2021 ಅನಧಿಕೃತ ಮಳಿಗೆಗಳ ತೆರವು
Team Udayavani, Mar 30, 2019, 2:26 PM IST
ಬೆಂಗಳೂರು: ನಗರದ ಪ್ರಖ್ಯಾತ ಕೃಷ್ಣರಾಜೇಂದ್ರ ಮಾರುಕಟ್ಟೆ ಸುತ್ತಮುತ್ತ ನಿರ್ಮಾಣವಾಗಿದ್ದ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶದ ಮೇರೆಗೆ ಬಿಬಿಎಂಪಿ ಶುಕ್ರವಾರ ಕೆ.ಆರ್.ಮಾರುಕಟ್ಟೆಯಲ್ಲಿನ 2021 ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಿದೆ.
ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಬಹುದೊಡ್ಡ ಕಾರ್ಯಾಚರಣೆ ಇದಾಗಿದೆ. ಬೆಳಗ್ಗೆ 8 ಗಂಟೆಗೆ ಆರಂಭವಾದ ಕಾರ್ಯಾಚರಣೆ, ಸಂಜೆವರೆಗೂ ನಡೆಯಿತು. ತೆರವು ಕಾರ್ಯಾಚರಣೆಯಿಂದ ಮಾರುಕಟ್ಟೆಯಲ್ಲಿ ಅಘೋಷಿತ ಬಂದ್ ಸ್ಥಿತಿಯಿತ್ತು. ಹಣ್ಣು, ತರಕಾರಿ ಮತ್ತು ಸಾಮಗ್ರಿಗಳು ಸಿಕ್ಕಬೆಲೆಗೆ ಮಾರಾಟವಾದವು.
ಕೆಲವು ಕಡೆ ವ್ಯಾಪಾರಿಗಳು ಉಚಿತವಾಗಿ ನೀಡಿದರೆ, ಇನ್ನೂ ಕೆಲವು ಕಡೆ ತೆರವು ವೇಳೆ ನೆಲಕ್ಕೆ ಬಿದ್ದ ಸಾಮಗ್ರಿಗಳನ್ನು ಸಾರ್ವಜನಿಕರು ಬಾಚಿಕೊಂಡರು. ಇದೇ ವೇಳೆ ಮಳಿಗೆಗಳ ಮುಂಭಾಗದಲ್ಲಿ ಅಳವಡಿಸಿದ್ದ ಸ್ಟೀಲ್ ಸ್ಟ್ರಕ್ಚರ್, ಟೇಬಲ್‌ಗಳನ್ನು ತೆರವುಗೊಳಿಸಲಾಯಿತು.
ನೆಲ ಮಾಳಿಗೆಯಲ್ಲಿದ್ದ ಹೂ ಮಾರುಕಟ್ಟೆಗೆ ಹೋಗಲು ಅನಧಿಕೃತವಾಗಿ ನಿರ್ಮಿಸಿದ್ದ ಮೆಟ್ಟಿಲು ಸೇರಿದಂತೆ ಸಜ್ಜಾ, ಶೆಡ್‌ಗಳನ್ನು ತೆರವುಗೊಳಿಸಲಾಯಿತು. ಕಾರ್ಯಚರಣೆಗಾಗಿ ಬಿಬಿಎಂಪಿಯ 390 ಸಿಬ್ಬಂದಿ, 30 ಮಾರ್ಷಲ್, ಪೊಲೀಸ್ ಮತ್ತು ಸಂಚಾರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. 48 ಟ್ರ್ಯಾಕ್ಟರ್, 15 ಲಾರಿ, 8 ಕಾಂಪ್ಯಾಕ್ಟರ್, 8 ಜೆಸಿಬಿಗಳನ್ನು ಬಳಸಲಾಯಿತು.
