ಸಚಿವ ಮುರುಗೇಶ್ ನಿರಾಣಿ 56 ನೇ ಹುಟ್ಟುಹಬ್ಬ| ಅಭಿಮಾನಿಗಳಿಂದ 56 ವಿವಿಧ ಸಾಮಾಜಿಕ ಸೇವೆ
ಮುರುಗೇಶ್ ನಿರಾಣಿ ಅಭಿಮಾನಿ ಬಳಗದಿಂದ ವಿಶಿಷ್ಟ ಕಾರ್ಯಕ್ರಮ
Team Udayavani, Aug 29, 2021, 6:15 PM IST
ಬೆಂಗಳೂರು: ಹೊಸ ಹೊಸ ಯೋಜನೆಗಳ ಮೂಲಕ ಇಲಾಖೆಗೆ ಕಾಯಕಕಲ್ಪ ನೀಡುತ್ತಿರುವ ಬೃಹತ್ ಮತ್ತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರಿಗೆ ನಾಳೆ 56 ನೇ ಹುಟ್ಟಹಬ್ಬದ ಸಂಭ್ರಮ. ತಾವು ವಹಿಸಿಕೊಂಡ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಬದ್ದತೆ ಹೊಂದಿರುವ ನಿರಾಣಿ ಅವರಿಗೆ ಈ ಬಾರಿಯ ಹುಟ್ಟುಹಬ್ಬವನ್ನು ಸಾರ್ಥಕತೆಯ ಸೇವೆ ಎಂಬ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಆಚರಿಸಲು ಅಭಿಮಾನಿ ಬಳಗ ಮುಂದಾಗಿದೆ.
ವಿಶೇಷ ಎಂದರೆ, ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದಂದೇ ಅವರು ಪ್ರತಿವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತ ಬಂದಿದ್ದಾರೆ. 56ನೇ ಹುಟ್ಟಹಬ್ಬವನ್ನು ನಿರಾಣಿ ಅವರ ಅಭಿಮಾನಿಗಳು 56 ವಿಶಿಷ್ಟ ಹಾಗೂ ವಿನೂತನವಾದ ಕಲ್ಯಾಣ ಕಾರ್ಯಕ್ರಮಗಳನ್ನು ಬಾಗಲಕೋಟೆ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದಾರೆ.
ಗಲಗಲಿ, ಸಾವಳಗಿ, ಕಲಬುರಗಿ, ಮುದೋಳ, ಜಮಖಂಡಿ, ಮದಂಭಾವಿ, ಮುದೋಳ ತಾಲ್ಲೂಕು, ಅರಸನಕೊಪ್ಪ, ಬಾದಾಮಿ, ರಬಕವಿ ಸೇರಿದಂತೆ ನಾನಾ ಕಡೆ 56 ಕಾರ್ಯಕ್ರಮಗಳನ್ನು ಅಭಿಮಾನಿ ಬಳಗವು ಹಮ್ಮಿಕೊಂಡಿದೆ.
ಪರಿಸರವನ್ನು ಬೆಳೆಸಿ ಪೋಷಿಸುವ ನಿಟ್ಟಿನಲ್ಲಿ ಬೀಳಗಿ ಮತ್ತು ಮುಧೋಳ ವಿಧಾನಸಭಾ ಕ್ಷೇತ್ರಗಳಲ್ಲಿ ಲಕ್ಷಕ್ಕೂ ಅಧಿಕ ಸಸಿ ನೆಡುವ ವಿಶೇಷ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ. ಎಲ್ಲರಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.
ನೇತ್ರ ದೋಷ ಇರುವವರಿಗೆ ಉಚಿತವಾಗಿ ತಜ್ಞ ವೈದ್ಯರಿಂದ ಕಣ್ಣಿನ ಶಸ್ತ್ರ ಚಿಕಿತ್ಸೆ, ಕೃತಕ ಕಾಲು ಜೋಡಣೆ ಸೇರಿದಂತೆ ಹಲವು ರೀತಿಯ ಮಾನವೀಯ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ.
ಈಗಾಗಲೇ ಮುಧೋಳ ಮತ್ತು ಬೀಳಗಿಯಲ್ಲಿ ಒಂದು ಸಾವಿರ ವೈದ್ಯರು ಬೀಡುಬಿಟ್ಟಿದ್ದು, ಸಾರ್ವಜನಿಕರಿಗೆ ಉಚಿತ ಸೇವೆ ಒದಗಿಸುವತ್ತ ಕಾರ್ಯೋನ್ಮುಖರಾಗಿದ್ದಾರೆ.
