460 ಮೀ. ವೈಟ್‌ಟಾಪಿಂಗ್ ರಸ್ತೆ ಇಂದು ಸಂಚಾರಕ್ಕೆ ಮುಕ್ತ
Team Udayavani, Dec 25, 2017, 12:35 PM IST
ಬೆಂಗಳೂರು: ನಾಗವಾರ ಹೊರವರ್ತುಲ ರಸ್ತೆಯಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ನಿಯಂತ್ರಿಸಲು ಹೆಣ್ಣೂರು ರಸ್ತೆಯಿಂದ ಬಾಬುಸಪಾಳ್ಯವರೆಗೆ ಕಾಮಗಾರಿ ಪೂರ್ಣಗೊಂಡಿರುವ 460 ಮೀ. ವೈಟ್‌ಟಾಪಿಂಗ್ ರಸ್ತೆಯನ್ನು ಸೋಮವಾರ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ.
ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಏಕಕಾಲದಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡ ಪರಿಣಾಮ ತೀವ್ರ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಬಿಎಂಪಿ ಪ್ರಮುಖ ರಸ್ತೆಗಳಲ್ಲಿ ವೈಟ್‌ಟಾಪಿಂಗ್ ಕೈಗೊಳ್ಳದಿರಲು, ಜತೆಗೆ ಕಾಮಗಾರಿ ಪೂರ್ಣಗೊಂಡ ರಸ್ತೆಗಳನ್ನು ಹಂತ ಹಂತವಾಗಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ತೀರ್ಮಾನಿಸಿದೆ.
ನಾಗವಾರ ಹೊರವರ್ತುಲ ರಸ್ತೆಯಲ್ಲಿ ಸುಮಾರು 2.7 ಕಿ.ಮೀ. ರಸ್ತೆ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಮೊದಲ ಹಂತವಾಗಿ ಹೆಣ್ಣೂರು ರಸ್ತೆಯಿಂದ ಬಾಬುಸಪಾಳ್ಯವರೆಗೆ ಪೂರ್ಣಗೊಂಡಿರುವ ರಸ್ತೆ ಸೋಮವಾರ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಜತೆಗೆ ಇದೇ ಮಾರ್ಗದಲ್ಲಿ ಪೂರ್ಣಗೊಂಡಿರುವ 900 ಮೀಟರ್ ರಸ್ತೆಯೂ ಸಹ ಮುಂದಿನ ಮೂರು ದಿನಗಳಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ ಎಂದು ಪಾಲಿಕೆಯ ಎಂಜಿನಿಯರ್ ಮಾಹಿತಿ ನೀಡಿದ್ದಾರೆ.
ಕಾಮಗಾರಿ ತಡವಾಗಲು ಕಾರಣವೇನು?: ವೈಟ್‌ಟಾಪಿಂಗ್ ಕಾಮಗಾರಿಗಾಗಿ ಬಳಸಲಾಗುತ್ತಿರುವ ಕಾಂಕ್ರಿಟ್ ಕ್ಯೂರಿಂಗ್‌ಗೆ 15 ದಿನಗಳು ಬೇಕಾಗುತ್ತದೆ. ಆದರೆ, ಸದ್ಯ ಕಾಮಗಾರಿ ನಡೆಸುತ್ತಿರುವ ರಸ್ತೆಗಳಲ್ಲಿ ಭಾರಿ ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ರಸ್ತೆಗೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಕ್ಯೂರಿಂಗ್ ಅವಧಿಯನ್ನು 28 ದಿನಗಳಿಗೆ ಹೆಚ್ಚಿಸಲಾಗಿದ್ದು, ಸೋಮವಾರ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ಪಾಲಿಕೆಯ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಕೆ.ಟಿ.ನಾಗರಾಜ್ ಮಾಹಿತಿ ನೀಡಿದ್ದಾರೆ.
