Umashree: ನೇಕಾರ ನಾಯಕಿ, ಮಾಜಿ ಸಚಿವೆ ಉಮಾಶ್ರೀಗೆ ಒಲಿದ ವಿಧಾನಪರಿಷತ್ ಸ್ಥಾನ
ತೇರದಾಳ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂತು ರಾಜಕೀಯ ಬಲ: ಸೋತುಗೆದ್ದ ತಾಯವ್ವ
Team Udayavani, Aug 20, 2023, 11:50 AM IST
ಮಹಾಲಿಂಗಪುರ: ತೇರದಾಳ ಮತಕ್ಷೇತ್ರದ ಮಾಜಿ ಶಾಸಕಿ, ಸಚಿವೆ, ನೇಕಾರ ನಾಯಕಿ ಉಮಾಶ್ರೀ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ ಸರ್ಕಾರದಿಂದ ಕಲಾವಿದರ ಕೋಟಾದಲ್ಲಿ ಮಾಜಿ ಸಚಿವೆ ಉಮಾಶ್ರೀ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲಾಗಿದೆ. ಎಂ.ಆರ್.ಸೀತಾರಾಂ, ಉಮಾಶ್ರೀ, ಸುಧಾಮ್‌ದಾಸ್ ಸೇರಿದಂತೆ ಮೂವರ ನಾಮನಿರ್ದೇಶನಕ್ಕೆ ಶನಿವಾರ ರಾಜ್ಯಪಾಲರು ಅಂಕಿತ ಹಾಕುವುದರೊಂದಿಗೆ ಮಾಜಿ ಸಚಿವೆ ಉಮಾಶ್ರೀಯವರು ವಿಧಾನ ಪರಿಷತ್ ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಕೈ ತಪ್ಪಿದ್ದ ಟಿಕೆಟ್ :
ಕಳೆದ ಏಪ್ರೀಲ್‌ನಲ್ಲಿ ಜರುಗಿದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಉಮಾಶ್ರೀ ಕಾಂಗ್ರೆಸ್ ಪಕ್ಷದಿಂದ ತೇರದಾಳ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಉಮಾಶ್ರೀಗೆ ಟಿಕೆಟ್ ಸಿಕ್ಕರೆ ಕಾಂಗ್ರೆಸ್ ಗೆಲುವು ನಿಶ್ಚಿತ ಎಂಬ ಮಾತುಗಳು ಕ್ಷೇತ್ರದಲ್ಲಿ ಜೋರಾಗಿ ಕೇಳಿ ಬಂದಿದ್ದವು.
ಕೊನೆ ಕ್ಷಣದವರೆಗೂ ಉಮಾಶ್ರೀಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದರು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ತೇರದಾಳ ಮತಕ್ಷೇತ್ರದ ಟಿಕೆಟ್‌ನ್ನು ಹೊಸ ಅಭ್ಯರ್ಥಿ ಸಿದ್ದು ಕೊಣ್ಣೂರ ಅವರಿಗೆ ನೀಡಿತ್ತು. ಉಮಾಶ್ರೀ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಅವರ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ತೀವೃ ನಿರಾಶೆಯಾಗಿತ್ತು.
ರಾಜಕೀಯ ನೆಲೆ ಕಲ್ಪಿಸಿದ್ದ ತೇರದಾಳ ಮತಕ್ಷೇತ್ರ :
ಚಲನಚಿತ್ರ ನಟಿಯಾಗಿ, ಬಸ್ ಕಂಡಕ್ಟರ್, ಖಾನಾವಳಿ ಚೆನ್ನಿ ನಾಟಕಗಳಲ್ಲಿನ ಪಾತ್ರಗಳ ಮೂಲಕ ಉತ್ತರ ಕರ್ನಾಟಕದ ಮನೆಮಾತಾಗಿದ್ದ ಉಮಾಶ್ರೀ 2008 ರಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ತೇರದಾಳ ಮತಕ್ಷೇತ್ರದಲ್ಲಿ ನೇಕಾರ ಸಮಾಜದ ಮತಗಳು ಹೆಚ್ಚಿಗೆ ಇರುವದರಿಂದ ಬೆಂಗಳೂರಿನಿಂದ ತೇರದಾಳಕ್ಕೆ ಬಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಹೊಸ ಮತಕ್ಷೇತ್ರ, ಸ್ಥಳೀಯರ ವಿರೋಧದಿಂದಾಗಿ ಮೊದಲ ಪ್ರಯತ್ನದಲ್ಲಿ ಉಮಾಶ್ರೀಯವರು ೫೦ ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಪರಾಭವಗೊಂಡಿದ್ದರು.
