Bagalakote ಲಿಂಗಾಯತರಿಗೆ ಕಾರಜೋಳ ಕೊಡುಗೆ ಏನು ? ಸಚಿವ ಆರ್.ಬಿ. ತಿಮ್ಮಾಪುರ
Team Udayavani, Nov 13, 2023, 10:09 PM IST
ಬಾಗಲಕೋಟೆ: ಕಾಂಗ್ರೆಸ್‌ನಲ್ಲಿ ಲಿಂಗಾಯತ ನಾಯಕರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಹೇಳುವ ಮಾಜಿ ಸಚಿವ ಗೋವಿಂದ ಕಾರಜೋಳ, ಲಿಂಗಾಯತ ನಾಯಕರಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ಸಚಿವ ಆರ್.ಬಿ. ತಿಮ್ಮಾಪುರ ಪ್ರಶ್ನಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ತೆಗೆದರೆ ನಾನೇ ಸಿಎಂ ಎಂದು ಗುಲ್ಲು ಬಿಟ್ಟವರು ಯಾರು. ವೈಯಕ್ತಿಕವಾಗಿ ಲಿಂಗಾಯತ ಸಮಾಜದ ಪ್ರಮುಖರಿಗೆ ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿ ಸಿದರು.
ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ತೆಗೆದಾಗ, ಮುಂದೆ ನಾನೇ ಸಿಎಂ ಎಂದು ಮುಧೋಳದವರನ್ನು ಬೆಂಗಳೂರಿಗೆ ಕರೆಸಿದ್ದರು. ಯಡಿಯೂರಪ್ಪ ಪರವಾಗಿ ಒಂದು ಶಬ್ದವೂ ಮಾತಾಡಲಿಲ್ಲ. ಇದೇನಾ ಕಾರಜೋಳರ ಲಿಂಗಾಯತ ಅಭಿಮಾನ ಎಂದರು.
ಕಾರಜೋಳರಂತೆ ಸುಳ್ಳು, ಗೊಳ್ಳು, ಡ್ರಾಮಾ ಯಾರಿಗೂ ಬರಲ್ಲ. ಈಗ ಲಿಂಗಾಯತರ ಬಗ್ಗೆ ಮಾತನಾಡುವ ಕಾರಜೋಳ, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ತೆಗೆದಾಗ, ಜೈಲಿಗೆ ಹಾಕುವಾಗ ಏಕೆ ಬಾಯಿ ಮುಚ್ಚಿಕೊಂಡಿದ್ದರು. ಕಾರಜೋಳ ಸ್ವಯಂ ಘೋಷಿತ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು ಎಂದು ಟೀಕಿಸಿದರು.
ಎಷ್ಟು ಸಾಲ ಮಾಡಿದ್ದಾರೆ?: ಕುಮಾರಸ್ವಾಮಿಗೆ ಬಹಳ ಆತುರವಿದೆ. ಬಿಜೆಪಿ ಜತೆಗೆ ಸೇರಿ, ಆತುರ ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಇದು ಒಳ್ಳೆಯದಲ್ಲ. ರಾಜ್ಯದಲ್ಲಿ ಸಾಲ ಮಾಡಿ, ತೆಲಂಗಾಣ ಸರ್ಕಾರದ ಸಾಲದ ಬಗ್ಗೆ ಮಾತಾಡಲು ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲ ಎಂದು ಹೇಳಿದ್ದಾರೆ. ನಾವು ರಾಜ್ಯದಲ್ಲಿ ಬಜೆಟ್ ಘೋಷಣೆಯೇ ಮಾಡಿಲ್ಲ. ಇನ್ನು ಸಾಲ ಎಲ್ಲಿಂದ ಮಾಡೋಣ. ಬಜೆಟ್ ಘೋಷಿಸಿ, ಇಂತಲ್ಲಿ ಸಾಲ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದೇವಾ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಅವರು, ಬಿಜೆಪಿ ಮೈತ್ರಿ ಒಳಗೆ ಹೋಗುತ್ತಾರೋ, ಹೊರ ಬರುತ್ತಾರೋ ಗೊತ್ತಿಲ್ಲ. ಈಗ ಬಿಜೆಪಿ ಜತೆಗೆ ಹೋಗಿದ್ದಾರೆ.
ಯಡಿಯೂರಪ್ಪ ಮೇಲೆ ಬಹಳ ಪ್ರೀತಿ ಬಂದಿದೆ. ಮಾತು ಕೊಟ್ಟಂತೆ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಅಂದಿದ್ದರು. ಆ ಮೇಲೆ ಸಿಎಂ ಮಾಡಲ್ಲ ಎಂದು ಓಡಿ ಹೊರ ಬಂದರು. ಇದೆಲ್ಲ ರಾಜ್ಯದ ಜನರೂ ಮರೆತಿಲ್ಲ. ಸಿದ್ದರಾಮಯ್ಯ ಬಗ್ಗೆ ಮಾತನಾಡುವ ನೈತಿಕತೆ ಕುಮಾರಸ್ವಾಮಿಗೆ ಇಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೇಲೆ ಎಷ್ಟು ಸಾಲ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಲಿ. ದೇಶ ಎಷ್ಟರ ಮಟ್ಟಿಗೆ ದಿವಾಳಿಯಾಗಿದೆ ಎಂಬುದರ ಬಗ್ಗೆಯೂ ಮಾತಾಡಲಿ. ಕರ್ನಾಟಕದದ್ದು ಒಂದೇ ಏಕೆ ಹೇಳಬೇಕು. ಕೇಂದ್ರದಲ್ಲಿ ಪ್ರಧಾನಿ ಮೋದಿ, ದೇಶವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯಲ್ಲಿ ಎಷ್ಟೋ ಜನ ಹಿರಿಯ ನಾಯಕರಿದ್ದಾರೆ. ಆದರೆ, ಕಿರಿಯ ನಾಯಕರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಅವರದೇ ಪಕ್ಷದಲ್ಲಿ ಗದ್ದಲ ಎದ್ದಿದೆ. ಬಿಜೆಪಿಯಲ್ಲಿ ಯಾವುದೂ ಸರಿ ಇಲ್ಲ. ಹಲವರ ಅಸಮಾಧಾನವಿದೆ. ಒಬ್ಬೊºಬ್ಬರೇ ಹಿರಿಯ ನಾಯಕರು, ಅಸಮಾಧಾನ ಹೊರ ಹಾಕುತ್ತಿದ್ದಾರೆ. ಲೋಕಸಭೆ ಚುನಾವಣೆಗೆ ಬಿಜೆಪಿಯ ಯಾವ ಗಿಮಿಕ್ ಕೂಡ ನಡೆಯಲ್ಲ.
-ಆರ್.ಬಿ. ತಿಮ್ಮಾಪುರ, ಸಚಿವರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.