ಕ್ಷೇತ್ರಕಷ್ಟೇ ಸೀಮಿತರಾದ್ರೆ “ಕೈ’ ನಾಯಕರು?
ನಾಯಕರಲ್ಲಿ ಸಮನ್ವಯ ಕೊರತೆ | ಮೈ ಕೊಡವಿ ಏಳುತ್ತಾ ಕಾಂಗ್ರೆಸ್ | ಪ್ರಬಲ ಸ್ಥಾನಗಳು ಇಲ್ಲಿದ್ರೂ ಆಗುತ್ತಿಲ್ಲ ಸದ್ಬಳಕೆ
Team Udayavani, Jul 16, 2021, 4:55 PM IST
ವರದಿ : ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ರಾಜ್ಯದಲ್ಲಿ ಪ್ರಭಲ ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್‌ನ ಜಿಲ್ಲೆಯ ನಾಯಕರಲ್ಲಿ ಸಮನ್ವಯತೆ ಕೊರತೆ ಎದ್ದು ಕಾಣುತ್ತಿದ್ದು, ಇದು ಪಕ್ಷ ಸಂಘಟನೆಗೆ ಹಿನ್ನಡೆಯಾಗಲು ಕಾರಣವಾಗುತ್ತಿದೆ ಎಂಬ ಅಸಮಾಧಾನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕೇಳಿ ಬರುತ್ತಿದೆ.
ರಾಜ್ಯದಲ್ಲಿ ಬಿಜೆಪಿ ಆಡಳಿತ ಪಕ್ಷವಾದರೆ, ಕಾಂಗ್ರೆಸ್ ವಿರೋಧ ಪಕ್ಷದಲ್ಲಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರ ಸ್ಥಾನಗಳೆರಡೂ ಜಿಲ್ಲೆಗೆ ದೊರೆತಿವೆ. ಮುಖ್ಯಮಂತ್ರಿಗಳು ತಮ್ಮ ಆಡಳಿತ ಪಕ್ಷದ ಸಚಿವರು, ಶಾಸಕರು, ತಮ್ಮ ಸ್ವ ಕ್ಷೇತ್ರಕ್ಕೆ ನೀಡುವ ಆದ್ಯತೆಯಷ್ಟೇ ವಿರೋಧ ಪಕ್ಷದ ನಾಯಕರ ಕ್ಷೇತ್ರಗಳಿಗೂ ನೀಡುವುದು ಪರಂಪರೆ. ಸದ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರಕ್ಕೆ ಒಂದಷ್ಟು ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಬಾದಾಮಿ ಕ್ಷೇತ್ರದ ಇತಿಹಾಸದಲ್ಲೇ ಅತಿ ಹೆಚ್ಚು ಅನುದಾನ ಬರುತ್ತಿರುವುದು ಸಿದ್ದರಾಮಯ್ಯ ಅವರ ಪ್ರಯತ್ನದಿಂದ ಎಂಬುದು ಎರಡು ಮಾತಿಲ್ಲ. ಆದರೆ ಪಕ್ಷ ಸಂಘಟನೆಯ ವಿಷಯದಲ್ಲಿ ಸಿದ್ದರಾಮಯ್ಯ ಇದ್ದರೂ, ಅದು ಅಂದುಕೊಂಡಂತೆ ಆಗುತ್ತಿಲ್ಲ ಎಂಬುದು ಹಲವರು ನಿಷ್ಠಾವಂತ ಕಾರ್ಯಕರ್ತರ ಬೇಸರದ ಮಾತು.