ನೆಲೆ ಕಳೆದುಕೊಂಡ ಸಾವಿರಕ್ಕೂ ಹೆಚ್ಚು ಕುಟುಂಬಗಳು: ಬಿಬಿಎಂಪಿಯ ಬೃಹತ್ ಕಾರ್ಯಾಚರಣೆಯಿಂದ ಸಾರ್ವಜನಿಕರು ಮಾರುಕಟ್ಟೆಯಲ್ಲಿ ಮುಕ್ತವಾಗಿ ನಡೆದಾಡಲು ಸ್ಥಳ ಲಭ್ಯವಾಗಿದೆ. ಇನ್ನು ಮುಂದೆ ಸ್ವಚ್ಛತೆ ಕಾಪಾಡುವುದು ಸುಲಭವಾಗಬಹುದು.
ಆದರೆ, ಬೀದಿ ವ್ಯಾಪಾರವನ್ನೇ ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳ ಬದುಕು ಬೀದಿಗೆ ಬಿದ್ದಿದೆ. ಅಧಿಕಾರಗಳು ತೆರವು ಕಾರ್ಯಾಚರಣೆ ನಡೆಸುವಾಗ ಮಳಿಗೆ ಜತೆ, ಅದರೊಳಗಿದ್ದ ಬೆಲೆ ಬಾಳುವ ಸಾಮಗ್ರಿಗಳಳೂ ತೆರವಾಗಿದ್ದು, ಕೆಲ ಹಿರಿಯ ನಾಗರಿಕರು ತಲೆ ಮೇಲೆ ಕೈ ಹೊತ್ತು ದಿಕ್ಕುತೋಚದೆ ನಿಂತಿದ್ದ ದೃಶ್ಯ ಮನಸು ಕಲಕುವಂತಿತ್ತು.
ಕೆಲವು ವ್ಯಾಪಾರಿಗಳು ನೆಲಸಮವಾದ ಮಳಿಗೆಯ ಕೆಳಗೆಬಿದ್ದ ವಸ್ತುಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದರಾದರೂ ಅದು ಫಲಕೊಡಲಿಲ್ಲ. “ಸಾಲ ಮಾಡಿ ಬಂಡವಾಳ ಹಾಕಿದ್ದೇವೆ. ನಮ್ಮ ವಸ್ತುಗಳನ್ನು ತೆಗೆದುಕೊಳ್ಳಲಾದರೂ ಸಮಯ ಕೊಡಿ’ ಎಂದು ವ್ಯಾಪಾರಿಗಳು ಅಧಿಕಾರಿಗಳ ಬಳಿ ಅಂಗಲಾಚಿದರು.
ತೆರವಿನಲ್ಲೂ ತಾರತಮ್ಯ – ಆರೋಪ: ಒತ್ತುವರಿ ತೆರವು ವೇಳೆ ಪಾಲಿಕೆ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂತು. ಕೇವಲ ಬಡವರನ್ನು ಗುರಿಯಾಗಿಸಿಕೊಂಡು ತೆರವು ಮಾಡಲಾಗುತ್ತಿದೆ.
ಮಾರುಕಟ್ಟೆಯಲ್ಲಿ ಹಲವು ವ್ಯಾಪಾರಿಗಳ ಬಳಿ ಲೈಸೆನ್ಸೇ ಇಲ್ಲ. ವೆಂಟಿಲೇಷನ್‌ಗೆಂದು ಬಿಟ್ಟಿದ್ದ ಜಾಗದಲ್ಲೂ ಅನಧಿಕೃತವಾಗಿ 38 ಮಳಿಗೆ ನಿರ್ಮಿಸಿರುವವರ ವಿರುದ್ಧ ಅಧಿಕಾರಿಗಳೇಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಅನಧಿಕೃತ ಮಳಿಗೆಗಳಿಂದಲೂ ಬಾಡಿಗೆ ಸಂಗ್ರಹ!: ಯಾವ ಮಳಿಗೆ ಅಧಿಕೃತ ಮತ್ತು ಯಾವುದು ಅನಧಿಕೃತ ಎಂಬ ಸ್ಪಷ್ಟತೆ ಇಲ್ಲದೆ, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿಕೊಂಡೇ ಕಾರ್ಯಾಚರಣೆ ನಡೆಸಿದರು. ಎಷ್ಟು ಅನಧಿಕೃತ ಮಳಿಗೆಗಳಿವೆ ಎನ್ನುವ ಪ್ರಶ್ನೆಗೆ ಇನ್ನಷ್ಟೇ ಪರಿಶೀಲಿಸಬೇಕಿದೆ ಎಂಬ ಉತ್ತರ ಬಂತು.
