2,793 ಟನ್ ಮಾವು ಮಾರಾಟ!
Team Udayavani, Jul 7, 2017, 11:15 AM IST
ಬೆಂಗಳೂರು: 2017ನೇ ಸಾಲಿನಲ್ಲಿ ರಾಜ್ಯದ ವಿವಿಧೆಡೆ ನಡೆದ ಮಾವು ಮೇಳಗಳಲ್ಲಿ ಸುಮಾರು 2,793 ಟನ್ ಮಾವು ಮಾರಾಟವಾಗಿದ್ದು, 8.64 ಕೋಟಿ ರೂ. ವಹಿವಾಟು ನಡೆದಿದೆ ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಎಲ್.ಗೋಪಾಲಕೃಷ್ಣ ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ ಮೇ-ಜೂನ್ ತಿಂಗಳಲ್ಲಿ ಲಾಲ್‌ಬಾಗ್‌ನಲ್ಲಿ ನಡೆದ ಮಾವು ಮೇಳದಲ್ಲೇ 1300 ಟನ್ ಮಾವು ಮಾರಾಟವಾಗಿದ್ದು, 7.80 ಕೋಟಿ ರೂ.ವಹಿವಾಟು ನಡೆದಿದೆ. ಉಳಿದಂತೆ ಸಹಕಾರ ನಗರ, ಮೆಟ್ರೋ ನಿಲ್ದಾಣ, ಕರ್ನಾಟಕ ಸರ್ಕಾರಿ ನೌಕರರ ಕ್ಲಬ್ ಆವರಣ, ಬಾಣಸವಾಡಿ ಕ್ಲಬ್, ಮ್ಯಾಂಗೋ ಪಿಕ್ಕಿಂಗ್ ಟೂರಿಸಂ, ಮಾವು ಆನ್‌ಲೈನ್ ಮಾರುಕಟ್ಟೆ, ಮೊಬೈಲ್ ಮ್ಯಾಂಗೋ ಮಾರ್ಕೆಟ್ ಹಾಗೂ ಜಿಲ್ಲಾ ಮಾವು ಮೇಳಗಳಲ್ಲಿ ಒಟ್ಟು 1483 ಟನ್ ಮಾರಾಟವಾಗಿದ್ದು, 84 ಲಕ್ಷ ರೂ.ಗಳ ವಹಿವಾಟು ನಡೆದಿದೆ. ಮೇಳ ಆಯೋಜನೆಗೆ ನಿಗಮವು ಒಟ್ಟು 61 ಲಕ್ಷ ರೂ. ವೆಚ್ಚ ಮಾಡಿತ್ತು ಎಂದು ತಿಳಿಸಿದರು.
ರಾಜ್ಯದಲ್ಲಿ ಒಟ್ಟು 9987 ಮಂದಿ ನೋಂದಾಯಿತ ಮಾವು ಬೆಳೆಗಾರರಿದ್ದಾರೆ. ಕಳೆದ ಸಾಲಿನಲ್ಲಿ ಸುಮಾರು 6,294.85 ಟನ್ ಮಾವನ್ನು ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡಲಾಗಿತ್ತು. ಈ ಬಾರಿ ರಫ್ತಿನಲ್ಲಿ ಪ್ರಗತಿ ಕಂಡಿದ್ದು, ಸುಮಾರು 10 ಸಾವಿರ ಟನ್ ಮಾವನ್ನು ರಫ್ತು ಮಾಡಲಾಗಿದೆ ಎಂದ ಅವರು, ಪ್ರಸಕ್ತ ಸಾಲಿನಲ್ಲಿ ನಿಗಮದಿಂದ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಜತೆಗೆ ಮಾವು ಬೆಳೆಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಉತ್ತಮ ಕೃಷಿ ಪದ್ಧತಿ ಪ್ರಮಾಣ ಪತ್ರ (ಗ್ಲೋಬಲ್ ಗ್ಯಾಪ್) ಪಡೆಯಲು ಮಾವು ಬೆಳೆಗಾರರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಪ್ಯಾಕ್‌ಹೌಸ್‌ಗೆ ಸಹಾಯಧನ
ಕೊಯ್ಲೋತ್ತರ ಹಾನಿ ತಡೆಗಟ್ಟಲು ಮಾವು ಕೊಯ್ಲು ನಂತರದ ಚಟುವಟಿಕೆಗಳಿಗೆ ಇಲಾಖೆ ಮಾರ್ಗಸೂಚಿಯನ್ವಯ ತೋಟದಲ್ಲಿ ಪ್ಯಾಕ್‌ಹೌಸ್ ಘಟಕ ನಿರ್ಮಿಸಲು 4 ಲಕ್ಷ ರೂ. ವೆಚ್ಚವಾಗುತ್ತದೆ. ಇದರಲ್ಲಿ ಪ.