ಸಂತ್ರಸ್ತರಿಗೆ ಏಕರೂಪ ಭೂ ಬೆಲೆ ಮರೀಚಿಕೆ
Team Udayavani, Jan 27, 2020, 12:30 PM IST
ಸಾಂಧರ್ಬಿಕ ಚಿತ್ರ
ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಳ್ಳುವ ರೈತರ ಖುಷ್ಕಿ ಭೂಮಿಗೆ 25 ಲಕ್ಷ ಹಾಗೂ ನೀರಾವರಿ ಭೂಮಿಗೆ 30 ಲಕ್ಷ ಪರಿಹಾರ ನೀಡಬೇಕು. ಭೂಮಿಯ ಬೆಲೆ ನಿಗದಿಗಾಗಿ ಸಮಿತಿ ರಚಿಸಬೇಕು. ಇಲ್ಲದಿದ್ದರೆ ರೈತರು ಭೂಮಿಯೇ ಕೊಡುವುದಿಲ್ಲ. ರೈತರನ್ನು ನೀರಿನಲ್ಲಿ ಮುಳುಗಿಸಬೇಡಿ…
ಹೀಗೆ ಒತ್ತಾಯ ಕೇಳಿ ಬಂದಿದ್ದು ಕಳೆದ 2016ರಲ್ಲಿ ನಡೆದ ಸಂತ್ರಸ್ತರ ಹೋರಾಟದ ವೇಳೆ ಬಿಜೆಪಿ ನಾಯಕರಿಂದ. ಆದರೆ, ಇಂದು ಅದೇ ಬಿಜೆಪಿ ನಾಯಕರು ಅಧಿಕಾರದಲ್ಲಿದ್ದು, ಸಂತ್ರಸ್ತರ ಭೂಮಿಗೆ ಯೋಗ್ಯ ಬೆಲೆ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿಲ್ಲ. ಅಲ್ಲದೇ ಸಂತ್ರಸ್ತರಿಗೆ ಅಭಯ ನೀಡುವ ನಿಟ್ಟಿನಲ್ಲೂ ಮಾತು ಕೇಳಿಬರುತ್ತಿಲ್ಲ. ಬದಲಾಗಿ ಕಾನೂನು ಪ್ರಕಾರ ಬೆಲೆ ದೊರೆಯುತ್ತದೆ ಎಂದು ಹೇಳುವ ಮೂಲಕ ಸಂತ್ರಸ್ತರಿಗೆ ಮತ್ತಷ್ಟು ನಿರಾಶೆ ಮೂಡಿಸಿದ್ದಾರೆ ಎಂಬ ಆಕ್ರೋಶದ ಮಾತು ಕೇಳಿ ಬರುತ್ತಿವೆ.
ನಿರಾಶೆ ಮೂಡಿಸಿದ ಕಾರಜೋಳ ಹೇಳಿಕೆ: ಯುಕೆಪಿ ಸಂತ್ರಸ್ತರ ವಿಷಯದಲ್ಲಿ ಪದೇ ಪದೇ ಹೇಳಿಕೆ ನೀಡುತ್ತಿದ್ದು, ಚುನಾವಣೆ ಪೂರ್ವದಲ್ಲಿ ಯಡಿಯೂರಪ್ಪ ಬಾಗಲಕೋಟೆಗೆ ಬಂದಾಗ, ಮಾಧ್ಯಮದವರು ಯುಕೆಪಿ ಸಂತ್ರಸ್ತರಿಗೆ ಏಕ ರೂಪದ ಬೆಲೆ ನೀಡುವ ಒತ್ತಾಯದ ಕುರಿತ ಪ್ರಶ್ನೆ ಕೇಳಿದಾಗ, ಅವರು ನೀಡಿದ ಉತ್ತರಕ್ಕೆ ಖುಷಿಪಟ್ಟು, ನಾವು ಅಧಿಕಾರಕ್ಕೆ ಬಂದರೆ ಇದನ್ನು ಮಾಡುತ್ತೇವೆ ಎಂದು ಹೇಳಿಕೊಂಡಿದ್ದ ಮುಧೋಳದ ಶಾಸಕರೂ ಆಗಿರುವ ಗೋವಿಂದ ಕಾರಜೋಳರು ಇಂದು ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದಾರೆ. ಈ ಭಾಗದ ಯುಕೆಪಿ ವಿಷಯದಲ್ಲಿ ದೊಡ್ಡ ಜವಾಬ್ದಾರಿ ಅವರ ಮೇಲಿದೆ ಆದರೆ, ಅವರೇ ಈಗ ಸ್ವಾಧೀನ ಕಾನೂನು ಪ್ರಕಾರ ಸಂತ್ರಸ್ತರಿಗೆ ಬೆಲೆ ದೊರೆಯಲಿದೆ. ಆ ಪ್ರಕ್ರಿಯೆ ಕಾನೂನು ಮಾಡಲಿದೆ ಎಂದು ಹೇಳಿದ್ದು, ಸಂತ್ರಸ್ತರಿಗೆ ಭಾರಿ ನಿರಾಶೆ ಮೂಡಿಸಿದೆ.
