ಸಂತ್ರಸ್ತರ ಸಂಕಷ್ಟ ತೆರೆದಿಟ್ಟ ಅಧಿವೇಶನ
Team Udayavani, Sep 16, 2019, 11:04 AM IST
ಬಾಗಲಕೋಟೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ರೈತರು, ಹಸಿರು ಟವೆಲ್ ಬೀಸಿ ಎಚ್ಚರಿಕೆ ನೀಡಿದರು.
ಬಾಗಲಕೋಟೆ: ಕಳೆದ 105 ವರ್ಷಗಳ ಬಳಿಕ ಉಂಟಾದ ಭೀಕರ ಪ್ರವಾಹಕ್ಕೆ ತುತ್ತಾದ ಸಂತ್ರಸ್ತರು, ಮನೆ-ಬೆಳೆ ಕಳೆದುಕೊಂಡು ಬೀದಿಗೆ ಬಂದಿದ್ದು, ಅವರ ಸಂಕಷ್ಟ ಪರಿಹರಿಸಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ನೆರೆ ಸಂತ್ರಸ್ತರ 12 ಅಂಶಗಳ ಬೇಡಿಕೆಗೆ ತಕ್ಷಣ ಸ್ಪಂದಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಯಲಿದೆ. ರೈತ ಚಳವಳಿ ಎಲ್ಲೆಡೆ ನಡೆಯಲಿವೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಭಾರತೀಯ ಕಿಸಾನ್ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಜನ ಜಾಗೃತಿ ವೇದಿಕೆ, ಬರ ಮುಕ್ತ ಕರ್ನಾಟಕ ಆಂದೋಲನ, ಜನಾಂದೋಲನ ಮಹಾಮೈತ್ರಿ, ಸ್ವರಾಜ್ ಇಂಡಿಯಾ ಪಕ್ಷ ಹೀಗೆ ವಿವಿಧ ರೈತಪರ ಸಂಘಟನೆಗಳ ನೇತೃತ್ವದಲ್ಲಿ ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ನೆರೆ ಸಂತ್ರಸ್ತರ ಬಹಿರಂಗ ಅಧಿವೇಶನದಲ್ಲಿ ಈ ಎಚ್ಚರಿಕೆ ನೀಡಲಾಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 10 ದಿನಗಳೊಳಗೆ ಸಂತ್ರಸ್ತರ ಹಕ್ಕೊತ್ತಾಯಗಳ ಕುರಿತು ಸ್ಪಂದಿಸದಿದ್ದಲ್ಲಿ, ರಾಜ್ಯಾದ್ಯಂತ ನಿರಂತರ, ಅನಿರ್ದಿಷ್ಟ ಕಾಲ ತೀವ್ರ ಹೋರಾಟ ನಡೆಸಲು ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಯಿತು. ನೆರೆ ಸಂತ್ರಸ್ತರು, ತೀವ್ರ ಹಾನಿಯಾದ ರೈತರಿಗೆ ಯೋಗ್ಯ ಪರಿಹಾರ ನೀಡುವ ನಿಟ್ಟಿನಲ್ಲಿ ಒಟ್ಟು 12 ನಿರ್ಣಯ ಕೈಗೊಳ್ಳಲಾಯಿತು.
