ಗುಂಡಿ ಮುಚ್ಚಲು 15 ದಿನ ಗಡುವು
Team Udayavani, Oct 10, 2017, 11:22 AM IST
ಬೆಂಗಳೂರು: ನಗರದಲ್ಲಿ ರಸ್ತೆಗುಂಡಿ ಸಮಸ್ಯೆಯಿಂದ ಜನತೆ ತೀವ್ರ ಪರದಾಡುತ್ತಿದ್ದು, ಸಾವುನೋವು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಗರವನ್ನು ಗುಂಡಿಮುಕ್ತ ಗೊಳಿಸಲು ಬಿಬಿಎಂಪಿಗೆ 15 ದಿನದ ಗಡುವು ನೀಡಿದ್ದು, ನಂತರವೂ ಗುಂಡಿಗಳು ಕಂಡುಬಂದರೆ ಎಂಜಿನಿಯರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ.
“ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಮಾತ್ರವಲ್ಲದೆ, ನಿರ್ವಹಣೆ ಅವಧಿಯಿದ್ದರೂ ಗುಂಡಿ ಮುಚ್ಚದ ಗುತ್ತಿಗೆದಾರರ ವಿರುದ್ಧ ಗುತ್ತಿಗೆ ಒಪ್ಪಂದದಂತೆ ಕ್ರಮ ಜರುಗಿಸಬೇಕು ಹಾಗೂ ಅಂಥ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು,’ ಎಂದು ಮುಖ್ಯಮಂತ್ರಿಗಳು, ಪಾಲಿಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ನಗರದ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ಐದು ದಿನಗಳ ಅಂತರದಲ್ಲಿ ಮೂರು ಮಂದಿ ಸಾವನ್ನಪ್ಪಿದ್ದು, ಜನ ವಾಹನದಲ್ಲಿ ಸಂಚರಿಸಲು ಆತಂಕಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆಯ ಗಂಭೀರತೆ ಅರಿತ ಮುಖ್ಯಮಂತ್ರಿಗಳು ನಾಯಂಡನಹಳ್ಳಿ ಬಳಿ ಭಾನುವಾರ ರಸ್ತೆ ಅಪಘಾತದಲ್ಲಿ ಮಹಿಳೆ ಮೃತಪಟ್ಟ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಗೃಹ ಕಚೇರಿ “ಕೃಷ್ಣಾ’ದಲ್ಲಿ ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.
ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ನಗರದಲ್ಲಿ ರಸ್ತೆಗುಂಡಿಗಳಿಂದ ಜನ ತೊಂದರೆ ಅನುಭವಿಸುತ್ತಿರುವುದು, ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ 15 ದಿನದಲ್ಲಿ ನಗರದಲ್ಲಿನ ಎಲ್ಲ ಗುಂಡಿಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಗಡುವು ಮುಗಿದ ಬಳಿಕವೂ ಗುಂಡಿಗಳಿರುವ ಬಗ್ಗೆ ಪಾಲಿಕೆ ಸದಸ್ಯರು ಇಲ್ಲವೇ ಶಾಸಕರು ದೂರು ನೀಡಿದರೆ ಸಂಬಂಧಪಟ್ಟ ವಲಯದ ಮುಖ್ಯ ಎಂಜಿನಿಯರ್‌ಗಳನ್ನೇ ಹೊಣೆ ಮಾಡಲಾಗುವುದು. ಸಂಬಂಧಪಟ್ಟ ಎಂಜಿನಿಯರ್‌ಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ವಾಡಿಕೆಗಿಂತ ಹೆಚ್ಚು ಮಳೆ: “ಆ.14ರಿಂದ ಅ.8ರವರೆಗೆ ವಾಡಿಕೆ ಮಳೆಗಿಂತ ಎರಡು, ಮೂರು ಪಟ್ಟು ಹೆಚ್ಚು ಮಳೆ ಸುರಿದಿದೆ. ಈ 55 ದಿನಗಳಲ್ಲಿ 42 ದಿನ ಮಳೆ ಸುರಿದಿದೆ. ಸತತ ಮಳೆಯಿಂದ ಗುಂಡಿ ದುರಸ್ತಿಪಡಿಸಿದರೂ ಕಿತ್ತು ಬರುವ ಕಾರಣ ದುರಸ್ತಿ ಕಾರ್ಯ ಸ್ಥಗಿತಗೊಂಡಿತ್ತು. ಆದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಅನಾಹುತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ತಕ್ಷಣವೇ ಗುಂಡಿ ಮುಚ್ಚುವ ಕಾರ್ಯ ಕೈಗೊಳ್ಳುವಂತೆ ಸೂಚಿಸಲಾಗಿದೆ. ಇದು ತಾತ್ಕಾಲಿಕವಾಗಿದ್ದು, ಮಳೆಗಾಲ ಮುಗಿದ ಬಳಿಕ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು,’ ಎಂದು ಸಿಎಂ ತಿಳಿಸಿದರು.
