ಮೂರು ತಿಂಗಳಲ್ಲಿ 914 ನವಜಾತ ಶಿಶು ಸಾವು
Team Udayavani, Aug 25, 2017, 7:40 AM IST
ಬೆಂಗಳೂರು: ಕೋಲಾರದಲ್ಲಿ ಇತ್ತೀಚೆಗೆ ನವಜಾತ ಶಿಶುಗಳ ಸರಣಿ ಸಾವು ಪ್ರಕರಣ ತೀವ್ರ ಆತಂಕ ಹುಟ್ಟಿಸಿದ ಬೆನ್ನ ಹಿಂದೆಯೇ ಕಳೆದ ಏಪ್ರಿಲ್‌ನಿಂದ ಜೂನ್‌ವರೆಗಿನ ಅವಧಿಯಲ್ಲಿ ರಾಜ್ಯಾದ್ಯಂತ 914 ನವಜಾತ ಶಿಶುಗಳು ಮೃತಪಟ್ಟಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
2017ರ ಏಪ್ರಿಲ್‌ನಿಂದ ಜೂನ್‌ವರೆಗಿನ ಮೂರು ತಿಂಗಳಲ್ಲಿ ದಾವಣಗೆರೆಯಲ್ಲಿ 85 ನವಜಾತ ಶಿಶುಗಳು ಸಾವನ್ನಪ್ಪಿದ್ದು, ಶಿಶು ಸಾವಿನ ಪ್ರಮಾಣ ಶೇ.41.87ರಷ್ಟಿತ್ತು. ಕಲಬುರಗಿಯಲ್ಲಿ 74, ರಾಯಚೂರಿನಲ್ಲಿ 63, ಧಾರವಾಡದಲ್ಲಿ 58 ಹಾಗೂ ಬೆಳಗಾವಿ ಯಲ್ಲಿ 54 ನವಜಾತ ಶಿಶುಗಳು ಸಾವನ್ನಪ್ಪಿರುವುದು ವರದಿಯಾಗಿದೆ. ಕೋಲಾರದಲ್ಲಿ ಈ ಅವಧಿಯಲ್ಲಿ 21 ಶಿಶುಗಳು ಮೃತಪಟ್ಟಿದ್ದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ 3 ಶಿಶುಗಳು ಅಸುನೀಗಿವೆ.
ಈ ಮಧ್ಯೆ, ಪ್ರಕರಣಗಳ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹ ಎಚ್ಚೆತ್ತು ಕೊಂಡಿದ್ದು, ಶಿಶು ಮರಣ ಪ್ರಕರಣ ತಡೆಯಲು ಹತ್ತು ಸೂತ್ರಗಳನ್ನು ಜಿಲ್ಲಾಸ್ಪತ್ರೆಗಳಿಗೆ ನೀಡಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ನಿರ್ದೇಶನ ನೀಡಿದೆ. ಜತೆಗೆ ಪ್ರತಿಯೊಂದು ಗರ್ಭಿಣಿಯ ಆರೋಗ್ಯ ಪಾಲನೆಗೆ ಸಂಬಂಧಪಟ್ಟಂತೆ ವೈಯಕ್ತಿಕವಾಗಿ ಮೇಲ್ವಿಚಾರಣೆ ನಡೆಸುವ ಕಾರ್ಯದಲ್ಲಿ ತೊಡಗುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯ ಕರ್ತೆಯರಿಗೆ ಪ್ರೋತ್ಸಾಹ ಧನ ಹೆಚ್ಚಿಸಲು ಚಿಂತಿಸಲಾ ಗಿದೆ ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ತಿಳಿಸಿದ್ದಾರೆ.
ಶಿಶುಸ್ನೇಹಿ ಆಸ್ಪತ್ರೆ ಅಭಿಯಾನದಡಿ ನೀಡಿರುವ ಸೂತ್ರಗಳನ್ನು ಎಲ್ಲಾ ಆಸ್ಪತ್ರೆಗಳಲ್ಲೂ ಪ್ರದರ್ಶಿಸುವಂತೆ ಸೂಚಿಸಲಾಗಿದ್ದು, ಆದೇಶ ಕೂಡ ಹೊರಡಿಸಲಾಗಿದೆ. ಜೆಎಸ್‌ಎಸ್‌ಕೆ ಕಾರ್ಯಕ್ರಮ ಹಾಗೂ ಸುಧಾರಿತ ಮೂಲ ಸೌಕರ್ಯದಿಂದಾಗಿ ಸರ್ಕಾರಿ ಹೆರಿಗೆ ಆಸ್ಪತ್ರೆಗಳಲ್ಲಿ ಹೆರಿಗೆ ಸಂಖ್ಯೆ ಹೆಚ್ಚಾಗುತ್ತಿದ್ದು, ಅದಕ್ಕೆ ಪೂರಕವಾಗಿ ಹೆಚ್ಚುವರಿ ಅವಧಿಯಲ್ಲಿ ಕಾರ್ಯ ನಿರ್ವಹಿಸುವಂತೆ
ಸೂಚನೆ ನೀಡಲಾಗುವುದು. ಕಡಿಮೆ ತೂಕವಿರುವ ಶಿಶುಗಳು ಹಾಗೂ ಎಸ್‌ಎನ್‌ಸಿಯು ಘಟಕದಿಂದ ಬಿಡುಗಡೆಯಾಗಿ ತೆರಳಿದ ಶಿಶುಗಳ ಆರೋಗ್ಯದ ಬಗ್ಗೆ ಆಶಾ ಕಾರ್ಯಕರ್ತೆಯರು ಒಂದು ವರ್ಷದವರೆಗೆ ನಿಗಾ ವಹಿಸುವ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ.
