ಬಾಗಲಕೋಟೆ: ಧಾನ್ಯ ಬೀಸಿದ ಡಿಸಿ; ಮಜ್ಜಿಗೆ ಕಡಿದ ಎಸಿ!
ಎಳ್ಳಮಾವಾಸ್ಯೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮ ನೋಡುಗರ ಕಣ್ಮನ ಸೆಳೆಯಿತು
Team Udayavani, Jan 12, 2024, 5:55 PM IST
ಉದಯವಾಣಿ ಸಮಾಚಾರ
ಬಾಗಲಕೋಟೆ: ರೈತರ ಸಂಭ್ರಮದ ಹಬ್ಬ ಎಂದೇ ಕರೆಸಿಕೊಳ್ಳುವ ಎಳ್ಳಮಾವಾಸ್ಯೆ ನಿಮಿತ್ತ ಜಿಲ್ಲೆಯ ಬೀಳಗಿ ತಾಲೂಕಿನ ಕೃಷ್ಣೆ-ಘಟಪ್ರಭೆಯ ಸಂಗಮದ ತಾಣ ಚಿಕ್ಕಸಂಗಮದಲ್ಲಿ ಸಂಭ್ರಮ ಮನೆ ಮಾಡಿತ್ತು. ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಹಿರಿಯ ಅಧಿಕಾರಿಗಳ ಪತ್ನಿಯರು ಹಾಗೂ ಸಚಿವ ಆರ್.ಬಿ. ತಿಮ್ಮಾಪುರ ಅವರ ಪತ್ನಿ, ಸಹೋದರಿ ಸಹಿತ ಹಲವರು ಸಂಕ್ರಾಂತಿ ಸಂಭ್ರಮದಲ್ಲಿ ಭಾಗಿಯಾಗಿ, ದೇಶೀಯ ಸಂಸ್ಕೃತಿ ಇಮ್ಮಡಿಗೊಳಿಸಿದರು.
ಮುಧೋಳದ ಸಪ್ತಸ್ವರ ಸಂಗೀತ ಹಾಗೂ ನೃತ್ಯ ಸಾಂಸ್ಕೃತಿಕ ಸಂಸ್ಥೆಯ ಅಡಿಯಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಚಿಕ್ಕಸಂಗಮದಲ್ಲಿ ಎಳ್ಳಮಾವಾಸ್ಯೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮ ನೋಡುಗರ ಕಣ್ಮನ ಸೆಳೆಯಿತು.
ಬಾಗಲಕೋಟೆ ನಗರ, ಬೀಳಗಿ ಹಾಗೂ ಮುಧೋಳ ತಾಲೂಕಿನಿಂದ ಅಂದಾಜು 500ಕ್ಕೂ ಹೆಚ್ಚು ಜನ ಮಹಿಳಾ ಮಣಿಗಳು ಸಂಕ್ರಾಂತಿ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಪತ್ನಿ ಶಕುಂತಲಾ ತಿಮ್ಮಾಪುರ, ಸಹೋದರಿ ಕವಿತಾ ತಿಮ್ಮಾಪುರ, ಜಿಲ್ಲಾಧಿಕಾರಿ ಕೆ.ಎಂ. ಜಾನಕಿ, ಬಾಗಲಕೋಟೆ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಜಿ.ಪಂ. ಸಿಇಒ ಶಶಿಧರ ಕುರೇರ ಅವರ ಪತ್ನಿ ಸುಚಿತಾ ಸೇರಿದಂತೆ ನೂರಾರು ಮಹಿಳೆಯರು ಸಂಕ್ರಾಂತಿ ಸುಗ್ಗಿ ಸಂಭ್ರಮದಲ್ಲಿ ಮಿಂದೆದ್ದರು. ಗ್ರಾಮೀಣ ಸೊಗಡು, ಸಂಸ್ಕೃತಿ, ಪರಂಪರೆ, ಬಿಂಬಿಸುವ ಸಂಕ್ರಾಂತಿ ವೇಳೆಯ ಸುಗ್ಗಿ ಆಚರಣೆ
ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಇಳಕಲ್ಲ ಸೀರೆ, ಮೂಗುತಿ, ಕೈತುಂಬ ಬಳೆ, ತಲೆಗೆ ಹೂವು ಮುಡಿದ ನಾರಿಮಣಿಗಳು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಚಿಕ್ಕ ಸಂಗಮನಾಥನಿಗೆ ಪೂಜೆ ಸಲ್ಲಿಸಿದ ಮಹಿಳೆಯರು ದಂಡಿಹಾರ ಹಾಕಿ ಉಡಿ ತುಂಬುವ ಕಾರ್ಯಕ್ರಮ ನಡೆಸಿಕೊಟ್ಟರು. ರೈತ ಕುಟುಂಬದಲ್ಲಿ ನಡೆಯುವಂತೆ ಬೀಸುವ ಕಲ್ಲಿನಿಂದ ಧಾನ್ಯ ಬೀಸಿದ ಜಿಲ್ಲಾಧಿಕಾರಿ ಜಾನಕಿ, ಎಸಿ ಶ್ವೇತಾ ಅವರು, ಮಹಿಳೆಯರಿಗೆ ಹರುಷ ತಂದರು.
