ಹೋರಾಟ ಸಮಿತಿಗಳು ಮೌನ; ಸಂತ್ರಸ್ತರಲ್ಲಿ ತಳಮಳ
Team Udayavani, Feb 2, 2020, 11:51 AM IST
ಸಾಂಧರ್ಬಿಕ ಚಿತ್ರ
ಬಾಗಲಕೋಟೆ: ದೇಶದ ಅತಿದೊಡ್ಡ ನೀರಾವರಿ ಯೋಜನೆಗಳಲ್ಲಿ ಪ್ರಮುಖವಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಗೆ ಈ ವರೆಗಿನ ಬಹುತೇಕ ಸರ್ಕಾರಗಳು ತಾತ್ಸಾರ ಭಾವನೆಯಿಂದಲೇ ಕಂಡಿವೆ ಎಂಬ ಅಸಮಾಧಾನ ಸಂತ್ರಸ್ತರಲ್ಲಿವೆ. ಸಂತ್ರಸ್ತರ ಸಮಸ್ಯೆಗಳ ನಿವಾರಣೆಗಾಗಿಯೇ ಹುಟ್ಟಿಕೊಂಡ, ಹೋರಾಟ ಸಮಿತಿಗಳು, ಇದೀಗ ಇಬ್ಭಾಗಗೊಂಡಿದ್ದು, ಆ ಸಮಿತಿಗಳೂ ಮೌನ ವಹಿಸಿರುವುದು, ಸಂತ್ರಸ್ತರಲ್ಲಿ ತಳಮಳವನ್ನುಂಟು ಮಾಡಿದೆ.
ಹೌದು, ರಾಜಕೀಯರಹಿತವಾಗಿದ್ದ ಸಂತ್ರಸ್ತರ ಹೋರಾಟ ಸಮಿತಿ, ದಿ.ವಾಸಣ್ಣ ದೇಸಾಯಿ ಅವರ ನಿಧನದ ಬಳಿಕ ಇಬ್ಭಾಗಗೊಂಡಿವೆ. ಮಾಜಿ ಸಚಿವ ಅಜಯಕುಮಾರ ಸರನಾಯಕ ಅಧ್ಯಕ್ಷತೆಯ ಒಂದು ಸಮಿತಿ ಇದ್ದರೆ, ದಿ.ವಾಸಣ್ಣ ದೇಸಾಯಿ ಅವರ ಪುತ್ರ ಅದೃಶ್ಯಪ್ಪ ದೇಸಾಯಿ ಅವರ ನೇತೃತ್ವದ ಮತ್ತೂಂದು ಸಮಿತಿ ಜಿಲ್ಲೆಯಲ್ಲಿವೆ. ಇವರೆಡರ ಮಧ್ಯೆ ಸಮಾನ ಮನಸ್ಕರ ಮತ್ತೂಂದು ಸಮಿತಿ ಇದ್ದು, ಅವರಿಗೆ ಎಲ್ಲ ರೀತಿಯ ಬಲ ಕಡಿಮೆ ಎಂಬ ಮಾತಿದೆ.
ಹೋರಾಟ ಸಮಿತಿಗಳ ಮೌನ: ಪ್ರತಿ ಬಾರಿ ಸರ್ಕಾರದ ಬಜೆಟ್ ಮಂಡನೆಗೆ ಮುನ್ನ, ಸಂತ್ರಸ್ತರ ಹೋರಾಟ ಸಮಿತಿ, ಜನಪ್ರತಿನಿಧಿಗಳು ಒಳಗೊಂಡ ಸಭೆ ನಡೆಸುತ್ತಿತ್ತು. ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ಹೋರಾಟಗಾರರು, ಬಹುತೇಕ ಜನಪ್ರತಿನಿಧಿಗಳು ಭಾಗವಹಿಸಿ, ಸಮಿತಿ ನೇತೃತ್ವದಲ್ಲೇ ಜಲ ಸಂಪನ್ಮೂಲ ಸಚಿವರು, ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗಿ, ಯುಕೆಪಿಗೆ ಬೇಕಾದ ಅನುದಾನ, ಸಂತ್ರಸ್ತರ ಸಮಸ್ಯೆ ಬಿಚ್ಚಿಡುತ್ತಿದ್ದರು. ಹೋರಾಟ ಸಮಿತಿ, ರಾಜಕೀಯರಹಿತವಾಗಿದ್ದವು. ಆದರೆ, ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರ ಸಮಿತಿಗಳೆಂಬ ಹಣೆಪಟ್ಟಿ ಬೇರೆ ದೊರೆತಿದೆ. ಹೀಗಾಗಿ ಆ ಸಮಿತಿ, ಈ ಸಮಿತಿ ಎಂಬ ಗೊಂದಲ ಬೇರೆ ಸಂತ್ರಸ್ತರಲ್ಲಿ ಮೂಡಿದೆ.
