ಅಮ್ಮಂದಿರ ದಿನದಂದೇ ಮಡಿಲು ಸೇರಿದ ಮಗ!
17 ದಿನ ಅಮ್ಮನಂತೆ ಆರೈಕೆ ಮಾಡಿದ ಅಪ್ಪ !
Team Udayavani, May 11, 2020, 2:39 PM IST
ಬಾಗಲಕೋಟೆ: ವಿಶ್ವ ಅಮ್ಮಂದಿರ ದಿನವೇ ಮಹಾಮಾರಿ ಕೋವಿಡ್ 19 ದಿಂದ ಸಂಪೂರ್ಣ ಗುಣಮುಖನಾಗಿ ಮನೆಗೆ ಬಂದ ಕಂದ. ಸತತ 17 ದಿನ ಅಮ್ಮನ ಪ್ರೀತಿ-ವಾತ್ಸಲ್ಯ-ಮಮತೆ ತೋರಿದ ಅಪ್ಪ. ಇಂತಹ ಹೃದಯಸ್ಪರ್ಶಿ ದಿನಕ್ಕೆ ರವಿವಾರ ವಿಶ್ವ ಅಮ್ಮಂದಿರ ದಿನ ಸಾಕ್ಷಿ ಆಯಿತು.
ಮುಧೋಳದ ಕರ್ತವ್ಯನಿರತ 43 ವರ್ಷದ ಪೊಲೀಸ್ ಪೇದೆ ಪಿ-380ಗೆ ಕೋವಿಡ್ 19 ಸೋಂಕು ತಗುಲಿತ್ತು. ಮನೆಯಲ್ಲಿನ ಪತ್ನಿ, ಪುತ್ರನಿಗೆ ಈ ಆಘಾತ ಉಂಟಾದ ಬೆನ್ನಲ್ಲೆ ಏ. 24ರಂದು ಪೇದೆಯ 14 ವರ್ಷದ ಪುತ್ರ ಪಿ-468ನಿಗೂ ಈ ಸೋಂಕು ತಗುಲಿತ್ತು.
ನಲುಗಿತ್ತು ತಾಯಿಯ ಹೃದಯ: ಕೈ ಹಿಡಿದ ಪತಿ, ಮುದ್ದಿನ ಕಂದನಿಗೆ ಕೋವಿಡ್ 19 ವೈರಸ್ ತಗುಲಿ, ಕೋವಿಡ್-19 ಆಸ್ಪತ್ರೆಗೆ ಸೇರಿದಾಗ ಮನೆಯಲ್ಲಿದ್ದ ಅಮ್ಮನ ಕರಳು ಹಿಂಡಿದಂಗಾಗಿತ್ತು. ಮನದಲ್ಲೇ ಕೋವಿಡ್ 19 ಗೆ ಹಿಡಿಶಾಪ ಹಾಕುತ್ತ, ಹೊಟ್ಟೆತುಂಬ ಊಟವಿಲ್ಲದೇ ಪತಿ-ಮಗ ಗುಣಮುಖರಾಗಿ ಬರಲಿ ಎಂದು ಮನೆಯ ದೇವರಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತಿದ್ದಳು ಆ ತಾಯಿ. ತಾಯಿಯ ಪೂಜೆ-ವಾತ್ಸಲ್ಯಕ್ಕೆ ಚಿಕಿತ್ಸೆಯೂ ಪೂರ್ಣಗೊಂಡು ಕೋವಿಡ್ 19 ದಿಂದ ಗುಣಮುಖರಾದ ಪೇದೆ ಮತ್ತು ಪುತ್ರ ಇಬ್ಬರೂ ರವಿವಾರ ಮನೆಗೆ ತೆರಳಿದರು.
