Rabakavi banahatti: ಸ್ಕ್ಯಾನಿಂಗ್ ಸೌಲಭ್ಯಕ್ಕಾಗಿ ಗರ್ಭಿಣಿಯರ ಪರದಾಟ
ಸ್ಕ್ಯಾನಿಂಗ್ ಕೇಂದ್ರ ಆರಂಭಿಸುವಂತೆ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
Team Udayavani, Nov 9, 2023, 3:19 PM IST
ರಬಕವಿ-ಬನಹಟ್ಟಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಕ್ಯಾನಿಂಗ್ ಸೌಲಭ್ಯ ಇಲ್ಲದೆ ಇರುವುದರಿಂದ ಪ್ರತಿನಿತ್ಯ ಗರ್ಭಿಣಿಯರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯ ತಪಾಸಣೆಗೆ ಗರ್ಭಿಣಿಯರು ಬಂದರೆ ಅವರಿಗೆ ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ತಿಳಿಸುತ್ತಾರೆ.
ಇದರಿಂದಾಗಿ ಬಡ ನೇಕಾರ ಮತ್ತು ಕೂಲಿ ಕಾರ್ಮಿಕ ಗರ್ಭಿಣಿಯರಿಗೆ ತೊಂದರೆಯಾಗಿದೆ. ಖಾಸಗಿ ಸ್ಕ್ಯಾ ನಿಂಗ್ ಸೆಂಟರ್ ಗಳಿಗೆ ತೆರಳಿ ಸಾವಿರಾರು ಹಣ ನೀಡಿ ಸ್ಕ್ಯಾನಿಂಗ್ ಮಾಡಿಸಲು ಸಾಧ್ಯವಾಗುವುದಿಲ್ಲ. ಇನ್ನೂ ಗರ್ಭಿಣಿಯರು ಜಮಖಂಡಿಗೆ ನಾಲ್ಕಾರು ಬಾರಿ ಅಲೆದಾಡುವುದು ಕೂಡಾ ಸಮಸ್ಯೆಯಾಗಿದೆ. ಇನ್ನೂ ಜಮಖಂಡಿಗೆ ಹೋದರೆ ಅಲ್ಲಿಯೂ ಕೂಡಾ ಸಾಕಷ್ಟು ಸಮಯವನ್ನು ಸರತಿಯಲ್ಲಿ ಕಾಯಬೇಕಾಗುತ್ತದೆ.
ಇದರಿಂದಾಗಿ ರಬಕವಿ ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಭಾಗದ ಗರ್ಭಿಣಿಯರು ಸಾಕಷ್ಟು ಸಮಸ್ಯೆ ಹಾಗೂ ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರ ಸ್ಕ್ಯಾ ನಿಂಗ್ ಕೇಂದ್ರವನ್ನು ಆರಂಭಿಸಿದರೆ ಬಹಳಷ್ಟು ಬಡ, ಹಿಂದುಳಿದ, ಕೂಲಿ ಕಾರ್ಮಿಕ
ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಆಸ್ಪತ್ರೆಗೆ ಬಂದ ಗರ್ಭಿಣಿಯರು ಪತ್ರಿಕೆಗೆ ತಿಳಿಸಿದರು.
ರಬಕವಿ ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿದರೆ ಎಲ್ಲ ಸೌಲಭ್ಯಗಳು ದೊರಕುತ್ತವೆ. ರಬಕವಿ ಬನಹಟ್ಟಿ ತಾಲ್ಲೂಕು ಕೇಂದ್ರವಾಗಿ ಹಲವು ವರ್ಷಗಳು ಕಳೆದರೂ ಆಸ್ಪತ್ರೆ ಮಾತ್ರ ಇನ್ನೂ ಮೇಲ್ದರ್ಜೆ ಏರದೆ ಇರುವುದರಿಂದ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ.
ಸ್ಕ್ಯಾನಿಂಗ್ ಕೇಂದ್ರ ತಾಲ್ಲೂಕು ಆಸ್ಪತ್ರೆಯಲ್ಲಿ ಮಾತ್ರ ಇರುತ್ತವೆ. ಆದರೂ ರಬಕವಿ ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಕ್ಯಾನಿಂಗ್ ಕೇಂದ್ರ ಆರಂಭಿಸುವಂತೆ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಡಾ. ಎನ್.ಎಂ. ನದಾಫ್, ಆರೋಗ್ಯಾಧಿಕಾರಿ,
ರಬಕವಿ ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರ
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಕ್ಯಾನಿಂಗ್ ಕೇಂದ್ರ ಆರಂಭಿಸುವಂತೆ ಜಿಲ್ಲಾ ಆರೋಗ್ಯಾ ಧಿಕಾರಿಗಳ ಗಮನಕ್ಕೆ ತರಲಾಗುವುದು.
*ಡಾ| ಜಿ.ಎಚ್. ಗಲಗಲಿ, ತಾಲೂಕು
ಆರೋಗ್ಯಾಧಿಕಾರಿಗಳು ಜಮಖಂಡಿ
ಸ್ಕ್ಯಾನಿಂಗ್ ಕೇಂದ್ರ ಇಲ್ಲದೆ ಇರುವುದರಿಂದ ತೊಂದರೆಯಾಗಿದೆ. ಸ್ಕ್ಯಾನಿಂಗ್ ಆರಂಭಿಸಿದರೆ ಈ ಭಾಗದ ಗರ್ಭಿಣಿಯರಿಗೆ
ಅನುಕೂಲವಾಗಲಿದೆ ಮತ್ತು ಜಮಖಂಡಿಗೆ ಅಲೆಯುವುದು ತಪ್ಪಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ನೀಡಬೇಕು.
*ಗೌರಿ ಮಿಳ್ಳಿ, ನಗರಸಭಾ ಸದಸ್ಯೆ,
ರಬಕವಿ ಬನಹಟ್ಟಿ
*ಕಿರಣ ಶ್ರೀಶೈಲ ಆಳಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.