ಯಾವುದೇ ಸಮಿತಿಗಳಿದ್ದರೂ, ಸರ್ಕಾರದ ಮೇಲೆ ತೀವ್ರ ಒತ್ತಡ ತರುವ, ಸಂತ್ರಸ್ತರ ಪರವಾಗಿ ನಿರಂತರ ಧ್ವನಿ ಎತ್ತಬೇಕಾದ ಈ ಸಮಿತಿಗಳು, ಬಜೆಟ್ ಪೂರ್ವದಲ್ಲೂ ಮೌನ ವಹಿಸಿರುವುದು ಯುಕೆಪಿ-3ನೇ ಹಂತದಡಿ ಭೂಮಿ ಕಳೆದುಕೊಳ್ಳುವ ರೈತರಿಗೆ ಯೋಗ್ಯ ಬೆಲೆ ಸಿಗುತ್ತಾ? ಎಂಬ ಜಿಜ್ಞಾಸೆ ಕಾಡುತ್ತಿದೆ.
ಕೃಷ್ಣೆಗೆ ತಾತ್ಸಾರ ನಿಲ್ಲದು: ಕಾವೇರಿ ವಿಷಯದಲ್ಲಿ ದಕ್ಷಿಣ ಕರ್ನಾಟಕ ಭಾಗದ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಒಟ್ಟಾಗಿ ಧ್ವನಿ ಎತ್ತುತ್ತಾರೆ. ಆದರೆ, ಕೃಷ್ಣೆಯ ವಿಷಯದಲ್ಲಿ ಉತ್ತರದ ಜನಪ್ರತಿನಿಧಿಗಳಾಗಲಿ, ಹೋರಾಟ ಸಮಿತಿಗಳಾಗಲಿ ಒಟ್ಟಾಗಿ ಧ್ವನಿ ಎತ್ತುತ್ತಿಲ್ಲ ಎಂಬ ಅಸಮಾಧಾನ ಬಹು ವರ್ಷಗಳಿಂದಿದೆ. ಯಾವುದೇ ಪಕ್ಷವಿರಲಿ, ಚುನಾವಣೆ ಬಂದಾಗೊಮ್ಮೆ ಭರವಸೆ ನೀಡಿ, ಅಧಿಕಾರಕ್ಕೆ ಬಂದ ಬಳಿಕ ಉಲ್ಟಾ ಹೊಡೆಯುವ ಪರಂಪರೆ ಮುಂದುವರಿದಿದ್ದು, ಸಂತ್ರಸ್ತರೆಂದರೆ, ಭರವಸೆ ಮೂಲಕ ಮೋಡಿ ಮಾಡಬಹುದೆಂಬ ಕಲ್ಪನೆಗೆ ರಾಜಕೀಯ ಪಕ್ಷಗಳು ಅಂಟಿಕೊಂಡಿವೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಭರವಸೆ ಕೊಟ್ಟು ಉಲ್ಟಾ ಪರಂಪರೆ: ಕಳೆದ 2013ರಲ್ಲಿ ಕಾಂಗ್ರೆಸ್‌ನ ಎಲ್ಲಾ ನಾಯಕರು, ಕೂಡಲಸಂಗಮಕ್ಕೆ ಪಾದಯಾತ್ರೆ ಮೂಲಕ ಬಂದು, ಯುಕೆಪಿ ಯೋಜನೆಗೆ ಪ್ರತಿವರ್ಷ 10 ಸಾವಿರ ಕೋಟಿ ಅನುದಾನ ನೀಡಿ, ಐದು ವರ್ಷದಲ್ಲಿ ಎಲ್ಲ ಯೋಜನೆ, ಭೂಸ್ವಾಧೀನ, ಪುನರ್ವಸತಿ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಚುನಾವಣೆಯಲ್ಲಿ ಗೆದ್ದು, ಸಿದ್ದರಾಮಯ್ಯ ಸಿಎಂ ಕೂಡ ಆದರು. ಅದೇ ವರ್ಷ ಆಲಮಟ್ಟಿಗೆ ಬಾಗಿನ ಅರ್ಪಿಸಲು ಬಂದಾಗ, ಈ ಕುರಿತು ಮಾಧ್ಯಮದವರು ಪ್ರಶ್ನಿಸಿದರೆ, ನಾವು ಯುಕೆಪಿಗೆ 10 ಸಾವಿರ ಕೊಡುತ್ತೇವೆ ಎಂದಿಲ್ಲ, ರಾಜ್ಯದ ನೀರಾವರಿ ಯೋಜನೆಗೆ 10 ಸಾವಿರ ಕೋಟಿ ಎಂದಿದ್ದೇವೆ ಎಂದು ಹೇಳಿಕೊಂಡರು. ಈ ಕುರಿತು ರಾಜಕೀಯ ಆರೋಪ-ಪ್ರತ್ಯಾರೋಪ ನಡೆದವು.
