2,800 ಹೆಕ್ಟೇರ್ ಸಸ್ಯ ಸಂಪತ್ತು ಕಣ್ಮರೆ!
ಸುದ್ದಿ ಸುತ್ತಾಟ
Team Udayavani, Feb 3, 2020, 3:10 AM IST
ಟ್ರಾಫಿಕ್ ಜಾಮ್‌ನಲ್ಲಿ ವಿಶ್ವಕ್ಕೇ ನಂ.1 ಪಟ್ಟ ಪಡೆದ ಬೆಂಗಳೂರಲ್ಲಿ ಹಸಿರು ಹೊದಿಕೆ ಕೂಡ ಮರೆಯಾಗುತ್ತಿದೆ. ಹಿಂದೆ “ಉದ್ಯಾನನಗರಿ’ ಎಂಬ ಖ್ಯಾತಿಗೆ ಪಾತ್ರವಾಗಿದ್ದ ರಾಜಧಾನಿ, ದೇಶ ವಿದೇಶಿಗರ ಅಚ್ಚುಮೆಚ್ಚಿನ ನಗರವಾಗಿತ್ತು. ಆದರೆ ಈಗ ಆ ಪರಿಸ್ಥಿತಿ ಇಲ್ಲ ಎನ್ನುತ್ತಿದೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಹಾಗೂ ರಾಷ್ಟ್ರೀಯ ದೂರಸಂವೇದಿ ಕೇಂದ್ರದ ಅಧ್ಯಯನ. ಹಾಗಾದರೆ ಹಸಿರು ಮರೆಯಾದದ್ದೇಕೆ? ಮತ್ತೆ ನಗರವನ್ನು ಹಸಿರಾಗಿಸಲು ಏನು ಮಾಡಬೇಕು ಎಂಬು ಮಾಹಿತಿ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ…
ವಿಶ್ವದಲ್ಲೇ ಅತಿ ಹೆಚ್ಚು ವಾಹನ ದಟ್ಟಣೆ ಹೊಂದಿರುವ ನಗರ ಎಂಬ ಅಪಖ್ಯಾತಿಗೆ ಗುರಿಯಾದ ಬೆನ್ನಲ್ಲೇ ಬೆಂಗಳೂರಿನಲ್ಲಿ ಹಸಿರು ಹೊದಿಕೆ ಕೂಡ ಗಣನೀಯವಾಗಿ ಕರಗುತ್ತಿರುವ ಅಂಶ ಬೆಳಕಿಗೆ ಬಂದಿದೆ. ಕಳೆದ ಒಂದೂವರೆ ದಶಕದಲ್ಲಿ ಹೆಚ್ಚು-ಕಡಿಮೆ 2,842.7 ಹೆಕ್ಟೇರ್‌ನಷ್ಟು ಸಸ್ಯಸಂಪತ್ತಿನಿಂದ ಕೂಡಿದ್ದ ಹಸಿರು ಹೊದಿಕೆ ಕಣ್ಮರೆಯಾಗಿದ್ದು, ಒಟ್ಟಾರೆ ಶೇ. 11.4ರಷ್ಟು ವಿವಿಧ ಪ್ರಕಾರದ ಸಸ್ಯವರ್ಗದ ಪ್ರಮಾಣ ಕಡಿಮೆಯಾಗಿರುವುದು ಉಪಗ್ರಹ ಸೆರೆಹಿಡಿದ ಇತ್ತೀಚಿನ ಚಿತ್ರಗಳಿಂದ ಗೊತ್ತಾಗಿದೆ.
ಆ ಸಸ್ಯವರ್ಗಗಳಿದ್ದ ಜಾಗದಲ್ಲಿ ಕಾಂಕ್ರೀಟ್ ಕಾಡು ತಲೆಯೆತ್ತಿದೆ. ಇದು ಹಸಿರು ಹೊದಿಕೆ ವೇಗವಾಗಿ ಕರಗುತ್ತಿರುವ ಮುನ್ಸೂಚನೆಯಾಗಿದ್ದು, ಆ ಮೂಲಕ ಉದ್ಯಾನ ನಗರಿಯು ನಿಧಾನವಾಗಿ ತನ್ನ ಮೂಲಸ್ವರೂಪ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಹಾಗೂ ರಾಷ್ಟ್ರೀಯ ದೂರಸಂವೇದಿ ಕೇಂದ್ರ (ಎನ್‌ಆರ್‌ಎಸ್ಸಿ)ವು ಭೌಗೋಳಿಕ ತಂತ್ರಜ್ಞಾನಗಳನ್ನು ಬಳಸಿ ಬೆಂಗಳೂರು ನಗರದ ಸಸ್ಯಸಂಪತ್ತಿನ ಮೌಲ್ಯಮಾಪನ ಮಾಡಿ, ಅದನ್ನು 2006 ಮತ್ತು 2019ಕ್ಕೆ ಹೋಲಿಸಿದ್ದಾರೆ.
ಅದರಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ನಗರದ ಪೆರಿಫೆರಲ್ ಭಾಗಗಳಲ್ಲಿ ಅದರಲ್ಲೂ ಮೂಲಸೌಕರ್ಯ ಅಭಿವೃದ್ಧಿಗೆ ಹತ್ತಿರದಲ್ಲಿರುವ ವರ್ತುಲ ರಸ್ತೆ, ರಸ್ತೆ ವಿಸ್ತರಣೆ, ಮೆಟ್ರೋ ರೈಲು ಮಾರ್ಗಗಳ ಆಸುಪಾಸು ಈ ಹಸಿರಿನ ಹೊದಿಕೆ ಕಡಿಮೆ ಆಗಿರುವುದನ್ನು ಅಧ್ಯಯನದಿಂದ ತಿಳಿದುಬಂದಿದೆ. 711.59 ಚದರ ಕಿ.ಮೀ. ಬೆಂಗಳೂರು ಭೌಗೋಳಿಕ ಪ್ರದೇಶದಲ್ಲಿ 2006ರಲ್ಲಿ ಶೇ. 30.1ರಷ್ಟು ಅಂದರೆ 21,414.9 ಹೆಕ್ಟೇರ್ ಸಸ್ಯ ಸಂಪತ್ತು ಇತ್ತು.
ಆದರೆ, 2019ರಲ್ಲಿ ಇದರ ಪ್ರಮಾಣ ಶೇ. 26.1ರಷ್ಟು ಅಂದರೆ 18,572.2 ಹೆಕ್ಟೇರ್‌ಗೆ ಇಳಿಕೆಯಾಗಿದೆ. ಇದರಲ್ಲಿ 486 ಹೆಕ್ಟೇರ್‌ನಷ್ಟು ಹಸಿರು ಹೊದಿಕೆಯು ನಗರದ ಕೇಂದ್ರ ಭಾಗದಲ್ಲಿರುವ ಕೆರೆಗಳ ಆವರಣದಲ್ಲಿ ಕಾಣಬಹುದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 198 ವಾರ್ಡ್‌ಗಳಿದ್ದು, 68 ವಾರ್ಡ್‌ಗಳಲ್ಲಿ ಸಸ್ಯಸಂಪತ್ತಿನ ವಿಚಾರದಲ್ಲಿ ನಕಾರಾತ್ಮಕ ಬದಲಾವಣೆ ಕಂಡುಬಂದಿದ್ದು, 65 ವಾರ್ಡ್‌ಗಳು ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿವೆ.
81 ವಾರ್ಡ್ ಗಳಲ್ಲಿ ಸಕಾರಾತ್ಮಕ ಬದಲಾವಣೆ ಕಂಡಿದ್ದು, ಸರ್ಕಾರಿ/ ಸಾರ್ವಜನಿಕ ಸಂಸ್ಥೆಗಳ ಆವರಣ, ರಕ್ಷಣಾ ಇಲಾಖೆಗೆ ಸೇರಿದ ಜಾಗ ಮತ್ತು ಉದ್ಯಾನಗಳಲ್ಲಿ ಇದನ್ನು ಕಾಣಬಹುದು. ಅಲ್ಲದೆ, ಹೊರವಲಯದಲ್ಲಿರುವ ತುರಹಳ್ಳಿ, ಇಬ್ಬಲೂರು, ಬನ್ನೇರುಘಟ್ಟದಂತಹ ಭಾಗಗಳಲ್ಲಿ ದಟ್ಟ ಹಸಿರುಹೊದಿಕೆ ಉಳಿಸಿಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆ. ಹಲವು ವರ್ಷಗಳ ಹಿಂದೆ ಬೆಂಗಳೂರು “ಕೂಲ್ ಸಿಟಿ’ ಆಗಿತ್ತು. ಹೇರಳ ಸಸ್ಯ ಸಂಪತ್ತಿನಿಂದ ಕೂಡಿದ್ದ ನಗರದಲ್ಲಿ ಎರಡು ಸಾವಿರಕ್ಕೂ ಅಧಿಕ ಪ್ರಕಾರದ ಮರಗಳಿದ್ದವು.
