Rabkavi Banhatti:ವಿದ್ಯುತ್ ಶುಲ್ಕ ಹೆಚ್ಚಳ; ನೇಕಾರರ ಬೃಹತ್ ಪ್ರತಿಭಟನೆ
ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದಂತೆ ನಡೆದುಕೊಳ್ಳಲಿ... ಉಗ್ರ ಹೋರಾಟ ಮಾಡುತ್ತೇವೆ
Team Udayavani, Jun 28, 2023, 7:07 PM IST
ರಬಕವಿ-ಬನಹಟ್ಟಿ: ಚುನಾವಣೆಯ ಪ್ರಚಾರ ಭಾಷಣದಲ್ಲಿ ನೇಕಾರರ 20 ಹೆಚ್ ಪಿ ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದರು. ಆದರೆ ಸದ್ಯ ವಿದ್ಯುತ್ ದರವನ್ನು ಹೆಚ್ಚಿಗೆ ಮಾಡಿದ್ದು ಮತ್ತು ಒಂದು ಹೆಚ್ ಪಿಗೆ ಕನಿಷ್ಠ ಶುಲ್ಕವನ್ನು 140ರೂ. ಗೆ ಹೆಚ್ಚಿಸುವುದರ ಮೂಲಕ ನೇಕಾರರಿಗೆ ಅನ್ಯಾಯ ಮಾಡಿದ್ದಾರೆ. ಆದ್ದರಿಂದ ಆದಷ್ಟು ಬೇಗನೆ ನೇಕಾರರಿಗೂ ಕೂಡಾ ಉಚಿತ್ ವಿದ್ಯುತ್ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾವು ಇನ್ನಷ್ಟು ಉಗ್ರ ಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು.
ಬುಧವಾರ ಇಲ್ಲಿನ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿಯ ಮೇಲೆ ಭದ್ರನವರ ಮನೆಯ ಮುಂದೆ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ನೇಕಾರ ಮುಖಂಡ ಮಹಾದೇವ ನುಚ್ಚಿ ಮಾತನಾಡಿ, ನೇಕಾರಿಕೆಯ ಉದ್ಯೋಗ ಮತ್ತು ನೇಕಾರರನ್ನು ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ1500 ಕ್ಕೂ ಹೆಚ್ಚು ಮನವಿ ಪತ್ರಗಳನ್ನು ನೀಡಲಾಗಿದೆ. ಆದರೆ ಸರ್ಕಾರದಿಂದ ಯಾವುದೆ ಸ್ಪಂದನೆ ಇಲ್ಲದಂತಾಗಿದೆ. ರಾಜ್ಯದಲ್ಲಿ 42 ಕ್ಕಿಂತ ಹೆಚ್ಚು ನೇಕಾರರು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ. ನೇಕಾರರ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ 1500 ಕೋಟಿ ರೂ. ರಾಜ್ಯ ಸರ್ಕಾರ ನೀಡದೆ ಅನ್ಯಾಯ ಮಾಡಿದೆ. ನೇಕಾರರಿಗೆ ಬರಬೇಕಾದ ಸಾಲದ ಮೇಲಿನ ಶೇ. 1 ಮತ್ತು ಶೇ. 3 ರಷ್ಟು ಬಡ್ಡಿ ಮನ್ನಾ ಇನ್ನೂ ಬಹಳಷ್ಟು ನೇಕಾರರಿಗೆ ತಲುಪಿಲ್ಲ. ರೈತರಂತೆ ನೇಕಾರರಿಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ದೊರೆಯುವಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನುಚ್ಚಿ ಆಗ್ರಹಿಸಿದರು.
ಭಗತಸಿಂಗ್ ಯುವಕ ಸಂಘದ ಮುಖಂಡ ಆನಂದ ಜಗದಾಳ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ನೇಕಾರರಿಗೆ ಅನ್ಯಾಯ ಮಾಡುತ್ತ ಬಂದಿವೆ ಎಂದರು.