ರಾಜ್ಯದಲ್ಲಿ ಶಿಶು ಮರಣ ತಡೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನವಜಾತ ಶಿಶುಗಳಿಗೆ ವಿಶೇಷವಾಗಿ ಆ್ಯಂಬುಲೆನ್ಸ್, ಕಾಂಗರೂ ಮದರ್ ಕೇರ್, ಮಾ ಕಾರ್ಯಕ್ರಮ, ಲ್ಯಾಕ್ಟೇಷನ್ ಕ್ಲಿನಿಕ್, ಎದೆಹಾಲಿನ ಬ್ಯಾಂಕ್ ಮತ್ತು 8 ಆಸ್ಪತ್ರೆಗಳಿಗೆ ವಿಶೇಷ ನವಜಾತ ಶಿಶು ಚಿಕಿತ್ಸಾ ಸೌಲಭ್ಯ ವಿಸ್ತರಿಸಲಾ ಗಿದೆ. ಹೆರಿಗೆ ಸಂಖ್ಯೆಗೆ ಪೂರಕವಾಗಿ 6 ವಿಶೇಷ ನವಜಾತ ಶಿಶು ಘಟಕಗಳಿಗೆ ಹೆಚ್ಚುವರಿ ಸಲಕರಣೆ, ಸಿಬ್ಬಂದಿ ನೀಡಲಾಗುತ್ತಿದೆ. ನವಜಾತ ಶಿಶುಗಳ ಪುನಶ್ಚೇತನ ವಿಶೇಷ ತರಬೇತಿಯನ್ನು ಸಿಬ್ಬಂದಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ನಿರ್ಲಕ್ಷ್ಯ ಕಂಡು ಬಂದಿಲ್ಲ
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ (ಎಸ್‌ಎನ್‌ಆರ್) ಜನವರಿಯಿಂದ ಈವರೆಗೆ ಜನಿಸಿದ ಮಕ್ಕಳ ಪೈಕಿ 45 ನವಜಾತ ಶಿಶು ಸೇರಿ ಒಟ್ಟು 90 ಶಿಶುಗಳು ಸಾವನ್ನಪ್ಪಿವೆ. ಇತ್ತೀಚೆಗೆ ಸಂಭವಿಸಿದ ನವಜಾತ ಶಿಶುಗಳ ಸಾವು ಪ್ರಕರಣದಲ್ಲಿ ಮೇಲ್ನೋಟಕ್ಕೆ ಯಾವುದೇ ನಿರ್ಲಕ್ಷ್ಯ ಕಂಡು ಬಂದಿಲ್ಲ ಎಂಬುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು, ಪ್ರಧಾನ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಿದ್ದಾರೆ.
ಆ.21ರಂದು ಮೂರು ಶಿಶುಗಳು ಮೃತಪಟ್ಟಿವೆ. ತ್ರಿವಳಿ ಶಿಶುಗಳ ಪೈಕಿ ಒಂದೂವರೆ ಕೆ.ಜಿ.ಯಷ್ಟು ಕಡಿಮೆ ತೂಕವಿದ್ದ ಒಂದು ಮಗು ಹುಟ್ಟಿದ ನಾಲ್ಕು ದಿನದಲ್ಲಿ ಮೃತಪಟ್ಟಿದೆ. ಮತ್ತೂಂದು ಮಗು ವೈದ್ಯಕೀಯ ಕಾಲೇಜಿನಲ್ಲಿ ಕೃತಕ ಉಸಿರಾಟ ವ್ಯವಸ್ಥೆಯಡಿ ಚಿಕಿತ್ಸೆ ಪಡೆಯುತ್ತಿದೆ. ಇನ್ನೊಂದು ಅವಳಿ ಶಿಶುಗಳ ಪೈಕಿ ಒಂದು ಶಿಶು ಕಡಿಮೆ ತೂಕ ಹಾಗೂ ಇತರ ಕಾರಣಗಳಿಂದ 10ನೇ ದಿನ ಮೃತಪಟ್ಟಿದ್ದು, ಮತ್ತೂಂದು ಶಿಶು ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ ಎಂದು ನಿರ್ದೇಶಕರು ವರದಿಯಲ್ಲಿ ಉಲ್ಲೇಖೀಸಿದ್ದಾರೆ.
