ಮೇಯರ್ ವೈದ್ಯಕೀಯ ನಿಧಿಗೆ 15 ಕೋಟಿ
Team Udayavani, Jan 1, 2020, 3:08 AM IST
ಬೆಂಗಳೂರು: ಮೇಯರ್ ವೈದ್ಯಕೀಯ ಪರಿಹಾರ ನಿಧಿಗೆ 15 ಕೋಟಿ ರೂ. ಮೀಸಲಿಡಲು ಮಂಗಳವಾರ ನಡೆದ ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಜತೆಗೆ, ಅನಾರೋಗ್ಯಕ್ಕೆ ತುತ್ತಾಗಿರುವ ನಿತ್ಯೋತ್ಸವ ಕವಿ ನಿಸ್ಸಾರ್ ಅಹಮದ್ ಹಾಗೂ ಅವರ ಪುತ್ರ ನವೀದ್ ನಿಸ್ಸಾರ್ ಅವರ ಚಿಕಿತ್ಸೆಗೆ ಪಾಲಿಕೆಯಿಂದ 20 ಲಕ್ಷ ರೂ. ಆರ್ಥಿಕ ನೆರವು ನೀಡಲು ಅಂಗೀಕಾರ ನೀಡಲಾಯಿತು.
ಈ ಸಂಬಂಧ ಮಂಗಳವಾರ ನಡೆದ ಪಾಲಿಕೆ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಪ್ರಸ್ತಾವನೆ ಮಂಡಿಸಿ ಒಪ್ಪಿಗೆ ಪಡೆದರು. ಮೇಯರ್ ವೈದ್ಯಕೀಯ ನೆರವು ನಿಧಿಯಿಂದ ಪರಿಹಾರ ಬಯಸಿ ಕಳೆದ ಮೂರು ತಿಂಗಳಿಂದ ನೂರಾರು ಅರ್ಜಿಗಳು ಬಂದಿದ್ದು, ವೈದ್ಯಕೀಯ ನಿಧಿ ಖಾಲಿ ಆಗಿರುವುದರಿಂದ ಸೌಲಭ್ಯ ಸಿಗುತ್ತಿರಲಿಲ್ಲ ಹಾಗೂ 3 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ.
ಪೇಜಾವರ ಶ್ರೀಗಳಿಗೆ ಸಂತಾಪ ಸೂಚಿಸಿದ ಸಭೆ: ಹರಿಪಾದ ಸೇರಿದ ಪೇಜಾವರ ವಿಶ್ವೇಶತೀರ್ಥ ಶ್ರೀಗಳಿಗೆ ಪಾಲಿಕೆಯಲ್ಲಿ ಸದಸ್ಯರು ಸಂತಾಪ ಸೂಚಿಸಿದರು. ಮಾಸಿಕ ಸಭೆ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ನಿರ್ಣಯ ಮಂಡಿಸಿ ಮಾತನಾಡಿದರು. ಶ್ರೀಗಳು ಎಲ್ಲ ಸಮುದಾಯವನ್ನು ಸಮಾನತೆಯಿಂದ ಕಾಣುತ್ತಿದ್ದರು. ಅಸ್ಪೃಶ್ಯರ ಜೊತೆ ಸಹಭೋಜನ ಮಾಡಿ ಸಮಾನತೆ ಸಾಬೀತುಪಡಿಸಿದ್ದರು ಎಂದರು.
ಪ್ರತಿಪಕ್ಷದ ನಾಯಕ ಅಬ್ದುಲ್‌ವಾಜಿದ್ ಮಾತನಾಡಿ, ಪೇಜಾವರ ಶ್ರೀಗಳು ಎಲ್ಲ ಧರ್ಮಗಳ ಜತೆ ಮುಸ್ಲಿಂ ಸಮುದಾಯದ ಬಗ್ಗೆಯೂ ಕಾಳಜಿ ವಹಿಸಿದ್ದರು. ರಂಜಾನ್ ಸಂದರ್ಭದಲ್ಲಿ ಉಡುಪಿಯಲ್ಲಿ ಇಫ್ತಾರ್ ಕೂಟವನ್ನು ಆಯೋಜನೆ ಮಾಡಿದ್ದರು. ದಲಿತರ ಮನೆಗೆ ತೆರಳಿ ನಾವಿದ್ದೇವೆ ಎಂದು ಸಾರಿದ್ದರು. ಮಿಗಿಲಾಗಿ ಅವರು ಮುಸ್ಲಿಂರೊಬ್ಬರನ್ನು ತಮ್ಮ ಕಾರಿನ ವಾಹನ ಚಾಲಕರನ್ನಾಗಿ ನೇಮಿಸಿಕೊಂಡು ಧರ್ಮಸಹಿಷ್ಣುತೆ ಮೆರೆದಿದ್ದರು ಎಂದು ಹೇಳಿದರು.
