ಬೆಂಗಳೂರಿನ ಸಚಿವರೊಬ್ಬರಿಂದ 600 ಎಕರೆ ಕಬಳಿಕೆ: ಬಿಎಸ್‌ವೈ
Team Udayavani, Sep 1, 2017, 11:51 AM IST
ಬೆಂಗಳೂರು: ರಾಜ್ಯ ಸರ್ಕಾರದ ಸಚಿವರೊಬ್ಬರು ಬೆಂಗಳೂರಿನ ಎರಡು ವಿಭಾಗಗಳಲ್ಲಿ ಸುಮಾರು 600 ಎಕರೆಗೂ ಹೆಚ್ಚು ಭೂಮಿ ಕಬಳಿಸಿ ನಿವೇಶನಗಳನ್ನು ಮಾರಾಟ ಮಾಡುತ್ತಿದ್ದು, ಈ ಬಗ್ಗೆ ಶೀಘ್ರದಲ್ಲೇ ಸಂಪೂರ್ಣ ವಿವರ ಬಹಿರಂಗಪಡಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಆದರೆ, ಸಚಿವರ ಹೆಸರು ಮತ್ತು ಇತರೆ ಮಾಹಿತಿಗಳನ್ನು ಬಹಿರಂಗಪಡಿಸಲು ನಿರಾಕರಿಸಿದ ಅವರು, ಈ ವಿಷಯವನ್ನು ಈಗಲೇ ಹೇಳುವುದಿಲ್ಲ. ಅವರು ಬೆಂಗಳೂರು ಮೂಲದವರು. ಸದ್ಯದಲ್ಲೇ ಈ ಬಗ್ಗೆ ಸಂಪೂರ್ಣ ವಿವರ ನೀಡಲಾಗುವುದು. ಬಿಜೆಪಿ ಬಿಡುಗಡೆ ಮಾಡಲು ಉದ್ದೇಶಿಸಿರುವ ಆರೋಪಪಟ್ಟಿಯಲ್ಲಿ ಸಮಗ್ರ ಮಾಹಿತಿ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ ಅವರು, ಈ ಸರ್ಕಾರ ತುಗಲಕ್ ದರ್ಬಾರ್‌ನಲ್ಲಿ ತೊಡಗಿದೆ ಎಂಬುದಕ್ಕೆ 1500 ಕೆರೆಗಳನ್ನು ಡಿನೋಟಿಫೈ ಮಾಡಿ ಸಾವಿರಾರು ಕೋಟಿ ರೂ. ಲೂಟಿ ಮಾಡಲು ಮುಂದಾಗಿದ್ದೇ ಸಾಕ್ಷಿ. ಮಾಧ್ಯಮಗಳು ಈ ಬಗ್ಗೆ ವರದಿಗಳನ್ನು ಪ್ರಕಟಿಸಿದ್ದರಿಂದ ಮತ್ತು ಬಿಜೆಪಿ ನೀಡಿದ ದೂರು ಆಧರಿಸಿ ರಾಜ್ಯಪಾಲರು ಸ್ಪಷ್ಟನೆ ಕೇಳಿದ ಬಳಿಕ ಎಚ್ಚೆತ್ತು ಸರ್ಕಾರ ಡಿನೋಟಿಫೈ ಮಾಡುವುದಿಲ್ಲ ಎಂದು ಹೇಳಿದೆ. ಆ ಮೂಲಕ ಹೋರಾಟಕ್ಕೆ ಮಣಿದಿದೆ ಎಂದರು.
ಈ ಸರ್ಕಾರಕ್ಕೆ ಹೊಸ ಕೆರೆಗಳನ್ನು ಮಾಡುವ ಯೋಗ್ಯತೆ ಇಲ್ಲ. ಆದರೂ ಇದ್ದ ಕೆರೆಗಳನ್ನು ಡಿನೋಟಿಫೈ ಮಾಡಲು ಹೊರಟಿದ್ದು ಎಷ್ಟು ಬೇಜಾವಾಬ್ದಾರಿತನದಿಂದ ಆಡಳಿತ ನಡೆಸುತ್ತಿದೆ ಎಂಬುದಕ್ಕೆ ಉದಾಹರಣೆ. ಸರ್ಕಾರದ ಇಂತಹ ಇನ್ನೂ ಅನೇಕ ವೈಫಲ್ಯಗಳನ್ನು ಪಕ್ಷ ಹೊರತರಲಿದೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.