ಸಿದ್ದರಾಮಯ್ಯ ಬಾದಾಮಿಗೆ ಸೀಮಿತ: ಇಡೀ ರಾಜ್ಯದಲ್ಲಿ ಜಾತ್ಯತೀತ ನಾಯಕರೆಂದು ಕರೆಸಿಕೊಳ್ಳುತ್ತಿರುವ ಸಿದ್ದರಾಮಯ್ಯ ಅವರು, ಸದ್ಯ ಜಿಲ್ಲೆಯ ಜನಪ್ರತಿನಿಧಿ. ಬಾದಾಮಿ ಕ್ಷೇತ್ರದಿಂದ ಗೆದ್ದಿರುವ ಕಾರಣದಿಂದಲೇ ಇಂದಿಗೂ ಅವರು ರಾಜ್ಯ ರಾಜಕಾರಣದಲ್ಲಿ ಚಲಾವಣೆಯ ನಾಣ್ಯವಾಗಿದ್ದಾರೆ. ಆದರೆ ಅವರು ಕೇವಲ ಬಾದಾಮಿಗೆ ಸಿಮೀತರಾಗಿದ್ದಾರೆ. ಅದೂ 1ರಿಂದ 2 ತಿಂಗಳಿಗೊಮ್ಮೆ ಜಿಲ್ಲೆಗೆ ಬಂದು ಹೋದರೆ, ಜವಾಬ್ದಾರಿ ಮುಗಿಯಿ ತೆಂಬಂತಿದ್ದಾರೆ. ಅವರಿಂದ ಜಿಲ್ಲೆ ಯಲ್ಲಿ ಪಕ್ಷ ಸಂಘಟನೆಗೆ ದೊಡ್ಡ ಲಾಭವಾಗಲಿದೆ. ಜಿಲ್ಲೆಯ ನಾಯಕರಲ್ಲಿ ಸಮನ್ವಯತೆ ಮೂಡಲಿದೆ ಎಂಬ ನಮ್ಮೆಲ್ಲರ ನಿರೀಕ್ಷೆ ಇನ್ನೂ ನಿರೀಕ್ಷೆಯಾಗಿಯೇ ಉಳಿದಿದೆ ಎಂಬುದು ಕೆಲ ಪದಾಧಿಕಾರಿಗಳ ಮಾತು.
ನಾಯಕರಲ್ಲಿಲ್ಲ ಸಮನ್ವಯತೆ: ಕಳೆದ 2018ರ ವಿಧಾನಸಭೆ ಚುನಾವಣೆ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಸ್ಥಾನ, ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಗಳು, ಕಾಂಗ್ರೆಸ್ ಪಕ್ಷದ ಜಿಲ್ಲೆಯ ನಾಯಕರಲ್ಲಿ ಸಮನ್ವಯತೆ-ಒಗ್ಗಟ್ಟು ಒಡಕಾಗಲು ಕಾರಣವಾಗಿದೆ ಎನ್ನಲಾಗಿದೆ. ಇವರೆಲ್ಲರ ಮಧ್ಯೆ ಸಿಲುಕಿರುವ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ತಮ್ಮದೇ ಶೈಲಿ-ಸಂಘಟನೆಯ ಚಾಣಾಕ್ಷತೆ ಹಾಗೂ ಅನುಭವದ ಆಧಾರದ ಮೇಲೆ ಪಕ್ಷ ಸಂಘಟನೆ, ಜಿಲ್ಲಾ ಕೇಂದ್ರದಲ್ಲಿ ಪಕ್ಷದ ಕಚೇರಿ ನಿರ್ಮಾಣದಲ್ಲಿ ಸಕ್ರಿಯರಾಗಿದ್ದಾರೆ. ಪಕ್ಷದ ಜಿಲ್ಲೆಯ ನಾಯಕರಲ್ಲಿ ಒಮ್ಮತದ ಒಗ್ಗಟ್ಟು ಮೂಡಿದಲ್ಲಿ, ಸಿದ್ದರಾಮಯ್ಯ ಅವರನ್ನು ಜಿಲ್ಲೆಯ ಮಟ್ಟಿಗೆ ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಿದೆ. ಆದರೆ, ಒಂದು ಕ್ಷೇತ್ರಕ್ಕೆ ಹೋದರೆ, ಇನ್ನೊಂದು ಕ್ಷೇತ್ರದ ನಾಯಕರು ಸಿಡಿಮಿಡಿಗೊಳ್ಳುತ್ತಾರೆ. ಸಾಹೇಬ್ರ, ಅಲ್ಲಿಗೆ ಹೋಗ ಬ್ಯಾಡ್ರಿ ಅಂತಾರೆ. ಹೀಗಾಗಿ ಸಿದ್ದರಾಮಯ್ಯ ಅವರು, ಯಾರಿಗೂ ನಿಷ್ಠುರವಾಗದೇ ತಮ್ಮ ಕ್ಷೇತ್ರವಾಯಿತು, ರಾಜ್ಯದ ವಿವಿಧೆಡೆ ಪ್ರವಾಸವಾಯಿತು ಎಂಬಂತಿದ್ದಾರೆ ಎನ್ನಲಾಗಿದೆ.
