4ನೇ ಸುತ್ತಿನ ಆರ್‌ಟಿಇ ಸೀಟು ಹಂಚಿಕೆಗೆ ಸಿದ್ಧತೆ
Team Udayavani, Jul 18, 2017, 4:30 AM IST
ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ ) ಅಡಿ ಸೀಟು ಸಿಗುವುದೆಂದು ಕಾದು ಕುಳಿತು ಸೀಟು ಲಭ್ಯವಾಗದ ಹೆತ್ತವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ ಒಂದೂವರೆ ತಿಂಗಳು ಕಳೆದ ಅನಂತರ ಈಗ ನಾಲ್ಕನೇ ಸುತ್ತಿನ ಸೀಟು ಹಂಚಿಕೆಗೆ ಶಿಕ್ಷಣ ಇಲಾಖೆ ಮುಂದಾಗಿದೆ. 3ನೇ ಸುತ್ತಿನ ಪ್ರಕ್ರಿಯೆ ಮುಗಿದ ಅನಂತರ ಖಾಲಿ ಉಳಿದಿದ್ದ ಸೀಟುಗಳನ್ನು ಭರ್ತಿ ಮಾಡಿಕೊಂಡಿರುವ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ನಾಲ್ಕನೇ ಸುತ್ತು ಪ್ರವೇಶ ಬೇಡವೇ ಬೇಡ ಎಂದು ವಿರೋಧ ವ್ಯಕ್ತಪಡಿಸುತ್ತಿವೆ. ಇದರ ನಡುವೆ, ಖಾಸಗಿ ಶಾಲೆಯಲ್ಲಿ ದುಬಾರಿ ಶುಲ್ಕ ಕೊಟ್ಟು ಪಡೆದಿರುವ ಸೀಟಿನಡಿ ಮಗುವಿನ ಶಿಕ್ಷಣ ಮುಂದುವರಿಸುವುದಾ? ಅಥವಾ ನಾಲ್ಕನೇ ಆರ್‌ಟಿಇ ಸುತ್ತಿನಲ್ಲಿ ಸೀಟು ಸಿಕ್ಕರೆ ಅಲ್ಲಿಂದ ಮಗುವನ್ನು ಬಿಡಿಸಿ ಆರ್‌ಟಿಇ ಅಡಿ ಸೇರಿಸುವುದಾ ಎಂಬ ಗೊಂದಲ ಹೆತ್ತವರದು.
ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಮೂರನೇ ಸುತ್ತಿನ ಸೀಟು ಹಂಚಿಕೆಯಾಗಿ ತಿಂಗಳು ಕಳೆದರೂ, ಎಷ್ಟು ಮಕ್ಕಳು ದಾಖಲಾಗಿದ್ದಾರೆಂಬ ನಿರ್ದಿಷ್ಟ ಮಾಹಿತಿಯೂ ಸಾರ್ವಜನಿಕ ಶಿಕ್ಷಣ ಇಲಾಖೆ ಬಳಿ ಇಲ್ಲ. ಹೀಗಾಗಿ, ಒಟ್ಟಾರೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ನಾಲ್ಕನೇ ಸುತ್ತಿನ ಸೀಟು ಹಂಚಿಕೆ ಸಂಪೂರ್ಣ ಗೋಜಲುಮಯವಾಗಿದೆ.
ಲಭ್ಯ ಸೀಟು: 2017-18ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಯಲ್ಲಿ 1.28 ಲಕ್ಷ ಸೀಟು ಲಭ್ಯವಿದ್ದು, ಮೊದಲ ಸುತ್ತಿನ ಆನ್‌ಲೈನ್ ಲಾಟರಿಯಲ್ಲಿ 86 ಸಾವಿರ ಮಕ್ಕಳು ಸೀಟು ಪಡೆದಿದ್ದರು. ಉಳಿದ 40 ಸಾವಿರ ಸೀಟಿಗೆ ಎರಡನೇ ಸುತ್ತಿನ ಸೀಟು ಹಂಚಿಕೆ ನಡೆದು, 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸೀಟು ಪಡೆದಿದ್ದರು. ಮೂರನೇ ಸುತ್ತಿನ ಸೀಟು ಹಂಚಿಕೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾ ಹಂತದಲ್ಲೇ ಮಾಡುವ ತೀರ್ಮಾನಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜೂನ್ 14ರಂದು ಶಿಕ್ಷಣ ಇಲಾಖೆ ಕಚೇರಿಯಲ್ಲೆ ಆನ್‌ಲೈನ್ ಲಾಟರಿ ಮೂಲಕ ಹಂಚಿಕೆ ಮಾಡಲಾಗಿತ್ತು.
ಮೂರನೇ ಸುತ್ತಿನಲ್ಲಿ 20 ಸಾವಿರಕ್ಕೂ ಅಧಿಕ ಸೀಟುಗೆ 95,898 ಅರ್ಜಿಯನ್ನು ಪರಿಗಣಿಸಲಾಗಿತ್ತು. ಆದರೆ, ಸೀಟು ಹಂಚಿಕೆಯಾಗಿರುವ ವಿದ್ಯಾರ್ಥಿಗಳ ಪೈಕಿ ಎಷ್ಟು ಮಂದಿ ಶಾಲೆಗೆ ದಾಖಲಾಗಿದ್ದಾರೆಂಬ ಸ್ಪಷ್ಟ ಮಾಹಿತಿ ಇನ್ನೂ ಶಿಕ್ಷಣ ಇಲಾಖೆಗೆ ಸಿಕ್ಕಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಹಂಚಿಕೆಯಾಗಿರುವ, ಹಂಚಿಕೆಯಾಗದೇ ಉಳಿದ ಸೀಟುಗಳ ಮಾಹಿತಿಯನ್ನು ಈಗಷ್ಟೆ ಪಡೆಯುತ್ತಿದ್ದಾರೆ.
ಅರ್ಜಿ ತಿದ್ದುಪಡಿಗೆ ಅವಕಾಶ
ಮೂರನೇ ಸುತ್ತಿನ ಸೀಟು ಹಂಚಿಕೆ ಅನಂತರ ದಾಖಲಾದ ವಿದ್ಯಾರ್ಥಿಗಳ ಮಾಹಿತಿ ಶಿಕ್ಷಣ ಇಲಾಖೆಗೆ ತಲುಪಿದ ಅನಂತರ ನಾಲ್ಕನೇ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ. ಈಗಾಗಲೇ ಅರ್ಜಿ ಸಲ್ಲಿಸಿ, ಸೀಟು ಹಂಚಿಕೆಯಾಗದೆ ಇರುವ ಪಾಲಕರು ತಮ್ಮ ಸಮೀಪದ ಶಾಲೆಯಲ್ಲಿ ಆರ್‌ಟಿಇ ಅಡಿ ಸೀಟು ಲಭ್ಯವಿರುವ ಬಗ್ಗೆ www.schooleducation.comನಲ್ಲಿ ಮಾಹಿತಿ ಪಡೆದು, ಮೂಲ ಅರ್ಜಿಯನ್ನು ತಿದ್ದುಪಡಿ ಮಾಡಿಕೊಳ್ಳಬಹುದು. ಜು.20ರ ತನಕ ಅರ್ಜಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.
– ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.