Fraud: ಸೆಕೆಂಡ್ ಹ್ಯಾಂಡ್ ಕಾರು ಕೊಡಿಸುವುದಾಗಿ ವೈದ್ಯನಿಗೆ ಮಹಿಳೆಯಿಂದ 6 ಕೋಟಿ ವಂಚನೆ
Team Udayavani, Feb 8, 2024, 1:01 PM IST
ಬೆಂಗಳೂರು: ಕಾಸ್ಮೆಟಿಕ್ ಸರ್ಜರಿಗೆ ಬಂದ ಮಹಿಳೆಯೊಬ್ಬರು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರಿಗೆ ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಕೊಡಿಸುವುದಾಗಿ ನಂಬಿಸಿ ಬರೋಬರಿ 6.02 ಕೋಟಿ ರೂ. ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ವಿಜಯನಗರದ ನಿವಾಸಿ ಡಾ.ಗಿರೀಶ್ ಎಂಬವರು ನೀಡಿದ ದೂರಿನ ಮೇರೆಗೆ ರಾಜರಾಜೇಶ್ವರಿನಗರದ ಬಿಇಎಂಎಲ್ ಲೇಔಟ್ ನಿವಾಸಿ ಐಶ್ವರ್ಯಗೌಡ(32) ಎಂಬಾಕೆ ವಿರುದ್ಧ ವಂಚನೆ ಆರೋಪದಡಿ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.
2022ರ ಮಾರ್ಚ್‌ನಲ್ಲಿ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳಲು ಡಾ.ಗಿರೀಶ್ ಅವರ ಆಸ್ಪತ್ರೆಗೆ ಐಶ್ವರ್ಯ ಗೌಡ ಬಂದಿದ್ದರು. ಆ ನಂತರದ ದಿನಗಳಲ್ಲಿ ತಾನು ರಿಯಲ್ ಎಸ್ಟೇಟ್ ಫೈನಾನ್ಸ್ ವ್ಯವಹಾರದ ಜತೆಗೆ ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರುಗಳ ವ್ಯವಹಾರ ನಡೆಸುತ್ತಿದ್ದೇನೆ ಎಂದು ತಿಳಿಸಿದ್ದಳು. ಐಷಾರಾಮಿ ಕಾರನ್ನು ಖರೀದಿಸಲು ಯೋಚಿಸುತ್ತಿದ್ದ ಗಿರೀಶ್, ಕೆಲ ದಿನಗಳ ಬಳಿಕ ಆರೋಪಿಯನ್ನು ಸಂಪರ್ಕಿಸಿದ್ದರು. ಈ ವೇಳೆ ಕಡಿಮೆ ಬೆಲೆಗೆ ಕಾರು ಕೊಡಿಸುವುದಾಗಿ ನಂಬಿಸಿದ್ದ ಆಕೆ 2.75 ಕೋಟಿ ರೂ. ಅನ್ನು ಆನ್‌ಲೈನ್ ಆರ್‌ಟಿಜಿಎಸ್ ಮೂಲಕ ಮತ್ತು 3.25 ಕೋಟಿ ರೂ.ಅನ್ನು ನಗದಾಗಿ ಪಡೆದುಕೊಂಡಿದ್ದಳು. ಆದರೆ, ಕಾರನ್ನು ಕೊಡಿಸಿರಲಿಲ್ಲ. ಹಣ ವಾಪಸ್ ಕೊಡುವಂತೆ ಕೇಳಿದಾಗ ಸಬೂಬುಗಳನ್ನು ಹೇಳಿ, ದಿನದೂಡುತ್ತಿದ್ದಳು. 2023ರ ಡಿಸೆಂಬರ್‌ನಲ್ಲಿ ಹಣ ಹಿಂದಿರುಗಿಸುವಂತೆ ಕೇಳಿದಾಗ ವಿಜಯನಗರ ಕ್ಲಬ್ ಬಳಿ ಬರಲು ಸೂಚಿಸಿದ್ದಾಳೆ. ಅದರಂತೆ ಗಿರೀಶ್ ಮತ್ತು ಅವರ ಪತ್ನಿ ಕ್ಲಬ್ ಬಳಿ ಹೋದಾಗ, ಅವಾಚ್ಯವಾಗಿ ನಿಂದಿಸಿ, ಇದೇ ರೀತಿ ಹಣ ವಾಪಸ್ ಕೇಳಿದರೆ ನಿನ್ನ ವಿರುದ್ಧ ಅತ್ಯಾಚಾರದ ಸುಳ್ಳು ದೂರು ಕೊಡುತ್ತೇನೆ ಎಂದು ಬೆದರಿಸಿದ್ದಾಳೆ. ಅಲ್ಲದೆ ವಿಷಯವನ್ನು ಕೈ ಬಿಡಬೇಕಾದರೆ ಮತ್ತೆ 5 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿ 2 ಲಕ್ಷ ರೂ. ಸುಲಿಗೆ ಮಾಡಿದ್ದಾಳೆ ಎಂದು ವೈದ್ಯ ಗಿರೀಶ್ ದೂರಿನಲ್ಲಿ ಆರೋಪಿಸಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೈಕ್‌ಗಳ ಮಧ್ಯೆ ಡಿಕ್ಕಿ: ಸವಾರ 3 ಪಲ್ಟಿ ಹೊಡೆದರೂ ಪಾರು
Metro Rail: ಮೆಟ್ರೋ ಹಳಿಗೆ ಜಿಗಿದ ಏರ್‌ಫೋರ್ಸ್ ನಿವೃತ ಅಧಿಕಾರಿ
Bengaluru: ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರ!
Arrested: ಪತ್ನಿ, ಅತ್ತೆ ಮೇಲೆ ಹಲ್ಲೆ; ಆರೋಪಿ ಬಂಧನ
Bengaluru: ಟೆಕಿಯ 1 ತಿಂಗಳು ಡಿಜಿಟಲ್ ಅರೆಸ್ಟ್ ಮಾಡಿ 11.8 ಕೋಟಿ ರೂ. ವಂಚಿಸಿದ ಮೂವರ ಸೆರೆ