ಭಕ್ತಿಯ ಪರಾಕಾಷ್ಠೆ !
•ದಂಡಿನ ದುರ್ಗಾದೇವಿ ಜಾತ್ರೆ •ತಲೆಗೆ ಕಾಯಿ ಒಡೆದು ಭಕ್ತಿ ಸಮರ್ಪಣೆ
Team Udayavani, Jun 12, 2019, 9:33 AM IST
ಬಾಗಲಕೋಟೆ: ನಗರದ ಹರಣಸಿಕಾರಿ ಕಾಲೋನಿಯ ದಂಡಿನ ದುರ್ಗಾದೇವಿ ಜಾತ್ರೆಯಲ್ಲಿ ತಲೆಗೆ ಟೆಂಗಿನ ಕಾಯಿ ಒಡೆದುಕೊಳ್ಳುತ್ತಿರುವ ಪರಶುರಾಮ ಪೂಜಾರಿ.
ಬಾಗಲಕೋಟೆ: ನಾವೆಲ್ಲ ಕೈಯಲ್ಲಿ ಟೆಂಗು ಹಿಡಿದು, ಕಲ್ಲಿಗೆ ಹೊಡೆದು ಒಡೆಯುವುದೂ ಕಷ್ಟ ಎನ್ನುತ್ತಾರೆ. ಆದರೆ, ಈ ಪೂಜಾರಿಗಳು ಒಂದಲ್ಲ, 25ರಿಂದ 30 ಟೆಂಗಿನ ಕಾಯಿಗಳನ್ನು ತಲೆಯಿಂದಲೇ ಒಡೆಯುತ್ತಾರೆ. ಒಂದೇ ಏಟಿಗೆ ಟೆಂಗಿನ ಕಾಯಿ ಚೂರು ಚೂರಾಗುತ್ತದೆ.
ಹೌದು, ಇದು ನಗರದ ಶೆಟಲ್ಮೆಂಟ್ (ಹರಣಸಿಕಾರಿ) ಕಾಲೋನಿಯಲ್ಲಿ ಮಂಗಳವಾರ ನಡೆದ ದಂಡಿನ ದುರ್ಗಾದೇವಿ ಜಾತ್ರೆಯಲ್ಲಿ ಪರಶು ಪೂಜಾರಿ ಮತ್ತು ಹೊನ್ನಪ್ಪ ಪೂಜಾರಿ ಅವರು ಪ್ರತ್ಯೇಕ ದೇವಸ್ಥಾನಗಳ ಎದುರು ಭಕ್ತರು ತಂದಿದ್ದ ಟೆಂಗಿನ ಕಾಯಿಗಳನ್ನು ತಲೆಗೆ ಹೊಡೆದುಕೊಂಡು ಒಡೆಯುತ್ತಿದ್ದರು. ಒಂದೊಂದು ಟೆಂಗಿನ ಕಾಯಿಯನ್ನು ಪೂಜಾರಿಗಳು ತಲೆಗೆ ಹೊಡೆದು ಒಡೆಯುತ್ತಿದ್ದರೆ, ನೆರೆದ ಭಕ್ತರು ದೇವಿಗೆ ಜಯಕಾರ ಕೂಗುತ್ತಿದ್ದರು.
ತಲೆಗೆ ಏಕೆ ಒಡೆಯುತ್ತಾರೆ: ಹರಣಸಿಕಾರಿ ಕಾಲೋನಿಯ ದಂಡಿನ ದುರ್ಗಾದೇವಿ ಜಾತ್ರೆ, ಯಾವುದೇ ನಗರ-ಪಟ್ಟಣಗಳಲ್ಲಿ ನಡೆದರೂ, ಅಲ್ಲಿನ ದೇವಸ್ಥಾನದ ಪೂಜಾರಿಗಳು ಟೆಂಗನ್ನು ತಲೆಗೆ ಒಡೆಯುತ್ತಾರೆ. ತಲೆಗೆ ಏಕೆ ಟೆಂಗಿನ ಕಾಯಿ ಒಡೆಯುತ್ತಾರೆ ಎಂಬುದು ಈಗಿನ ಯುವ ಪೀಳಿಗೆಗೆ ಗೊತ್ತಿಲ್ಲ. ಅದಕ್ಕೊಂದು ರೋಚಕ ಸತ್ಯ ಪ್ರಸಂಗವಿದೆ.