ಕಾನೂನು ನೆಪ ಹೇಳಬೇಡಿ: ಇದೇ ಕಾರಜೋಳರು, ಅಂದು ಭೂ ಸ್ವಾಧೀನ ಕಾಯ್ದೆಯಡಿ ಪರಿಹಾರ ಕೊಡುವುದಾಗಿ ಹೇಳುವುದು ಬೇಕಾಗಿಲ್ಲ. ಸರ್ಕಾರಕ್ಕೇನು ಧಾಡಿ ಆಗಿದೆ. ರೈತರ ಪರಿಹಾರಕ್ಕಾಗಿ 50 ಸಾವಿರ ಕೋಟಿ ಖರ್ಚು ಮಾಡಿದರೆ ಏನು ನಷ್ಟವಾಗುತ್ತದೆ ಎಂದು ಹೇಳಿದ್ದರು. ಆದರೆ, ಇದೀಗ ಅಧಿಕಾರಕ್ಕೆ ಬಂದ ಬಳಿಕ ಸಂತ್ರಸ್ತರಿಗೆ ಏಕ ರೂಪದ ಇಲ್ಲವೇ ಯೋಗ್ಯ ಪರಿಹಾರ ನೀಡುವುದಾಗಿಯೂ ಒಂದು ಮಾತು ಹೇಳುತ್ತಿಲ್ಲ ಎಂಬ ಬೇಸರ ಮೂಡಿಸಿದೆ.
1.23 ಲಕ್ಷ ಎಕರೆ ಅಗತ್ಯ: ಯುಕೆಪಿ 3ನೇ ಹಂತದ ಎಲ್ಲ ಯೋಜನೆಗಳಿಗೆ ಒಟ್ಟು 1,23,640 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು. ಇಷ್ಟೊಂದು ಪ್ರಮಾಣದ ಭೂಮಿ, ಪುನಃ ರಚನೆ ಅಥವಾ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ರೈತರು ಭೂಮಿ ಕಳೆದುಕೊಂಡರೆ, ಬೇರೆ ಕಡೆ ಭೂಮಿ ಖರೀದಿ ಮಾಡಲೂ ಸಧ್ಯ ಭೂಮಿ ಮಾರುವವರಿಲ್ಲ. ಅವರ ಬದುಕೇ ತಲ್ಲಣಗೊಳ್ಳಲಿದೆ. ಅವರಿಗೆ ಯೋಗ್ಯ ಪರಿಹಾರ ನೀಡಿದರೆ, ಒಂದಷ್ಟು ಉದ್ಯೋಗ, ಉದ್ಯಮ ಅಥವಾ ಬೇರೆ ಯಾವುದೋ ಚಟುವಟಿಕೆ ನಡೆಸಿಕೊಂಡು ಜೀವನ ನಡೆಸಬಹುದು. ಆದರೆ, ಕೇಂದ್ರ ಸರ್ಕಾರದ ಹೊಸ ಭೂಸ್ವಾಧೀನ ಕಾಯ್ದೆ ಪ್ರಕಾರ, ಈಗಾಗಲೇ ಆಯಾ ಗ್ರಾಮದಲ್ಲಿ ಭೂ ಖರೀದಿ ವೇಳೆ ನೋಂದಣಿ ಮಾಡಿಸಿದ ಆಧಾರದ ಮೇಲೆ ಮಾತ್ರ ಪರಿಹಾರ ದೊರೆಯಲಿದೆ.
10 ಲಕ್ಷಕ್ಕೆ ಎಕರೆ ಭೂಮಿ ಖರೀದಿಸಿ, 2 ಲಕ್ಷಕ್ಕೆ ನೋಂದಣಿ ಮಾಡಿಸಿದ್ದರೆ, 2 ಲಕ್ಷಕ್ಕೆ ನಾಲ್ಕು ಪಟ್ಟು ಬೆಲೆ ನೀಡಲಾಗುತ್ತದೆ. ಆ ಪರಿಹಾರದಲ್ಲಿ ಒಂದು ಎಕರೆ ಕೂಡ ಖರೀದಿ ಮಾಡಲು ಸಾಧ್ಯವಿಲ್ಲ ಎಂಬುದು ಸಂತ್ರಸ್ತರ ಗೋಳು. ಯುಕೆಪಿ 3ನೇ ಹಂತದಲ್ಲಿ 20 ಗ್ರಾಮ ಮುಳುಗಡೆಗೊಳ್ಳಲಿದ್ದು, ಆಲಮಟ್ಟಿ ಜಲಾಶಯ ಈಗಿರುವ 519.60 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಿದಾಗ 94,640 ಎಕರೆ ಭೂಮಿ ಹಿನ್ನೀರಿನಲ್ಲಿ ಮುಳುಗಡೆಯಾಗಲಿದೆ. ಪುನರ್ವಸತಿ ಕೇಂದ್ರಗಳ ನಿರ್ಮಾಣಕ್ಕಾಗಿ 4,315 ಎಕರೆ, 9 ಉಪ ನೀರಾವರಿ ಯೋಜನೆಗಳ ಕಾಲುವೆ ನಿರ್ಮಾಣಕ್ಕೆ 24,685 ಎಕರೆ ಸೇರಿ ಒಟ್ಟು 1,23,640 ಎಕರೆ ಸ್ವಾಧೀನಗೊಳ್ಳಲಿದೆ. ಇಷ್ಟೊಂದು ಭೂಮಿ, ರೈತರು ಕಳೆದುಕೊಳ್ಳುವಾಗ ಸರಿ ಎಂಬುದು ಸಂತ್ರಸ್ತರ ಆಕ್ರೋಶ .
