5 ಲಕ್ಷ ಕನ್ನಡ ಪುಸ್ತಕಗಳು ಅನಾಥ!
Team Udayavani, Sep 16, 2017, 6:00 AM IST
ಬೆಂಗಳೂರು: ಓದುಗರ ಅಭಿರುಚಿಗೆ ತಕ್ಕದಲ್ಲದ ಪುಸ್ತಕಗಳು, ಆಕರ್ಷಕ ಪ್ರದರ್ಶನ (ಡಿಸ್‌ಪ್ಲೇ) ಕೊರತೆ, ಒತ್ತಡ ಮತ್ತು ಲಾಬಿಗೆ ಮಣಿದು ಪುಸ್ತಕಗಳನ್ನು ಮುದ್ರಿಸಿದ ಪರಿಣಾಮ ಇಂದು ಗೋದಾಮಿನಲ್ಲಿ ಸುಮಾರು ಐದು ಲಕ್ಷ ಕನ್ನಡ ಪುಸ್ತಕಗಳು ಕೇಳುವರಿಲ್ಲದೆ ಬೇಡಿಕೆ ಕಳೆದುಕೊಂಡು ಧೂಳು ಹಿಡಿಯುತ್ತಿವೆ.
ದಶಕಗಳಿಂದ ಕೋಟ್ಯಂತರ ರೂ.ವೆಚ್ಚ ಮಾಡಿ ಕನ್ನಡಿಗರಿಗೆ, ಕನ್ನಡ ಸಾರಸ್ವತ ಲೋಕದ ಲೇಖಕರು, ಬರಹಗಾರರು, ಕವಿಗಳನ್ನು ಪರಿಚಯಿಸುವ ಸದುದ್ದೇಶದಿಂದ ಮುದ್ರಿಸಲಾದ ಪುಸ್ತಕಗಳು ಓದುಗರ ಕೈಸೇರದೆ ಸರ್ಕಾರದ ಮುದ್ರಣ ಯೋಜನೆಯನ್ನೇ ಅಣಕಿಸುವಂತಿದೆ.
ಹತ್ತಾರು ವರ್ಷಗಳಿಂದ ಮಾರಾಟವಾಗದೇ ಉಳಿದ ಪುಸ್ತಕಗಳನ್ನು ಖಾಲಿ ಮಾಡಲು ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹರಸಾಹಸ ಪಡುತ್ತಿದೆ. ಓದುಗರನ್ನು ಸೆಳೆಯಲು ಭಾರೀ ರಿಯಾಯಿತಿಯನ್ನು ಘೋಷಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಓದುಗರನ್ನು ಆಕರ್ಷಿಸಲು ಯೋಜಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಾನಪದ ಅಕಾಡೆಮಿ ಸೇರಿದಂತೆ 12 ಅಕಾಡೆಮಿಗಳು ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಪ್ರಕಟಿಸಿರುವ ನೂರಾರು ಶೀರ್ಷಿಕೆಗಳ ಸುಮಾರು 4ರಿಂದ 5 ಲಕ್ಷಕ್ಕೂ ಅಧಿಕ ಪುಸ್ತಕಗಳು ಗೋದಾಮಿನಲ್ಲಿದ್ದು, ಸರ್ಕಾರಕ್ಕೆ ಕೋಟ್ಯಂತರ ರೂ.ನಷ್ಟವಾಗುತ್ತಿದ್ದರೂ, ಮಾರಾಟಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.
ಈ ಬೆನ್ನಲ್ಲೇ ಕನ್ನಡ ಪುಸ್ತಕ ಪ್ರಾಧಿಕಾರ ಅನೇಕ ವರ್ಷಗಳಿಂದ ಗೋದಾಮಿನಲ್ಲಿ ಉಳಿದಿದ್ದ ಪುಸ್ತಕಗಳನ್ನು ಶೇ.50ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ವಿವಿಧ ಅಕಾಡೆಮಿಗಳು ಇದೇ ಹಾದಿ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗಿದೆ!