ಕೃಷಿಗೆ ಸಂಬಂಧಿಸಿದ ಕಾರ್ಯಾಗಾರಗಳು, ಪಶು ಚಿಕಿತ್ಸೆ, ಗೋಶಾಲೆಗಳಲ್ಲಿ ಗೋ ಪೂಜೆ, ಮೇವು ವಿತರಣೆ, ಕೌಶಲ್ಯಾಭಿವೃದ್ಧಿ ತರಬೇತಿ, ಉಚಿತ ಪಶು ಚಿಕಿತ್ಸಾ ಶಿಬಿರ, ವನಮಹೋತ್ಸವ, ಯೋಗ, ಜನಪದ, ಸರ್ಕಾರಿ ಸೌಲಭ್ಯಗಳು ಮತ್ತು ಪೌಷ್ಠಿಕ ಆಹಾರಗಳ ಕುರಿತ ಜಾಗೃತಿ ಅಭಿಯಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿದೆ.
ನಾಳೆ 56ನೇ ವಸಂತಕ್ಕೆ ಕಾಲಿಡುತ್ತಿರುವ ಮುರುಗೇಶ್ ನಿರಾಣಿ ಅವರಿಗೆ ಅಭಿಮಾನಿಗಳು ಈಗಾಗಲೇ ಕಳೆದ 26ರಿಂದಲೂ ಜಿಲ್ಲೆಯ ವಿವಿಧೆಡೆ 56 ಸಾಮಾಜಿಕ ಸೇವಾ ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟಿದೆ. ಇದರ ಮುಂದುವರೆದ ಭಾಗವಾಗಿ ನಾಳೆ 500 ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಬಾಗಲಕೋಟೆ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಹಣ್ಣುಹಂಪಲು ವಿತರಣೆ ಮಾಡಲಾಗುತ್ತಿದೆ.
ಮುಧೋಳದಲ್ಲಿ ಪ್ರಜ್ವಲ್ ವಿವಿಧೋದ್ದೇಶ ಗಳ ಸೌಹಾರ್ದ ಸಹಕಾರ ಬ್ಯಾಂಕ್ ಅಗ್ರಿಮಾರ್ಟ್, ಬಾಗಲಕೋಟೆಯ ತೇಜಸ್ ಸ್ಕೂಲ್‍ನಲ್ಲಿ ಎಂಆರ್ ಎನ್ ಫೌಂಡೇಶನ್ವತಿಯಿಂದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಸಾನಿದ್ಯದಲ್ಲಿ ಸಾಹಿತಿಗಳು ಮತ್ತು ಪತ್ರಕರ್ತರು ಜಮಖಂಡಿಯಲ್ಲಿ ಸಾಹಿತಿಗಳು ಮತ್ತು ಹಿರಿಯ ಪತ್ರಕರ್ತರಿಂದ ಅಭಿವೃದ್ಧಿ ವಿಚಾರಣಾ ಸಂಕೀರ್ಣ, ಕಲಾಗದಿಯಲ್ಲಿ ವಿಶ್ವ ಭಾರತಿ ಸೇವಾ ಸಮಿತಿ ಹಾಗೂ ಬಿಜೆಪಿ ಘಟಕ ವತಿಯಿಂದ ಕೆಎಲ್‍ಇ ಆಸ್ಪತ್ರೆ ಬೆಳಗಾವಿ ಸಂಯುಕ್ತಾಶ್ರಯದಲ್ಲಿ ಬೃಹತ್ ಆರೋಗ್ಯ ಶಿಬಿರ, ಜಮಖಂಡಿಯ ಪಿಬಿ ಹೈಸ್ಕೂಲ್, ಲಯನ್ಸ್ ಮತ್ತು ಟೆನ್ನಿಸ್ ಕ್ಲಬ್‍ಗಳ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಬಿಎಲ್‍ಡಿ ಆಸ್ಪತ್ರೆ ವಿಜಯಾಪುರ ನೆರವೇರಿಸಿಕೊಡುವರು.
ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಯಾರೊಬ್ಬರು ಕೋವಿಡ್-19 ನಿಯಮಗಳನ್ನು ಉಲ್ಲಂಘಿಸದೆ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ.
ನಿಯಮಗಳನ್ನು ಪಾಲನೆ ಮಾಡಿದಾಗಲೇ ಹುಟ್ಟುಹಬ್ಬದ ಆಚರಣೆಗೆ ನಿಜವಾದ ಅರ್ಥ ಬರಲಿದೆ ಎಂದು ಅಭಿಮಾನಿಗಳು, ಹಿತೈಷಿಗಳು, ಕಾರ್ಯಕರ್ತರು ಸೇರಿದಂತೆ ಎಲ್ಲರಲ್ಲೂ ವಿನಂತಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.