ಹೂ ಬಿಟ್ಟ ತೊಗರಿ; ಉಬ್ಬಿ ಬಿದ್ದ ಜೋಳ!
Team Udayavani, Aug 28, 2019, 10:24 AM IST
ಹುನಗುಂದ: ಸಮೃದ್ಧವಾಗಿ ಬೆಳೆದಿದ್ದ ಮೆಕ್ಕೆಜೋಳ ಪ್ರವಾಹಕ್ಕೆ ನಲುಗಿ ನಿಂತಿರುವುದು.
ಹುನುಗಂದ: ಹೂವು ಬಿಟ್ಟ ತೊಗರಿ ಕಾಳು, ಉಬ್ಬಿ ಬಿದ್ದ ಜೋಳ. ನಕ್ಕು ರುದ್ರ ನರ್ತನ ಮಾಡಿ ಹೋದ ಮಲಪ್ರಭಾ ನದಿ..
ಹೌದು, ಮಲಪ್ರಭಾ ನದಿ ಪ್ರವಾಹಕ್ಕೆ ನಲುಗಿದ ಗ್ರಾಮಗಳಲ್ಲಿ ಕಾಣುವ ದೃಶ್ಯಗಳಿವು. ವರ್ಷಕ್ಕಾಗುವಷ್ಟು ತೊಗರಿ, ಜೋಳ, ಸಜ್ಜೆ ಹೀಗೆ ಹಲವು ಕಾಳು-ಕಡಿ ಮನೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು ಹಳ್ಳಿಗರ ಪದ್ಧತಿ.
ರೊಕ್ಕಾ ಇಲ್ದಾಗ್ ಕೊಂಡು ತಿನ್ನೂದು ಆಗಲ್ಲ ಎಂಬುದು ಅವರ ತಾಪತ್ರಯ. ಹೀಗಾಗಿ ತಮ್ಮ ಭೂಮಿಯಲ್ಲಿ ಬೆಳೆದ ಬೆಳೆಯ ರಾಶಿ ಮಾಡಿದ ತಕ್ಷಣ, ತಮ್ಮ ಕುಟುಂಬಕ್ಕಾಗುವಷ್ಟು ಕಾಯ್ದಿಟ್ಟುಕೊಳ್ಳುತ್ತಾರೆ. ಹೀಗೆ ಕಾಯ್ದುಕೊಂಡ ಕಾಳು-ಕಡಿ ಮಲಪ್ರಭೆ ನುಂಗಿದೆ. ಇನ್ನೂ ಕೆಲವೆಡೆ ನೀರು ಹರಿದು ತಿನ್ನಲು ಬಾರದಂತಾಗಿವೆ.
ವರ್ಷದ ಆಹಾರ ನೀರು ಪಾಲು: ಇಡೀ ಗ್ರಾಮದ ತುಂಬ ನೀರು ಹೊಕ್ಕು ಹೋದ ಬಳಿಕ ಆ ಗ್ರಾಮಕ್ಕೆ ಕಾಲಿಟ್ಟರೆ ಕೊಳಚೆಯಲ್ಲಿ ಕಾಲಿಟ್ಟ ಅನುಭವ. ಪ್ರವಾಹ ನೀರಿನಿಂದ ಸಂಪೂರ್ಣ ಹಾನಿಯಾದ ತೊಗರಿ ಸೇರಿದಂತೆ ವಿವಿಧ ದವಸ-ಧಾನ್ಯಗಳನ್ನು ಮನೆಯ ಹೊರಗೆ ಹಾಕಿದ್ದು, ತೊಗರಿ ಕಾಳು ಮೊಳಕೆಯೊಡೆದು ಬೆಳೆದು, ಹೂವು ಬಿಟ್ಟಿವೆ. ಜೋಳದ ಕಾಳು ಉಬ್ಬಿವೆ. ಗೋಧಿ, ಮೊಳಕೆಯೊಡೆದಿವೆ. ಯಾವ ಕಾಳೂ ಬೀಸಿ, ಹಿಟ್ಟು ಮಾಡಿಕೊಂಡು ತಿನ್ನಲು ಬರುತ್ತಿಲ್ಲ.
ಮನೆಯಲ್ಲಿದ್ದ ದವಸ-ಧಾನ್ಯ ಹಾಳಾದರೇನು, ಹೊಲದಲ್ಲಿನ ಬೆಳೆ ರಾಶಿ ಮಾಡಿದರಾಯಿತು ಎಂದು ಸಮಾಧಾನ ತಂದುಕೊಳ್ಳಲು, ಹೊಲದ ಬೆಳೆಯನ್ನೂ ಪ್ರವಾಹ ಬಿಟ್ಟಿಲ್ಲ. ಬಿತ್ತಿದ ಮೆಕ್ಕೆಜೋಳ, ತೊಗರಿ, ಶೇಂಗಾ, ಸಜ್ಜೆ ಎಲ್ಲವೂ ನೆಲಕ್ಕೆ ಅಂಗಾತ ಮಲಗಿವೆ. ಇಷ್ಟೆಲ್ಲ ಹಾನಿ ಮಾಡಿ ಹೋದ ಮಲಪ್ರಭೆ, ಕೂಡಲಸಂಗಮ ಸೇರಿ ನಸು ನಗುತ್ತಿದೆ !