ಜಾತಿ, ವರ್ಗಕ್ಕೆ 3.60 ಲಕ್ಷ ರೂ. ಮತ್ತು ಇತರೆ ವರ್ಗಕ್ಕೆ 2.40 ಲಕ್ಷ ಸಹಾಯಧನ ನೀಡಿ ಪ್ರೋತ್ಸಾಹಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 200 ಪ್ಯಾಕ್‌ಹೌಸ್ ಘಟಕಗಳಿಗೆ ಸಹಾಯಧನ ಒದಗಿಸಲು 1.30 ಕೋಟಿ ಅನುದಾನ ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಮಾವು ಪುನಶ್ಚೇತನಕ್ಕೆ ಸಹಾಯಧನ, ಪ್ಲಾಸ್ಟಿಕ್ ಕ್ರೇಟ್ಸ್ ಮತ್ತು ಕಾರ್ಟನ್ ಬಾಕ್ಸ್ ಒದಗಿಸಲು 1.89 ಕೋಟಿ ರೂ.ಅನುದಾನ, ಉತ್ತಮ ಕೃಷಿ ಪದ್ಧತಿಗಳ ಅಳವಡಿಕೆ, ಹಣ್ಣು ಕಟಾವು ಮಾನದಂಡ ಹಾಗೂ ಉಪಕರಣಗಳನ್ನು ಉಪಯೋಗಿಸುವ ಕುರಿತು ಪ್ರಾತ್ಯಕ್ಷಿಕೆ, ನೀರಿನ ಅವಶ್ಯಕತೆ, ನೊಣದ ನಿಯಂತ್ರಣಕ್ಕೆ ಟ್ರ್ಯಾಪ್ಸ್ ಮತ್ತು ಲೂರ್ಸ್ ಉಪಯೋಗಿಸುವುದು, ಮ್ಯಾಂಗೋ ಸ್ಪೇಷಲ್ ಬಳಕೆ ಇತ್ಯಾದಿಗಳ ಕುರಿತು ಅರಿವು ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾವು ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ರಾಜಕುಮಾರ್, ನಿರ್ದೇಶಕರಾದ ರವಿಕುಮಾರ್, ಗೌಡರ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ ಉಪಸ್ಥಿತರಿದ್ದರು.
ಹಣ್ಣು ಮಾಗಿಸುವ ಘಟಕ
ಕಾರ್ಬೈಡ್ ಬಳಕೆ ನಿಯಂತ್ರಿಸಿ, ವೈಜ್ಞಾನಿಕವಾಗಿ ಹಣ್ಣು ಮಾಗಿಸುವ ಸೌಲಭ್ಯ ಕಲ್ಪಿಸಲು ಎಪಿಎಂಸಿ ಆವರಣದಲ್ಲಿ ಇಲಾಖೆ ವತಿಯಿಂದ ಕಾರ್ಬೈಡ್ ಮುಕ್ತ ನೈಸರ್ಗಿಕ ಎಥೆನಾಲ್ ಬಳಸಿ ಕನಿಷ್ಠ 5ರಿಂದ 300 ಟನ್ ಹಣ್ಣು ಮಾಗಿಸುವ ಸುಮಾರು 100 ಘಟಕಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಆಸಕ್ತರಿಗೆ ಎನ್‌ಎಂಎಚ್ ವತಿಯಿಂದ ಶೇ.35ರಷ್ಟು ಹಾಗೂ ನಿಗಮದಿಂದ ಶೇ.25ರಷ್ಟು ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.
ನೀರಿನ ಟ್ಯಾಂಕರ್‌ಗೆ ಪ್ರೋತ್ಸಾಹ
ಮಾವು ಬೆಳೆಗಾರರು ನಿರ್ಣಾಯಕ ಹಂತಗಳಲ್ಲಿ ಮಾವು ಬೆಳೆಗೆ ರಕ್ಷಣಾತ್ಮಕ ನೀರಾವರಿ ವ್ಯವಸ್ಥೆ ಕಲ್ಪಿಸಲು ಅನುವಾಗುವಂತೆ ನೀರಿನ ಟ್ಯಾಂಕರ್‌ಗೆ ಪ್ರೋತ್ಸಾಹ ನೀಡಲು ಘಟಕವೊಂದಕ್ಕೆ 1.35 ಲಕ್ಷ ರೂ. ಸಹಾಯಧನ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ವರ್ಗಕ್ಕೆ 90 ಸಾವಿರ ಮತ್ತು ಇತರೆ ವರ್ಗಕ್ಕೆ 50 ಸಾವಿರ ರೂ. ಸಹಾಯಧನ ನೀಡಿ ಪ್ರೋತ್ಸಾಹಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 200 ನೀರಿನ ಟ್ಯಾಂಕರ್‌ಗಳಿಗೆ ಸಹಾಯಧನ ಒದಗಿಸಲು 1.20 ಕೋಟಿ ರೂ. ಅನುದಾನ ನಿಗದಿ ಮಾಡಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ
Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್ ಅರ್ಜಿ ತಿರಸ್ಕೃತ
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.