ತಲೆಗೆ ಟೆಂಗಿನ ಕಾಯಿ ಒಡೆದುಕೊಂಡು, ದಂಡಿನ ದುರ್ಗಾದೇವಿ ಜಾತ್ರೆ ಆರಂಭಗೊಂಡಿದ್ದು ಗದಗ-ಬೆಟಗೇರಿ ಬಳಿ ಇರುವ ನಾಗಸಮುದ್ರ ಎಂಬ ಗ್ರಾಮದಲ್ಲಿ. ಅಲ್ಲಿ ಈ ಸಂಪ್ರದಾಯವನ್ನು ಆರಂಭಿಸಿದವರು ಮುಳುಗುಂದದ ಗೋವಿಂದಪ್ಪ ಎಂಬ ಪೂಜಾರಿ. ಈ ಗೋವಿಂದಪ್ಪ, ಪೂಜಾರಿಯಾಗಿ ಮಾರ್ಪಡುವ ಮೊದಲು, ಒಬ್ಬ ಬೇಟೆಗಾರ. ಕಂಡಲ್ಲಿ ಪ್ರಾಣಿ-ಪಕ್ಷಿಗಳ ಬೇಟೆಯಾಡಿ, ಸಿಂದಿ ಕುಡಿದು ಬದುಕುವುದೇ ಅವರ ಬದುಕಿನ ಭಾಗವಾಗಿತ್ತು.
ಆರಂಭಿಸಿದ್ದು ಗೋವಿಂದಪ್ಪ: ಬೇಟೆಗಾರನಾಗಿದ್ದ ಗೋವಿಂದಪ್ಪ, ಎಂದಿನಂತೆ ನಾಗಸಮುದ್ರ ಗ್ರಾಮದ ಹಳ್ಳದ ಆವರಣದಲ್ಲಿ ಪಾರಿವಾಳಕ್ಕೆ ಬಲೆ ಹಾಕಿದ್ದ. 10ರಿಂದ 15 ಪಾರಿವಾಳ ಆತನ ಬಲೆಗೆ ಬಿದ್ದಿದ್ದವು. ಅವುಗಳನ್ನು ತಂದು, ಗ್ರಾಮದಲ್ಲಿ ಮಾರಿ, ಆ ಹಣದಿಂದ ಸಿಂದಿ ಕುಡಿಯುವುದು ಅವರ ಉದ್ದೇಶವಾಗಿತ್ತು. ಆದರೆ, ಪಾರಿವಾಳದೊಂದಿಗೆ ಕುಳಿತ ಸಂದರ್ಭದಲ್ಲಿ ಪಾರಿವಾಳಗಳು ಹಾರಿ ಹೋದವು. ಆಗ ಎಂದೂ ಹಾರಿ ಹೋಗದ ಪಾರಿವಾಳ ಇಂದು ಹೇಗೆ ಹಾರಿ ಹೋದವು ಎಂದು ಅವುಗಳ ಬೆನ್ನಟ್ಟಿದ.