ಕೋಲ್ಡ್ ಮಿಕ್ಸ್ ಬಳಸಲು ಸೂಚನೆ: “ಸಾಮಾನ್ಯ ಸಂದರ್ಭದಲ್ಲಿ ಕೋಲ್ಡ್ ಮಿಕ್ಸ್ ಬಳಸಿ ಗುಂಡಿ ದುರಸ್ತಿಪಡಿಸಿದರೆ ಒಂದರಿಂದ ಎರಡು ವರ್ಷ ಬಾಳಿಕೆ ಬರುತ್ತದೆ. ಆದರೆ ಮಳೆ ಸುರಿಯುವಾಗ ಬಳಸಿದರೆ ಮೂರ್‍ನಾಲ್ಕು ತಿಂಗಳಷ್ಟೇ ಬಾಳಿಕೆ ಬರಲಿದೆ. ಸದ್ಯ ಕೋಲ್ಡ್ ಮಿಕ್ಸ್ ಬಳಸಿ ವೈಜ್ಞಾನಿಕವಾಗಿ ರಸ್ತೆಗಳ ದುರಸ್ತಿಪಡಿಸುವಂತೆ ಸೂಚನೆ ನೀಡಲಾಗಿದೆ. ಕಡಿಮೆ ಅಂತರದಲ್ಲಿ ಹಲವು ಗುಂಡಿಗಳು ಬಿದ್ದಿದ್ದರೆ ಅಷ್ಟೂ ಜಾಗಕ್ಕೂ ಸೇರಿದಂತೆ ಡಾಂಬರು ಹಾಕಿ ದುರಸ್ತಿಪಡಿಸಬೇಕು. ಮಳೆ ನಿಲ್ಲುತ್ತಿದ್ದಂತೆ ಡಾಂಬರು ಹಾಕುವಂತೆಯೂ ಸೂಚಿಸಲಾಗಿದೆ,’ ಎಂದು ಹೇಳಿದರು.