48ದಿನಗಳಾದರೂ ಇಲ್ಲ ನಿರ್ಧಾರ: ಅಧಿವೇಶನದಲ್ಲಿ ಮಾತನಾಡಿದ ಪ್ರತಿಯೊಬ್ಬ ಪ್ರಮುಖರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಹರಿಹಾಯ್ದರು. ಪ್ರವಾಹ ಬಂದು 48 ದಿನ ಕಳೆದಿವೆ. ಈವರೆಗೆ ರೈತರಿಗೆ ಯೋಗ್ಯ ಪರಿಹಾರ ಕುರಿತು ನಿರ್ಧಾರ ಕೈಗೊಂಡಿಲ್ಲ. ಲಕ್ಷಾಂತರ ಜನರು ಬೀದಿಗೆ ಬಿದ್ದಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಜ್ಯಕ್ಕೆ ಒಂದು ಬಿಡಿಗಾಸು ಪರಿಹಾರ ಕೊಟ್ಟಿಲ್ಲ. ಇನ್ನು ರಾಜ್ಯದ 25 ಜನ ಬಿಜೆಪಿ ಸಂಸದರಿಗೆ ಮೋದಿ ಎದುರು ನಿಂತು, ಸಂತ್ರಸ್ತರಿಗೆ ಪರಿಹಾರ ಕೊಡಿ ಎಂದು ಕೇಳುವ ಧೈರ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಲವು ಜಿಲ್ಲೆಗಳ ನಾಯಕರು ಭಾಗಿ: ಸ್ವರಾಜ್ ಇಂಡಿಯಾ ಪಕ್ಷ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಪಂ ಉಪಾಧ್ಯಕ್ಷ-ರೈತ ಮುಖಂಡ ಮುತ್ತಪ್ಪ ಕೋಮಾರ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ನೂಲೆನೂರ ಎಂ. ಶಂಕ್ರಪ್ಪ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಪುಟ್ಟಸ್ವಾಮಿಗೌಡ, ರೈತ ಸಂಘದ ಯುವ ಮುಖಂಡ ದರ್ಶನ ಪುಟ್ಟಣ್ಣಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್.ಆರ್. ನವಲಿಹಿರೇಮಠ, ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ, ಕರವೇ ಜಿಲ್ಲಾ ಅಧ್ಯಕ್ಷ ರಮೇಶ ಬದ್ನೂರ, ಜನಜಾಗೃತಿ ವೇದಿಕೆ ಅಧ್ಯಕ್ಷ ನಾಗರಾಜ ಹೊಂಗಲ್, ಕರ್ನಾಟಕ ರೈತ ಸೇನಾ ಅಧ್ಯಕ್ಷ ಅಂಬಲಿ, ಪ್ರಕಾಶ ಅಂತರಗೊಂಡ, ಸುಭಾಸ ಶಿರಬೂರ, ಕಿರಣ ಬಾಳಾಗೋಳ ಸೇರಿದಂತೆ ಹಲವರು ಪ್ರಮುಖರು ಭಾಗವಹಿಸಿದ್ದರು.
ನೆರೆ ಸಂತ್ರಸ್ತರ ಬಹಿರಂಗ ಅಧಿವೇಶನದಲ್ಲಿ ಕೊಪ್ಪಳ, ಗದಗ, ರಾಯಚೂರು, ಕಲಬುರಗಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಸಂತ್ರಸ್ತರು ಪಾಲ್ಗೊಂಡಿದ್ದರು.
ರೈತ ಚಳವಳಿ ಗಟ್ಟಿ ಮಾಡ್ತೀವಿ: ನೆರೆ ಸಂತ್ರಸ್ತರಿಗೆ ಯೋಗ್ಯ ಪರಿಹಾರ ಕೊಡುವಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದರೆ ಇಡೀ ರಾಜ್ಯ ಹೊತ್ತಿ ಉರಿಯಲಿದೆ. 1980ರ ರೈತ ಚಳವಳಿಯಂತೆ ಮತ್ತೆ ಹೋರಾಟ ನಡೆಸಲಾಗುವುದು ಎಂದು ಜಿಪಂ ಉಪಾಧ್ಯಕ್ಷರೂ ಆಗಿರುವ ರೈತ ಮುಖಂಡ ಮುತ್ತಪ್ಪ ಕೋಮಾರ ಎಚ್ಚರಿಕೆ ನೀಡಿದರು.