ಪತಿ ಮತ್ತು ತನ್ನ ಕಂದನ ಆಗಮನಕ್ಕಾಗಿ ತುದಿಗಾಲಲಲ್ಲಿ ಕಾದು ನಿಂತಿದ್ದ ತಾಯಿ, ಇಬ್ಬರನ್ನೂ ನೋಡಿದ ತಕ್ಷಣ ಕಣ್ತುಂಬಿಕೊಂಡಳು. ಮನೆಗೆ ಬಂದವರಿಗೆ ಆರತಿ ಮಾಡಿ, ಕೋವಿಡ್ 19 ದಂತಹ ಯಾವ ವೈರಸ್ ನಿಮ್ಮ ಬಳಿ ಸುಳಿಯದಿರಲೆಂದು ದೃಷ್ಟಿ ತೆಗೆದು, ಮನೆಯೊಳಗೆ ಬರಮಾಡಿಕೊಂಡಳು. ಪತಿಯಿಂದ 22 ದಿನ, ಕಂದನಿಂದ 17 ದಿನ ದೂರವಿದ್ದ ಆ ತಾಯಿಯ ಕರಳು-ಹೃದಯ ರವಿವಾರ ಖುಷಿಯಾಗಿತ್ತು.
17 ದಿನ ಅಮ್ಮನ ಆರೈಕೆ ಮಾಡಿದ ಅಪ್ಪ: ಮುಧೋಳದಲ್ಲಿ ಕರ್ತವ್ಯದ ವೇಳೆ ಪಿ-380 ನಿಗೆ ಕೋವಿಡ್ 19 ವೈರಸ್ ಬಂದಾಗ ಸ್ವಲ್ಪ ಆತಂಕವಾಗಿತ್ತು. ಯಾವುದೇ ಲಕ್ಷಣಗಳಿಲ್ಲದಿದ್ದರೂ ಕೋವಿಡ್ 19 ಗಂಟಲು ಸೇರಿತ್ತು. ಅವರ ಸಂಪರ್ಕದಲ್ಲಿದ್ದ ಮನೆಯವರನ್ನೆಲ್ಲ ತಪಾಸಣೆಗೆ ಒಳಪಡಿಸಲಾಗಿತ್ತು. ಆಗ 14 ವರ್ಷದ ಪುತ್ರನಿಗೂ ಸೋಂಕು ತಗುಲಿದ್ದು, ಕೇಳಿ ಮತ್ತಷ್ಟು ದುಃಖವೂ ಆಗಿತ್ತು. ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲೇ ಮಗನಿಗೂ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆಯಲ್ಲಿ ಮಗನೊಂದಿಗೆ ಇದ್ದು, ತಮ್ಮ ಆರೋಗ್ಯಕ್ಕಿಂತ ಮಗನ ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸಿದ್ದರು ಪೇದೆ. ನಿತ್ಯ ಅಮ್ಮನ ಸ್ಥಾನದಲ್ಲಿ ನಿಂತು ಪ್ರೀತಿ-ವಾತ್ಸಲ್ಯದೊಂದಿಗೆ ಆರೈಕೆ ಮಾಡುತ್ತಿದ್ದರು.
ಗುಣಮುಖರಾದ್ರೂ ಮನೆಗೆ ಹೋಗಲಿಲ್ಲ: ತಾವು ಮೇ 4ರಂದೇ ಕೋವಿಡ್ 19 ದಿಂದ ಗುಣಮುಖರಾಗಿದ್ದರು. ಇತರ ಮೂವರು ಪೇದೆಗಳ ಜತೆಗೆ ಅವರನ್ನೂ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ತಯಾರಿ ಆಗಿತ್ತು. ಆದರೆ, ಆಸ್ಪತ್ರೆಯಲ್ಲಿ ಮಗನನ್ನು ಬಿಟ್ಟು, ತಾವು ಮನೆಗೆ ಹೋಗಲು ಒಪ್ಪಲಿಲ್ಲ. ಮಗನೂ ಗುಣಮುಖನಾಗಲಿ. ಅಲ್ಲಿಯವರೆಗೂ ನಾನು ಆಸ್ಪತ್ರೆಯಲ್ಲೇ ಇರುತ್ತೇನೆ ಎಂದು ತನ್ನ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು. ಇದಕ್ಕೆ ಸ್ವತಃ ಎಸ್ಪಿ, ಬೆಳಗಾವಿ ವಿಭಾಗದ ಐಜಿಪಿ ಕೂಡ ಒಪ್ಪಿಗೆ ನೀಡಿದರು. ತಾವು, ಗುಣಮುಖರಾಗಿದ್ದರೂ ಆಸ್ಪತ್ರೆಯಿಂದ ತೆರಳದೇ, ಮಗನ ಚಿಕಿತ್ಸೆ ಅವಧಿ ಪೂರ್ಣಗೊಂಡು, ಆತನ ಗಂಟಲು ದ್ರವ ಮಾದರಿ 2ನೇ ಬಾರಿಯೂ ನೆಗೆಟಿವ್ ಬರುವವರೆಗೂಕಾದರು. 2ನೇ ಬಾರಿ ಮತ್ತು 24 ಗಂಟೆಗಳ ನಂತರದ ವರದಿಗಳೆಲ್ಲವೂ ನೆಗೆಟಿವ್ ಬಂದ ಬಳಿಕ, ರವಿವಾರ ತಾವು, ತಮ್ಮ ಮುದ್ದಿನ ಕಂದನೊಂದಿಗೆ ಬಿಡುಗಡೆಗೊಂಡರು.
