ಕಾಂಪೀಟ್ ವಿತ್ ಚೈನಾ ಯೋಜನೆಗೆ 7000 ಕೋಟಿ
Team Udayavani, Sep 26, 2018, 12:42 PM IST
ಬೆಂಗಳೂರು: “ಕಾಂಪೀಟ್ ವಿತ್ ಚೈನಾ’ ಯೋಜನೆಯಡಿ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ನಾನಾ ಕೈಗಾರಿಕಾ ಕ್ಲಸ್ಟರ್ ಸ್ಥಾಪಿಸಲಾಗುತ್ತಿದ್ದು, ಪ್ರಸಕ್ತ ವರ್ಷ 500 ಕೋಟಿ ರೂ. ಅನುದಾನ ನೀಡಲಾಗಿದೆ. ಮುಂದಿನ ವರ್ಷ 2,000 ಕೋಟಿ ರೂ. ಅನುದಾನ ಒದಗಿಸಿ ಉತ್ತೇಜಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ದಲ್ಲಿ ಮಂಗಳವಾರ “ಕಾಂಪೀಟ್ ವಿತ್ ಚೈನಾ’ ಯೋಜನೆಯಡಿ ಸ್ಥಾಪಿಸಲಾದ ನಾನಾ ವಲಯಗಳ ಉದ್ಯಮಿಗಳನ್ನು ಒಳಗೊಂಡ ಆರು ವಿಷನ್ ಗ್ರೂಪ್‌ಗ್ಳ ಸದಸ್ಯರೊಂದಿಗೆ ಸಂವಾದ ನಡೆಸಿದರು. ಉತ್ಪಾದನಾ ವಲಯವನ್ನು ಉತ್ತೇಜಿಸಲು ಸ್ಥಳೀಯ ಸಂಪನ್ಮೂಲಗಳ ಬಳಕೆ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಕಲಬುರಗಿಯಲ್ಲಿ ಸೋಲಾರ್ ವಿದ್ಯುತ್ ಉಪಕರಣ, ಹಾಸನದಲ್ಲಿ ಟೈಲ್ಸ್ ಮತ್ತು ಸ್ಯಾನಿಟರಿ ಉತ್ಪನ್ನ, ಕೊಪ್ಪಳದಲ್ಲಿ ಆಟಿಕೆ, ಮೈಸೂರಿನಲ್ಲಿ ಪಿಸಿಬಿ ತಯಾರಿಕೆ, ಬಳ್ಳಾರಿಯಲ್ಲಿ ವಸ್ತ್ರೋದ್ಯಮ, ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಬಿಡಿಭಾಗಗಳ ತಯಾರಿಕೆ, ತುಮಕೂರಿನಲ್ಲಿ ಕ್ರೀಡೆ ಮತ್ತು ಫಿಟ್‌ನೆಸ್ ಉಪಕರಣ ತಯಾರಿಕಾ ಕ್ಲಸ್ಟರ್ ಸ್ಥಾಪಿಸಲು ಸರ್ಕಾರ ಮುಂದಾಗಿದೆ ಎಂದರು.
ಗ್ರಾಮೀಣ ಜನರಿಗೆ ಉದ್ಯೋಗ ಸೃಷ್ಟಿಸುವುದು ಸರ್ಕಾರದ ಮುಖ್ಯ ಗುರಿಯಾಗಿದ್ದು, ಆ ಹಿನ್ನೆಲೆಯಲ್ಲಿ ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ನೆರವು, ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.
ಸಂವಾದದಲ್ಲಿ ಕೊಪ್ಪಳ, ಬಳ್ಳಾರಿ, ಮೈಸೂರು, ಚಿಕ್ಕಬಳ್ಳಾಪುರ, ಕಲಬುರಗಿ, ಚಿತ್ರದುರ್ಗದಲ್ಲಿ ಸ್ಥಾಪನೆಯಾಗುವ ಕೈಗಾರಿಕಾ ಕ್ಲಸ್ಟರ್‌ಗಳ ವಿಷನ್ ಗ್ರೂಪ್ ಸದಸ್ಯರು ತಮ್ಮ ವಲಯ ಎದುರಿಸುತ್ತಿರುವ ಸವಾಲುಗಳು ಹಾಗೂ ಕ್ಲಸ್ಟರ್ ಸ್ಥಾಪನೆಗೆ ಸರ್ಕಾರ ಕೈಗೊಳ್ಳಬೇಕಾದ ಕ್ರಮ, ಕೌಶಲ್ಯಾಭಿವೃದ್ಧಿ, ಸರ್ಕಾರ ಕಲ್ಪಿಸಬೇಕಾದ ಮೂಲ ಸೌಕರ್ಯದ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. ಜತೆಗೆ ಅಧ್ಯಯನ ವರದಿ ಸಲ್ಲಿಸುವುದಾಗಿ ಸದಸ್ಯರು ಹೇಳಿದರು.
ಇದಕ್ಕೆ ಸ್ಪಂದಿಸಿದ ಕುಮಾರಸ್ವಾಮಿ, ಸಂವಾದದಲ್ಲಿ ಪ್ರಸ್ತಾಪಿಸಿದ ವಿಷಯಗಳ ಬಗ್ಗೆ ಸರ್ಕಾರ ಸಕಾರಾತ್ಮಕ ಕ್ರಮ ಕೈಗೊಳ್ಳಲಿದೆ. ಈ ಪ್ರದೇಶಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಪೂರಕ ವಾತಾವರಣ ನಿರ್ಮಾಣಕ್ಕೆ ಸಲಹೆ ನೀಡುವಂತೆ ಕೋರಿದರು. ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.