ಇದ್ದೂ ಇಲ್ಲದಂತಿದೆ ಹುನಗುಂದ ಆಸ್ಪತ್ರೆ
Team Udayavani, Oct 26, 2018, 5:12 PM IST
ಹುನಗುಂದ: ತಾಲೂಕಿನ ಬಡರೋಗಿಗಳಿಗೆ ಆಸರೆ ಆಗಬೇಕಿರುವ ಹುನಗುಂದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿದೆ. 100 ಹಾಸಿಗೆಯ ದೊಡ್ಡ ಆಸ್ಪತ್ರೆಯಾಗಿದ್ದರೂ ಮೂವರು ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳು ನಿತ್ಯ ಪರದಾಡಿ, ಖಾಸಗಿ ಆಸ್ಪತ್ರೆಗಳತ್ತ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.
ಕಳೆದೊಂದು ತಿಂಗಳಿಂದ ಕೆಲವೊಂದು ಗ್ರಾಮಗಳಲ್ಲಿ ಚಿಕೂನ್‌ಗುನ್ಯಾ, ಎಚ್1ಎನ್1, ಡೆಂಘೀನಂತಹ ರೋಗಗಳು ತಾಲೂಕಿನಲ್ಲಿ ಕಾಣಿಸಿಕೊಂಡಿವೆ. ಹೀಗಾಗಿ ತಾಲೂಕು ಆಸ್ಪತ್ರೆಗೆ ನಿತ್ಯ ಬರುವ ರೋಗಿಗಳ ಸಂಖ್ಯೆಯೂ ಹೆಚ್ಚಿದೆ. ಆದರೆ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದ ಜವಾಬ್ದಾರಿಯುತ ಜನಪ್ರತಿನಿ ಧಿಗಳು, ಇದು ನಮಗೆ ಸಂಬಂಧವಿಲ್ಲ ಎಂಬಂತಿದ್ದಾರೆ ಎಂಬ ಆಕ್ರೋಶ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಸರ್ಕಾರವೇ ರೂಪಿಸಿರುವ ನಿಯಮಾನುಸಾರ ಈ ಆಸ್ಪತ್ರೆಯಲ್ಲಿ 12ರಿಂದ 15 ವಿವಿಧ ತಜ್ಞ ವೈದ್ಯರು ಸೇವೆಯಲ್ಲಿರಬೇಕು. ಆದರೆ, ಹೆರಿಗೆ, ದಂತ, ಎಲಬು ಮತ್ತು ಕೀಲು ತಜ್ಞ ವೈದ್ಯರು ಬಿಟ್ಟರೆ ಬೇರೆ ವೈದ್ಯರಿಲ್ಲ. ಮುಖ್ಯವಾಗಿ ಮಕ್ಕಳ ತಜ್ಞ, ನೇತ್ರ ತಜ್ಞ, ಹೃದಯರೋಗ ಮತ್ತು ಮಧುಮೇಹ ತಜ್ಞರ ಅವಶ್ಯಕತೆ ಹೆಚ್ಚಿದ್ದು, ಈ ತಜ್ಞ ವೈದ್ಯರು ಇಲ್ಲ. ಇಂತಹ ದೊಡ್ಡ ಆಸ್ಪತ್ರೆಯಲ್ಲಿ ಒಬ್ಬ ಸರ್ಜನ್ ಡಾಕ್ಟರ್ ಮತ್ತು ಚೀಫ್ ಮೆಡಿಕಲ್ ಆಫೀಸರ್ ಕೂಡ ಲಭ್ಯವಿಲ್ಲದಿರುವುದು ದುರಂತ. ಪಕ್ಕದಲ್ಲಿಯೇ ರಾಷ್ಟ್ರೀಯ ಹೆದ್ದಾರಿ 50 ಇದ್ದು ಆಗಾಗ ಅಪಘಾತ ಸಂಭವಿಸಿ ತಾಲೂಕು ಆಸ್ಪತ್ರೆಗೆ ದಾಖಲಾದರೆ ಅವರಿಗೆ ತುರ್ತು ಚಿಕಿತ್ಸೆ ನೀಡಲು ತುರ್ತು ನಿಗಾ ಘಟಕವಿದ್ದರೂ ದಿನದ 24 ಗಂಟೆ ಕಾಲ ಚಿಕಿತ್ಸೆ ನೀಡುವ ವೈದ್ಯರಿಲ್ಲದೆ ಅಪಘಾತಕ್ಕೀಡಾದವರು ಬಾಗಲಕೋಟೆಗೆ ತೆರಳಬೇಕಾದ ಅನಿವಾರ್ಯತೆ ಇದೆ. ಸ್ಥಳೀಯವಾಗಿ ಚಿಕಿತ್ಸೆ ದೊರೆಯದೇ, ಬಾಗಲಕೋಟೆಗೆ ತೆರಳುವಾಗ ಮಾರ್ಗ ಮಧ್ಯೆ ಮೃತಪಟ್ಟ ಪ್ರಕರಣ ನಡೆದಿವೆ.