ದಟ್ಟಣೆ ರಸ್ತೆಗಳಲ್ಲಿ ಕಾಮಗಾರಿ ಸ್ಥಗಿತ: ತೀವ್ರ ವಾಹನ ಸಂಚಾರವಿರುವ ರಸ್ತೆಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ದಟ್ಟಣೆ ಜಾಸ್ತಿಯಾಗುವ ಸಾಧ್ಯತೆಯಿದ್ದು, ವಾಹನಸವಾರರು ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಸದ್ಯ ಕೆಲಸ ಆರಂಭಿಸಿರುವ ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಪ್ರಮುಖ ರಸ್ತೆಗಳಲ್ಲಿನ ಕಾಮಗಾರಿ ಸ್ಥಗಿತಗೊಳಿಸಲಾಗುವುದು. ನಂತರ ಕಡಿಮೆ ದಟ್ಟಣೆಯಿರುವ, ಪರ್ಯಾಯ ಮಾರ್ಗಗಳಿರುವ ಹಾಗೂ ವಾರ್ಡ್‌ಗಳಲ್ಲಿ ರಸ್ತೆಗಳಲ್ಲಿ ಕಾಮಗಾರಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
9 ಕಿ.ಮೀ. ಸಂಚಾರಕ್ಕೆ ಮುಕ್ತ: ಮೊದಲ ಹಂತದಲ್ಲಿ ಮೈಸೂರು ರಸ್ತೆ, ಹೊಸೂರು ರಸ್ತೆ, ನಾಗವಾರ ಹೊರವರ್ತುಲ ರಸ್ತೆ, ವಿಜಯನಗರ ಮೆಟ್ರೊ ಸ್ಟೇಷನ್ ಹಾಗೂ ಕೋರಮಂಗಲ 20ನೇ ಮುಖ್ಯರಸ್ತೆಯಲ್ಲಿ ಒಟ್ಟು 9 ಕಿ.ಮೀ. ಉದ್ದದ ವೈಟ್‌ಟಾಪಿಂಗ್ ಕಾಮಗಾರಿ ಬಹುತೇಕ ಮುಕ್ತಾಯ ಹಂತದಲ್ಲಿದ್ದು, ಜನವರಿ ಎರಡನೇ ವಾರದೊಳಗೆ ಐದೂ ರಸ್ತೆಗಳ ಒಟ್ಟು 9 ಕಿ.ಮೀ. ಉದ್ದದ ರಸ್ತೆಯನ್ನು ಹಂತ ಹಂತವಾಗಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರಮುಖ ರಸ್ತೆಗಳಲ್ಲಿ ವೈಟ್‌ಟಾಪಿಂಗ್ ಕೈಬಿಡುತ್ತಿರುವುದೇಕೆ?: ನಗರದ ಪ್ರಮುಖ ಐದು ರಸ್ತೆಗಳಲ್ಲಿ ನಡೆಸುತ್ತಿರುವ ವೈಟ್‌ಟಾಪಿಂಗ್ ಕಾಮಗಾರಿಯಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಚುನಾವಣಾ ವರ್ಷವಾಗಿರುವುದರಿಂದ ಎಲ್ಲೆಡೆ ದಟ್ಟಣೆ ಸಮಸ್ಯೆಯಿದ್ದರೆ, ಅದು ಜನರಲ್ಲಿ ಸರ್ಕಾರದ ವಿರುದ್ಧ ನಕಾರಾತ್ಮಕ ಭಾವನೆ ಮೂಡಿಸುವ ಸಾಧ್ಯತೆಯಿದೆ.ಹೀಗಾಗಿ ಸದ್ಯ ಪೂರ್ಣಗೊಂಡಿರುವ ರಸ್ತೆಗಳನ್ನು ಶೀಘ್ರ ಸಾರ್ವಜನಿಕರಿಗೆ ಮುಕ್ತಗೊಳಿಸಿ, ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವರು ಸೂಚಿಸಿದ್ದಾರೆ ಎಂಬ ಮಾತೂ ಕೇಳಿಬಂದಿದೆ.
ಪಾಲಿಕೆಯ ಅಧಿಕಾರಿಗಳು ಪೂರ್ವ ಸಿದ್ಧತೆಯಿಲ್ಲದೆ ನಗರದ ಪ್ರಮುಖ ರಸ್ತೆಗಳಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಪರಿಣಾಮ ತೀವ್ರ ದಟ್ಟಣೆ ಉಂಟಾಗುತ್ತಿದ್ದು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ವೈಟ್‌ಟಾಪಿಂಗ್ ಕಾಮಗಾರಿಯನ್ನು ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ.
-ಆರ್.ಸಂಪತ್‌ರಾಜ್, ಮೇಯರ್
ವಾಹನ ಸಂಚಾರ ಹೆಚ್ಚಾಗಿರುವ ರಸ್ತೆಗಳಲ್ಲಿ ಕಾಮಗಾರಿ ನಡೆಸುವುದರಿಂದ ದಟ್ಟಣೆ ಸಮಸ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಹಾಗಾಗಿ ಹೆಚ್ಚು ಸಂಚಾರ ದಟ್ಟಣೆಯಿರುವ ರಸ್ತೆಗಳಲ್ಲಿ ಯೋಜನೆಯ ಕೊನೆಯಲ್ಲಿ ಕಾಮಗಾರಿ ನಡೆಸಲು ನಿರ್ಧರಿಸಿದ್ದು, ನಗರದ ಒಳ ರಸ್ತೆಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಲಾಗುವುದು.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
ಮೊದಲ ಹಂತದ ರಸ್ತೆಗಳ ವಿವರ
ರಸ್ತೆ ಕಾಮಗಾರಿ ಪೂರ್ಣಗೊಂಡ ರಸ್ತೆ ಉದ್ದ (ಕಿ.ಮೀ ಗಳಲ್ಲಿ)
-ವಿಜಯನಗರ ಮೆಟ್ರೊ ಸ್ಟೇಷನ್ 0.47
-ನಾಗವಾರ ಹೊರವರ್ತುಲ ರಸ್ತೆ 2.68
-ಹೊಸೂರು ರಸ್ತೆ 2.02
-ಮೈಸೂರು ರಸ್ತೆ 2.33
-ಕೋರಮಂಗಲ 20ನೇ ಮುಖ್ಯರಸ್ತೆ 0.59
-ಒಟ್ಟು 8.11
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.