ಎತ್ತುಗಳಿಗೆ ಪೂಜೆ ಸಲ್ಲಿಸಿ, ಸಕಲ ವಾದ್ಯ ಮೇಳದೊಂದಿಗೆ ನದಿಗೆ ತೆರಳಿ ಗಂಗಾಮಾತೆಗೆ ಪೂಜೆ ಸಲ್ಲಿಸಿದರು. ಬಳಿಕ ಅಧಿಕಾರಿಗಳ ಸಮ್ಮುಖದಲ್ಲಿ ನದಿಗೆ ಬಾಗಿನ ಅರ್ಪಿಸಿದರು. ಕೂರಿಗೆಯಿಂದ ಸಾಂಕೇತಿಕವಾಗಿ ಬಿತ್ತನೆ, ಕಬ್ಬಿನ ಮಂಟಪ, ಗಡಿಗೆ ಇಟ್ಟು, ಬೆಲ್ಲದ ಅಚ್ಚು, ದವಸಧಾನ್ಯದಿಂದ ಪೂಜೆ ಸಲ್ಲಿಸಿ ಉತ್ತಮ ಮಳೆ ಆಗಿ, ರೈತರಿಗೆ ಸಮೃದ್ಧ ಫಸಲು ಬರಲಿ ಎಂದು ಪ್ರಾರ್ಥಿಸಿದರು.
ಪೂಜಾ ಕೈಂಕರ್ಯದ ಬಳಿಕ ಉತ್ತರ ಕರ್ನಾಟಕ ಶೈಲಿಯ ಪಕ್ಕಾ ಜವಾರಿ ಊಟವಾದ ಖಡಕ್ ರೊಟ್ಟಿ, ಬದನೆಕಾಯಿ, ಹೆಸರು ಕಾಳು, ಶೇಂಗಾ ಚಟ್ನಿ, ಕೆನೆ ಮೊಸರು, ಶೇಂಗಾ ಹೋಳಿಗೆ, ತುಪ್ಪ, ಉಪ್ಪಿನಕಾಯಿ, ಅನ್ನ ಸಾಂಬರ ಸವಿದರು. ಆಧುನಿಕತೆ ಅಬ್ಬರದಲ್ಲಿ ಮರೆಯಾಗುತ್ತಿರುವ ದೇಶಿ ಹಬ್ಬ ಆಚರಣೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಳೆದ ಆರು ವರ್ಷಗಳಿಂದ, ಮುಧೋಳದ ಸಪ್ತಸ್ವರ ಸಂಸ್ಥೆಯವರು ಸಂಕ್ರಾಂತಿಗೂ ಮುನ್ನ ಈ ಸುಗ್ಗಿ-ಹುಗ್ಗಿ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಈ ಬಾರಿ ವಿಶೇಷ ಎನ್ನುವಂತೆ ಮಹಿಳಾ ಅಧಿಕಾರಿಗಳು ಕೆಲಸದ ಒತ್ತಡ ಬದಿಗಿಟ್ಟು, ಇಡೀ ದಿನ ಹಬ್ಬ ಆಚರಿಸಿ, ಸೇರಿದ್ದ ಮಹಿಳೆಯರ ಉತ್ಸಾಹ ಇಮ್ಮಡಿಗೊಳಿಸಿ ತಾವೂ ಖುಷಿ ಪಟ್ಟರು. ಪೂಜೆ ಹಾಗೂ ಭೂರಿ ಭೋಜನದ ಬಳಿಕ ಜಾನಪದ ಗೀತೆ, ಚಿತ್ರಗೀತೆ, ಸುಗ್ಗಿ ಹಾಡುಗಳಿಗೆ ನಾರಿಯರು ಸಖತ್ ಹೆಜ್ಜೆ ಹಾಕಿ ಸಂಭ್ರಮಿಸಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.