ಇದರಲ್ಲಿ ಕೆಲವು ಸ್ವಾಭಾವಿಕವಾದ ಮತ್ತು ಹಲವು ಹಿರಿಯರು ನೆಟ್ಟ ಗಿಡಗಳಿದ್ದವು. ಇದರಿಂದಾಗಿ ವಾತಾವರಣ ಆಹ್ಲಾದಕರವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅನಿಯಂತ್ರಿತ ಬೆಳವಣಿಗೆಯಿಂದ ಕಾಂಕ್ರೀಟ್ ಕಾಡು ಆಗಿ ಪರಿವರ್ತನೆಗೊಳ್ಳುತ್ತಿದೆ. ಈಗ ಚಳಿಗಾಲದಲ್ಲೂ ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದೆ. ಮಳೆಯ ಪ್ರಮಾಣ ತಗ್ಗುತ್ತಿದೆ. ವಾಹನಗಳ ದಟ್ಟಣೆಯಿಂದ ವಾಯುಮಾಲಿನ್ಯ ಪ್ರಮಾಣ ಏರಿಕೆ ಕ್ರಮದಲ್ಲಿ ಸಾಗುತ್ತಿದ್ದು, ಹಲವು ರೋಗಗಳಿಗೆ ಕಾರಣವಾಗುತ್ತಿದೆ.
ಅತಿ ಹೆಚ್ಚುವಾಣಿಜ್ಯ ಕಟ್ಟಡ ನಿರ್ಮಾಣ: ಅಧ್ಯಯನವೊಂದರ ಪ್ರಕಾರ ಬೆಂಗಳೂರು ವಿಶ್ವದ ಅತಿ ಹೆಚ್ಚು ವಾಣಿಜ್ಯ ಕಟ್ಟಡಗಳ ನಿರ್ಮಾಣಗೊಳ್ಳುವ ಪ್ರದೇಶವಾಗಿದೆ. ಒಂದು ವರ್ಷದಲ್ಲಿ ಹಾಂಗ್‌ಕಾಂಗ್ ಮತ್ತು ಸಿಂಗಪುರ ಎರಡೂ ಕಡೆಗಳಲ್ಲಿ ನಿರ್ಮಿಸಲಾಗುವ ವಾಣಿಜ್ಯ ಕಟ್ಟಡಗಳು ಬರೀ ಬೆಂಗಳೂರುವೊಂದರಲ್ಲೇ ತಲೆಯೆತ್ತುತ್ತವೆ. ಇದು ಹಸಿರೀಕರಣ ಕರಗುತ್ತಿರುವುದರ ಸೂಚನೆ.
ಆದರೆ, ಇದಕ್ಕಾಗಿ ತೆರವಾದ ಮರಗಳಿಗೆ ಬದಲಾಗಿ ಗಿಡಗಳನ್ನು ನೆಡುವ ಕೆಲಸ ಆಗುತ್ತಿಲ್ಲ. ಇದು ಸಹಜವಾಗಿ ಹಸಿರೀಕರಣ ಕಡಿಮೆಯಾಗುವ ರೂಪದಲ್ಲಿ ಪರಿಣಮಿಸುತ್ತದೆ. ನಗರದ ಹೊರವಲಯದಲ್ಲಿ ಮರಗಳನ್ನು ಕಡಿಯುತ್ತಿದ್ದರೆ, ಹೃದಯಭಾಗದಲ್ಲಿರುವ ಅರಣ್ಯ ಸಂಪತ್ತನ್ನು ಸಂರಕ್ಷಿಸಿ, ಬೆಳೆಸುವ ಪ್ರಯತ್ನಗಳೂ ನಡೆಯುತ್ತಿಲ್ಲ ಎಂದು ಪರಿಸರವಾದಿ ಮತ್ತು ಸುಸ್ಥಿರ ನಗರಾಭಿವೃದ್ಧಿ ತಜ್ಞ ಯೋಗೇಶ್ ರಂಗನಾಥ್ ತಿಳಿಸುತ್ತಾರೆ.
