2 ಬಾರಿ ಅಪಹರಣಕ್ಕೆ ಯತ್ನ: ಗುಂಡೇಟು
Team Udayavani, Nov 13, 2019, 3:10 AM IST
ಬೆಂಗಳೂರು/ಟಿ.ದಾಸರಹಳ್ಳಿ: ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಶುದ್ಧ ಕುಡಿವ ನೀರು ಪೂರೈಕೆ ಘಟಕ ಮಾಲೀಕನ ಪುತ್ರನ ಅಪಹರಣಕ್ಕೆ ವಿಫಲ ಯತ್ನ ನಡೆಸಿ, ಅವರ ಮನೆ ಮುಂದೆ ನಿಂತಿದ್ದ ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ದಾಂಧಲೆ ನಡೆಸಿದ ಇಬ್ಬರು ಪುಂಡರಿಗೆ ಸೋಲದೇವನಹಳ್ಳಿ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ.
ತಮಿಳುನಾಡಿನ ತಿರುನೆಲ್ವೇಲಿ ಮೂಲದ ಮೊಹಮ್ಮದ್ ರಿಯಾಜ್ (21) ಮತ್ತು ಮೊಹಮ್ಮದ್ ಬಾಸಿತ್ (23) ಎಂಬವರಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಇದೇ ವೇಳೆ ಆರೋಪಿಗಳ ಹಲ್ಲೆಯಿಂದ ಗಾಯಗೊಂಡಿದ್ದ ಹೆಡ್‌ಕಾನ್‌ಸ್ಟೆಬಲ್ ಶ್ರೀನಿವಾಸ್ ಮತ್ತು ಕಾನ್‌ಸ್ಟೆಬಲ್ ಮಲ್ಲಿಕಾರ್ಜುನ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳು ಟಿ.ದಾಸರಹಳ್ಳಿ ನಿವಾಸಿ ಬಿಟಿವಿ ಶ್ರೀನಿವಾಸರಾಜು ಅವರ ಪುತ್ರನ ಅಪಹರಣಕ್ಕೆ ವಿಫಲ ಯತ್ನಿಸಿದ್ದರು ಎಂದು ಪೊಲೀಸರು ಹೇಳಿದರು.
ಬಿಟಿವಿ ಶ್ರೀನಿವಾಸ್ ರಾಜು ಮಹೇಶ್ವರಿ ದೇವಾಲಯ ರಸ್ತೆಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಘಟಕ ಹೊಂದಿದ್ದು, ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಪುತ್ರ ಶರತ್ ರಾಜು ಪದವೀಧರನಾಗಿದ್ದು, ತಂದೆಯ ಜತೆ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಆರೋಪಿ ರಿಯಾಜ್ ಒಂದೂವರೆ ವರ್ಷದ ಹಿಂದೆ ನಗರಕ್ಕೆ ಬಂದಿದ್ದು, ಹೋಟೆಲ್‌ವೊಂದರಲ್ಲಿ ರಿಯಾಜ್ ಮತ್ತು ಬಾಸಿತ್ ಪರಿಚಯವಾಗಿದೆ. ಬಳಿಕ ಶ್ರೀನಿವಾಸರಾಜು ಅವರ ನೀರು ಪೂರೈಕೆ ಘಟಕದ ಸಮೀಪದಲ್ಲಿರುವ ಅಕ್ಕಿ ಅಂಗಡಿಯೊಂದರಲ್ಲಿ ಬಾಸಿತ್‌ಗೆ ರಿಯಾಜ್ ಕೆಲಸ ಕೊಡಿಸಿದ್ದ.
ಸಾಮಾಜಿಕ ಜಾಲತಾಣ ನೋಡಿ ಕೃತ್ಯಕ್ಕೆ ಸಂಚು: ಬಡತನದ ಹಿನ್ನೆಲೆಯುಳ್ಳ ಆರೋಪಿಗಳು ಲಕ್ಷಾಂತರ ರೂ. ಸಂಪಾದನೆ ಮಾಡಲು ಸಂಚು ರೂಪಿಸಿದ್ದರು. ಅದೇ ವೇಳೆ ಶರತ್ ರಾಜು ಐಷಾರಾಮಿ ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಓಡಾಡುತ್ತಿದ್ದರು. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಾಹನಗಳ ಜತೆಗಿದ್ದ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು.