ಇರುವವರೂ ಸಭೆಗೆ: ಕೆಲವೊಂದು ಸೌಲಭ್ಯ ಮತ್ತು ವಿಶೇಷವಾಗಿ ತಾಲೂಕು ವೈದ್ಯಾಧಿಕಾರಿಗಳನ್ನು ಭೇಟಿಯಾಗಲು ಬಂದರೆ ಆಸ್ಪತ್ರೆಯಲ್ಲಿ ಅವರೂ ಇರವುದಿಲ್ಲ. ಬರಿಮೀಟಿಂಗ್ ಹೋಗಿದ್ದಾರೆ ಎಂಬ ಪದ ನಿತ್ಯ ಕೇಳುವ ಪರಿಸ್ಥಿತಿ ಇದೆ. ಆರೋಗ್ಯ ಸಚಿವರೇ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದಾರೆ. ಉಸ್ತುವಾರಿ ಸಚಿವರ ತವರಲ್ಲೇ 100 ಹಾಸಿಗೆ ತಾಲೂಕು ಆಸ್ಪತ್ರೆಯ ಪರಿಸ್ಥಿತಿ ಹೀಗಾದರೆ, ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿ ಅಯೋಮಯ ಎನ್ನುವಂತಾಗಿದೆ.
ಆಸ್ಪತ್ರೆಯಲ್ಲಿ ಸ್ವಚ್ಛತೆ ಕೇಳಬೇಡಿ:
ಆಸ್ಪತ್ರೆಗಳೆಂದರೆ ಸ್ವಚ್ಛತೆ ಇರಬೇಕು. ನೈರ್ಮಲ್ಯವಿಲ್ಲದಿದ್ದರೆ ಹಲವು ಕಾಯಿಲೆ ಬರುತ್ತವೆ ಎಂದು ಸ್ವತಃ ವೈದ್ಯರೇ ಹೇಳುತ್ತಾರೆ. ಆದರೆ, ತಾಲೂಕು ಆಸ್ಪತ್ರೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಸಂಜೆಯಾದರೆ ಸೊಳ್ಳೆಯ ಕಾಟ. ಸಣ್ಣ ಕಾಯಿಲೆಯಿಂದ ಬಂದ ರೋಗಿ ಇಲ್ಲಿ ಒಳ ರೋಗಿಯಾಗಿ ಒಂದೇ ದಿನ ದಾಖಲಾಗಿದ್ದರೂ ಆತ ಮತ್ತೂಂದು ರೋಗಕ್ಕೆ ತುತ್ತಾಗುವ ಅನಾಹುತವೇ ಹೆಚ್ಚು ಎಂಬ ಮಾತು ರೋಗಿಗಳಿಂದ ಕೇಳಿ ಬರುತ್ತಿದೆ.
ಕೋಟಿ ಕೋಟಿ ಮೊತ್ತದ ಉಪಕರಣ: ತಾಲೂಕಿನ ಬಡ ರೋಗಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕೋಟಿ ಕೋಟಿ ವೆಚ್ಚದ ಹಲವು ವೈದ್ಯಕೀಯ ಯಂತ್ರಗಳು ಇಲ್ಲಿವೆ. ಆದರೆ, ಅವುಗಳ ಬಳಕೆಯೇ ಆಗುತ್ತಿಲ್ಲ. ಹೀಗಾಗಿ ಸರ್ಕಾರ ನೀಡಿದ ವೈದ್ಯಕೀಯ ಉಪಕರಣಗಳು ತುಕ್ಕು ಹಿಡಿಯುತ್ತಿವೆ. ಆಸ್ಪತ್ರೆಯಲ್ಲಿ ಎಕ್ಸರೆ, ಡಯಾಲಿಸಿಸ್, ತುರ್ತು ನಿಗಾ ಘಟಕ, ಐಸಿಯು, ಇಸಿಜಿ ಸೇರಿದಂತೆ ಹಲವಾರು ವೈದ್ಯಕೀಯ ಉಪಕರಣಗಳಿವೆ. ಅವುಗಳನ್ನು ಬಳಸಿ, ರೋಗಿಗಳಿಗೆ ಚಿಕಿತ್ಸೆ ಕೊಡಲು ವೈದ್ಯರೇ ಇಲ್ಲ. ಉಸ್ತುವಾರಿ ಸಚಿವರು, ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು, 100 ಹಾಸಿಗೆ ಹುನಗುಂದ ತಾಲೂಕು ಆಸ್ಪತ್ರೆಯ ಅವ್ಯವಸ್ಥೆಗೆ ಚಿಕಿತ್ಸೆ ಕೊಡಲು ಮುಂದಾಗಬೇಕಿದೆ.
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಯಾವ ವೈದ್ಯರು ಈ ಆಸ್ಪತ್ರೆಗೆ ಬರಲು ಒಪ್ಪುತ್ತಿಲ್ಲ.
ಡಾ| ಕುಸುಮಾಮಾಗಿ,
ತಾಲೂಕು ವೈದ್ಯಾಧಿಕಾರಿ
ಬಡ ರೋಗಿಗಳಿಗೆ ಅನೂಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆ ಇದೆ. ಕೋಟ್ಯಂತರ ಮೊತ್ತದ ವೈದ್ಯಕೀಯ ಉಪಕರಣಗಳೂ ಇವೆ. ಉಚಿತ ಚಿಕಿತ್ಸೆ ದೊರೆಯುತ್ತದೆ ಎಂಬ ವಿಶ್ವಾಸದಿಂದ ಬರುವ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಯಾವಾಗ ಬಂದರೂ ವೈದ್ಯರು ಇರುವುದಿಲ್ಲ. ಬಡವರ ಸಮಸ್ಯೆ ಯಾರೂ ಕೇಳುವುದಿಲ್ಲವೇ ?
ಗೌರಮ್ಮ ಕುಂಬಾರ, ಸ್ಥಳೀಯರು
ಮಲ್ಲಿಕಾರ್ಜುನ ಬಂಡರಗಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.