ಅನಧಿಕೃತ ಮಳಿಗೆಗಳಿಂದಲೂ ಬಿಬಿಎಂಪಿ ಅಧಿಕಾರಿಗಳು ಬಾಡಿಗೆ ಸಂಗ್ರಹಿಸಿರುವುದು, ಈ ಮಳಿಗೆಗಳಿಗೆ ಬೆಸ್ಕಾಂ ವಿದ್ಯುತ್ ಸಂಪರ್ಕ ನೀಡಿದ್ದರು. ಮಾರುಕಟ್ಟೆಯಲ್ಲಿ ಕೆಲವು ತಾತ್ಕಾಲಿಕ ಶೆಡ್‌ಗಳಿಗೆ ಅನುಮತಿ ನೀಡಿರುವ ಪಾಲಿಕೆ, ಅವುಗಳಿಂದಲೂ ಬಾಡಿಗೆ ಪಡೆಯುತ್ತಿದೆ. ಯಾವ ಮಾನದಂಡಗಳ ಮೇಲೆ ಜಾಗ ನೀಡಲಾಗಿದೆ ಎನ್ನುವುದಕ್ಕೆ ಅಧಿಕಾರಿಗಳ ಬಳಿ ಉತ್ತರವಿಲ್ಲ.
ಇಷ್ಟು ದೊಡ್ಡ ಮಟ್ಟದ ಒತ್ತುವರಿಯಲ್ಲಿ ಅಧಿಕಾರಿಗಳ ಪಾಲೂ ಇರುವುದು ಅಧಿಕಾರಿಗಳ ಮತ್ತು ವ್ಯಾಪಾರಿಗಳ ನಡುವಿನ ಸಂಭಾಷಣೆಯಿಂದ ಸ್ಪಷ್ಟವಾಗುತ್ತಿತ್ತು. ಅಧಿಕಾರಿಗಳ ಬಳಿ ಬಂದ ವ್ಯಾಪಾರಿಗಳು “ಸರ್ ನಮ್ಮ ಪರಿಚಯವಿದೆಯಲ್ಲ’ ಎಂದರೆ, ಅಧಿಕಾರಿಗಳು “ನಮ್ಮ ಕೈಯಲ್ಲಿ ಏನೂ ಇಲ್ಲ ಕೋರ್ಟ್ ಆದೇಶ ಪಾಲಿಸಬೇಕು’ ಎಂದರು.
ಕಾಲಾವಕಾಶ ನೀಡದ್ದಕ್ಕೆ ಆಕ್ರೋಶ: ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸುವ ಮುನ್ನ ಮಳಿಗೆಗಳಲ್ಲಿದ್ದ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಸಹ ಅಧಿಕಾರಿಗಳು ಕಾಲಾವಕಾಶ ನೀಡಲಿಲ್ಲ. ಇದಕ್ಕೆ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಕನಿಷ್ಠ ಒಂದು ಗಂಟೆಯಾದರೂ ಅವಕಾಶ ನೀಡಬೇಕಿತ್ತು. ಹೀಗೆ ಏಕಾಏಕಿ ತೆರವು ಮಾಡಿರುವುದರಿಂದ ಹೂಡಿಕೆ ಮಾಡಿದ್ದ ಬಂಡವಾಳ ಮಣ್ಣುಪಾಲಾಗಿದೆ. ಅಂಗಡಿಗಳ ಮುಂದೆ ಯಾವುದೇ ಸಾಮಗ್ರಿ ಇಡಬೇಡಿ ಎಂದಷ್ಟೇ ಸೂಚಿಸಲಾಗಿತ್ತು ಎಂದು ವ್ಯಾಪಾರಿಗಳು ಅವಲತ್ತುಕೊಂಡರು.