“ಬಿಬಿಎಂಪಿಯ ಎಲ್ಲ ಸದಸ್ಯರನ್ನು ಕರೆದು ಅವರ ವಾರ್ಡ್ ವ್ಯಾಪ್ತಿಯಲ್ಲಿನ ರಸ್ತೆಗುಂಡಿಗಳ ವಿವರ ಪಡೆದು ಅದನ್ನು ತ್ವರಿತವಾಗಿ ಮುಚ್ಚುವಂತೆ ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ಸೂಚಿಸುವಂತೆ ಮೇಯರ್‌ಗೆ ತಿಳಿಸಲಾಗಿದೆ. ಇತ್ತೀಚೆಗಷ್ಟೇ ಆಯ್ಕೆಯಾಗಿರುವ ಉತ್ಸಾಹಿ ಮೇಯರ್‌ಗೆ, ನಗರದ ಎಲ್ಲೆಡೆ ಸಂಚರಿಸಿ, ಪರಿಶೀಲನೆ ನಡೆಸಿ ಗುಂಡಿ ದುರಸ್ತಿ ಕಾರ್ಯದ ಮೇಲ್ವಿಚಾರಣೆ ನಡೆಸುವಂತೆ ಸೂಚನೆ ನೀಡಲಾಗಿದೆ,’ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ವೈಟ್ ಟಾಪಿಂಗ್ ಪರಿಹಾರ: “ನಗರದ ಕೆಲ ಪ್ರಮುಖ ರಸ್ತೆಗಳನ್ನು 1000 ಕೋಟಿ ರೂ. ವೆಚ್ಚದಲ್ಲಿ ವೈಟ್ ಟಾಪಿಂಗ್ (ಕಾಂಕ್ರಿಟ್ ಮೇಲ್ಪದರ) ವಿಧಾನದಡಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ನಗರದಲ್ಲಿ 1,600 ಕಿ.ಮೀ. ಉದ್ದದ ಪ್ರಮುಖ ರಸ್ತೆಗಳಿದ್ದು, ಈ ಎಲ್ಲ ರಸ್ತೆಗಳನ್ನು ಹಂತ ಹಂತವಾಗಿ ವೈಟ್ ಟಾಪಿಂಗ್ ವಿಧಾನದಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ವಿಧಾನದಲ್ಲಿ ಅಭಿವೃದ್ಧಿಪಡಿಸಿದರೆ ಗುತ್ತಿಗೆ ಸಂಸ್ಥೆಯೇ 10 ವರ್ಷ ನಿರ್ವಹಣೆ ಮಾಡಲಿದ್ದು, 30 ವರ್ಷ ಬಾಳಿಕೆ ಬರಲಿವೆ,’ ಎಂದು ಹೇಳಿದರು.
“ಈಗಾಗಲೇ ನಗರೋತ್ಥಾನ ಯೋಜನೆಯಡಿ ವಾರ್ಡ್ ರಸ್ತೆಗಳ ಅಭಿವೃದ್ಧಿಗೆ 700 ಕೋಟಿ ರೂ. ಅನುದಾನ ನೀಡಲಾಗಿದೆ. ಅದರಂತೆ ಹಳೆಯ ಪ್ರದೇಶದ ವಾರ್ಡ್‌ಗಳಿಗೆ ಕೋಟಿ ರೂ. ಹಾಗೂ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳ ವಾರ್ಡ್‌ಗಳಿಗೆ 3 ಕೋಟಿ ರೂ. ನೀಡಲಾಗುತ್ತಿದೆ,’ ಎಂದು ಹೇಳಿದರು.
ಕಾಮಗಾರಿ ಸ್ಥಳದಲ್ಲಿ ಡಾಂಬರು: “ನಗರದಲ್ಲಿ ಸದ್ಯ ನಮ್ಮ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿರುವ ರಸ್ತೆಗಳಲ್ಲಿ ಕೂಡಲೇ ಡಾಂಬರೀಕರಣ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ನಾಯಂಡನಹಳ್ಳಿಯಿಂದ ಕೆಂಗೇರಿವರೆಗಿನ ಮೈಸೂರು ರಸ್ತೆಯ ಎರಡೂ ಬದಿ ಡಾಂಬರೀಕರಣಕ್ಕೆ ಸೂಚಿಸಲಾಗಿದೆ. ಮೆಟ್ರೋ ಕಾಮಗಾರಿ ನಡೆದಿರುವ ರಸ್ತೆಯಲ್ಲಿ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಕ್ರಮ ವಹಿಸುವಂತೆಯೂ ಆದೇಶಿಸಲಾಗಿದೆ,’ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಮೇಯರ್ ಆರ್.ಸಂಪತ್‌ರಾಜ್, ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಇತರರು ಉಪಸ್ಥಿತರಿದ್ದರು.