ಅದನ್ನು ಗಮನಿಸಿದ್ದ ಆರೋಪಿಗಳು ಕಳೆದ ಒಂದೂವರೆ ತಿಂಗಳಿಂದ ಶರತ್ ರಾಜುನ ಚಲನವಲನಗಳ ಮೇಲೆ ನಿಗಾವಹಿಸಿದ್ದು, ಕೆಲ ದಿನಗಳ ಹಿಂದೆ ಶರತ್‌ಗೆ ಕರೆ ಮಾಡಿ, “ನಿನ್ನನ್ನು ಅಪಹರಣ ಮಾಡುತ್ತೇವೆ. ನಾವು ಕೇಳಿದಷ್ಟು ಹಣ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು.’ ಆದರೆ, ಯಾರೋ ಸ್ನೇಹಿತರೆ ಕರೆ ಮಾಡಿ ತಮಾಷೆ ಮಾಡುತ್ತಿದ್ದಾರೆ ಎಂದು ಭಾವಿಸಿ ಶರತ್ ನಿರ್ಲಕ್ಷ್ಯ ಮಾಡಿದ್ದರು. ಆಗ ಕುಪಿತಗೊಂಡ ಆರೋಪಿಗಳು ಎರಡು ಬಾರಿ ಶರತ್ ರಾಜುನ ಅಪಹರಣಕ್ಕೆ ವಿಫಲ ಯತ್ನ ನಡೆಸಿದ್ದರು ಎಂದು ಪೊಲೀಸರು ಹೇಳಿದರು.
ಮನೆ ಮಂದೆ ನಿಂತಿದ್ದ ವಾಹನಗಳಿಗೆ ಬೆಂಕಿ: ಸೋಮವಾರ ರಾತ್ರಿಯೂ ಶರತ್ ರಾಜುನನ್ನು ಅಪಹರಣಕ್ಕೆ ಯತ್ನಿಸಿದ್ದ ಆರೋಪಿಗಳು ಅದು ಸಾಧ್ಯವಾಗದಿದ್ದಾಗ, ತಡರಾತ್ರಿ ಎರಡು ಗಂಟೆ ಸುಮಾರಿಗೆ ಅವರ ಮನೆ ಮುಂದಿನ ಆವರಣದಲ್ಲಿ ನಿಂತಿದ್ದ ನಾಲ್ಕೈದು ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಬೆಂಕಿಯ ಕಿನ್ನಾಲಿಗೆಯಿಂದ ಶ್ರೀನಿವಾಸ ಮನೆಯ ಮುಂಭಾಗದ ಗೋಡೆ, ಕಿಟಕಿಗಳು, ವಿದ್ಯುತ್ ಮೀಟರ್ ಬೋರ್ಡ್‌ಗೂ ಹಾನಿಯಾಗಿದೆ. ಕಿಟಕಿಯ ಗಾಜು ಹೊಡೆದ ಶಬ್ಧ ಕೇಳಿ ಹೊರಬಂದ ಶ್ರೀನಿವಾಸ ಕುಟುಂಬ ಸದಸ್ಯರು, ಸ್ಥಳೀಯ ನೆರವಿನಿಂದ ಶ್ರೀನಿವಾಸ್ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಬಳಿಕ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದೆ.