ಮತ್ತೂಂದು ಮಗು ಮಿದುಳಿನ ಅಂಗವಿಕಲತೆ ಮತ್ತು ದಿನ ತುಂಬದೇ ಇರುವುದರಿಂದ 3ನೇ ದಿನಕ್ಕೆ ಮೃತಪಟ್ಟಿದೆ. ಆಸ್ಪತ್ರೆಯಲ್ಲಿ 12 ಹಾಸಿಗೆಗಳ ವಿಶೇಷ ನವಜಾತ ಶಿಶು ಘಟಕವಿದ್ದು, ನ್ಯಾಷನಲ್ ನಿಯೋನಟಲ್ ಫೋರಂನ ಮಾನ್ಯತೆ ಪಡೆದಿದೆ. ನಾಲ್ಕು ಮಕ್ಕಳ ತಜ್ಞರು, 18 ಶುಶ್ರೂಷಕಿಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮೇಲ್ನೋಟಕ್ಕೆ ಯಾವುದೇ ನಿರ್ಲಕ್ಷ್ಯತೆ ಕಂಡು ಬಂದಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದಾರೆ.
10 ಸೂತ್ರಗಳು
– ಎದೆಹಾಲು ಉಣಿಸುವ ಬಗ್ಗೆ ಆರೋಗ್ಯ ಸಿಬ್ಬಂದಿಗೆ ಮಾಹಿತಿ ನೀಡಲು ಲಿಖೀತ ಕಾರ್ಯನೀತಿ ಹೊಂದಿರಬೇಕು
– ಈ ಬಗ್ಗೆ ಎಲ್ಲ ಆರೋಗ್ಯ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕು
– ತಾಯಿ ಹಾಲುಣಿಸುವುದರಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ಗರ್ಭಿಣಿಯರು, ಬಾಣಂತಿಯರಿಗೆ ತಿಳಿವಳಿಕೆ ನೀಡಬೇಕು.
– ಮಗು ಜನಿಸಿದ ಗಂಟೆಯೊಳಗೆ, ಸಿಜೇರಿಯನ್ ಪ್ರಕರಣದಲ್ಲಿ 4 ಗಂಟೆ ಯೊಳಗೆ ತಾಯಿ ಹಾಲುಣಿಸಲು ನೆರವಾಗಬೇಕು
– ವೈದ್ಯಕೀಯ ಕಾರಣಕ್ಕೆ ಮಗು ತಾಯಿಯಿಂದ ಪ್ರತ್ಯೇಕವಾದಾಗಲೂ ಎದೆ ಹಾಲುಣಿಸಲು ನೆರವಾಗಬೇಕು
– ನವಜಾತ ಶಿಶುವಿಗೆ ತಾಯಿ ಹಾಲಲ್ಲದೆ ಬೇರಾವುದೇ ಆಹಾರ ಕೊಡಬಾರದು
– ತಾಯಿ ಮತ್ತು ಮಗು ಸದಾ ಒಂದೇ ಹಾಸಿಗೆಯಲ್ಲಿ, ಒಂದೇ ಕೊಠಡಿಯಲ್ಲಿರಲು ನೆರವಾಗುವುದು
– ಮಗು ಹಸಿವಿನಿಂದ ಅತ್ತಾಗಲೆಲ್ಲಾ ತಾಯಿ ಹಾಲುಣಿಸುವುದನ್ನು ಉತ್ತೇಜಿಸಬೇಕು
– ಎದೆ ಹಾಲು ಕುಡಿಯುವ ಮಗುವಿಗೆ ನಿಪ್ಪಲ್, ಮತ್ತಿತರ ಕೃತಕ ವಸ್ತುಗಳನ್ನು ನೀಡಬಾರದು
– ಆಸ್ಪತ್ರೆಯಿಂದ ತೆರಳುವ ತಾಯಿಯ ಮೇಲೆ ನಿಗಾವಹಿಸಿ ಎದೆಹಾಲು ನಿರಂತರವಾಗಿ ನೀಡುವಂತೆಮೇಲ್ವಿಚಾರಣೆ ನಡೆಸಲು ತರಬೇತಿ ಹೊಂದಿದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಜವಾಬ್ದಾರಿ ನೀಡುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
MUST WATCH
ಹೊಸ ಸೇರ್ಪಡೆ
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.