ಆತಂಕಕಾರಿ ಬೆಳವಣಿಗೆ: ನಗರವು ವರ್ಷದಿಂದ ವರ್ಷಕ್ಕೆ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, 2006ಕ್ಕೆ ಹೋಲಿಸಿದರೆ ಜನಸಂಖ್ಯೆ ಬಹುತೇಕ ದುಪ್ಪಟ್ಟಾಗಿರುವ ಸಾಧ್ಯತೆ ಇದೆ. ಹಾಗಾದರೆ, ಅದಕ್ಕೆ ತಕ್ಕಂತೆ ಮೂಲಸೌಕರ್ಯಗಳನ್ನೂ ಕಲ್ಪಿಸಬೇಕಾಗುತ್ತದೆ. ಈ ಕಾರಣದಿಂದ ಹಸಿರಿನ ಹೊದಿಕೆ ಕಡಿಮೆ ಆಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದ್ದು, ಸಾಧ್ಯವಾದಷ್ಟು ಬೆಂಗಳೂರಿಗೆ ಬರುವ ವಲಸೆಗೆ ಕಡಿವಾಣ ಹಾಕುವ ಅವಶ್ಯಕತೆ ಇದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಸುಸ್ಥಿರ ತಂತ್ರಜ್ಞಾನಗಳ ಕೇಂದ್ರದ ಪ್ರಾಧ್ಯಾಪಕ ಡಾ.ಎನ್.ಎಚ್. ರವೀಂದ್ರನಾಥ್ ತಿಳಿಸುತ್ತಾರೆ.
ಅಂಕಿ-ಅಂಶಗಳ ಪ್ರಕಾರ ನಗರದಲ್ಲಿ ಉದ್ಯಾನಗಳ ಸಂಖ್ಯೆ ಏರಿಕೆಯಾಗಿದೆ. ಆದರೆ, ಅವುಗಳ ಮೂಲ ಪರಿಕಲ್ಪನೆ ಬದಲಾಗಿದೆ. ಬಹುತೇಕ ಉದ್ಯಾನಗಳಲ್ಲಿ ಹುಲ್ಲುಹಾಸು, ಮಕ್ಕಳು ಆಟವಾಡಲು ಪೀಠೊಪಕರಣಗಳು, ವ್ಯಾಯಾಮ ಸೇರಿದಂತೆ ಸೌಂದರೀಕರಣಕ್ಕೆ ಒತ್ತುಕೊಡಲಾಗುತ್ತಿದೆ. ಈ ದೃಷ್ಟಿಕೋನ ಬದಲಾಗಬೇಕಿದೆ. ಗಿಡ-ಮರಗಳನ್ನು ಬೆಳೆಯಬೇಕು. ಅದೇ ರೀತಿ, ಮನೆ ಅಂಗಳದಲ್ಲಿ ಹುಲ್ಲುಹಾಸು ಬೆಳೆಯುವ ಬದಲು ಗಿಡಗಳನ್ನು ನೆಡಬಹುದು. ಪಾಲಿಕೆ ಕೂಡ ಪ್ರತಿ ವರ್ಷ ಸಾವಿರಾರು ಗಿಡ ನೆಡುವುದಾಗಿ ಹೇಳುತ್ತದೆ. ಆದರೆ, ಅವುಗಳ ನಿರ್ವಹಣೆ ಬಗ್ಗೆಯೂ ಹೆಚ್ಚು ನಿಗಾ ವಹಿಸುವ ಅವಶ್ಯಕತೆ ಇದೆ ಎಂದು ಡಾ.ರವೀಂದ್ರನಾಥ್ ಹೇಳುತ್ತಾರೆ.
ಶೇ.68ರಿಂದ ಶೇ.25ಕ್ಕೆ ಇಳಿಕೆ!: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಹಾಗೂ ಖರಗ್‌ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಜಂಟಿಯಾಗಿ ಈ ಹಿಂದೆ ಇಂತಹದ್ದೇ ಉಪಗ್ರಹ ಆಧಾರಿತ ಅಧ್ಯಯನ ನಡೆಸಿದ್ದವು. ಅದರಂತೆ 1973ರಿಂದ 2012ರವರೆಗೆ ಹಸಿರಿನ ಹೊದಿಕೆಯು ಶೇ.68ರಿಂದ ಶೇ.25ಕ್ಕೆ ಇಳಿಕೆಯಾಗಿತ್ತು. ಇದೇ ಪ್ರವೃತ್ತಿ ಮುಂದುವರಿದರೆ, ಇನ್ನೂ ಶೇ.3ರಷ್ಟು ಸಸ್ಯ ಸಂಪತ್ತು ಕಡಿಮೆ ಆಗಲಿದೆ ಎಂದೂ ಸೂಚಿಸಲಾಗಿತ್ತು.