ಆರೋಪಿಗಳ ಕಾಲಿಗೆ ಗುಂಡೇಟು: ಈ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಸೋಲದೇವನಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಸಿ.ಬಿ.ಶಿವಸ್ವಾಮಿ ಮತ್ತು ಬಾಗಲಗುಂಟೆ ಠಾಣೆ ಇನ್‌ಸ್ಪೆಕ್ಟರ್ ವೆಂಕಟೇಗೌಡ ಹಾಗೂ ಪೀಣ್ಯ ಠಾಣೆ ಪಿಐ ನೇತೃತ್ವದಲ್ಲಿ ಮೂರು ವಿಶೇಷ ತಂಡ ರಚನೆ ಮಾಡಲಾಗಿತ್ತು. ಈ ತಂಡ ಆರೋಪಿಗಳ ಬಗ್ಗೆ ಕೆಲವೇ ಹೊತ್ತಿನಲ್ಲಿ ಮಾಹಿತಿ ಸಂಗ್ರಹಿಸಿ ಚಿಕ್ಕಸಂದ್ರದ ಸಮೀಪ ಬಂಧಿಸಿತ್ತು.
ನಂತರ ಅಡಗಿಸಿಟ್ಟಿದ್ದ ಮಾರಕಾಸ್ತ್ರಗಳು ಹಾಗೂ ಪೆಟ್ರೋಲ್ ಕ್ಯಾನ್ ವಶಕ್ಕೆ ಪಡೆಯಲು ಆಚಾರ್ಯ ಕಾಲೇಜು ಬಳಿಯ ನೀಲಗಿರಿ ತೋಪಿಗೆ ಕರೆದೊಯ್ದಾಗ ಆರೋಪಿಗಳು ಹೆಡ್‌ಕಾನ್‌ಸ್ಟೆಬಲ್ ಶ್ರೀನಿವಾಸ್ ಮತ್ತು ಕಾನ್‌ಸ್ಟೆಬಲ್ ಮಲ್ಲಿಕಾರ್ಜುನ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಶರಣಾಗುವಂತೆ ತಿಳಿಸಿದ ಪಿಐ ಶಿವಸ್ವಾಮಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಮತ್ತೆ ಹಲ್ಲೆಗೆ ಮುಂದಾದ ಅರೋಪಿಗಳ ಮೇಲೆ ಆತ್ಮರಕ್ಷಣೆಗಾಗಿ ರಿಯಾಜ್‌ನ ಬಲಗಾಲಿಗೆ ಮತ್ತು ಬಾಸಿತ್‌ನ ಎಡಗಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ. ಆರೋಪಿಗಳು ಐಷಾರಾಮಿ ಜೀವನ ಹಾಗೂ ಸಾಲ ತೀರಿಸಲು ಕೃತ್ಯಕ್ಕೆ ಮುಂದಾಗಿದ್ದರು ಎಂಬುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದರು.
ಬೆಂಕಿ ಹಚ್ಚಿ ಶರತ್‌ಗೆ ಕರೆ: ತಡರಾತ್ರಿ ಎರಡು ಗಂಟೆ ಸುಮಾರಿಗೆ ವಾಹನಗಳಿಗೆ ಬೆಂಕಿ ಹಚ್ಚಿದ್ದ ಆರೋಪಿಗಳು ಅನಂತರ ಶರತ್ ರಾಜುಗೆ ಸುಮಾರು ಹತ್ತಕ್ಕೂ ಅಧಿಕ ಬಾರಿ ಕರೆ ಮಾಡಿದ್ದಾರೆ. ಬಳಿಕ ಕರೆ ಸ್ವೀಕರಿಸಿದಾಗ, “ಈಗಾಗಲೇ ನಿಮ್ಮ ಮನೆ ಮುಂದಿನ ವಾಹನಗಳಿಗೆ ಬೆಂಕಿ ಹಚ್ಚಿದ್ದೇವೆ. ಒಂದು ವೇಳೆ 50 ಲಕ್ಷ ರೂ. ಕೊಡದಿದ್ದರೆ, ನಿನ್ನನ್ನು ಅಪಹರಣ ಮಾಡಿ, ನಿಮ್ಮ ತಂದೆ-ತಾಯಿಯನ್ನು ಕೊಲೆ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿದ್ದರು. ಆ ಮಾಹಿತಿ ಆಧರಿಸಿ ಆರೋಪಿಗಳ ಸಿಡಿಆರ್ ಪರಿಶೀಲಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿತ್ತು ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.