ಮೇಯರ್ ಎಂ.ಗೌತಮ್‌ಕುಮಾರ್ ಮಾತನಾಡಿದರು. ಶ್ರೀಗಳ ನಿಧನಕ್ಕೆ ಸದಸ್ಯರಾದ ಕಟ್ಟೆ ಸತ್ಯನಾರಾಯಣ, ಉಮೇಶ್ ಶೆಟ್ಟಿ, ವಾಣಿರಾವ್, ನರಸಿಂಹನಾಯಕ್, ಡಾ.ಎಸ್.ರಾಜು, ಲಕ್ಷ್ಮೀನಾರಾಯಣ (ಗುಂಡಣ್ಣ), ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್, ಪಾರ್ಥಿಬರಾಜನ್ ಸೇರಿದಂತೆ ಹಲವರು ಪಾಲಿಕೆ ಸದಸ್ಯರು ಸಂತಾಪ ಸೂಚಿಸಿದರು. ಇದೇ ವೇಳೆ ಬಿಬಿಎಂಪಿ ಮಾಜಿ ಸದಸ್ಯ ನಾಗರತ್ನ ನಾಗರಾಜ್ ಅವರ ನಿಧನಕ್ಕೂ ಸಂತಾಪ ಸೂಚಿಸಲಾಯಿತು.
ಪಾಲಿಕೆ ಸಭೆಯಲ್ಲಿ ಅನರ್ಹತೆಯ ಬಗ್ಗೆ ಸದ್ದು
ಬೆಂಗಳೂರು: ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಂಗಳವಾರ ಹಲವು ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ ಆರೋಪದ ಮೇಲೆ ಕಾಂಗ್ರೆಸ್‌ನ ಸದಸ್ಯರನ್ನು ಅನರ್ಹ ಮಾಡುವಂತೆ ವಿರೋಧ ಪಕ್ಷದ ನಾಯಕ ಅಬ್ದುಲ್‌ವಾಜಿದ್ ಅವರು ಪತ್ರ ಬರೆದಿರುವುದಕ್ಕೆ ಸದಸ್ಯರಾದ ಎಂ.ವೇಲುನಾಯಕರ್ ಹಾಗೂ ಜಿ.ಕೆ ವೆಂಕಟೇಶ್ ಸಭೆ ಪ್ರಾರಂಭವಾಗುವುದಕ್ಕೂ ಮುನ್ನ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಅವರನ್ನು ಕಾಲೆಳೆದರು.
ಎಂ.ವೇಲುನಾಯಕರ್ ಮಾತನಾಡಿ, ಇವರಿಗೆ (ಅಬ್ದುಲ್‌ವಾಜಿದ್) ಬಿಜೆಪಿಯಲ್ಲಿರುವವರು ಸಭ್ಯರು ಎಂದು ಹೇಳಬಾರದು. ಹಾಗೆ ಹೇಳಿದರೆ ನೋಟಿಸ್ ನೀಡುತ್ತಾರೆ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ನಾವು ಸಭ್ಯರು ಎಂದು ಈಗ ಗೊತ್ತಾಗಿದೆ ಎಂದು ಕಿಚಾಯಿಸಿದರು. ಆಡಳಿತ ಪಕ್ಷದ ಮಾಜಿ ನಾಯಕ ಎಂ. ಶಿವರಾಜು ಅವರಿಗೆ ಇತ್ತೀಚೆಗೆ ನಡೆದ ಮಹಾಲಕ್ಷ್ಮೀ ಲೇಔಟ್ ಉಪಚುನಾವಣೆಯಲ್ಲಿ ಸಹಾಯ ಮಾಡಬಹುದಿತ್ತು. ಈ ಕ್ಷೇತ್ರದಲ್ಲಿನ ಅಲ್ಪಸಂಖ್ಯಾತರಿಗೆ ಶಿವರಾಜು ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಏಕ್‌ವೊàಟ್ ದಾಲೋ ಹಮಾರ ಆದ್ಮಿ (ಮತಹಾಕಿ) ಅಂದಿದ್ದರೆ ಶಿವರಾಜು ಗೆದ್ದು ಬಿಡುತ್ತಿದ್ದರು ಎಂದು ಹೇಳಿದರು.
