ಸ್ವಾತಂತ್ರ್ಯ ದಿನ ಸರಳ ಆಚರಣೆ
Team Udayavani, Aug 14, 2020, 12:12 PM IST
ಜಮಖಂಡಿ: ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ನಿರ್ದೇಶನದಂತೆ ಸರಳ ರೀತಿಯಲ್ಲಿ ಸ್ವಾತಂತ್ರ್ಯ ದಿನ ಆಚರಣೆ ಮಾಡಲಾಗುವುದು. ಯಾವದೇ ಆಡಂಬರ, ಮನರಂಜನೆಗೆ ಅವಕಾಶವಿಲ್ಲ ಎಂದು ಉಪವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೊಳ್ಳಿ ಹೇಳಿದರು.
ನಗರದ ಮಿನಿ ವಿಧಾನಸೌಧ ಕಚೇರಿ ಸಭಾಭವನದಲ್ಲಿ ಸೋಮವಾರ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆ. 15ರಂದು ತಾಲೂಕಿನ ಎಲ್ಲ ಸರಕಾರಿ, ಅರೆ ಸರಕಾರಿ, ಸಂಘ-ಸಂಸ್ಥೆಗಳಲ್ಲಿ ಬೆಳಿಗ್ಗೆ 8ಗಂಟೆ ಒಳಗಾಗಿ ಕಡ್ಡಾಯವಾಗಿ ಧ್ವಜಾರೋಹಣ ಮಾಡಬೇಕು. ನಗರದ ತಾಲೂಕು ಕ್ರೀಡಾಂಗಣದಲ್ಲಿ ಶಾಲಾ ಮಕ್ಕಳ ಕವಾಯತ್ ರದ್ದುಗೊಳಿಸಲಾಗಿದೆ. ಸ್ವಾತಂತ್ರ್ಯೊತ್ಸವಕ್ಕೆ ಶಾಲಾ ಮಕ್ಕಳು ಆಗಮಿಸುವ ಅವಶ್ಯಕತೆಯಿಲ್ಲ. ಶಾಲೆಗಳಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು ಧ್ವಜಾರೋಹಣ ಮಾಡಬೇಕು. ಎಸ್‌ಡಿಎಂಸಿ ಇಲ್ಲದ ಶಾಲೆಗಳಲ್ಲಿ ಶಾಲಾ ಮುಖ್ಯಶಿಕ್ಷಕರು ಧ್ವಜಾರೋಹಣ ನೆರವೇರಿಸಬೇಕು ಎಂದರು.
ಡಿವೈಎಸ್‌ಪಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದ ಸಮಿತಿಯಲ್ಲಿ ಕೋವಿಡ್ ವಾರಿಯರ್ಸ್ಗಳನ್ನು ಆಯ್ಕೆ ಮಾಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಗುವುದು. ಆರೋಗ್ಯ, ಪೊಲೀಸ್, ಕಂದಾಯ ಇಲಾಖೆ, ಆಶಾ ಕಾರ್ಯಕರ್ತರು, ನಗರಸಭೆ ಕಾರ್ಮಿಕರು ಸಹಿತ ವಿವಿಧ ಇಲಾಖೆಗಳಲ್ಲಿ ಕೋವಿಡ್ ವಾರಿಯಗಳಾಗಿ ಸೇವೆ ಸಲ್ಲಿಸಿದ್ದಾರೆ. ಮಾನದಂಡದೊಂದಿಗೆ ಅದರಲ್ಲಿ ಶ್ರಮಿಸಿದ ಪ್ರಮುಖರನ್ನು ಸನ್ಮಾನಿಸಲಾಗುತ್ತಿದೆ. ತಾಲೂಕಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಕಡ್ಡಾಯವಾಗಿದ್ದು, ಧ್ವಜನೀತಿ ಉಲ್ಲಂಘನೆ, ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸುವ ಪ್ರಕರಣಗಳು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ತಹಶೀಲ್ದಾರ್ ಎಸ್.ಬಿ. ಇಂಗಳೆ ಮಾತನಾಡಿ, ಜಿಲ್ಲಾಧಿಕಾರಿ ನಿರ್ದೇಶನದಂತೆ ಸ್ವಾತಂತ್ರ್ಯೊತ್ಸವನ್ನು ಸರಳವಾಗಿ ಆಚರಿಸಲಾಗುತ್ತಿದೆ. ತಾಲೂಕಾ ಕ್ರೀಡಾಂಗಣದಲ್ಲಿ 9 ಗಂಟೆಗೆ ಸಾರ್ವಜನಿಕ ಧ್ವಜಾರೋಹಣ ನಂತರ ಪೊಲೀಸ್ ಇಲಾಖೆಯಿಂದ ಗೌರವ ವಂದನೆ ನಡೆಯಲಿದೆ ಎಂದರು.
ಡಿವೈಎಸ್‌ಪಿ ಆರ್.ಕೆ.ಪಾಟೀಲ, ಸಿಪಿಐ ಡಿ.ಕೆ. ಪಾಟೀಲ, ತಾಪಂ ಕಾರ್ಯನಿರ್ವಾಹಕ ಅಬೀದ ಗದ್ಯಾಳ, ಸಿಡಿಪಿಒ ಅನುರಾಧ ಹಾದಿಮನಿ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.