2.61 ಲಕ್ಷ ಎಕರೆ ಮುಳುಗಡೆ: ಈಗ 1.23 ಲಕ್ಷ ಎಕರೆ ಸ್ವಾಧೀನಗೊಳ್ಳಲಿದ್ದು, ಇದಕ್ಕೂ ಮುಂಚೆ ಯುಕೆಪಿ ಹಂತ 1 ಮತ್ತು 2ರಲ್ಲಿ ಈಗಾಗಲೇ ಈ ಭಾಗದ ರೈತರು 2,61,610 ಎಕರೆ ಭೂಮಿ ನೀಡಿದ್ದಾರೆ. ಹೀಗೆ ಭೂಮಿ ನೀಡಿದ ಎಷ್ಟೋ ರೈತರು, ಇಂದಿಗೂ ಗೋಳಾಡುತ್ತಿದ್ದಾರೆ. ಪುನಃ ಅದೇ ರೀತಿ ಸರ್ಕಾರ ಮಾಡದೇ, ಸಂತ್ರಸ್ತರಿಗೆ ಭದ್ರ ಬದುಕು ಕಲ್ಪಿಸಲು ಮುಂದಾಗಬೇಕು ಎಂಬುದು ಒಕ್ಕೊರಲಿನ ಒತ್ತಾಯ.
ಭೂಮಿ ಕಳೆದುಕೊಳ್ಳುವ ರೈತರಿಗೆ ಯೋಗ್ಯ ಪರಿಹಾರಕ್ಕೆ ಹಿಂದೆ ಕಾರಜೋಳರೇ ಹೋರಾಟದಲ್ಲಿ ಪಾಲ್ಗೊಂಡಿದ್ದು, ಬೆಲೆ ನಿಗದಿ ಸಮಿತಿ ಮಾಡಲೂ ಒತ್ತಾಯಿಸಿದ್ದರು. ಈಗ ಕಾನೂನು ಪ್ರಕಾರ ಬೆಲೆ ನೀಡುವುದಾಗಿ ಹೇಳಿ, ಮತ್ತೆ ಸಂತ್ರಸ್ತರನ್ನು ಅತಂತ್ರರನ್ನಾಗಿ ಮಾಡಲು ಮುಂದಾಗಿದ್ದಾರೆ. ತಮ್ಮ ಹೇಳಿಕೆ-ಭರವಸೆಗಳಿಗೆ ಅವರೇ ಬದ್ಧರಾಗಿರದಿದ್ದರೆ ರೈತರು ಭೂಮಿ ಕೊಡುವುದಿಲ್ಲ. –ಪ್ರಕಾಶ ಅಂತರಗೊಂಡ, ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಮುಖಂಡ
ಯುಕೆಪಿ 3ನೇ ಹಂತದಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ಕಾನೂನು ಪ್ರಕಾರ ಬೆಲೆ ದೊರೆಯಲಿದೆ. ಈ ಯೋಜನೆ 50 ವರ್ಷಗಳಿಂದ ನಡೆಯುತ್ತಲೇ ಇದೆ. ಇದಕ್ಕೆ ಮೂರೂವರೆ ವರ್ಷದಲ್ಲಿ ಅಂತಿಮ ರೂಪ ನೀಡಬೇಕು ಎಂಬುದು ನಮ್ಮ ಸರ್ಕಾರದ ಗುರಿ. ಹೀಗಾಗಿ ಈ ಬಜೆಟ್‌ನಲ್ಲಿ ಯುಕೆಪಿ ಯೋಜನೆಗೆ ಹೆಚ್ಚಿನ ಅನುದಾನ ನೀಡಲು ಸಿಎಂ ಜತೆಗೆ ಚರ್ಚೆ ಮಾಡುತ್ತೇವೆ. –ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ
-ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.