ಕೊಡುವ ಕೈಗಳು ಬೇಡುತ್ತಿವೆ: ನೀರಾವರಿ ಯೋಜನೆಗಳಿದ್ದರೂ ನೀರು ಕಾಣದ ಹುನಗುಂದ ತಾಲೂಕಿನ ಬಹುತೇಕ ಭೂಮಿ ಮಳೆಯಾಶ್ರಿತ. ಇಲ್ಲಿನ ಬಿಳಿಜೋಳ, ಮೆಕ್ಕೆಜೋಳ, ತೊಗರಿ, ಶೇಂಗಾ ಸಮೃದ್ಧ ಬೆಳೆಗಳು. ಮುಧೋಳ, ಜಮಖಂಡಿ, ಬೀಳಗಿ ತಾಲೂಕಿಗೆ ಹೋಲಿಸಿದರೆ ನಿತ್ಯ ಮನೆಯಲ್ಲಿ ತಿನ್ನುವ ದವಸ-ಧಾನ್ಯ ಹೆಚ್ಚು ಬೆಳೆಯುವ ತಾಲೂಕಿದು.
ಜಿಲ್ಲೆಯ ಇತರ ತಾಲೂಕುಗಳಲ್ಲಿ ಕಬ್ಬನ್ನೇ ಹೆಚ್ಚು ಬೆಳೆಯಲಾಗುತ್ತದೆ. ಕಬ್ಬು ತಿನ್ನಲಾಗಲ್ಲ. ಜೋಳ, ಗೋಧಿ, ತೊಗರಿ ಇಲ್ಲದೇ ಬದುಕು ನಡೆಯಲ್ಲ. ಹೀಗಾಗಿ ಖುಷ್ಕಿ ಭೂಮಿಯಲ್ಲೂ ಮಳೆ ನಂಬಿ, ನದಿ ಪಾತ್ರದಲ್ಲಿ ಬ್ಯಾರೇಜ್- ನದಿಯಾಳದ ನೀರು ಪೈಪ್‌ಲೈನ್ ಮೂಲಕ ಹೊಲಕ್ಕೆ ಹಾಯಿಸಿ ಬೆಳೆ ಬೆಳೆಯುತ್ತಿದ್ದ ರೈತರು, ಈಗ ಹೊಲ ನೋಡಿ ಕಣ್ಣೀರಿಡುತ್ತಿದ್ದಾರೆ. ಅವರ ಸಂಕಷ್ಟ ನೋಡಿದವರ ಕಣ್ಣಾಲಿಗಳಿಂದ ನೀರು ಕಪಾಳಕ್ಕೆ ಜಾರುತ್ತಿದೆ. ಇಂತಹ ಸಂಕಷ್ಟ ಯಾವ ವೈರಿಗೂ ಬರಬಾರದಪ್ಪಾ ಎಂದು ಇಲ್ಲಿಗೆ ಬರುವ ದಾನಿಗಳೂ ಬೇಡಿಕೊಳ್ಳುತ್ತಿದ್ದಾರೆ.
ಬಿಸನಾಳಕೊಪ್ಪದಲ್ಲಿ ಬಿದ್ದ ಮನೆ; ಗಂಜಿಹಾಳದಲ್ಲಿ ಗಂಜಿಯೂ ಸಿಗುತ್ತಿಲ್ಲ: ತಾಲೂಕಿನ ಬಿಸನಾಳಕೊಪ್ಪ, ಇದ್ದಲಗಿ, ಬೂದಿಹಾಳ, ಗಂಜಿಹಾಳ, ಕೂಡಲಸಂಗಮ, ಕಜಗಲ್ಲ, ಕೆಂಗಲಕಡಪಟ್ಟಿ, ಬೆಳಗಲ್ಲ ಹೀಗೆ ಯಾವುದೇ ಗ್ರಾಮಕ್ಕೆ ಕಾಲಿಟ್ಟರೂ ಬಿದ್ದ ಮನೆಗಳು ಕೈ ಬೀಸಿ ಕರೆಯುತ್ತಿವೆ.