ಜಿಪಂ-ತಾಪಂ ಇಲ್ಲ ತಯಾರಿ: ಜಿಲ್ಲೆಯ ಜಿ.ಪಂ ಮತ್ತು ತಾಪಂಗೆ ಚುನಾವಣೆ ನಿಗದಿಯಾಗಿವೆ. 6 ತಾಲೂಕುಗಳು 9ಕ್ಕೆ ಏರಿಕೆಯಾದರೂ, ಕ್ಷೇತ್ರಗಳು ಮಾತ್ರ 130ರಿಂದ 110ಕ್ಕೆ ಇಳಿಕೆಯಾಗಿವೆ. 36 ಜಿಪಂ ಕ್ಷೇತ್ರಗಳು ಈ ಬಾರಿ 40ಕ್ಕೆ ಏರಿಕೆಯಾಗಿವೆ. ಆಡಳಿತ ಪಕ್ಷದವರು ತಮಗೆ ಬೇಕಾದ ರೀತಿ ಕ್ಷೇತ್ರ ಪುನರ್ ವಿಂಗಡಣೆ ಮಾಡಿಸಿಕೊಂಡಿದ್ದಾರೆ. ಮೀಸಲಾತಿ ನಿಗದಿಯಲ್ಲಿ ಎಲ್ಲರಿಗೂ ತೀವ್ರ ಅಸಮಾಧಾನವಿದೆ. ಆದರೂ, ನಮ್ಮ ಪಕ್ಷದ ನಾಯಕರು, ಜಿಪಂ, ತಾಪಂ ಚುನಾವಣೆಗೆ ತಯಾರಿ ಮಾಡುತ್ತಿಲ್ಲ. ಅದೇ ಬಿಜೆಪಿಯಲ್ಲಿ ಸರಣಿ ಸಭೆಗಳನ್ನು ನಡೆಸಿ, ಕಾರ್ಯಕರ್ತರನ್ನು ಚುನಾವಣೆಗೆ ಅಣಿ ಮಾಡುತ್ತಿದ್ದಾರೆ. ನಮ್ಮ ನಾಯಕರು, ಚುನಾವಣೆ ಘೋಷಣೆಯಾದ ಬಳಿಕ ಮೈಕೊಡವಿ ಏಳುತ್ತಾರೆಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದರು.
ಹಿಡಿತ ಸಾಧಿಸಲು ಡಿಕೆಶಿ ಆಗಮನ?: ಜಿಲ್ಲೆಯ ಕಾಂಗ್ರೆಸ್ ನಾಯಕರಲ್ಲೇ ಕೆಲವು ಗುಂಪುಗಳಿದ್ದು, ರಾಜ್ಯ ನಾಯಕರಲ್ಲಿ ಇರುವಂತೆ ಇಲ್ಲೂ ಹಲವರಲ್ಲಿ ಭಿನ್ನ ಮಾತುಗಳಿವೆ. ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರು, ಅವರನ್ನೇ ಆರಾಧಿಸುವ ಕೆಲವರಿದ್ದರೆ, ಡಿ.ಕೆ. ಶಿವಕುಮಾರ, ಮಲ್ಲಿಕಾರ್ಜುನ ಖರ್ಗೆ ಅವರಂತಹ ನಾಯಕರ ನಾಯಕತ್ವ ಒಪ್ಪಿಕೊಳ್ಳುವ ಕೆಲವರಿದ್ದಾರೆ. ಇದೆಲ್ಲದರ ಮಧ್ಯೆ ಸಿದ್ದರಾಮಯ್ಯ ಪ್ರತಿನಿಧಿಸುವ ಬಾಗಲಕೋಟೆ ಜಿಲ್ಲೆಯ ಮೇಲೆ ಡಿ.ಕೆ. ಶಿವಕುಮಾರ ಕಣ್ಣು ಕೂಡ ಬಿದ್ದಿದ್ದು, ಇಲ್ಲಿನ ಪಕ್ಷದ ಕೆಲ ನಾಯಕರ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಅವರು ಜು.18ರಂದು ಇಡೀ ದಿನ ಜಿಲ್ಲೆಯಲ್ಲಿದ್ದು, ಪಕ್ಷದ ಪ್ರಮುಖರ ಸರಣಿ ಸಭೆಯ ಜತೆಗೆ ನೇಕಾರ ಸಮುದಾಯ ಸೆಳೆಯಲು ಸಂವಾದದ ಕಾರ್ಯಕ್ಕೆ ಮುಂದಾಗಿದ್ದಾರೆಂದು ತಿಳಿದು ಬಂದಿದೆ.
ಒಟ್ಟಾರೆ ಪ್ರಭಲ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ನಾಯಕರಲ್ಲಿ ಸಮನ್ವಯತೆ ಹಾಗೂ ಒಗ್ಗಟ್ಟು ಪ್ರದರ್ಶನ ಇಲ್ಲವೆಂಬವೆಂಬ ಕಾರ್ಯಕರ್ತರ ಬೇಸರವನ್ನು ನಾಯಕರು ಕಳೆಯುತ್ತಾರಾ ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.