28ಕ್ಕೆ ಎಟಿಎಂ ಹಲ್ಲೆಕೋರ ನಗರಕ್ಕೆ
Team Udayavani, Feb 18, 2017, 12:12 PM IST
ಬೆಂಗಳೂರು: ರಾಜಧಾನಿ ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿ ದೇಶವ್ಯಾಪಿ ಚರ್ಚೆಗೊಳಗಾಗಿದ್ದ ಕಾರ್ಪೋರೇಷನ್ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಮೇಲೆ ಎಟಿಎಂನಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿ ಮಧುಕರ್ ರೆಡ್ಡಿಯನ್ನು ಬಾಡಿ ವಾರೆಂಟ್ ಮೇಲೆ ಫೆ.28ಕ್ಕೆ ನಗರಕ್ಕೆ ಕರೆ ತರುವ ಸಾಧ್ಯತೆಯಿದೆ.
ಈ ಬಗ್ಗೆ “ಉದಯವಾಣಿ’ಗೆಯೊಂದಿಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್, ಬಾಡಿ ವಾರೆಂಟ್ ಮೇಲೆ ಫೆ.28ರಂದು ಆರೋಪಿಯನ್ನು ನಗರಕ್ಕೆ ಕರೆ ತಂದು ಇಲ್ಲಿನ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಈಗಾಗಲೇ ಆರೋಪಿ ನ್ಯಾಯಾಂಗ ಬಂಧನಲ್ಲಿದ್ದು, ಅಲ್ಲಿನ ಪೊಲೀಸರು ತಮ್ಮ ವಶಕ್ಕೆ ನೀಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿಲ್ಲ. ನಗರದ ನ್ಯಾಯಾಲಯದಿಂದ ಅನುಮತಿ ಪಡೆದು ಬಾಡಿ ವಾರೆಂಟ್ ಮೇಲೆ ನಗರಕ್ಕೆ ಕರೆ ತರಲು ಸಿದ್ಧತೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಅಂದು ಆರೋಪಿಯನ್ನು ನಗರಕ್ಕೆ ಕರೆ ತಂದು ಇಲ್ಲಿನ ಎಸಿಎಂಎಂ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗುವುದು. ಬಳಿಕ ನ್ಯಾಯಾಧೀಶರ ಅನುಮತಿ ಪಡೆದು ಆರೋಪಿಯನ್ನು ಪ್ರಕರಣದ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ಮೇಲೆ ನಾಲ್ಕು ಕೊಲೆ ಪ್ರಕರಣಗಳಿದ್ದು, ಹೈದ್ರಾಬಾದ್ ಪೊಲೀಸರು ತಮ್ಮ ವಶಕ್ಕೆ ನೀಡುವಂತೆ ಇಲ್ಲಿ ತನಕ ಕೋರ್ಟ್‌ಗೆ ಅರ್ಜಿ ಸಲ್ಲಿಸಿಲ್ಲ. ನ್ಯಾಯಾಂಗ ಬಂಧನ ಅವಧಿ ಮುಗಿಯುತ್ತಿದ್ದಂತೆ ವಶಕ್ಕೆ ನೀಡುವಂತೆ ಅರ್ಜಿ ಸಲ್ಲಿಸಿದರೆ ಅದನ್ನು ನೋಡಬೇಕಾಗುತ್ತದೆ. ಒಂದು ವೇಳೆ ಅಲ್ಲಿನ ಪೊಲೀಸರು ವಶಕ್ಕೆ ಪಡೆಯದಿದ್ದರೆ, ನಾವು ಫೆ.28 ರಂದು ಆರೋಪಿಯನ್ನು ವಶಕ್ಕೆ ಪಡೆಯುತ್ತೇವೆ ಎಂದು ಅಧಿಕಾರಿ ಉದಯವಾಣಿಗೆ ಸ್ಪಷ್ಟಪಡಿಸಿದ್ದಾರೆ.
ಏನಿದು ಘಟನೆ?: ಮಿಷನ್ ರಸ್ತೆ ಬಳಿ ಇರುವ ಕಾರ್ಪೋರೇಷನ್ ಬ್ಯಾಂಕ್ ಶಾಖಾ ವ್ಯವಸ್ಥಾಪಕ ರಾಗಿದ್ದ ಜ್ಯೋತಿ ಉದಯ್, 2013ರ ನ.19 ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಕಾರ್ಪೋರೇಷನ್ ವೃತ್ತದಲ್ಲಿರುವ ಎಟಿಎಂ ಕೇಂದ್ರದಲ್ಲಿ ಹಣ ತೆಗೆಯಲು ಹೋಗಿದ್ದರು. ಇವರನ್ನು ಹಿಂಬಾಲಿಸಿ ಬಂದಿದ್ದ ದುಷ್ಕರ್ಮಿ ಏಕಾಏಕಿ ಎಟಿಎಂ ಕೇಂದ್ರದೊಳಗೆ ನುಗ್ಗಿ ಬಾಗಿಲು ಎಳೆದು ಮಚ್ಚು ತೋರಿಸಿ ಹಲ್ಲೆ ನಡೆಸಿ ಪರಾರಿಯಾಗಿದ್ದ. ಬಳಿಕ ಆರೋಪಿ ಮೂರು ವರ್ಷ ಪೊಲೀಸರ ಕೈಗೆ ಸಿಕ್ಕಿರಲಿಲ್ಲ.
ಜ.31 ರಂದು ಮದನಪಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಳಿಕ ಈತ ಜೋಡಿ ಕೊಲೆ ಸೇರಿದಂತೆ ನಾಲ್ಕು ಕೊಲೆ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಇದಕ್ಕೂ ಮುನ್ನ ಆರೋಪಿ ಸಿಗದ ಹಿನ್ನೆಲೆಯಲ್ಲಿ ಎಟಿಎಂ ಹಲ್ಲೆ ಪ್ರಕರಣದಲ್ಲಿ ನಗರ ಪೊಲೀಸರು ನಗರದ ನ್ಯಾಯಾಲಯಕ್ಕೆ “ಸಿ’ ರಿಫೋರ್ಟ್ ಸಲ್ಲಿಸಿದ್ದರು. ಆರೋಪಿ ಸಿಕ್ಕಿರುವುದು ಖಚಿತವಾದ ಬಳಿಕ ಕೋರ್ಟ್ ಗಮನಕ್ಕೆ ತಂದು ಮರು ತನಿಖೆಗೆ ಅನುಮತಿ ಪಡೆದಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.