ಮಾರುಕಟ್ಟೆ ಒಳಗೆ ಮತ್ತು ಹೊರಗೆ ಶೇ.60ರಿಂದ 70 ಭಾಗ ಒತ್ತುವರಿಯಾಗಿತ್ತು. ಇದರಿಂದ ಅವಘಡಗಳು ಸಂಭವಿಸಿದರೆ ಜನ ಹೊರಬರಲು ಸಹ ಸ್ಥಳ ಇರಲಿಲ್ಲ. ವ್ಯಾಪಾರಿಗಳಿಗೆ ಬೇರೆ ಜಾಗ ನೀಡುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ.
-ಸರ್ಫರಾಜ್ ಖಾನ್, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ
ಯಾವುದೇ ಮುನ್ಸೂಚನೆ ನೀಡದೆ ಮಳಿಗೆಗಳನ್ನು ತೆರವುಗೊಳಿಸಿದ್ದಾರೆ. ಹೈಡಿಕೆ ಮಾಡಿದ್ದ ಸಾವಿರಾರು ರೂಪಾಯಿ ನಷ್ಟವಾಗಿದೆ. ಕಣ್ಣಮುಂದೇ ಬದುಕು ಬೀದಿಗೆ ಬಿದ್ದಿದೆ.
-ರಾಜಮ್ಮ, ವ್ಯಾಪಾರಿ
ಅಂಗಡಿ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳೆಲ್ಲಾ ಜಖಂ ಆಗಿವೆ. ತೆರವು ಮಾಡುವಂತೆ ಗುರುವಾರವೇ ಹೇಳಿದ್ದರೆ ಕ್ಯಾಮೆರಾ ಸೇರಿ ಎಲ್ಲವನ್ನೂ ತೆಗೆಯುತ್ತಿದ್ದವು.
-ರಜಾಕ್, ಜ್ಯೂಸ್ ಅಂಗಡಿ ಮಾಲಿಕ
ನಮ್ಮ ಮಳಿಗೆಗಳಿಗೆ ಬಿಬಿಎಂಪಿಯೇ ಜಾಗ ಮಂಜೂರು ಮಾಡಿದೆ. ವಿದ್ಯುತ್ ಸಂಪರ್ಕವಿದೆ. ಪ್ರತಿ ತಿಂಗಳು ಬಾಡಿಗೆ ಕಟ್ಟುತ್ತಿದ್ದೇವೆ. ಆದರೂ ಮಳಿಗೆ ತೆರವುಗೊಳಿಸಲಾಗಿದೆ. ಅಂಗಡಿಯಲ್ಲಿದ್ದ ಎರಡರಿಂದ ಮೂರು ಲಕ್ಷ ಮೌಲ್ಯದ ಸಾಮಗ್ರಿ ನಾಶವಾಗಿವೆ.
-ಅಬ್ರಹಂ ಅಹಮ್ಮದ್, ಮಳಿಗೆ ಮಾಲೀಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Organ Donation; ಸಾವಿನ ನಂತರವೂ ನೆರವಾದ ಜೀವ: 5 ಜೀವ ಉಳಿಸಿದ ಅಂಗಾಂಗ ದಾನ
Cancer: ಎಳೆಯ ಮಕ್ಕಳಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಸಮಸ್ಯೆ
Bengaluru: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ಯುವಕನಿಂದ ಲೈಂಗಿಕ ಕಿರುಕುಳ; ದೂರು
Theft: ವಿದ್ಯಾಗಣಪತಿ, ಸುಬ್ರಹ್ಮಣ್ಯ ದೇಗುಲಗಳ ಹುಂಡಿ ಹಣ, 5 ಚಿನ್ನದ ತಾಳಿ ಬೊಟ್ಟು ಕಳವು
Underpass: ಅಪಾಯ ಆಹ್ವಾನಿಸುತ್ತಿದೆ ಅಂಡರ್‌ಪಾಸ್ ಫಾಲ್ಸ್ ಸೀಲಿಂಗ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.