“ನಮ್ಮನ್ನು ಹೇಗೆ ಅನರ್ಹ ಮಾಡಿ ಎಂದು ದೂರು ಕೊಡುತ್ತಾರೆ. ನಾವೇನು ಪಕ್ಷ ವಿರೋಧಿ ಕೆಲಸ ಮಾಡಿದ್ದೇವೆ ಎಂದು ಎಂ.ವೇಲುನಾಯಕರ್ ಹಾಗೂ ಜಿ.ಕೆ ವೆಂಕಟೇಶ್ ಎಂದು ಮೇಯರ್ ಅವರನ್ನು ಕೇಳಿದರು. “ನಮ್ಮನ್ನು ಅನರ್ಹಗೊಳಿಸಿ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದಾರೆ. ಯಾವ ಆಧಾರದ ಮೇಲೆ ದೂರು ನೀಡುತ್ತಾರೆ’ಎಂದು ಏರುದನಿಯಲ್ಲಿ ಪ್ರಶ್ನಿಸಿದರು. ಬೇರೆ ಪಕ್ಷದ ಸದಸ್ಯರೊಂದಿಗೆ ಮಾತನಾಡ ಬಾರದಾ?. ನಾವು ಪಕ್ಷವಿರೋಧಿ ಚುಟುವಟಿಕೆಯಲ್ಲಿ ಭಾಗವಹಿಸಿರುವುದಕ್ಕೆ ಸಾಕ್ಷಿ ಏನಿದೆ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ನಾವಿದ್ದೇವೆ ಬಿಡಿ, ಅನರ್ಹತೆ ಮಾಡುವುದಕ್ಕೆ ಬರುವುದಿಲ್ಲ ಎಂದರು.
ಬಿಜೆಪಿ ಸದಸ್ಯರ ಬೆಂಬಲಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್, ಅವಕಾಶ ನೀಡಿದರೆ ನಾನು ಎಲ್ಲ ದಾಖಲೆಯನ್ನು ಸಭೆಗೆ ಒದಗಿಸುತ್ತೇನೆ. ಮೇಯರ್ ಅವಕಾಶ ಮಾಡಿ ಕೊಡುತ್ತಾರೆಯೇ ಎಂದರು. ಆದರೆ, ಮೇಯರ್ ಚರ್ಚೆಗೆ ಅವಕಾಶ ನೀಡಲಿಲ್ಲ. ಶೋಕಾಚರಣೆ ಇರುವ ಹಿನ್ನೆಲೆಯಲ್ಲಿ ಯಾವುದೇ ಚರ್ಚೆಗೆ ಅವಕಾಶವಿಲ್ಲ ಎಂದು ಸಭೆ ಮುಂದೂಡಿ ದರು.
ಪಾಲಿಕೆ ಆಸ್ಪತ್ರೆಯಲ್ಲಿ ಜನಿಸುವ ಹೆಣ್ಣು ಮಕ್ಕಳಿಗೆ ಒಂದು ಲಕ್ಷ ರೂ. ಬಾಂಡ್: ಬಿಬಿಎಂಪಿಯ ಎಲ್ಲ ಹೆರಿಗೆ ಆಸ್ಪತ್ರೆಗಳಲ್ಲಿ ಜನಿಸುವ ಹೆಣ್ಣು ಮಕ್ಕಳಿಗೆ ಮಹಾಲಕ್ಷ್ಮೀ ಬಾಂಡ್ ಯೋಜನೆಯ ಮೂಲಕ ಒಂದು ಲಕ್ಷ ರೂ. ಬಾಂಡ್ ನೀಡುವ ಯೋಜನೆ ಈ ವರ್ಷದಿಂದ ಜಾರಿಯಾಗಲಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಹೇಳಿದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಬಿಬಿಎಂಪಿಯ ಹೆರಿಗೆ ಆಸ್ಪತ್ರೆಗಳಲ್ಲಿ ವರ್ಷದಲ್ಲಿ ಅಂದಾಜು ಐದರಿಂದ ಆರು ಸಾವಿರ ಹೆಣ್ಣುಮಕ್ಕಳ ಜನನವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಯೋಜನೆ ಅನುಷ್ಠಾನ ಮಾಡಲಾಗಿದೆ. ಇದಕ್ಕಾಗಿ ಸದ್ಯಕ್ಕೆ ಪಾಲಿಕೆ 60 ಕೋಟಿ ರೂ. ಮೀಸಲಿಟ್ಟಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Kannada Rajyotsava: ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಕನ್ನಡ: ತುಷಾರ್
Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು
Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.