ಬೆಂಗಳೂರಿನ 7 ಜನ ಸುಪಾರಿ ಕಿಲ್ಲರ್ಸ್ ಬಂಧನ
Team Udayavani, Oct 19, 2017, 1:01 PM IST
ದಾವಣಗೆರೆ: ರೌಡಿಶೀಟರ್ ಓರ್ವನ ಕೊಲೆಗೆ ಸಂಚು ರೂಪಿಸಿದ್ದ ಬೆಂಗಳೂರು ಮೂಲದ 7 ಜನ ಸುಪಾರಿ ಕಿಲ್ಲರ್ಸ್‌ಗಳನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿ, 3 ಲಾಂಗ್, 3 ವಿಕೆಟ್, 1 ಲಾಂಗ್, ಕಾರದ ಪುಡಿ ಪ್ಯಾಕೆಟ್, ಪ್ಲಾಸ್ಟಿಕ್ ಹಗ್ಗ, 5 ಮೊಬೈಲ್ ಹಾಗೂ ಮಾರುತಿ ಓಮ್ನಿ ಕಾರು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮಿಲೇಔಟ್‌ನ ಯುವರಾಜ್ ಅಲಿಯಾಸ್ ಪಾಪು (28), ಎಸ್.ಹರೀಶ್ (19), ಶರತ್(20), ಜಿ. ಮಂಜುನಾಥ್(20), ಕೆ.ಎನ್. ಹರೀಶ್(19), ಪ್ರಕಾಶ್(19), ಜಯಂತ್ ಅಲಿಯಾಸ್ ಪಾಂಡು ಬಂಧಿತ ಆರೋಪಿಗಳು.
ದಾವಣಗೆರೆಯ ರೌಡಿಶೀಟರ್ ಬುಳ್ಳನಾಗನ ಹತ್ಯೆಗೆ ಕೆಟಿಜೆ ನಗರದ ಸಂತೋಷ್ ಅಲಿಯಾಸ್ ಕಣುಮ, ಕೃಷ್ಣಪ್ಪ, ಚಿರು ಅಲಿಯಾಸ್ ತಿಲಕ್‌ನಾಯ್ಡು, ದಾದಾಪೀರ್, ಗೋವಿಂದ್ ಎಂಬುವರು ಸುಪಾರಿ ನೀಡಿದ್ದರು ಎಂಬುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ಭೀಮಾಶಂಕರ್ ಎಸ್. ಗುಳೇದ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬುಳ್ಳನಾಗ ಮತ್ತು ಕೊಲೆಗೆ ಸುಪಾರಿ ನೀಡಿದ್ದ ಸಂತೋಷ್, ದಾದಾಪೀರ್, ಗೋವಿಂದ್ ನಡುವೆ ಹಣಕಾಸು ವಿಚಾರವಾಗಿ ವೈಷಮ್ಯ ಇತ್ತು. ಹಾಗಾಗಿ ಮೂವರು ಬುಳ್ಳನಾಗನ ಕೊಲೆಗೆ ಸುಪಾರಿ ನೀಡಿದ್ದರು. ಹಣದ ಬದಲಿಗೆ ಯುವರಾಜ್ ಅಲಿಯಾಸ್ ಪಾಪುಗೆ ಬೆಂಗಳೂರಿನಲ್ಲಿ ವ್ಯಾಪಾರಕ್ಕೆ ಬೇಕಾದ ನೆರವು, ಇಲ್ಲವೇ ಕ್ಲಬ್ ಪ್ರಾರಂಭಿಸಿಕೊಡುವ ಬಗ್ಗೆ ಮಾತುಕತೆಯಾಗಿತ್ತು. ಸುಪಾರಿ ನೀಡಿದ್ದ ಮೂವರು ನಾಪತ್ತೆಯಾಗಿದ್ದು, ಬಂಧನಕ್ಕೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದರು.
ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-4 ಪಕ್ಕದ ಸರ್ವೀಸ್ ರಸ್ತೆಯ ಲಕ್ಷ್ಮಿ ಲೇಔಟ್ ಪ್ರದೇಶದಲ್ಲಿ ಕೆಲವು ಅಪರಿಚಿತರು ಓಡಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪಿಎಸ್‌ಐ ಟಿ. ರಾಜು ನೇತೃತ್ವದ ತಂಡ ಎಲ್ಲರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಯುವರಾಜ್ ಅಲಿಯಾಸ್ ಪಾಪು ತಂಡದ ನಾಯಕನಾಗಿದ್ದು, ಕೊಲೆ ಪ್ರಕರಣಗಳ ಸಂಬಂಧ ಜೈಲು ವಾಸ ಅನುಭವಿಸಿದ್ದಾನೆ. ಮಹಾಲಕ್ಷ್ಮಿಲೇಔಟ್, ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಕೊಲೆ, ಕೊಲೆ ಯತ್ನ, ಹಲ್ಲೆ, ಅಪಹರಣ, ದರೋಡೆ ಪ್ರಕರಣ ದಾಖಲಾಗಿವೆ. ಕುಖ್ಯಾತ ರೌಡಿಯಾಗಿರುವ ಯುವರಾಜ್ ಅಲಿಯಾಸ್ ಪಾಪು ತನ್ನನ್ನು ಹಿಡಿಯಲಿಕ್ಕೆ ಬರುವ ಪೊಲೀಸರ ಮೇಲೆಯೇ ಹಲ್ಲೆ ಮಾಡಿ, ಓಡಿ ಹೋಗುವ ಪ್ರವೃತ್ತಿ ಹೊಂದಿದ್ದಾನೆ ಎಂದು ತಿಳಿಸಿದರು.