ಎಚ್ಚೆತ್ತುಕೊಳ್ಳದ ಅಕಾಡೆಮಿಗಳು
ಅಕಾಡೆಮಿಗಳು ಪ್ರತಿ ವರ್ಷ ತಮ್ಮ ಕಾರ್ಯಕ್ಷೇತ್ರದ ಕುರಿತು ಅನೇಕ ಕೃತಿಗಳನ್ನು ಮುದ್ರಿಸಿಟ್ಟುಕೊಳ್ಳುತ್ತಿವೆಯೇ ಹೊರತು ಮಾರಾಟಕ್ಕೆ ಹೆಚ್ಚು ಶ್ರಮ ವಹಿಸುತ್ತಿಲ್ಲ. ಜತೆಗೆ ಕೃತಿಗಳ ಮಾರಾಟದ ಲಾಭ ಅಥವಾ ನಷ್ಟದ ಲೆಕ್ಕಾಚಾರದ ಮಾಹಿತಿ ಯಾವ ಅಕಾಡೆಮಿ, ಪ್ರಾಧಿಕಾರಗಳಲ್ಲೂ ಸಿಗುತ್ತಿಲ್ಲ.
ವಿಶೇಷವೆಂದರೆ, ಯಾವ ಅಕಾಡೆಮಿಗಳಲ್ಲಿ ಎಷ್ಟು ಶೀರ್ಷಿಕೆಗಳ, ಎಷ್ಟು ಪುಸ್ತಕಗಳು ಮಾರಾಟವಾಗದೇ ಹಾಗೆಯೇ ಉಳಿದಿವೆ ಎಂಬುದರ ಮಾಹಿತಿಯೇ ಅಕಾಡೆಮಿಗಳ ಬಳಿ ಇಲ್ಲ. ಅದರ “ಡಾಟಾ ಎಂಟ್ರಿ ವ್ಯವಸ್ಥೆ’ಯನ್ನು ಇದುವರೆಗೂ ಯಾವ ಅಕಾಡೆಮಿಗಳು ಮಾಡಿಲ್ಲ. ಮಾರಾಟವಾಗದೇ ಉಳಿದ ಪುಸ್ತಕಗಳನ್ನು ಹೇಗೆ ವಿಲೇವಾರಿ ಮಾಡಬೇಕೆಂಬ ಚಿಂತನೆ ನಡೆಸಿಲ್ಲ. ಇದರಿಂದ ಗೋದಾಮುಗಳಲ್ಲಿ ಪ್ರತಿ ವರ್ಷ ಮುದ್ರಿಸಿದ ಪುಸ್ತಕಗಳನ್ನು ತುಂಬಿಸುತ್ತಲೇ ಇವೆ.
ಪುಸ್ತಕ ಆಯ್ಕೆಗೆ ಒತ್ತಡ?