ನೇಕಾರ ಮುಖಂಡರಾದ ಸುರೇಶ ಚಿಂಡಕ ಮಾತನಾಡಿ, ಹಿಂದಿನ ಸರ್ಕಾರ ಕೈಗೊಂಡ ಯೋಜನೆಗಳನ್ನು ಮತ್ತು ಕಾಯ್ದೆಗಳನ್ನು ಬಂದು ಮಾಡುವುದಾಗಿ ಹೇಳುತ್ತಿರುವ ಸರ್ಕಾರ ವಿದ್ಯುತ್ ದರ ಏರಿಕೆಯನ್ನು ಕೂಡಾ ಹಿಂದಕ್ಕೆ ಪಡೆದುಕೊಳ್ಳಲಿ ಎಂದು ಆಗ್ರಹಿಸಿದರು.
ರಾಜಶೇಖರ ಸೋರಗಾವಿ, ಮಲ್ಲಿಕಾರ್ಜುನ ಬಾಣಕಾರ, ಶಾಂತಾ ಮಂಡಿ ಸೇರಿದಂತೆ ಅನೇಕರು ಮಾತನಾಡಿದರು.
ನೇಕಾರರು ಕಾಡಸಿದ್ಧೇಶ್ವರ ದೇವಸ್ಥಾನದಿಂದ ನಗರ ಪ್ರಮುಖ ಬೀದಿಗಳಲ್ಲಿ ಅರೆ ಬೆತ್ತಲೆ ಪ್ರತಿಭಟನಾ ಮೆರವಣಿಗೆಯನ್ನು ಕೈಗೊಂಡರು. ಭದ್ರನವರ ಮನೆಯ ಮುಂಭಾಗದ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿಯ ಮೇಲೆ ಕುಳಿತುಕೊಂಡು ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ರಸ್ತೆ ಬಂದ್ ಮಾಡಿದರು. ನಂತರ ತಮ್ಮ ವಿದ್ಯುತ್ ಬಿಲ್ ಗಳನ್ನು ಸುಟ್ಟು ಆಕ್ರೋಶ ವ್ಯಕ್ತಿ ಪಡಿಸಿದರು. ಯಾವುದೆ ಕಾರಣಕ್ಕೂ ಬಿಲ್ ಪಾವತಿಸುವುದಿಲ್ಲ ಎಂದರು.
ನೇಕಾರ ಮಾಲಕರ ಸಂಘದ ಅಧ್ಯಕ್ಷ ಶಂಕರ ಜಾಲಿಗಿಡದ, ಬ್ರಿಜ್ಮೋಹನ ಡಾಗಾ, ಪ್ರಭು ಕರಲಟ್ಟಿ, ಮಹಾದೇವ ಮುನ್ನೊಳ್ಳಿ, ಹೊನ್ನಪ್ಪ ಬಿರಡಿ, ಮಲ್ಲಿಕಾರ್ಜುನ ಭದ್ರನವರ, ಅರ್ಜನ ಹಲಗಿಗೌಡರ, ಸಂಗಪ್ಪ ಉದಗಟ್ಟಿ, ರಾಜೇಂದ್ರ ಮಿರ್ಜಿ, ಲಕ್ಕಪ್ಪ ಮಾದರ, ಪರಮಾನಂದ ಭಾವಿಕಟ್ಟಿ, ಸಂತೋಷ ಮಾಚಕನೂರ, ಎಸ್.ಜಿ.ಬೆಳಗಲಿ, ಎಸ್.ಡಿ. ಮುರಗೋಡ, ಎಸ್.ಎಸ್. ಬಡೇಮಿ ಸೇರಿದಂತೆ ಮಹಿಳಾ ನೇಕಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಉಪ ತಹಶೀಲ್ದಾರ್ ಎಸ್.ಎಂ. ಕೂಗಾಟೆಯವರಿಗೆ ಮನವಿ ಸಲ್ಲಿಸಿದರು. ಬಂದ್ ನಿಂದಾಗಿ ಬನಹಟ್ಟಿಯ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ದಿನಸಿ ವಸ್ತು, ಔಷಧಿ ಅಂಗಡಿಗಳು, ಶಾಲಾ ಕಾಲೇಜುಗಳು ಹಾಗೂ ಬಸ್ ಸಂಚಾರ ಎಂದಿನಂತೆ ಕಾರ್ಯ ನಿರ್ವಹಿಸಿದವು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.