ಮಲಪ್ರಭೆ, ನೋಡಿ ನಮ್ಮನ್ನ ಹ್ಯಾಂಗ್ ಮಾಡಿ ಹೋಗ್ಯಾಳ್ ಎಂದು ಹಿರಿ ತಲೆಮಾರಿನ ಮಣ್ಣಿನ ಮನೆಗಳು ಕಥೆ ಹೇಳುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಬಿಸನಾಳಕೊಪ್ಪದಲ್ಲಿ ಬಿದ್ದ ಮನೆಗಳಿಗೆ ಲೆಕ್ಕ ಸಿಗುತ್ತಿಲ್ಲ. ಗಂಜಿಹಾಳದಲ್ಲಿ ಗಂಜಿ ಕಾಯಿಸಲೂ ಏನೂ ಉಳಿದಿಲ್ಲ. ವಾರದಿಂದ ರಾಡಿ ತುಂಬಿದ ಮನೆಗಳನ್ನು ಸ್ವಚ್ಛ ಮಾಡುವುದರಲ್ಲೇ ಗ್ರಾಮಸ್ಥರು ಹೈರಾಣಾಗಿದ್ದಾರೆ. ಹಗಲು ಮನೆ ಸ್ವಚ್ಛ ಮಾಡಿ ಸಂಜೆ ಪರಿಹಾರ ಕೇಂದ್ರಕ್ಕೆ ಹೋಗಿ ಆಶ್ರಯ ಪಡೆಯುತ್ತಿದ್ದಾರೆ.
ತಿಂಗಳ ಹಿಂದಷ್ಟೇ, ಮನೆಗೆ ಬಂದ ಪ್ಯಾಟಿಯ ಬೀಗರಿಗೆ ಚಾಪೆ ಹಾಸಿ, ಚಹಾ ಮಾಡಿ, ಹೋಗುವಾಗ ಒಂದಷ್ಟು ಕಾಳು-ಕಡಿ ತಗೊಂಡು ಹೋಗ್ರಿ. ನಮ್ಮ ಹೊಲ್ದಾಗ್ ಬೆಳಿತೀವಿ. ನೀವು ಸೀಟ್ಯಾಗ್ ಎಲ್ಲಿಂದ್ರ ತರ್ತೀರಿ ಎಂದು, ಕೈಚೀಲದಲ್ಲಿ ಕಾಳು-ಕಡಿ ಹಾಕಿ ಕೊಡುತ್ತಿದ್ದ ಕೈಗಳೀಗ, ದಾನಿಗಳು ಕೊಡುವ ದವಸಕ್ಕೆ ಕೈಚಾಚುತ್ತಿವೆ.
ಹೊಸ ಬದುಕು ಸುಲಭವಲ್ಲ: ಹೊಸ್ತಲ ಮುಂದೆ ಬಿದ್ದ ತೊಟ್ಟಿಲು, ರಸ್ತೆಗೆ ಬಂದ ಹಾಸಿಗೆ, ಕೊಳೆತು ನಾರುತ್ತಿರುವ ಹಿಟ್ಟು, ಮೊಳಕೆಯೊಡೆದ ದವಸ-ಧಾನ್ಯ, ಉಂಡಿಯಂತಾದ ಕಾರುಪ್ಪು ಹೀಗೆ ಮನೆಯಲ್ಲಿನ ಎಲ್ಲ ಸಾಮಗ್ರಿ ಹಾಳಾಗಿವೆ. ಪ್ರವಾಹಕ್ಕೆ ನಲುಗಿ ನರಕಯಾತನೆ ಬದುಕು ಅನುಭವಿಸಿದ ಜನರು, ಪುನಃ ಬದುಕು ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ. ಇನ್ನೇನಿದ್ದರೂ ಮೊದಲಿನಿಂದ ಎಲ್ಲವೂ ಜೋಡಿಸಿಕೊಳ್ಳಬೇಕು.
ಪ್ರವಾಹ ತಾಕತಾಳೀಯವೆಂಬಂತೆ ಬಂದಿದೆ. ಕಳೆದ 2009ರ ಆಗಸ್ಟ್ ತಿಂಗಳಲ್ಲೇ ಪ್ರವಾಹ ಬಂದಿತ್ತು. ಆಗ ನಾರಾಯಣಪುರ ಡ್ಯಾಂ ಹಿನ್ನೀರು, ಮಲಪ್ರಭಾ ನದಿ ಉಕ್ಕಿಹರಿದ ಪರಿಣಾಮ ಹುನಗುಂದ ತಾಲೂಕಿನ 13 ಹಳ್ಳಿ ಬಾಧಿತಗೊಂಡಿದ್ದವು. ಈ ಬಾರಿ 36 ಹಳ್ಳಿಗಳು ಬಾಧಿತಗೊಂಡಿದ್ದು, 24 ಹಳ್ಳಿಗಳ ಜನರಂತೂ ಅಕ್ಷರಶಃ ನೀರಲ್ಲಿ ನಿಂತಿದ್ದಾರೆ. ಅದರಲ್ಲೂ 2009ರಲ್ಲಿ ಮುಳುಗಡೆಗೊಂಡು, ಶೆಡ್‌ನಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಿದ್ದ 9 ಹಳ್ಳಿಗರಂತೂ ಇಂದಿಗೂ ಶೆಡ್‌ನಲ್ಲೇ ವಾಸವಾಗಿದ್ದಾರೆ. 2009ರಲ್ಲಿ ಬಂದ ಪ್ರವಾಹ, 2019ರಲ್ಲಿ ಮತ್ತೆ ನಮ್ಮ ಬದುಕು ಕಸಿದುಕೊಂಡಿದೆ. ಅಂದು ಹಾಳಾದ ನಮ್ಮ ಬದುಕು ಕಟ್ಟಿಕೊಳ್ಳಲು ಇಂದಿಗೂ ಆಗಿಲ್ಲ.