ಬೇಟೆಗಾರನೊಬ್ಬ ಪೂಜಾರಿಯಾದ: ಪಾರಿವಾಳಗಳು ನಾಗಸಮುದ್ರ ಬಳಿಯ ಒಂದು ಬಯಲು ಜಾಗೆಯಲ್ಲಿ ಮೇಯುತ್ತಿದ್ದವು. ಆಗ ಗೋವಿಂದಪ್ಪ ಪುನಃ ಆ ಪಾರಿವಾಳಗಳಿಗೆ ಬಲೆ ಹಾಕಿದ. ಆಗ ಬೆಳಗಿನ ಸಮಯವಾಗಿತ್ತು. ಬಲೆ ಹಾಕಿದ್ದ ವೇಳೆಯೇ ಅಲ್ಲಿಗೆ (ಅದು ನಿರ್ಜನ ಪ್ರದೇಶವಾಗಿದ್ದರೂ) ಪುಟ್ಟ ಬಾಲಕಿಯೊಬ್ಬಳು ಬಂದಳು. ಆ ಬಾಲಕಿಗೆ, ಪಾರಿವಾಳ ಹಿಡಿಯಲು ಬಲೆ ಹಾಕಿದ್ದೇನೆ, ಆ ಕಡೆ ಹೋಗು ಎಂದು ಬೆದರಿಸಿ ಕಳುಹಿಸಿದ. ಬಳಿಕ ಅದೇ ಮಾರ್ಗದಿಂದ ಮಹಿಳೆಯೊಬ್ಬರು ಬಂದಳು. ಅವರನ್ನೂ ಬೆದರಿಸಿ ಕಳುಹಿಸಿದ. ನಂತರ ವಯಸ್ಸಾದ ವೃದ್ಧೆಯೊಬ್ಬಳು ಬಂದಳು. ಇಂತಹ ನಿರ್ಜನ ಪ್ರದೇಶದಲ್ಲಿ ಬಾಲಕಿ, ಮಹಿಳೆ, ವೃದ್ಧೆ ಯಾಕೆ ಬರುತ್ತಿದ್ದಾರೆ ಎಂದು, ವೃದ್ಧೆಯನ್ನು ಪ್ರಶ್ನಿಸಿದ. ಆ ವೇಳೆ ಅವರೊಂದಿಗೆ ಕೆಲವು ಹೊತ್ತು ಸಂಭಾಷಣೆ ನಡೆಯಿತು.
ಕೊನೆಗೆ ಆ ವೃದ್ಧೆ, ನಾನು ದಂಡಿನ ದುರ್ಗಾದೇವಿ ಎಂದು ಹೇಳಿದಳಂತೆ. ನೀನು ನನ್ನ ದೇವಸ್ಥಾನದ ಪೂಜಾರಿಯಾಗಬೇಕು. ಹರನಸಿಕಾರಿ ಜನರ ಉದ್ಧಾರ ಮಾಡಬೇಕು ಎಂದು ಕೇಳಿಕೊಂಡಳಂತೆ. ಇದಕ್ಕೆ ಹರನಸಿಕಾರಿ ಜನ ನನ್ನನ್ನು ಹೇಗೆ ನಂಬುತ್ತಾರೆ, ಅವರು ಉದ್ಧಾರ ಹೇಗೆ ಆಗುತ್ತಾರೆ ಎಂದೆಲ್ಲ ಕೇಳಿದನಂತೆ. ಅದಕ್ಕೆ ನಿನ್ನನ್ನು ನಂಬ ಬೇಕಾದರೆ, ಕಲ್ಲುಗಳನ್ನು ತೆಗೆದುಕೊಂಡು ತಲೆಗೆ ಹೊಡೆದುಕೋ, ಕಲ್ಲು ಹೊಡೆದುಕೊಂಡರೂ ನಿನ್ನ ತಲೆಗೆ ಏನೂ ಆಗಲ್ಲ. ಕಲ್ಲುಗಳೇ ಪುಡಿ ಪುಡಿಯಾಗುತ್ತವೆ ಎಂದು ಹೇಳಿ, ಆಶೀರ್ವಾದ ಮಾಡುವ ಜತೆಗೆ ನಿನ್ನ ಬಳಿ ಯಾರೇ ರೋಗ-ರುಜಿನುಗಳಿಂದ ಬಂದರೆ ಅವರಿಗೆ ಆಯುರ್ವೆದ್ ಔಷಧ ಕೊಡು, ಅದರಿಂದ ಅವರೆಲ್ಲ ಗುಣಮುಖರಾಗುತ್ತಾರೆ. ಆಗ ನಿನ್ನನ್ನು ನಂಬುತ್ತಾರೆ ಎಂದು ದೇವಿಯ ರೂಪದಲ್ಲಿದ್ದ ವೃದ್ಧೆ ಹೇಳಿದರಂತೆ.
