ಅರಿವಿದ್ದೂ ವಂಚನೆ ಜಾಲಕ್ಕೆ ಬಿದ್ದ ಉದ್ಯಮಿ
Team Udayavani, Nov 22, 2019, 9:57 AM IST
ಬೆಂಗಳೂರು: ಆನ್‌ಲೈನ್ ವಂಚಕರಿಂದ ಮೋಸ ಹೋಗದೆ ದುಬೈನಿಂದ ವಾಪಸ್ ಬಂದಿದ್ದ ಉದ್ಯಮಿಯನ್ನು ಬೆಂಬಿಡದ ವಂಚಕರ ಜಾಲ, ಅಮೆರಿಕ ರಾಯಭಾರ ಕಚೇರಿ ಹೆಸರು ಬಳಸಿ 35.50 ಲಕ್ಷ ರೂ. ಪಡೆದು ವಂಚಿಸಿದ್ದಾರೆ.
ಈ ಕುರಿತು ರಾಮಗೊಂಡನಹಳ್ಳಿ ನಿವಾಸಿ ಉದ್ಯಮಿ ಶಿವಕುಮಾರ್ (50) ಎಂಬವರು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ವೈಟ್ ಫೀಲ್ಡ್ ಠಾಣೆ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. ದೂರುದಾರ ಶಿವಕುಮಾರ್ ಅವರು ಫ್ರೀಲ್ಯಾನ್ಸ್ ಔಷಧ ಉದ್ಯಮ ನಡೆಸುತ್ತಿದ್ದು, ಆನ್‌ಲೈನ್‌ಲ್ಲಿ ಜಾಹೀರಾತು ನೀಡಿದ್ದರು. ಈ ಜಾಹೀರಾತು ಆಧರಿಸಿ ಜಪಾನ್‌ನ ಮೊಸಿಡಾ ಫಾರ್ಮಾಸುಫಿಟಿಕಲ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಎಂದು ಪರಿಚಯಿಸಿಕೊಂಡ ಕಿಯೋಶಿ ಮಿಜ್‌ಗುಚಿ ಎಂಬಾತ, “ನಾವು ಬೆಂಗಳೂರಿನಲ್ಲಿ ಹೊಸ ಕಂಪನಿ ಆರಂಭಿಸಲಿದ್ದು, ಅದಕ್ಕೆ ನಿಮ್ಮನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡುತ್ತೇವೆ’ ಎಂದು ಹೇಳಿ ಅ.17ರಂದು ಶಿವಕುಮಾರ್ ಅವರಿಗೆ ಇ-ಮೇಲ್ ಕಳುಹಿಸಿದ್ದಾನೆ.
ಅಷ್ಟೇ ಅಲ್ಲದೆ ಕಂಪನಿ ನಡೆಸಲು ಟಮೋಟಿವ್ ಹೆಸರಿನ ಕಚ್ಚಾ ಖನಿಜ ಪಶ್ಚಿಮ ಬಂಗಾಳದ ಮಾರ್ಗೋ ಮಿನರಲ್ಸ್‌ನ ರುಚಿಕಾ ಸಿಂಗ್ ಅವರ ಬಳಿಯಿದೆ. ಅದನ್ನು ಖರೀದಿಸಿ ನೀಡಿದರೆ 210 ಕೋಟಿ ರೂ. ಮೊತ್ತದ ಖರೀದಿಯಲ್ಲಿ ಶೇ.7ರಷ್ಟು, ಅಂದರೆ ಸುಮಾರು 16.5 ಕೋಟಿ ರೂ. ಕಮಿಷನ್ ನೀಡುವುದಾಗಿ ತಿಳಿಸಿದ್ದ. ಇದನ್ನು ಶಿವಕುಮಾರ್ ನಂಬಿದ್ದರು. ಬಳಿಕ ರುಚಿಕಾ ಎಂಬಾಕೆ ಶಿವಕುಮಾರ್ ಜತೆ ಮಾತನಾಡಿ, ಕಚ್ಚಾ ಖನಿಜ ನೀಡಲು ಮುಂಗಡ ಹಣ ನೀಡಬೇಕು ಎಂದು ಹೇಳಿ ವಿವಿಧ ಬ್ಯಾಂಕ್‌ಖಾತೆಗಳಿಗೆ 8.67 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾಳೆ.
