗೆ ಬೇಕಾಗುವ ಅವಶ್ಯಕ ವಸ್ತುಗಳನ್ನು ತಲುಪಿಸುತ್ತಿದ್ದೇನೆ. ನನಗೂ ಇದೊಂದು ಸೇವೆಯನ್ನಾಗಿಸಿಕೊಂಡು ನೀರು ಪೂರೈಕೆಗೆ ತೊಂದರೆಯಾಗದಂತೆ ನನ್ನ ಸಹಾಯವೂ ಇರಲೆಂದು ಕೆಲಸ ಮಾಡುತ್ತಿದ್ದೇನೆ.’
-ಫಯಾಜ್ ಜಾನ್ವೇಕರ್, ಮೀನುಗಾರ, ಬನಹಟ್ಟಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.