ರೌಡಿಶೀಟರ್ ಬುಳ್ಳನಾಗ ರಿಯಲ್ ಎಸ್ಟೇಟ್‌ನಲ್ಲಿ ತೊಡಗಿದ್ದು, ಬಂದಂತಹ ಹಣವನ್ನು ಬೇರೆ ಕಡೆಗೆ ಸಾಗಿಸುವ ಸಂದರ್ಭದಲ್ಲಿ ಅಟ್ಯಾಕ್ ಮಾಡಿ, ಹತ್ಯೆಗೈದು, ಹಣ ದೋಚುವ ಉದ್ದೇಶದಿಂದ ಆರೋಪಿಗಳು ಬಂದಿದ್ದರು. ವಿಚಾರಣೆಗೆ ಒಳಪಡಿದಾಗ ಮೊದಲು ದೇವಸ್ಥಾನಗಳ ವೀಕ್ಷಣೆಗೆ ಬಂದಿರುವುದಾಗಿ ತಿಳಿಸಿದರು. ಬೆಂಗಳೂರು ಪೊಲೀಸರ ಸಂಪರ್ಕಿಸಿ, ಮಾಹಿತಿ ಪಡೆದು, ಇನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಬುಳ್ಳನಾಗನ ಹತ್ಯೆಗೆ ಸುಪಾರಿ ಪಡೆದಿದ್ದಾಗಿ ಒಪ್ಪಿಕೊಂಡರು.
ಬಂಧಿತರ ವಿರುದ್ಧ ಹತ್ಯೆಗೆ ಯತ್ನದ ಪ್ರಕರಣದ ಜೊತೆಗೆ ದರೋಡೆ ಪ್ರಕರಣ ದಾಖಲಿಸಲಾಗಿದೆ. ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುವುದು ಎಂದರು. ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಮಾರುತಿ ಓಮ್ನಿಯಲ್ಲಿ ಬುಳ್ಳನಾಗನ ಫೋಟೋ ಸಹ ಸಿಕ್ಕಿವೆ. ಅಲ್ಲದೆ ಬಂಧನಕ್ಕೆ ಒಳಗಾಗುವ 2-3 ದಿನಗಳ ಮುಂಚೆಯಿಂದಲೂ ಅವನ ಚಲನವಲನ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕೆಲವಾರು ಬಾರಿ ಹಿಂಬಾಲಿಸಿದ್ದು ಸಹ ವಿಚಾರಣೆ ವೇಳೆಯಲ್ಲಿ ಗೊತ್ತಾಗಿದೆ.
ಇದೊಂದು ವ್ಯವಸ್ಥಿತ ಜಾಲವಾಗಿರುವ ಸಂಶಯವೂ ಇದೆ. ಬಂಧಿತರ ಜೊತೆ ಇನ್ನೂ ಕೆಲವರು ಇರುವ ಬಗ್ಗೆಯೂ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದರು. ಕೊಲೆಗೆ ಸುಪಾರಿ ನೀಡಿರುವ ದಾದಾಪೀರ್ ಮೇಲೆ 8-10 ದಿನಗಳ ಹಿಂದೆ ಅಟ್ಯಾಕ್ ಸಹ ಆಗಿತ್ತು. ಸಂತೋಷ್, ದಾದಾಪೀರ್ ವಿರುದ್ಧ ಕೆಟಿಜೆ ನಗರ ಠಾಣೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿಕೊಂಡು, 1 ಲಕ್ಷ ಮೊತ್ತದ ಬಾಂಡ್ ಪಡೆಯಲಾಗಿತ್ತು.
ಬಾಂಡ್ ನೀಡಿದ್ದ ನಂತರ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಹಿನ್ನೆಲೆ 1 ಲಕ್ಷ ಮೊತ್ತದ ಬಾಂಡ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದರು. ಸುಪಾರಿ ಕಿಲ್ಲರ್ಸ್‌ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಕೆಟಿಜೆ ನಗರ ಪಿಎಸ್‌ಐ ಟಿ. ರಾಜು, ಪ್ರೊಬೇಷನರಿ ಪಿಎಸ್‌ಐ ಪಾರ್ವತಿಬಾಯಿ, ಎಎಸ್‌ಐ ಪ್ರಕಾಶ್, ಮಹೇಶ್ವರಪ್ಪ, ಸಿಬ್ಬಂದಿ ಈರಣ್ಣ, ಜೆ.ಎಂ. ಮಂಜುನಾಥ್, ಕರಿಯಪ್ಪ, ರಾಜಪ್ಪ, ಜಾಧವ್, ಕುಮಾರ್,
-ಸುರೇಶ್‌ಬಾಬು, ಆನಂದ್, ನೂರುಲ್ಲಾಖಾನ್, ಅಂಜಿನಪ್ಪ ಪೂಜಾರ್, ಕೆ. ರವಿ, ಪರಶುರಾಮ್, ಗಿರೀಶ್, ಸಿದ್ದನಾಯ್ಕ, ನಾಗರಾಜ್, ಶಿವಕುಮಾರ್, ರವಿ ಅವರನ್ನೊಳಗೊಂಡ ತಂಡದ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿದರು. ನಗರ ಉಪಾಧೀಕ್ಷಕ ಎಂ. ಬಾಬು, ಕೆಟಿಜೆ ನಗರ ಪಿಎಸ್‌ಐ ಟಿ. ರಾಜು, ಪ್ರೊಬೇಷನರಿ ಪಿಎಸ್‌ಐ ಪಾರ್ವತಿಬಾಯಿ ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.