ಬಿಜೆಪಿಯಿಂದಲೂ ಅದೇ ರಾಗ: ಕಾಂಗ್ರೆಸ್ ಬಳಿಕ, ಇದೀಗ ಬಿಜೆಪಿ ನಾಯಕರೂ ಯುಕೆಪಿ ವಿಷಯದಲ್ಲಿ ಉಲ್ಟಾ ಹೊಡೆದಿದ್ದಾರೆ. ಸ್ವತಃ ಯಡಿಯೂರಪ್ಪ ಅವರು, 2018ರ ಚುನಾವಣೆ ವೇಳೆ ನಗರಕ್ಕೆ ಬಂದಾಗ, ಭೂಮಿ ಕಳೆದುಕೊಳ್ಳುವ ರೈತರಿಗೆ ಯೋಗ್ಯ ಬೆಲೆ ನಿಗದಿ ಮಾಡಲು ಭೂ ಬೆಲೆ ನಿರ್ಧರಣಾ ಸಮಿತಿ ಮಾಡುತ್ತೇವೆ ಎಂದಿದ್ದರು. ಆದರೆ, ಇದೀಗ ಡಿಸಿಎಂ ಕಾರಜೋಳರು, ಕಾನೂನು ಪ್ರಕಾರ ಸಂತ್ರಸ್ತರಿಗೆ ಪರಿಹಾರ ದೊರೆಯಲಿದೆ ಎಂದು ಹೇಳುವ ಮೂಲಕ ಉಲ್ಟಾ ಹೊಡೆದಿದ್ದಾರೆ. ಇದೇ ಕಾರಜೋಳರು, 2015ರಲ್ಲಿ ನಡೆದ ಸಂತ್ರಸ್ತರ ಹೋರಾಟದ ವೇಳೆ ಜಿಲ್ಲಾಡಳಿತ ಭವನದ ಎದುರು ಮಾತನಾಡಿದ ಮಾತುಗಳು ಸ್ಮರಿಸಿಕೊಳ್ಳಲಿ ಎಂದು ಹೇಳುವ ಮನಸ್ಥಿತಿಯೂ ಸಂತ್ರಸ್ತರ ಹೋರಾಟ ಸಮಿತಿಗಳು ಮಾಡುತ್ತಿಲ್ಲ ಎಂಬ ಅಸಮಾಧಾನ 3ನೇ ಹೋರಾಟ ಸಮಿತಿ ವ್ಯಕ್ತಪಡಿಸಿದೆ.
ಸಂತ್ರಸ್ತರು ಎಚ್ಚೆತ್ತುಕೊಳ್ಳಲಿ: ಚುನಾವಣೆ ಬಂದಾಗೊಮ್ಮೆ, ಗೆದ್ದ ಬಳಿಕ ಮತ್ತೂಂದು ರೀತಿ ಹೇಳಿಕೆ ಕೊಡುತ್ತ, 50 ವರ್ಷವಾದರೂ ಕೃಷ್ಣಾ ನದಿ ನೀರು ಸದ್ಭಳಕೆ ಹಾಗೂ ನೀರಾವರಿ ಯೋಜನೆ, ಪುನರ್ವಸತಿ, ಭೂಸ್ವಾಧೀನ ಪೂರ್ಣಗೊಳಿಸದ ಎಲ್ಲ ರಾಜಕೀಯ ಪಕ್ಷಗಳ ಧೋರಣೆ ಕುರಿತು ಸಂತ್ರಸ್ತರು ಎಚ್ಚೆತ್ತುಕೊಳ್ಳಬೇಕಿದೆ. ಎರಡು ದಶಕಗಳ ಹಿಂದೆ ನಡೆಯುತ್ತಿದ್ದ ಹೋರಾಟ, ಆ ಒಗ್ಗಟ್ಟು ಪ್ರದರ್ಶನಗೊಳ್ಳಬೇಕಿದೆ ಎಂಬುದು ಪ್ರಜ್ಞಾವಂತರ ಒತ್ತಾಯ.
-ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.