ಸತ್ಯ ತಿಳಿಯಲು ಬರ್ತಿದೆ ಶೋಧನಾ ಸಮಿತಿ
•ಇಂದು ಚರ್ಚೆ, ಕೆಪಿಸಿಸಿಗೆ ವರದಿ•ಬೂದಿ ಮುಚ್ಚಿದ ಕೆಂಡದಂತಿದೆ ಆಕ್ರೋಶ
Team Udayavani, Jul 17, 2019, 10:00 AM IST
ಬಾಗಲಕೋಟೆ: ಬರೋಬ್ಬರಿ 14 ತಿಂಗಳ ಬಳಿಕ ಕಾಂಗ್ರೆಸ್ ಎಚ್ಚೆತ್ತುಕೊಂಡಿದೆ. ಕಳೆದ 2018ರ ವಿಧಾನಸಭೆ ಚುನಾವಣೆ ಹಾಗೂ ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲನುಭವಿಸಿದ್ದರ ಸತ್ಯ ಅರಿಯಲು, ಇದೇ ಮೊದಲ ಬಾರಿಗೆ ಕೆಪಿಸಿಸಿಯ ಸತ್ಯ ಶೋಧನಾ ಸಮಿತಿ ನಗರಕ್ಕೆ ಆಗಮಿಸುತ್ತಿದೆ.
ಹೌದು, ಕಳೆದ 2018 ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು, ಆಗ ಒಟ್ಟು ಏಳು ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿದ್ದ ಕಾಂಗ್ರೆಸ್ ಶಾಸಕರು, ನಾಲ್ಕು ಸ್ಥಾನ ಕಳೆದುಕೊಂಡಿದ್ದಾರೆ. ಇದು ಸತತ ಹ್ಯಾಟ್ರಿಕ್ ಸೋಲು ಅನುಭವಿಸಿದ್ದ ಲೋಕಸಭೆ ಕ್ಷೇತ್ರವನ್ನು ಪುನಃ ಹಿಡಿತಕ್ಕೆ ಪಡೆಯಬೇಕೆಂಬ ಕಾಂಗ್ರೆಸ್‌ನ ಲೆಕ್ಕಾಚಾರ, ಕಳೆದ 2019ರ ಮೇ ತಿಂಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲೂ ಬುಡಮೇಲಾಗಿದೆ. ಇಷ್ಟೆಲ್ಲ ಸರಣಿ ಸೋಲುಗಳು ನಡೆದರೂ, ಕಾಂಗ್ರೆಸ್‌ನಲ್ಲಿ ಅವಲೋಕನ, ಆತ್ಮಾವಲೋಕನ ಅಥವಾ ಎಡವಿದ್ದೆಲ್ಲಿ ಎಂಬ ಚರ್ಚೆ ನಡೆದಿರಲಿಲ್ಲ. ಇದೀಗ ರಾಜ್ಯ ರಾಜಕೀಯ ಅನಿಶ್ಚಿತತೆಯ ಮಧ್ಯೆ, ಕೆಪಿಸಿಸಿಯಿಂದ ಸೋಲಿನ ಪರಾಮರ್ಶೆ ನಡೆಸಿ, ವರದಿ ಒಪ್ಪಿಸಲು ಸತ್ಯ ಶೋಧನಾ ಸಮಿತಿ ರಚಿಸಿದ್ದು, ಈ ಸಮಿತಿ, ಜು.17ರಂದು ನಗರಕ್ಕೆ ಬಂದು, ಒಂದು ಇಡೀ ದಿನ ಹಲವರೊಂದಿಗೆ ಚರ್ಚೆ ನಡೆಸಿ, ಕೆಪಿಸಿಸಿಗೆ ವರದಿ ಕೊಡಲಿದೆ.
ಕಾಂಗ್ರೆಸ್‌ಗೆ ಕಾಂಗ್ರೆಸ್ಸಿಗರೇ ವಿರೋಧ ಪಕ್ಷ: ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್‌ಗೆ ಬಿಜೆಪಿ ವಿರೋಧ ಪಕ್ಷವಲ್ಲ. ಕಾಂಗ್ರೆಸ್ಸಿಗರೇ ವಿರೋಧ ಪಕ್ಷದ ಸ್ಥಾನದಲ್ಲಿದ್ದು, ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂಬ ಮಾತು ಪಕ್ಷದಲ್ಲೇ ಬಹು ಚರ್ಚಿತ ವಿಷಯ. ಇದು ಪಕ್ಷದಲ್ಲಿ ಬಹಿರಂಗ ಗುಟ್ಟು ಕೂಡ. ಆದರೆ, ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಪಕ್ಷ ಮಾತೃ ಸಮಾನ ಎಂದು ಭಾಷಣ ಮಾಡುವವರೇ, ಚುನಾವಣೆಗೊಮ್ಮೆ ಹೊಂದಾಣಿಕೆ ರಾಜಕೀಯಕ್ಕಿಳಿದು, ಪಕ್ಷ ಬಲಿ ಕೊಡುತ್ತಿದ್ದಾರೆ ಎಂಬ ಮಾತು ಪಕ್ಷದ ಹಲವು ಸಭೆಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.