ಮೊದಲು ಕಲ್ಲು-ಈಗ ಟೆಂಗು: ಆಗ ಗೋವಿಂದಪ್ಪ, ಪ್ರತಿ ಹುಣ್ಣಿಮೆ ಮತ್ತು ಅಮವಾಸೆಯಂದು, ಇಂದಿಗೂ ಗದಗ-ಬೆಟಗೇರಿ ಬಳಿ ಇರುವ ದೊಡ್ಡ ಮರದ ಪಕ್ಕ ದಂಡಿನ ದುರ್ಗಾದೇವಿ ದೇವಸ್ಥಾನ ಮಾಡಿಕೊಂಡು ಪೂಜೆ, ಜನರಿಗೆ ಔಷಧ ನೀಡುವ ಹಾಗೂ ತಲೆಗೆ ಕಲ್ಲು ಒಡೆದುಕೊಳ್ಳುವ ಸಂಪ್ರದಾಯ ಆರಂಭಿಸಿದ. ಇದು ಸುಮಾರು 60ರಿಂದ 65 ವರ್ಷಗಳ ಹಿಂದೆ ನಡೆದ ಸತ್ಯ ಘಟನೆ ಎಂದು ನಗರದ ಹರನಸಿಕಾರಿ ಕಾಲೋನಿಯ 90 ವರ್ಷದ ಹಿರಿಯ ಮುಖಂಡ ಶಿವಾಜಿ ಚವ್ಹಾಣ ಹೇಳುತ್ತಾರೆ. ಅಲ್ಲದೇ ಗೋವಿಂದಪ್ಪ ಅವರ ಪವಾಡವನ್ನು ಕಣ್ಣಾರೆ ಕಂಡಿದ್ದಾಗಿ ಅವರು ತಿಳಿಸುತ್ತಾರೆ.
ಬಾಗಲಕೋಟೆಗೆ ಬಂತು ಸಂಪ್ರದಾಯ: ಸುಮಾರು 65 ವರ್ಷಗಳ ಹಿಂದೆ ಬೇಟೆಗಾರನಾಗಿದ್ದ ಗೋವಿಂದಪ್ಪ, ದಂಡಿನ ದುರ್ಗಾದೇವಿಯ ಪೂಜಾರಿಯಾಗಿ, ತಲೆಗೆ ಕಲ್ಲು ಹೊಡೆದು, ಕ್ರಮೇನ ಟೆಂಗಿನ ಕಾಯಿ ಒಡೆದುಕೊಳ್ಳುವ ಸಂಪ್ರದಾಯ ಮುಂದುವರೆಯಿತು. ಇಂದಿಗೂ ದೇಶದ ವಿವಿಧ ರಾಜ್ಯಗಳ ಜನರು, ಗದಗ-ಬೆಟಗೇರಿ ಬಳಿ ಇರುವ ದಂಡಿನ ದುರ್ಗಾದೇವಿ ಜಾತ್ರೆಗೆ ಬರುತ್ತಾರೆ. ಸುಮಾರು 20 ವರ್ಷಗಳ ಹಿಂದೆ ಬಾಗಲಕೋಟೆಯ ಹರನಸಿಕಾರಿ ಕಾಲೋನಿ ಜನರೂ ಗದಗ-ಬೆಟಗೇರಿ ಬಳಿ ದೇವಸ್ಥಾನದ ಜಾತ್ರೆಗೆ ಹೋದಾಗ ಜಗಳವಾಗಿತ್ತಂತೆ. ಹೀಗಾಗಿ ಅಲ್ಲಿಗೆ ಹೋಗುವ ಬದಲು, ನಮ್ಮ ಕಾಲೋನಿಯಲ್ಲೇ ದಂಡಿನ ದುರ್ಗಾದೇವಿ ದೇವಸ್ಥಾನ ಕಟ್ಟಿ, ನಾವೇ ಪೂಜೆ-ಜಾತ್ರೆ ಮಾಡೋಣ ಎಂದು ನಿರ್ಧರಿಸಿ, ಬಾಗಲಕೋಟೆಯ ಹರನಸಿಕಾರಿ ಕಾಲೋನಿಯಲ್ಲಿ ಎರಡು ದೇವಸ್ಥಾನ ಕಟ್ಟಿದ್ದಾರೆ. ಆ ದೇವಸ್ಥಾನಗಳಲ್ಲಿ ಪ್ರತಿವರ್ಷವೂ ಈ ಜಾತ್ರೆ ಸಂಭ್ರಮದಿಂದ ಇಡೀ ಕಾಲೋನಿಯ ಜನರು ಮಾಡುತ್ತಾರೆ.
•ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.