ಕೆಲವು ವಾರ್ಡ್‌ಗಳಲ್ಲಿ 40 ಸಾವಿರ ಮರಗಳಿಗಿಂತ ಹೆಚ್ಚಿದ್ದರೆ, ಇನ್ನು ಹಲವು ವಾರ್ಡ್‌ಗಳಲ್ಲಿ 100ಕ್ಕಿಂತ ಕಡಿಮೆ ಮರಗಳಿವೆ. ಇಲ್ಲಿನ ಜನದಟ್ಟಣೆಗೆ ಹೋಲಿಸಿದರೆ, ಪ್ರತಿ ವ್ಯಕ್ತಿಗೆ ಎಂಟು ಮರಗಳು ಇರಬೇಕು. ಆದರೆ, ಏಳು ಜನರಿಗೆ ಒಂದು ಮರ ಇದೆ. ಗುಜರಾತಿನ ಗಾಂಧಿನಗರದಲ್ಲಿ ಪ್ರತಿ ವ್ಯಕ್ತಿಗೆ ನಾಲ್ಕು ಮರಳು, ನೆರೆಯ ಮಹಾರಾಷ್ಟ್ರದ ನಾಸಿಕ್‌ದಲ್ಲಿ ಪ್ರತಿ ಇಬ್ಬರಿಗೆ ಒಂದು ಮರ ಇದೆ ಎಂದು ಉಲ್ಲೇಖೀಸಲಾಗಿದೆ. ಅಷ್ಟೇ ಅಲ್ಲ, ಕೆರೆ ಮತ್ತು ಕುಂಟೆಗಳ ವಿಸ್ತೀರ್ಣ ಕೂಡ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದು ದಾಖಲಾಗಿದ್ದು, ಶೇ. 3.4ರಷ್ಟಿದ್ದ ಕೆರೆ-ಕುಂಟೆಗಳ ವಿಸ್ತೀರ್ಣವು ಶೇ. 1ಕ್ಕೆ ಕುಸಿದಿತ್ತು.
ಏನು ಮಾಡಬಹುದು?
-ಮರಗಳ ತೆರವು ಅನಿವಾರ್ಯವಾದಲ್ಲಿ ಸ್ಥಳಾಂತರಿಸುವುದು ಉಪಯುಕ್ತ.
-ವರ್ಟಿಕಲ್ ಮತ್ತು ತಾರಸಿ ಉದ್ಯಾನದತ್ತ ಮುಖ ಮಾಡಬೇಕು.
-ಮೆಟ್ರೋ ಮಾರ್ಗದುದ್ದಕ್ಕೂ ನಡುವೆ ಸಾಕಷ್ಟು ಜಾಗ ಇದೆ. ಅಲ್ಲಿ ವರ್ಟಿಕಲ್ ಗಾರ್ಡನ್‌ಗೆ ಅವಕಾಶ ಇದೆ (ಥೈಲ್ಯಾಂಡ್‌ನಲ್ಲಿ ಇದನ್ನು ಕಾಣಬಹುದು).
-ಸೀಡ್ ಬಾಲ್‌ಗಳ ವಿತರಿಸಿ, ಗಿಡಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು.
-ಉದ್ಯಾನಗಳ ಫೋಕಸ್ ಬದಲಾಗಬೇಕು. ಹುಲ್ಲುಹಾಸಿಗಿಂತ ಗಿಡ ಬೆಳೆಸಲು ಒತ್ತುಕೊಡಬೇಕು.
ಹಸಿರು ಹೊದಿಕೆ ವರ್ಗೀಕರಣ 2006 2019 (ಪ್ರದೇಶ ಹೆಕ್ಟೇರ್‌ನಲ್ಲಿ)
ದಟ್ಟ 10,340 12,878.6 (3.6 ಹೆಚ್ಚಳ)
ಮಧ್ಯಮ 11,075 5,693.6 (7.6 ಇಳಿಕೆ)
ವಿರಳ 15,88.3 10,603.3 (ಶೇ. 7.4 ಇಳಿಕೆ)
ಒಟ್ಟಾರೆ 37,295.2 29,175.5 (ಶೇ. 11.4 ಇಳಿಕೆ)
ಕೆರೆಗಳ ಸ್ಥಿತಿಗತಿ?
ಪ್ರಕಾರ 2006 2019 (ಪ್ರದೇಶ ಹೆಕ್ಟೇರ್‌ಗಳಲ್ಲಿ)
ನೀರು 1,258.8 1,003.4
ಸಸ್ಯಸಂಪತ್ತು (ಕೆರೆಗಳಲ್ಲಿ) 73.2 486.5
ಕಳೆ 1,253.3 722.8
ಒಣಗಿದ ಕೆರೆ ಪ್ರದೇಶ 33.7 406.3
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು
ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್ ನಕಾರ
Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ
Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್ ಡೆಲಿವರಿ ಬಾಯ್ ಸಾವು
Bengaluru: ಊರಿಂದ ವಾಪಸ್ಸಾದವರಿಗೆ ಸಂಚಾರ ದಟ್ಟಣೆ ಬಿಸಿ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.