ಇದಾದ ಬಳಿಕ ಕಿಯೋಶಿ ಕರೆ ಮಾಡಿ, ಕಂಪನಿ ಆರಂಭಿಸಲು ಅಮೆರಿಕ ಹಣ ನೀಡಿದೆ. ಅದನ್ನು ನೀವು ದುಬೈಗೆ ಹೋಗಿ ಆ್ಯಂಡ್ರೋಸ್ ಎಂಬಾತನ ಬಳಿ ಪಡೆಯಿರಿ ಎಂದು ಹೇಳಿದ್ದಾನೆ. ಹೀಗಾಗಿ ಅ.27ರಂದು ದುಬೈಗೆ ತೆರಳಿದ ಶಿವಕುಮಾರ್, ಹೋಟೆಲ್ ಒಂದರಲ್ಲಿ ತಂಗಿದ್ದಾಗ ಆ್ಯಂಡ್ರೋಸ್ ಪರವಾಗಿ ಬಂದಿರುವುದಾಗಿ ರೆಕ್ಸ್ ಎಂಬಾತ ಪರಿಚಯಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಸೂಟ್ ಕೇಸ್ ಒಂದನ್ನು ತೋರಿಸಿ ಇದರಲ್ಲಿ ಡಾಲರ್‌ಗಳಿವೆ. ಇದನ್ನು ಪಡೆಯಲು 35.50 ಲಕ್ಷ ರೂ. ಕೊಡಿ ಎಂದು ಹೇಳಿದ್ದಾನೆ. ಅನುಮಾನಗೊಂಡ ಶಿವಕುಮಾರ್ ಹಣ ನೀಡದೆ ಭಾರತಕ್ಕೆ ವಾಪಸ್ ಬಂದಿದ್ದಾರೆ.
ಇಷ್ಟಾದ ಬಳಿಕವೂ ನ.7ರಂದು [email protected] ಐಡಿ ಮೂಲಕ ಇ-ಮೇಲ್ ಬಂದಿದ್ದು, “ನಿಮಗೆ ಅಮೆರಿಕದಿಂದ ಕಳುಹಿಸಿಕೊಡುವ ಕೋಟ್ಯಂತರ ರೂ. ಡಾಲರ್ ಕಳುಹಿಸಿದ್ದು, ಅದನ್ನು ಪಡೆಯಲು 35.50 ಲಕ್ಷ ರೂ. ಪ್ರೊಸೆಸಿಂಗ್ ಶುಲ್ಕ ಪಾವತಿಸಿ. ಇಲ್ಲದಿದ್ದರೆ ಡಾಲರ್‌ಗಳ ಸೂಟ್‌ಕೇಸ್ ವಾಪಸ್ ಕಳುಹಿಸುತ್ತೇವೆ’ ಎಂಬ ಸಂದೇಶ ಕಳುಹಿಸಲಾಗಿತ್ತು.
ಇದನ್ನು ಗಮನಿಸಿದ ಶಿವಕುಮಾರ್, ಅಮೆರಿಕ ರಾಯಭಾರಿ ಕಚೇರಿಯಿಂದಲೇ ಇ-ಮೇಲ್ ಬಂದಿರಬಹುದು ಎಂದು ನಂಬಿ ಆರೋಪಿಗಳು ಕಳುಹಿಸಿದ್ದ ಅಕೌಂಟ್ ಸಂಖ್ಯೆಗೆ 35.50 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಇದಾದ ಬಳಿಕ ಆರೋಪಿಗಳಿಗೆ ನೀಡಿದ್ದ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿವೆ. ಕಡೆಗೆ ಮೋಸ ಹೋಗಿರುವುದು ಗೊತ್ತಾಗಿ ಶಿವಕುಮಾರ್ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಶಿವಕುಮಾರ್ ನೀಡಿರುವ ದೂರಿನ ಅನ್ವಯ ಕಿಯೋಶಿ ಮಿಜ್‌ಗುಚಿ, ರುಚಿಕಾ ಸಿಂಗ್, ಜೆಫ್ರೀ ಆ್ಯಂಡ್ರೋ, ಜಾವಿಸ್ ಕ್ಯಮಿ, ಮಾರ್ಗೋ ಮಿನರಲ್ಸ್, ಮೊಚಿಡಾ ಕಂಪನಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. “ಆನ್‌ಲೈನ್ ವಂಚಕರು ಭಾರತದ ಬ್ಯಾಂಕ್ ಅಕೌಂಟ್‌ಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹೀಗಾಗಿ, ಆ ಖಾತೆಗಳನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ತನಿಖೆ ಮುಂದುರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.