ನೆರೆ ಸಂತ್ರಸ್ತರ ಅಧಿವೇಶನದಲ್ಲಿ ಪ್ರಾಸ್ತಾವಿಕ ಮಾತನಾಡಿದ ಅವರು, ಸಂತ್ರಸ್ತರು 48 ದಿನಗಳಿಂದ ಕಣ್ಣೀರಿನಲ್ಲಿದ್ದಾರೆ. ಅವರಿಗೆ ಸ್ಪಂದಿಸದ ಜನಪ್ರತಿನಿಧಿಗಳೆಲ್ಲ ಜನ ದ್ರೋಹಿಗಳು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಎಂಬ ನೀತಿಗಳು ನಮಗೆ ಬೇಕಿಲ್ಲ. ಹಾನಿಯಾದ ವಾಸ್ತವಾಂಶ ಮೇಲೆ ಪರಿಹಾರ ಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರೇ, ನಮ್ಮ ರಾಜ್ಯದ ಜನ ನೀವು ಪ್ರಧಾನಿಯಾಗಲೆಂದು 25 ಜನ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಇಂದು ನಮ್ಮ ಬದುಕು ಕೆಟ್ಟು ಹೋಗಿದೆ. ನೀವು ಬಾಯಿ ಬಿಡುತ್ತಿಲ್ಲ. ಬೆಂಗಳೂರಿಗೆ ಬಂದರೂ, ಸಂತ್ರಸ್ತರ ಸ್ಥಿತಿಗತಿ ಏನೆಂದು ಕೇಳುತ್ತಿಲ್ಲ. ರಾಜ್ಯದ ನೆರೆ-ಬರ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತೆಂದು ಘೋಷಿಸಿ. ಒಂದು ಹೆಕ್ಟೇರ್ ಬೆಳೆ ಹಾನಿಗೆ 13500 ನಿಗದಿ ಮಾಡಿದ್ದು, ಈ ಹಣದಲ್ಲಿ ಹಾನಿಯಾದ ಕಬ್ಬು ಕಡಿದು, ಒಡ್ಡಿಗೆ ಹಾಕಲೂ ಆಗಲ್ಲ ಎಂದರು. ಯಡಿಯೂರಪ್ಪ ಅವರು ರೈತರ ಹಸಿರು ಶಾಲು ಹಾಕಿಕೊಂಡು ಸಿಎಂ ಆಗಿ ಪ್ರಮಾಣ ವಚನ ಪಡೆದಿದ್ದಾರೆ. ರೈತರು-ನೇಕಾರರು ನನ್ನ ಎರಡು ಕಣ್ಣುಗಳೆಂದು ಹೇಳಿದ್ದರು. ಪ್ರಧಾನಿ ಮೋದಿಯವರು ದಿನಕ್ಕೆ ನಾಲ್ಕು ಜತೆಗೆ ಬಟ್ಟೆ ಬದಲಿಸುತ್ತಾರೆ. ಆದರೆ, ಇಂದು ರೈತರು-ನೇಕಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಇದು ಮೋದಿ ಮತ್ತು ಯಡಿಯೂರಪ್ಪ ಅವರಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.
1 ಲಕ್ಷ ಕೋಟಿ ಪ್ಯಾಕೇಜ್ ಕೊಡಿ: ಉತ್ತರದ ಜನ ಸೌಮ್ಯ. ಆದರೆ, ಒಮ್ಮೆ ಸಿಟ್ಟಿಗೆದ್ದು ನಿಂತರೆ ರಾಜ್ಯದ ಸಿಎಂ, ಸಚಿವರು ಯಾರೂ ರಸ್ತೆ ಮೇಲೆ ತಿರುಗಾಡಲು ಬಿಡಲ್ಲ. ರಾಜ್ಯದಿಂದ ಆಯ್ಕೆಯಾದ 25 ಸಂಸದರು, ಸಂತ್ರಸ್ತರ ಸಮಸ್ಯೆಯನ್ನು ಮೋದಿಯವರಿಗೆ ಹೇಳಿ ಪರಿಹಾರ ತರಬೇಕು. ಆ ಮೂಲಕ ರೈತರ ಋಣ ತೀರಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ಒಂದೆಡೆ ಬರ, ಇನ್ನೊಂದೆಡೆ ನೆರೆಯಿಂದ ರಾಜ್ಯದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಎರಡೂ ಸರ್ಕಾರಗಳು, ರೈತರಿಗೆ 1ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿ, ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕೈ ಮುಗಿದ್ರೂ ಬರಲಿಲ್ಲ: ಇದೇ ಜಿಲ್ಲೆಯಿಂದ ಆಯ್ಕೆಯಾಗಿ, ಉಪಮುಖ್ಯಮಂತ್ರಿಯಾಗಿರುವ ಗೋವಿಂದ ಕಾರಜೋಳರಿಗೆ, ನೆರೆ ಸಂತ್ರಸ್ತರ ಬಹಿರಂಗ ಅಧಿವೇಶನ ಬರುವಂತೆ ಕೈ ಮುಗಿದು ಕೇಳಿಕೊಂಡೆವು. ಆದರೆ, ನನಗೆ ಪೂರ್ವ ನಿಗದಿತ ಕಾರ್ಯಕ್ರಮ ಇವೆ ಎಂದು ಹೊರಟು ಹೋದರು. ಕಾರಜೋಳರಿಗೆ ರೈತರು, ನೇಕಾರರು, ಸಂತ್ರಸ್ತರಿಗಿಂತ ಅವರ ಕಾರ್ಯಕ್ರಮಗಳೇ ಮುಖ್ಯವಾಗಿವೆ. ನೀವೆಲ್ಲ ಸಂತ್ರಸ್ತರಿಗೆ ಸ್ಪಂದಿಸಿ, ಇಲ್ಲವೇ ಖುರ್ಚಿ ಖಾಲಿ ಮಾಡಿ ಎಂಬ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.