ಸಿದ್ದು ಬಂದ್ರೂ ಜಯ ಸಿಗಲಿಲ್ಲ: ಕಳೆದ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರಕ್ಕೆ ಆಗಿನ ಸಿಎಂ ಸಿದ್ದರಾಮಯ್ಯ ಅವರನ್ನೇ ಸ್ಪರ್ಧಿಸುವಂತೆ ಮಾಡಲಾಗಿತ್ತು. ಸ್ವತಃ ಸಿಎಂ ಆಗಿದ್ದ ಸಿದ್ದರಾಮಯ್ಯ ಕೂಡ ಪ್ರಯಾಸದ ಗೆಲುವು ಕಂಡಿದ್ದರು. ಜತೆಗೆ ಜಿಲ್ಲೆಯಲ್ಲಿ ಹಾಲುಮತ ಸಮಾಜ, ದೊಡ್ಡ ಸಂಖ್ಯೆಯಲ್ಲಿದ್ದು, ಸಿದ್ದು ಜಿಲ್ಲೆಯಿಂದ ಸ್ಪರ್ಧೆ ಮಾಡಿದ್ದರಿಂದ ಆ ಮತಗಳು ಒಗ್ಗಟ್ಟಾಗಲಿವೆ ಎಂಬ ಲೆಕ್ಕಾಚಾರ ಪಕ್ಷದಲ್ಲಿತ್ತು. ಆದರೆ, ಹಾಲುಮತ ಸಮಾಜದ ಸ್ಥಳೀಯ ನಾಯಕರ ವರ್ತನೆ, ಭಿನ್ನಮತದ ಪರಿಣಾಮವಾಗಿ, ಆ ಮತಗಳು ಕಾಂಗ್ರೆಸ್ ಪಾಲಿಗೆ ಬರಲಿಲ್ಲ.
ಒಳ ಹೊಡೆತವೇ ಹೆಚ್ಚು: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಳ ಹೊಡೆತ ಒಂದೆಡೆ ಇದ್ದರೆ, ಪಕ್ಷದ ನಾಯಕರಲ್ಲಿ ಗುಂಪುಗಾರಿಕೆ ಹೆಚ್ಚಿದೆ. ಅಧಿಕಾರ ಇಲ್ಲದಾಗ ಒಂದೆಡೆ ಕುಳಿತು ಚರ್ಚೆ, ಸಭೆ-ಸಮಾರಂಭ ನಡೆಸುವ ಈ ನಾಯಕರು, ಅಧಿಕಾರ ಬಂದೊಡನೆ ಯಾರನ್ನೂ ಕರೆಯಲ್ಲ. ಸಭೆ-ಸಮಾರಂಭಗಳಲ್ಲಿ ಒಟ್ಟಿಗೆ ಇರಲ್ಲ. ಪಕ್ಷ ಸಂಘಟನೆಯ ಮಾತು ಯಾರಿಂದಲೂ ಕೇಳಿ ಬರಲ್ಲ ಎಂಬ ಅಸಮಾಧಾನ ನಿಷ್ಠಾವಂತ ಕಾರ್ಯಕರ್ತರಲ್ಲಿದೆ.
ಇಂದು ಜಿಲ್ಲೆಗೆ ಬರಲಿರುವ ಸತ್ಯ ಶೋಧನಾ ಸಮಿತಿ, ಪಕ್ಷದ ಕೆಲವು ಹಿರಿಯರೇ ಮಾಡುವ ಒಳ ಒಡೆತದ ತಂತ್ರಗಾರಿಕೆ ಕುರಿತು ಪ್ರಮುಖವಾಗಿ ವರದಿಯಲ್ಲಿ ಉಲ್ಲೇಖೀಸಬೇಕು. ಅಂತಹ ನಾಯಕರಿಗೆ ಪಕ್ಷದಲ್ಲಿ ಜವಾಬ್ದಾರಿ ಅಥವಾ ಯಾವುದೇ ಹುದ್ದೆ ಕೊಡಬಾರದು ಎಂಬ ಒತ್ತಾಯವನ್ನು ಸಮಿತಿ ಎದುರು ಹೇಳಿಕೆ ನೀಡುವುದಾಗಿ ಹಿರಿಯ ಕಾರ್ಯಕರ್ತರೊಬ್ಬರು ಉದಯವಾಣಿಗೆ ತಿಳಿಸಿದರು.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಪಕ್ಷದ ಹಾಲಿ ಜಿಲ್ಲಾ ಅಧ್ಯಕ್ಷರ ಅವಧಿ 10 ವರ್ಷದತ್ತ ಬಂದಿದ್ದು, ಅವರಿಗೆ ಪಕ್ಷದಲ್ಲಿ ಬೇರೊಂದು ಅವಕಾಶ ಕಲ್ಪಿಸಿ, ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಯುವ ಸಮೂಹ ಇಲ್ಲವೇ ಕ್ರಿಯಾಶೀಲರಿಗೆ ಅವಕಾಶ ಕೊಡಬೇಕು ಎಂಬ ಒತ್ತಡ ಕೇಳಿ ಬರುತ್ತಿದೆ. ಈ ವಿಷಯ, ಜು.17ರಂದು ಸತ್ಯ ಶೋಧನಾ ಸಮಿತಿ ಎದುರೂ ಪ್ರಸ್ತಾಪವಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅನೀಲಕುಮಾರ ದಡ್ಡಿ, ನಾಗರಾಜ ಹದ್ಲಿ, ಸೇವಾ ದಳ ಘಟಕದ ಜಿಲ್ಲಾ ಸಂಚಾಲಕ ಎನ್.ಬಿ. ಗಸ್ತಿ, ಪ್ರಚಾರ ಸಮಿತಿಯ ಜಿಲ್ಲಾ ಸಂಚಾಲಕ ಮಂಜುನಾಥ ವಾಸನದ ಹಾಗೂ ಸದ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ ಅವರ ಹೆಸರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿವೆ.
•ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.