3 ತಿಂಗಳಲ್ಲಿ ನಾಲ್ವರ ಕೊಂದ ಕ್ರಿಮಿನಲ್ ದಂಪತಿ
Team Udayavani, Oct 29, 2019, 3:09 AM IST
ಬೆಂಗಳೂರು: ಐಷಾರಾಮಿ ಜೀವನ ಶೈಲಿಯ ಪತ್ನಿಯ ತಾಳಕ್ಕೆ ಕುಣಿದ ಗಂಡ! ದುಬಾರಿ ಸಾಲ ತೀರಿಸಿ ವಿಲಾಸಿ ಜೀವನ ನಡೆಸಲು ದಂಪತಿಯ ಕೊಲೆಪಾತಕ ಸಂಚು…. ಮೂರು ತಿಂಗಳ ಅಂತರದಲ್ಲಿ ನಾಲ್ವರು ವೃದ್ಧರ ಹತ್ಯೆ… ಸಿಸಿಟಿವಿ ದೃಶ್ಯದಲ್ಲಿ ಕೊಲೆ ಪಾತಕರ ಸುಳಿವು! ಅ.16ರಂದು ಗರುಡಾಚಾರ್ ಪಾಳ್ಯದಲ್ಲಿ ನಡೆದ ಚಂದ್ರೇಗೌಡ (66) ದಂಪತಿಯ ಜೋಡಿ ಕೊಲೆ ಪ್ರಕರಣವನ್ನು ಬೇಧಿಸಿರುವ ಮಹದೇವಪುರ ಪೊಲೀಸರ ತನಿಖೆಯಲ್ಲಿ ಬಯಲಾದ ಕೊಲೆ ರಹಸ್ಯ ಇದು.
ಕ್ಯಾಬ್ ಚಾಲಕ ವೆಂಕಟೇಶ್ ಸಿ.ಎಚ್ (30) ಆತನ ಪತ್ನಿ ಅರ್ಪಿತಾ (21) ಬಂಧಿತರು. ಸಾಲ ತೀರಿಸಲು ಹಾಗೂ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಪರಿಚಯಸ್ಥರೇ ಆದ ನಾಲ್ವರು ವೃದ್ಧರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಆರೋಪಿಗಳಿಂದ 305 ಗ್ರಾಂ ಚಿನ್ನಾಭರಣ ಹಾಗೂ 5.04 ಲಕ್ಷ ರೂ. ನಗದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಚೌಡಘಟ್ಟ ಗ್ರಾಮದ ವೆಂಕಟೇಶ್ 2016ರಲ್ಲಿ ಪ್ರೀತಿಸಿ ಅರ್ಪಿತಾಳನ್ನು ಮದುವೆಯಾಗಿದ್ದು, ದಂಪತಿಗೆ ಒಂದೂವರೆ ವರ್ಷದ ಮಗುವಿದೆ. ದಂಪತಿ ಅಮೃತಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ವೆಂಕಟೇಶ್ ಓಲಾ ಕಂಪನಿಯ ಕ್ಯಾಬ್ ಚಾಲಕನಾಗಿದ್ದ, ಪತ್ನಿ ಗೃಹಿಣಿಯಾಗಿದ್ದಳು. ಆರೋಪಿ ವೆಂಕಟೇಶ್ ಪರಿಚಯಸ್ಥರಿಂದ 10 ಲಕ್ಷ ಸಾಲ ಪಡೆದಿದ್ದ. ಅಲ್ಲದೆ ಬಜಾಜ್ ಫೈನಾನ್ಸ್‌ನಿಂದ 1.50 ಲಕ್ಷ ಸಾಲ ಪಡೆದು ತೀರಿಸಲಾಗದೆ ಹೆಣಗುತ್ತಿದ್ದ.