ಕನ್ನಡ ಪುಸ್ತಕ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಎಲ್ಲಾ ಅಕಾಡೆಮಿಗಳ ಪುಸ್ತಕಗಳ ಮಾರಾಟ, ಮುದ್ರಣದ ಜವಾಬ್ದಾರಿಯನ್ನು ಪ್ರಾಧಿಕಾರವೇ ನಿರ್ವಹಿಸಬೇಕಿತ್ತು. ಆದರೆ, ನಂತರ ಮೂರ್‍ನಾಲ್ಕು ವರ್ಷದಲ್ಲೇ ಅದು ಬದಲಾಗಿದ್ದು, ಅಕಾಡೆಮಿಗಳೇ ತಮಗೆ ಬೇಕಾದ ಪುಸ್ತಕಗಳ ಆಯ್ಕೆ, ಮುದ್ರಣಕ್ಕೆ ತೊಡಗಿವೆ. ಖಾಸಗಿ ಪ್ರಕಾಶಕನೊಬ್ಬ ಆಯ್ಕೆ ಮಾಡುವಷ್ಟು ಖಚಿತವಾಗಿ ಸರ್ಕಾರಿ ಸಂಸ್ಥೆಗಳು ಮೌಲ್ಯವುಳ್ಳ ಪುಸ್ತಕಗಳ ಆಯ್ಕೆಯಲ್ಲಿ ವಿಫಲವಾಗುತ್ತಿವೆ. ಇದಕ್ಕೆ ಹೊರಗಿನ ಒತ್ತಡಗಳು ಪ್ರಭಾವ ಬೀರಿರುವ ಸಾಧ್ಯತೆ ಇದ್ದು, ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಒತ್ತಡಗಳು ಕಡಿಮೆಯಾಗಿವೆ ಎಂಬುದು ಅಕಾಡೆಮಿಗಳ ಕೆಲವು ಮಾಜಿ ಸದಸ್ಯರ ಅಭಿಪ್ರಾಯ.
ಆದೇಶವಿದ್ದರೂ ಮಾರಾಟವಿಲ್ಲ!
ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಎಲ್ಲಾ ಅಕಾಡೆಮಿಗಳ ಪ್ರಕಟಣೆಗಳನ್ನು ಶೇ.20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು 2009 ಅಕ್ಟೋಬರ್ 29ರಂದೇ ಸರ್ಕಾರ ಆದೇಶ ಮಾಡಿತ್ತು. 10 ವರ್ಷಗಳ ಮೇಲ್ಪಟ್ಟ ಅವಧಿಯ ಪುಸ್ತಕಗಳನ್ನು ಶೇ.50ರಿಂದ 55ರಷ್ಟು ಮತ್ತು 6 ವರ್ಷದಿಂದ 10 ವರ್ಷದ ಅವಧಿಯ ಪುಸ್ತಕಗಳು ಶೇ.30ರಿಂದ 35ರಷ್ಟು, 3ರಿಂದ 5 ವರ್ಷಗಳ ಅವಧಿಯ ಪುಸ್ತಕಗಳನ್ನು ಶೇ.20ರಿಂದ 25ರಷ್ಟು ಹಾಗೂ ಹೊಸ ಪ್ರಕಟಣೆಗಳನ್ನು 2 ವರ್ಷದ ಅವಧಿವರೆಗೆ ಶೇ.15ರಿಂದ 20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಸರ್ಕಾರ ಆದೇಶ ಮಾಡಿತ್ತು. ಆದರೂ ಗೋದಾಮಿನಲ್ಲಿ ವರ್ಷದಿಂದ ವರ್ಷಕ್ಕೆ ಪುಸ್ತಕಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ವರದಿಗೆ ಸೂಚನೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನಿರ್ದೇಶಕರಾಗಿ ವಿಶುಕುಮಾರ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ಕಳೆದ ಎರಡು ವಾರಗಳ ಹಿಂದಷ್ಟೇ ಈ ಕುರಿತು ಸಭೆ ನಡೆಸಿದ್ದರು. ಎಲ್ಲಾ ಪ್ರಾಧಿಕಾರಗಳು ಮತ್ತು ಅಕಾಡೆಮಿಗಳು ತಮ್ಮ ವ್ಯಾಪ್ತಿಯಲ್ಲಿ ಮುದ್ರಿಸಿ ಖರ್ಚಾಗದೆ ಉಳಿದಿರುವ ಪುಸ್ತಕಗಳ ಸಂಪೂರ್ಣ ಮಾಹಿತಿಯನ್ನು ಒಂದು ತಿಂಗಳೊಳಗೆ ನೀಡುವಂತೆ ಸೂಚನೆ ನೀಡಿದ್ದಾರೆ.
