ನಗರದಲ್ಲಿ 46 ಎಚ್1ಎನ್1 ಪ್ರಕರಣ
Team Udayavani, Oct 7, 2018, 12:51 PM IST
ಬೆಂಗಳೂರು: ನಗರ ಜಿಲ್ಲೆಯಲ್ಲಿ ಇದುವರೆಗೆ 46 ಎಚ್1ಎನ್1 ಪ್ರಕರಣಗಳು ವರದಿಯಾಗಿದ್ದು, ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಿ.ಎ.ಶ್ರೀನಿವಾಸ ಹೇಳಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ಎಚ್1ಎನ್1 ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಖಾಸಗಿ ಆಸ್ಪತ್ರೆಗಳಿಗೆ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಸರ್ಕಾರಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ.
ಅಲ್ಲದೆ, ಎಚ್1ಎನ್1 ಪ್ರಕರಣಗಳು ದಾಖಲಾದ ಕೂಡಲೇ, ಪ್ರತಿ ದಿನ ಸಂಜೆ 4 ಗಂಟೆಗೆ ದೈನಂದಿನ ವರದಿಯನ್ನು ಇ-ಮೇಲ್ ಮೂಲಕ ಜಿಲ್ಲಾ ಸರ್ವೇಕ್ಷಣಾ ಘಟಕಕ್ಕೆ ಕಳುಹಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಸದರಿ ಪ್ರಕರಣಗಳ ಸಮೀಕ್ಷೆ ಸಂಬಂಧ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ಕಚೇರಿಯ ಮೇಲ್ವಿಚಾರಕರು, ಆಶಾ ಕಾರ್ಯಕರ್ತೆಯರು ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕರನ್ನು ಒಳಗೊಂಡ 5 ತಂಡ ರಚಿಸಿದ್ದು, ಈ ತಂಡ ಜ್ವರ ಸಮೀಕ್ಷೆ ನಡೆಸಿ ಆರೋಗ್ಯದ ಬಗ್ಗೆ ಅರಿವು ಮೂಡಿಸಿದೆ ಎಂದರು.
ಕೆ.ಆರ್.ಪುರದಲ್ಲಿ 9ಪ್ರಕರಣ: ವಲಸಿಗರೇ ಹೆಚ್ಚಿರುವ ಪ್ರದೇಶಗಳಲ್ಲಿ ಎಚ್1ಎನ್1 ಪ್ರಕರಣಗಳು ಹೆಚ್ಚಾಗಿ ವರದಿಯಾಗಿರುವುದು ಆರೋಗ್ಯ ಇಲಾಖೆ ಗಮನಕ್ಕೆ ಬಂದಿದೆ. ಕೆ.ಆರ್.ಪುರದಲ್ಲಿ ವಲಸಿಗರು ಹೆಚ್ಚಾಗಿದ್ದು, ಅಲ್ಲಿ 9 ಪ್ರಕರಣಗಳು ಪತ್ತೆಯಾಗಿವೆ. ದೊಡ್ಡಕನಹಳ್ಳಿ 8, ಗರುಡಾಚಾರ ಪಾಳ್ಯ ಮತ್ತು ಮಾರತಹಳ್ಳಿ ತಲಾ 3, ವರ್ತೂರು, ದೊಮ್ಮಸಂದ್ರ, ಸಿಂಗಸಂದ್ರ, ಕೋಣನಕುಂಟೆ, ಎಂ.ಎಸ್.ಪಾಳ್ಯ, ಕಾಡುಗೋಡಿ ತಲಾ 2 ಹಾಗೂ ಬೆಗೂರು, ಅಂಜನಾಪುರ, ಸಹಕಾರಿ ನಗರ, ಅಮೃತಹಳ್ಳಿ, ಬಿ.ನಾರಾಯಣಪುರ, ಎ.ನಾರಯಣಪುರ, ಜಾಲಹಳ್ಳಿ, ಅವಲಹಳ್ಳಿ, ಸಿದ್ದಾಪುರ ಮತ್ತು ಕೋಡಿಯಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಲಭ್ಯ: ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಕೆ.ಟಿ.ಸುನಂದಾ ಮಾತನಾಡಿ, ಎಚ್1ಎನ್1 ವೈರಾಣು ಕಾಣಿಸಿಕೊಂಡ 46 ಮಂದಿಯಲ್ಲಿ 45 ಜನರು ಖಾಸಗಿ ಮತ್ತು ಒಬ್ಬ ವ್ಯಕ್ತಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಚ್1ಎನ್1 ವೈರಾಣು ನಿವಾರಣಾ ಔಷಧಗಳಿದ್ದು, ಈ ಬಗ್ಗೆ ಸಾರ್ವಜನಿಕರು ಭಯ ಪಡುವ ಅಗತ್ಯ ಇಲ್ಲ. ಜನವರಿಯಿಂದ ಅಕ್ಟೋಬರ್ 6ರವರೆಗೂ ಯಾವುದೇ ಮಲೇರಿಯಾ ಮತ್ತು ಮೆದಳು ಜ್ವರ ಪ್ರಕರಣಗಳು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ವರದಿಯಾಗಿಲ್ಲ ಎಂದು ತಿಳಿಸಿದರು.
