ಒಂದೇ ದಿನ 4.3ಲಕ್ಷ ರೂ. ತೆರಿಗೆ ಸಂಗ್ರಹ
Team Udayavani, May 16, 2019, 3:08 AM IST
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಂತರ್ಜಾಲ ತಾಣದಲ್ಲಿ ಬುಧವಾರ ಆಸ್ತಿದಾರರು ಮುಗಿಬಿದ್ದು ಆಸ್ತಿ ತೆರಿಗೆ ಪಾವತಿ ಮಾಡಿದ್ದು, ಒಂದೇ ದಿನ 4.3 ಲಕ್ಷ ರೂ. ತೆರಿಗೆ ಸಂಗ್ರಹವಾಗಿದೆ.
ಲೋಕಸಭಾ ಚುನಾವಣೆ, ಆಸ್ತಿ ತೆರಿಗೆ ಪರಿಷ್ಕರಣೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಂತರ್ಜಾಲ ತಾಣದ ಮೂಲಕ ಆಸ್ತಿ ತೆರಿಗೆ ಪಾವತಿ ಮಾಡುವ ವ್ಯವಸ್ಥೆಯನ್ನು ಸಂಪೂರ್ಣ ಸ್ಥಗಿತಗೊಳಿಸಿತ್ತು.
ಎರಡು ತಿಂಗಳ ನಂತರ ಬಿಡಿಎ ಐಟಿ ವಿಭಾಗದ ಅಧಿಕಾರಿಗಳು ಆನ್‌ಲೈನ್‌ನಲ್ಲಿ ಆಸ್ತಿ ತೆರಿಗೆ ಪಾವತಿಸುವ ವ್ಯವಸ್ಥೆಯನ್ನು ಪುನರಾರಂಭಿಸಿದ್ದು, ಅಧಿಕ ಸಂಖ್ಯೆಯಲ್ಲಿ ಜನ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಬುಧವಾರ ಬೆಳಗ್ಗೆ 7.30ರ ವೇಳೆ ವೆಬ್‌ಸೈಟ್ ಪುನರಾರಂಭವಾಗಿದ್ದು, ಕೆಲವೇ ಗಂಟೆಗಳಲ್ಲಿ 1.2 ಲಕ್ಷ ರೂ. ತೆರಿಗೆ ಪಾವತಿಯಾಗಿದೆ.
ಮಧ್ಯಾಹ್ನದ ವೇಳೆ ತೆರಿಗೆ ಪಾವತಿಯಲ್ಲಿ ಮತ್ತಷ್ಟು ಹೆಚ್ಚಳ ಕಂಡುಬಂತು. ಭೋಜನ ವಿರಾಮದ ವೇಳೆಗಾಗಲೇ ಸುಮಾರು 3.22 ಲಕ್ಷ ರೂ. ತೆರಿಗೆ ಸಂಗ್ರಹವಾಗಿತ್ತು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಹಲವು ದಿನಗಳ ನಂತರ ಆನ್‌ಲೈನ್ ಕಾರ್ಯ ಆರಂಭಿಸಿಸಿದೆ. ಇದರೊಂದಿಗೆ ಆನ್‌ಲೈನ್ ಮೂಲಕ ತೆರಿಗೆ ಪಾವತಿ ಮಾಡುವರ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ. ಬುಧವಾರ ಮೂರಾರು ಆಸ್ತಿ ಮಾಲೀಕರು ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ.
ತಾಂತ್ರಿಕವಾಗಿ ಕೆಲವು ಬದಲಾವಣೆಗಳೊಂದಿಗೆ ಬಿಡಿಎ ಆನ್‌ಲೈನ್ ಆಸ್ತಿ ತೆರಿಗೆ ವಿಭಾಗ ಕಾರ್ಯಾರಂಭ ಮಾಡಿದ್ದು, ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಐಟಿ ವಿಭಾಗದ ಹಿರಿಯ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
ಪಾವತಿ ವಿಧಾನ ಸರಳ: ಬಿಡಿಎ ತಾಂತ್ರಿಕ ವಿಭಾಗ ತನ್ನ ಅಂತರ್ಜಾಲ ತಾಣದಲ್ಲಿ ಕೆಲವು ಸಣ್ಣ ಪುಟ್ಟ ತಾಂತ್ರಿಕ ಬದಲಾವಣೆ ತಂದಿದೆ. ಆಸ್ತಿ ತೆರಿಗೆ ಪಾವತಿದಾರರ ಅನುಕೂಲಕ್ಕಾಗಿ ದತ್ತಾಂಶಗಳನ್ನು ತುಂಬುವ ವ್ಯವಸ್ಥೆಯನ್ನು ಸರಳೀಕರಿಸಿದೆ. ಕಳೆದ ಬಾರಿ ಆಸ್ತಿ ತೆರಿಗೆ ಪಾವತಿಸುವಾಗ ಹಲವು ರೀತಿಯ ಮಾಹಿತಿಯನ್ನು ತೆರಿಗೆದಾರರು ಅಪ್‌ಡೇಟ್ ಮಾಡಬೇಕಿತ್ತು.
ಇದರಿಂದಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದರು. ಹೀಗಾಗಿ ಈ ಬಾರಿ ಆನ್‌ಲೈನ್ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯನ್ನು ಸರಳೀಕರಿಸಲಾಗಿದೆ. ತೆರಿಗೆ ಪಾವತಿ ಮಾಡುವಾಗ ಆಸ್ತಿ ಸಂಖ್ಯೆ (ಎಸ್‌ಟಿಪಿ), ಪಾವತಿದಾರರ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಅನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ.
ಈ ಮೊದಲು ಅಂತರ್ಜಾಲ ತಾಣದಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಬೇಕಾದರೆ ಸಾರ್ವಜನಿಕರು ಚಲನ್‌ನಲ್ಲಿ ಇರುವಂತೆಯೇ ತುಂಬಬೇಕಿತ್ತು. ಅರ್ಜಿ ತುಂಬುವಾಗ ಸ್ವಲ್ಪ ತಪ್ಪಾದರೂ ಅದನ್ನು ಸ್ವೀಕರಿಸುತ್ತಿರಲಿಲ್ಲ. ಈಗ ಚಲನ್ ತುಂಬುವ ವ್ಯವಸ್ಥೆ ಸರಳವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬದಲಾವಣೆ ತರುವುದಾಗಿ ಬಿಡಿಎ ಐಟಿ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಬಿಡಿಎ ರೂಪಿಸುತ್ತಿದ್ದು, ಆನ್‌ಲೈನ್‌ನಲ್ಲಿ ತೆರಿಗೆ ಪಾವತಿ ಮಾಡುವವಗೆ ನೆರವಾಗಲಿ ಎಂಬ ಕಾರಣಕ್ಕಾಗಿ ಮತ್ತಷ್ಟು ಸರಳ ವ್ಯವಸ್ಥೆ ಜಾರಿಗೆ ತರಲಾಗಿದೆ.
-ರಾಕೇಶ್ ಸಿಂಗ್, ಬಿಡಿಎ ಆಯುಕ್ತ
* ದೇವೇಶ್ ಸೂರಗುಪ್ಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.