ಕೈ ಮುಗಿದರು: ತನಗೂ, ತನ್ನ ಮಗನಿಗೂ ಚಿಕಿತ್ಸೆ ನೀಡಿದ ಡಾ|ಚಂದ್ರಕಾಂತ ಜವಳಿ, ಆಸ್ಪತ್ರೆಯ ಎಲ್ಲ ನರ್ಸ್‌ಗಳಿಗೆ ಪೇದೆ ಮತ್ತು ಅವರ ಪುತ್ರ ಕೈಮುಗಿದು ಮನಸಾರೆ ವಂದಿಸಿದರು. ಚಿಕಿತ್ಸೆಗೆ ಮುಂದಾಳತ್ವ ವಹಿಸಿದ್ದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ|ಪ್ರಕಾಶ ಬಿರಾದಾರ ಹಾಗೂ ಅವರ ತಂಡಕ್ಕೂ ಕೈಮುಗಿದು, ಮನೆಯತ್ತ ಹೆಜ್ಜೆ ಹಾಕಿದರು.
ಮುಧೋಳದ 43 ವರ್ಷದ ಪೇದೆ ಪಿ-380 ಮತ್ತು ಅವರ 14 ವರ್ಷದ ಪುತ್ರ ಪಿ-469 ಗುಣಮುಖರಾಗಿ ಇಂದು ಬಿಗುಡೆಗಡೆಯಾಗಿದ್ದಾರೆ. ಜಿಲ್ಲೆಯ ಒಟ್ಟು 51 ಜನ ಸೋಂಕಿತರಲ್ಲಿ ಓರ್ವ ವೃದ್ಧ ಮೃತಪಟ್ಟಿದ್ದು, 21 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದ 29 ಜನರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. -ಕ್ಯಾಪ್ಟನ್ ಡಾ| ಕೆ. ರಾಜೇಂದ್ರ, ಜಿಲ್ಲಾಧಿಕಾರಿ
ಕೋವಿಡ್ 19 ವಿರುದ್ಧದ ವಾರಿಯರ್ಸ್‌ಗಳಾಗಿ ಹೋರಾಟ ಮಾಡುವಲ್ಲಿ ಪೊಲೀಸ್ ಇಲಾಖೆ ಮುಂಚೂಣಿಯಲ್ಲಿದೆ. ಇಂತಹ ಹೋರಾಟದಲ್ಲಿ ನಮ್ಮ ಜಿಲ್ಲೆಯ ನಾಲ್ವರು ಪೇದೆಗಳಿಗೆ ಸೋಂಕು ಖಚಿತಪಟ್ಟಾಗ ಸ್ವಲ್ಪ ಬೇಸರವಾಗಿತ್ತು. ಈಗ ಅವರೆಲ್ಲ ಸಂಪೂರ್ಣ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಕೊರೊನಾ ವಿರುದ್ಧ ಹೋರಾಡುವ ಪೊಲೀಸರಿಗೆ ಸಹಕಾರ ನೀಡಲು ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. -ಲೋಕೇಶ ಜಗಲಾಸರ, ಎಸ್ಪಿ
-ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Belagavi Session: ಬರಾಕ್ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.