ಶೆಡ್ ವಾಸಕ್ಕೆ ಮುಕ್ತಿ ಕೊಡಿ:
ಈ ಬಾರಿಯ ಪ್ರವಾಹಕ್ಕೆ ತಾಲೂಕಿನ 24 ಹಳ್ಳಿಗಳ 17,744 ಜನರು ಅತಂತ್ರರಾಗಿದ್ದಾರೆ. ಪ್ರವಾಹದಿಂದ ನೀರು ನುಗ್ಗಿದ ಗ್ರಾಮಗಳ 17 ಸಾವಿರ ಜನರನ್ನು ರಕ್ಷಣೆ ಮಾಡಿದ್ದು, 4197 ಜನರು ಸಂಬಂಧಿಕರ ಮನೆಗೆ ಹೋಗಿದ್ದಾರೆ. 13,547 ಜನರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. 2326 ಜಾನುವಾರು ರಕ್ಷಣೆ ಮಾಡಿದ್ದು, 4 ಜಾನುವಾರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದನ್ನು ತಾಲೂಕು ಆಡಳಿತ ಲೆಕ್ಕ ಮಾಡಿದೆ. ಆದರೆ, ಪ್ರವಾಹದಿಂದಾದ ಪೂರ್ಣ ಹಾನಿಯ ವಿವರ ಇನ್ನೂ ಅಧಿಕಾರಿಗಳಿಗೂ ಸಿಕ್ಕಿಲ್ಲ. ಆ. 7ರಂದು ಉಕ್ಕೇರಿ ಬಂದ ಮಲಪ್ರಭಾ ನದಿ ನೀರಿನಿಂದ ಜೀವ ರಕ್ಷಿಸಿಕೊಳ್ಳಲು, ಬರಿಗೈಲಿ ಮನೆಬಿಟ್ಟು ಓಡಿ ಬಂದವರೀಗ, ಪುನಃ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ತಿನ್ನಲು, ಮಲಗಲೂ ಸರಿಯಾದ ವ್ಯವಸ್ಥೆ ಇಲ್ಲ. ರಾಜ್ಯದ ನಾನಾ ಭಾಗದಿಂದ ಬಂದ ದಾನಿಗಳು, ಕೊಟ್ಟ ಆಹಾರ ಸಾಮಗ್ರಿ, ದಿನಸಿ ವಸ್ತುಗಳೇ ಅವರ ಒಪ್ಪತ್ತಿನ ಊಟಕ್ಕೆ ಗತಿಯಾಗಿದೆ. ಪ್ರವಾಹ ಪೀಡಿತ ಗ್ರಾಮಕ್ಕೆ ಯಾರೇ ಬಂದರೂ, ಅವರ್ಯಾರು, ಅವರ ಜವಾಬ್ದಾರಿ ಏನೆಂದು ತಿಳಿಯದೇ, ನಮ್ಮ ತ್ರಾಸ್ ನೋಡ್ರಿ. ನಮ್ಗ ಯಾರ್ ದಿಕ್ಕ ಅದಾರಿ. ವರ್ಷಾ ಬರುವ ಇಂತಹ ತ್ರಾಸ್‌ದಿಂದ ಪಾರ್ ಮಾಡ್ರಿ ಎಂದೆಲ್ಲ ಕೇಳುತ್ತಿದ್ದಾರೆ. ಕೊಡುವ ಕೈಗಳು ಬೇಡುತ್ತಿವೆ. ನೋಡಿದವರ ಕಣ್ಣಾಲಿ ಒದ್ದೆಯಾಗುತ್ತಿವೆ. ಬಡವರಿಗೆ. ಸಂಕಷ್ಟ ಹೆಚ್ಚು ಎಂಬ ಮಾತನ್ನು ನೆರೆ, ಮತ್ತೂಮ್ಮೆ ಅಕ್ಷರಶ ಸತ್ಯ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.