ಸಮಸ್ಯೆಗಳ ಅನಾವರಣ: ಜಿಲ್ಲಾಧಿಕಾರಿ ಸುನೀಲಕುಮಾರ್ ಸ್ಪಂದನೆ
ಸ್ವಚ್ಛತೆಗೆ ಒತ್ತು ನೀಡಲು ಸೂಚನೆ ಮಂಗಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಿ
Team Udayavani, Jun 19, 2022, 2:58 PM IST
ಮುಧೋಳ: ಗ್ರಾಮದ ಪ್ರತಿ ಸಮಸ್ಯೆಗೂ ಕಿವಿಯಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ತಾಲೂಕಿನ ಮಂಟೂರು ಗ್ರಾಮದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಬಾಗಲಕೋಟೆ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಗ್ರಾಮಸ್ಥರ ಸಮಸ್ಯೆಗೆ ಕಿವಿಯಾಗಿ ಸಾಧ್ಯವಾದ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಕಸ ವಿಲೇವಾರಿ ಬಗ್ಗೆ ದೂರು ಹೇಳಿದಾಗ ಗ್ರಾಮದಲ್ಲಿರುವ ಕಸ ವಿಲೇವಾರಿ ವಾಹನವನ್ನು ಸರಿಯಾಗಿ ಬಳಕೆ ಮಾಡಿಕೊಂಡು ಸ್ವಚ್ಛತೆಗೆ ಒತ್ತು ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪೌರಕಾರ್ಮಿಕರು ಸ್ವಚ್ಛತೆ ಕಾರ್ಯದಲ್ಲಿ ತೊಡಗಿಕೊಂಡಾಗ ಕೈಗವಸ ಸೇರಿ ರಕ್ಷಾ ಕವಚ ಧರಿಸಿ ಎಂದು ಸಲಹೆ ನೀಡಿದರು.
ಗ್ರಾಮದಲ್ಲಿ ಪುರುಷರ ಶೌಚಗೃಹ ಇರದ ಕಾರಣ ಹೆಚ್ಚು ತೊಂದರೆಯಾಗಿದೆ. ಈ ಬಗ್ಗೆ ಸಾಮೂಹಿಕ ಶೌಚಗೃಹ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ ಎಂದು ಹೇಳಿದಾಗ, ಜಿಲ್ಲಾಧಿಕಾರಿಗಳು ಅಧಿಕಾರಿಗಳ ಬಳಿ ಮಾಹಿತಿ ಕೇಳಿದರು.
ಆಗ ಪಿಡಿಒ ರಾಜಕುಮಾರ ವಾರದ ಅವರು, ಪುರುಷ ಶೌಚಗೃಹಗಳು ನಿರ್ಮಾಣ ಹಂತದಲ್ಲಿದೆ ಎಂದು ಸ್ಪಷ್ಟನೆ ನೀಡಿದರು. ಅಂದಾಜು 8 ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ನಮಗೆ ಆರೋಗ್ಯ ಕೇಂದ್ರದ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿದರು.
ಆಗ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿ ಕಾರಿಗಳು ನನಗೆ ಪ್ರಸ್ತಾವನೆ ಸಲ್ಲಿಸಿ ನಾನು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದರು. ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಗ್ರಾಮದ ಹಿರಿಯರು ಒತ್ತಾಯಿಸಿದಾಗ ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮಲ್ಲಿ ಹಿಡಿಯಲು ಅನುದಾನವಿರಲ್ಲ ಎಂದು ಸಮಜಾಯಿಷಿ ನೀಡಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ, ಮಂಗಗಳನ್ನು ಸಾಗಹಾಕಲು ಕ್ರಮ ಕೈಗೊಳ್ಳಿ ಎಂದರು. ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅಂದಾಜು 1100 ಅರ್ಜಿ ಬಂದಿವೆ. ಗ್ರಾಮದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ಸಲುವಾಗಿ ಗ್ರಾಮ ಪಂಚಾಯಿತಿ ಅವರು ಮನೆ ಮನೆಗೆ ತೆರಳಿ 930 ಸಮಸ್ಯಾತ್ಮಕ ಅರ್ಜಿ ಪಡೆದುಕೊಂಡಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ 150 ಅರ್ಜಿ ಬಂದಿವೆ. ಹೆಚ್ಚಾಗಿ ವಾಸಕ್ಕೆ ಮನೆ ಹಾಗೂ ಶೌಚಾಲಯ ನಿರ್ಮಾಣಕ್ಕೆ ಅರ್ಜಿಗಳು ಬಂದಿವೆ. ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸನ್ಮಾನ: ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಸನ್ಮಾನಿಸಿದರು. ಮಂಟೂರ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಗ್ರಾಮಸ್ಥರು ಸನ್ಮಾನಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಭೀಮನಗೌಡ ಪಾಟೀಲ, ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ತಹಶೀಲ್ದಾರ್ ವಿನೋದ ಹತ್ತಳ್ಳಿ, ಕೃಷಿ ಇಲಾಖೆ ಅಧಿಕಾರಿ ಬಿ.ವಿ.ದಾಸರ, ತೋಟಗಾರಿಕೆ ಇಲಾಖೆ ಅಧಿಕಾರಿ ಮಹೇಶ ದಂಡನ್ನವರ, ಪಶು ಇಲಾಖೆ ಅಧಿ ಕಾರಿ ಗೋವಿಂದ ರಾಠೊಡ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಮೂಲಿಮನಿ, ಪಿಡಿಒ ರಾಜು ವಾರದ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.