2013ರಲ್ಲಿ ಒಲಿದ ಅದೃಷ್ಟ :
2008ರ ವಿಧಾನಸಭೆ ಚುನಾವಣೆಯಲ್ಲಿ ಸೋತರು ಸಹ ದೃತಿಗೆಡದ ಉಮಾಶ್ರೀಯವರು ರಬಕವಿಯಲ್ಲಿ ಮನೆ ಮಾಡಿ ಐದು ವರ್ಷಗಳ ಕಾಲ ತೇರದಾಳ ಮತಕ್ಷೇತ್ರದಲ್ಲಿಯೇ ಉಳಿದುಕೊಂಡು ಹಳ್ಳಿ ಹಳ್ಳಿಗೆ ಸಂಚರಿಸಿ, ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿದ್ದರ ಫಲವಾಗಿ 2013ರ ಚುನಾವಣೆಯಲ್ಲಿ ಗೆದ್ದು ಶಾಸಕಿಯಾದರು.
2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆಯಾಗಿ ರಾಜಕೀಯದಲ್ಲಿ ಭದ್ರನೆಲೆಯನ್ನು ಕಂಡುಕೊಂಡಿದ್ದ ಉಮಾಶ್ರೀಯವರು ೨೦೧೩ ರಿಂದ ೨೦೧೮ರ ಅವಧಿಯಲ್ಲಿ ಸುಮರು ೧೫೦೦ ಕೋಟಿ ಅನುದಾನ ತಂದು ತೇರದಾಳ ಮತಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಶ್ರಮಿಸಿದ್ದಾರೆ.
2018ರಲ್ಲಿ ಮತ್ತೇ ಸೋಲು :
ಐದು ವರ್ಷ ತೇರದಾಳ ಮತಕ್ಷೇತ್ರದ ಶಾಸಕಿಯಾಗಿ, ಸರ್ಕಾರದ ಸಚಿವೆಯಾಗಿ ಜನಪರತ ಕೆಲಸಗಳನ್ನು ಮಾಡಿದ್ದರು ಸಹ, ಮೋದಿ ಮೆನಿಯಾ, ಪಕ್ಷದಲ್ಲಿನ ಮುಖಂಡರ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ೨೦೧೮ರ ಚುನಾವಣೆಯಲ್ಲಿ ಮತ್ತೇ ಪರಾಭವಗೊಂಡಿದ್ದರು. ತೇರದಾಳ ಮತಕ್ಷೇತ್ರದಲ್ಲಿ ಮೂರು ಬಾರಿ ಸ್ಪರ್ಧಿಸಿ, ಒಂದು ಬಾರಿ ಗೆದ್ದು ಸಚಿವೆಯಾಗಿದ್ದ ಉಮಾಶ್ರೀ ಅವರು ಎರಡು ಬಾರಿ ಪರಾಭವಗೊಂಡಿದ್ದಾರೆ. 2023ರ ಚುನಾವಣೆಯಲ್ಲಿ ಟೆಕೆಟ್ ಆಕಾಂಕ್ಷಿಯಾಗಿದ್ದರೂ ಸಹ, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಟಿಕೆಟ್ ಕೈ ತಪ್ಪಿತ್ತು.
ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ :
ಕಲಾವಿದರ ಕೋಟಾದಲ್ಲಿ ಮಾಜಿ ಸಚಿವೆ ಉಮಾಶ್ರೀ ಅವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ್ದರಿಂದ ತೇರದಾಳ ಮತಕ್ಷೇತ್ರದಲ್ಲಿನ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿದೆ. 2018ರಲ್ಲಿ ಉಮಾಶ್ರೀ, 2023ರಲ್ಲಿ ಸಿದ್ದು ಕೊಣ್ಣುರ ಸೇರಿದಂತೆ ಕಳೆದ ಎರಡು ಚುನಾವಣೆಯಲ್ಲಿ ತೇರದಾಳ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿರುವ ಕಾರಣ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ತೀವೃ ನಿರಾಶೆಯಾಗಿತ್ತು.
2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರು ಸಹ, ಅಭ್ಯರ್ಥಿಯ ಸೋಲಿನಿಂದ ಸಹಜವಾಗಿ ಕಾಂಗ್ರೆಸ್ ಪಕ್ಷಕ್ಕೆ ತೇರದಾಳ ಮತಕ್ಷೇತ್ರದಲ್ಲಿ ಹಿನ್ನಡೆಯಾಗಿತ್ತು. ಈಗ ಉಮಾಶ್ರೀಯವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಕಾರಣ ತೇರದಾಳ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.
ತೇರದಾಳ ಮತಕ್ಷೇತ್ರ ಇನ್ನಷ್ಟು ಅಭಿವೃದ್ದಿಯಾಗಲಿ :
ಉಮಾಶ್ರೀಯವರು ವಿಪ ಸದಸ್ಯರಾಗಿ ಆಯ್ಕೆಯಾಗಿದ್ದು ತೇರದಾಳ ಮತಕ್ಷೇತ್ರದ ಜನತೆಗೆ ಬಹಳ ಖುಷಿಯಾಗಿದೆ. ನಾಡಿನ ಪ್ರಖ್ಯಾತ ಕಲಾವಿದೆ, ನೇಕಾರ ನಾಯಕಿ ಉಮಾಶ್ರೀಯವರು ಕಲಾಜೀವನ ಮತ್ತು ರಾಜಕೀಯ ಜೀವನ ಎರಡು ಕ್ಷೇತ್ರಗಳಲ್ಲಿ ಇನ್ನಷ್ಟು ಬೆಳೆದು, ರಾಜ್ಯದ ಏಕೈಕ ನೇಕಾರ ಮತಕ್ಷೇತ್ರವೆಂದೆ ಹೆಸರುವಾಸಿಯಾದ ತೇರದಾಳ ಮತಕ್ಷೇತ್ರವು ಅವರ ಅವಧಿಯಲ್ಲಿ ಇನ್ನಷ್ಟು ಅಭಿವೃದ್ದಿ ಪಥದಲ್ಲಿ ಸಾಗಲಿ ಎಂದು ಮತಕ್ಷೇತ್ರದ ಸಾರ್ವಜನಿಕರು, ಅವರ ಅಭಿಮಾನಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಅಭಿನಂದನೆಗಳ ಮಹಾಪೂರವನ್ನೆ ಹರಿಸುತ್ತಿದ್ದಾರೆ.
ಸೋತು ಗೆದ್ದ ಉಮಾಶ್ರೀ :
ಕಳೆದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ತೇರದಾಳ ಮತಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಸೋತಿದ್ದ ಉಮಾಶ್ರೀಯವರು, ರಾಜ್ಯದ ಚುಕ್ಕಾಣಿ ಹಿಡಿದಿರುವ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕಲಾವಿದರ ಕೋಟಾದಲ್ಲಿ ವಿಧಾನ ಪರಿಷತ್‌ಗೆ ಪ್ರವೇಶ ಪಡೆಯುವದರೊಂದಿಗೆ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
-ಚಂದ್ರಶೇಖರ ಮೋರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.