ಮಾರಾಟವಾಗದೆ ಉಳಿದ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಇಲಾಖೆ ಕ್ರಮಕೈಗೊಂಡಿದೆ. ಜಿಲ್ಲಾವಾರು ಪುಸ್ತಕ ಮಳಿಗೆಗಳ ಕಾರ್ಯವೈಖರಿ ಬಗ್ಗೆ ಗಮನ ಹರಿಸಲಾಗಿದೆ.
– ವಿಶುಕುಮಾರ್, ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
ಮುದ್ರಿತ ಪುಸ್ತಕಗಳನ್ನು ಸಹಾಯಕ ನಿರ್ದೇಶಕ ಕಚೇರಿಗೆ ತುಂಬಲಾಗುತ್ತದೆ. ವಿಪರ್ಯಾಸವೆಂದರೆ ಆ ಅಧಿಕಾರಿಗಳಿಗೆ 2-3 ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿರುತ್ತದೆ. ಅವರು ಪುಸ್ತಕಗಳ ಪ್ರದರ್ಶನ(ಡಿಸ್‌ಪ್ಲೇ), ಮಾರಾಟ, ವಹಿವಾಟು ನಿರ್ವಹಿಸಬೇಕೇ ಅಥವಾ ತಮ್ಮ ಜವಾಬ್ದಾರಿ ನಿಭಾಯಿಸಬೇಕೇ?. ವಿವಿಧೆಡೆ ಆರಂಭಿಸಲಾಗಿರುವ ಕೆಲವು ಪುಸ್ತಕ ಮಳಿಗೆಗಳು ಸರಿಯಾಗಿ ನಿರ್ವಹಿಸುತ್ತಿಲ್ಲ. ಇದು ಕೂಡ ಪುಸ್ತಕ ಉಳಿಯಲು ಕಾರಣವಿರಬಹುದು.
– ಡಾ.ಬಂಜಗೆರೆ ಜಯಪ್ರಕಾಶ್, ಮಾಜಿ ಅಧ್ಯಕ್ಷರು, ಪುಸ್ತಕ ಪ್ರಾಧಿಕಾರ.
ಸಾಹಿತ್ಯ ಅಕಾಡೆಮಿ ಇತ್ತೀಚಿಗೆ ಮುದ್ರಿಸಿದ ಬಹುತೇಕ ಪುಸ್ತಕಗಳಿಗೆ ಬೇಡಿಕೆ ಇದೆ. ಆರಂಭದಲ್ಲಿ ಅಕಾಡೆಮಿಗೆ ಆಯ್ಕೆಯಾದವರು ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಇದರಿಂದ ಸಂಗ್ರಹದಲ್ಲಿರುವ ಪುಸ್ತಕಗಳ ಮಾಹಿತಿಯೇ ಸಿಗುವುದಿಲ್ಲ. ಹಳೆ ಮಂದಿ ಸರಿಯಾಗಿ ನಿರ್ವಹಣೆ ಮಾಡಿದ್ದರೆ, ಈ ಪರಿಸ್ಥಿತಿ ಇರುತ್ತಿರಲಿಲ್ಲ.
-ಡಾ.ಮಾಲತಿ ಪಟ್ಟಣಶೆಟ್ಟಿ, ಮಾಜಿ ಅಧ್ಯಕ್ಷೆ, ಕರ್ನಾಟಕ ಸಾಹಿತ್ಯ ಅಕಾಡೆಮಿ.
*ಸಂಪತ್ ತರೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!
Incentive: ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಪ್ರೋತ್ಸಾಹಧನ ದ್ವಿಗುಣ: ಸಚಿವ ಮಹದೇವಪ್ಪ
Mining Case: ಶಿಕ್ಷೆ ರದ್ದು ಕೋರಿ ಶಾಸಕ ಸೈಲ್ ಸೇರಿ ನಾಲ್ವರು ಹೈಕೋರ್ಟ್‌ಗೆ
MUST WATCH
ಹೊಸ ಸೇರ್ಪಡೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.