53 ಶಂಕಿತ ಡೆಂಘೀ ಪ್ರಕರಣ: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 2018ರ ಜನವರಿಯಿಂದ ಅಕ್ಟೋಬರ್ 6ರವರೆಗೆ 53 ಶಂಕಿತ ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 33 ಸೀರಂ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, 20 ಖಚಿತ ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಹಾಗೇ 53 ಶಂಕಿತ ಚಿಕೂನ್‌ಗುನ್ಯ, ಪ್ರಕರಣಗಳಲ್ಲಿ 34 ಸೀರಂ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, 23 ಖಚಿತ ಚಿಕುನ್‌ಗುನ್ಯ ಪ್ರಕರಣ ಪತ್ತೆಯಾಗಿವೆ.
ಕೇರಳಕ್ಕೆ ಹೋಗಿ ಬಂದವರಿಂದ ವೈರಾಣು: ಕೆ.ಆರ್.ಪುರ ಭಾಗದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಎಚ್1ಎನ್1 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಒಂದೇರಡು ಮಂದಿ ಕೇರಳಕ್ಕೆ ಹೋಗಿ ಬಂದವರಿದ್ದಾರೆ ಎಂಬುವುದು ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ಜಲ ಪ್ರಳಯದ ಬಳಿಕ ಕೇರಳದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿವೆ. ಸ್ಥಳೀಯರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ವೈರಾಣು ಹರಡದಂತೆ ನೋಡಿಕೊಳ್ಳಬೇಕು ಎಂದು ಹಿರಿಯ ವೈದ್ಯಾಧಿಕಾರಿ ಡಾ.ಟಿ.ಕೆ.ಸುನಂದಾ ಹೇಳಿದರು.
2ರಿಂದ 8 ಗಂಟೆ ಜೀವಂತ: ಎಚ್1 ಎನ್1 ವೈರಾಣುಗಳು 2ರಿಂದ 8 ಗಂಟೆಗಳ ಕಾಲ ಜೀವಂತವಾಗಿರುತ್ತವೆ. ಹೀಗಾಗಿ ಜನರು ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಬಳಸಿದ ಮಾಸ್ಕ್ ಅನ್ನು ಪದೇ ಪದೆ ಬಳಸದೇ ಬದಲಾವಣೆ ಮಾಡುತ್ತಿರಬೇಕು. ಪ್ರತಿ ದಿನ ಒಂದು ಕಪ್ ಬಿಸಿ ನೀರಿನಲ್ಲಿ ಉಪ್ಪು ಹಾಕಿ, ಆ ನೀರನ್ನು ಬಾಯಿಯೊಳಗೆ ಹಾಕಿಕೊಂಡು ಮುಕ್ಕರಿಸಬೇಕು. ಕೆಮ್ಮು, ಜ್ವರ ಕಾಣಿಸಿಕೊಂಡರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಮತಾ ತಿಳಿಸಿದರು.
ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ: ಹೆರಿಗೆ ವೇಳೆ ಅನಗತ್ಯ ಚಿಕಿತ್ಸೆ ನೀಡುವ ಜತೆಗೆ ನವಜಾತ ಶಿಶುವಿಗೆ ಕಿರುಕುಳ ನೀಡಲಾಗಿದೆ ಎಂದು ಐಎಎಸ್ ಪಲ್ಲವಿ ಅಕುರಾತಿ ಅವರು, ಖಾಸಗಿ ನರ್ಸಿಂಗ್ ಹೋಮ್ ಮೇಲೆ ಮಾಡಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಸಂಬಂಧ ರಚಿಸಲಾಗಿದ್ದ ತನಿಖಾ ತಂಡ ಕೂಡ ವರದಿ ನೀಡಿದೆ. ಈ ವರದಿ ಜಿಲ್ಲಾಧಿಕಾರಿಗಳ ಕೈ ಸೇರಿದ್ದು, ಈ ಸಂಬಂಧ ಅವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಿ.ಎ.ಶ್ರೀನಿವಾಸ ಇದೇ ವೇಳೆ ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.