ತುರ್ತು ಪರಿಹಾರಕ್ಕೆ 117 ಕೋಟಿ ರೂ.: ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ನಿರಂತರವಾಗಿ ಹಾನಿ ಸಂಭವಿಸುತ್ತಿರುವ ಎಚ್‌ಎಸ್‌ಆರ್ ಲೇಔಟ್ ಸೇರಿದಂತೆ ಆಯ್ದ ಪ್ರದೇಶಗಳಲ್ಲಿ ಮಳೆ ನೀರು ಕಾಲುವೆ ದುರಸ್ತಿ ಹಾಗೂ ಅಭಿವೃದ್ಧಿಗಾಗಿ ಸರ್ಕಾರದಿಂದ 117 ಕೋಟಿ ರೂ. ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
“ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಮಳೆ ನೀರು ಕಾಲುವೆ ಅಭಿವೃದ್ಧಿಗೆ 25 ಕೋಟಿ ರೂ., ಕೆ.ಆರ್.ಪುರಕ್ಕೆ 30 ಕೋಟಿ ರೂ. ಕೋರಮಂಗಲಕ್ಕೆ 25 ಕೋಟಿ ರೂ., ಯಶವಂತಪುರಕ್ಕೆ 17 ಕೋಟಿ ರೂ. ಹಾಗೂ ರೊಬೋಟಿಕ್ ಎಕ್ಸವೇಟರ್ ಬಳಕೆಗೆ 20 ಕೋಟಿ ರೂ. ಅನುದಾನವನ್ನು ಹೆಚ್ಚುವರಿಯಾಗಿ ನೀಡಲಾಗುವುದು. ಭಾರಿ ಮಳೆಯಿಂದ ಹೆಚ್ಚು ಅನಾಹುತ ಸಂಭವಿಸಿದ ಸ್ಥಳಗಳಲ್ಲಿ ಸಮಸ್ಯೆ ನಿವಾರಣೆಗೆ ಆದ್ಯತ ನೀಡಲಾಗಿದೆ’ ಎಂದು ತಿಳಿಸಿದರು.
ಬಿಜೆಪಿಯವರು ಟೀಕೆ ಮಾಡುತ್ತಾರೆ. ಪಾಲಿಕೆಯಲ್ಲಿ ಬಿಜೆಪಿಯ 100 ಸದಸ್ಯರಿದ್ದು, ನಗರದಲ್ಲಿ 12 ಬಿಜೆಪಿ ಶಾಸಕರಿದ್ದಾರೆ. ಅವರಿಗೆ ಜವಾಬ್ದಾರಿಯಿಲ್ಲವೆ? ರಸ್ತೆಗುಂಡಿ ದುರಸ್ತಿಪಡಿಸುವುದು ಸರ್ಕಾರದ ಜವಾಬ್ದಾರಿ. ಅದನ್ನು ನಿರ್ವಹಿಸಲಿದೆ. ಆದರೆ ಬೆಂಗಳೂರಿನ ಜನತೆಯಿಂದ ಆಯ್ಕೆಯಾದ ಬಿಜೆಪಿ ಶಾಸಕರು, ಪಾಲಿಕೆ ಸದಸ್ಯರಿಗೂ ಜವಾಬ್ದಾರಿ ಇರಬೇಕು.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Podcast: ಗಾಂಧೀಜಿ ಎಂದೂ ಟೋಪಿ ಧರಿಸುತ್ತಿರಲಿಲ್ಲ, ಆದರೆ ದೇಶದಲ್ಲಿ “ಗಾಂಧಿ ಟೋಪಿ’ ಜನಜನಿತ!
ಅಂದು ಪ್ರತಾಪ್ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?
New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ
Allu Arjun; ಜಾಮೀನು ಷರತ್ತು ಸಡಿಲಿಕೆ: ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ
VijayHazareTrophy: ಪಡಿಕ್ಕಲ್ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.