ಜತೆಗೆ, ಪತ್ನಿಯೂ ಐಶಾರಾಮಿ ಜೀವನ ಶೈಲಿ ಇಷ್ಟಪಡುತ್ತಿದ್ದಳು. ಹೇಗಾದರೂ ಮಾಡಿ ಸಾಲ ತೀರಿಸಿ ಹಣ ಉಳಿಸಿಕೊಂಡು ವಿಲಾಸಿ ಜೀವನ ನಡೆಸಬೇಕು ಎಂದು ದಂಪತಿ ಚಿಂತನೆಯಲ್ಲಿದ್ದಾಗಲೇ ಅವರಿಗೆ ಹೊಳೆದಿದ್ದು ಮಕ್ಕಳಿಲ್ಲದ ವೃದ್ಧ ದಂಪತಿಗಳ ಕೊಲೆ ಕೃತ್ಯಗಳು! ಮಕ್ಕಳಿಲ್ಲದ ವೃದ್ಧರನ್ನು ಕೊಲ್ಲುವ ಸಂಚು ರೂಪಿಸಿಕೊಂಡಿದ್ದ ದಂಪತಿಗೆ ಕಳೆದ ಒಂದು ತಿಂಗಳ ಹಿಂದೆ ಸಂಬಂಧಿಕರೊಬ್ಬರ ಮದುವೆಯಲ್ಲಿ ಗರುಡಾಚಾರ್ ಪಾಳ್ಯದಲ್ಲಿ ವಾಸವಿರುವ ಚಂದ್ರೇಗೌಡ ಅವರ ಪತ್ನಿ ಲಕ್ಷ್ಮಮ್ಮ ಕಾಣಿಸಿದ್ದರು. ಅವರು ಧರಿಸಿದ್ದ ಚಿನ್ನಾಭರಣದ ಮೇಲೆ ಕಣ್ಣು ಹಾಕಿದ್ದ ವೆಂಕಟೇಶ್, ಅವರನ್ನು ಕೊಲ್ಲುವ ಸಂಚನ್ನು ಪತ್ನಿಗೆ ತಿಳಿಸಿ ಒಪ್ಪಿಸಿದ್ದ.
ವಿಜಯದಶಮಿ ಊಟ! ಮೂರನೇ ಭೇಟಿಗೆ ಕೊಲೆ!: ಮದುವೆಯಲ್ಲಿ ಚಂದ್ರೇಗೌಡರನ್ನು ಭೇಟಿಯಾಗಿ ಪರಿಚಯ ಮಾಡಿಕೊಂಡ ವೆಂಕಟೇಶ್ ಸಂಬಂಧಿಕರು ಎಂಬ ನೆಪದಲ್ಲಿ ಎರಡು ಬಾರಿ ಅವರ ಮನೆಗೆ ಭೇಟಿ ನೀಡಿ ವಿಶ್ವಾಸ ಗಳಿಸಿದ್ದ. ವಿಜಯದಶಮಿ ಹಬ್ಬಕ್ಕೆ ಪತ್ನಿಯನ್ನು ಕರೆದೊಯ್ದು ಊಟ ಮಾಡಿಕೊಂಡು ಬಂದಿದ್ದ. ಈ ವೇಳೆ ಆಭರಣ ಹಾಗೂ ನಗದು ಇಡುವ ಸ್ಥಳಗಳನ್ನು ನೋಡಿಕೊಂಡು ಬಂದಿದ್ದ. ಅದರಂತೆ, ಅ.16ರಂದು ಕೊಲೆ ಕೃತ್ಯಕ್ಕೆ ಸಿದ್ಧವಾಗಿದ್ದ ವೆಂಕಟೇಶ್ ದಂಪತಿ, ಸಂಜೆ ಗರುಡಾಚಾರ್ ಪಾಳ್ಯಕ್ಕೆ ಆಗಮಿಸಿದ್ದರು.
ಪತ್ನಿಯನ್ನು ಹೊರಗಡೆ ನಿಲ್ಲಿಸಿ ಯಾರಾದರೂ ಬಂದರೆ ಸೂಚನೆ ನೀಡುವಂತೆ ತಿಳಿಸಿ, ಒಬ್ಬನೆ ಒಳಗಡೆ ಹೋಗಿದ್ದ ವೆಂಕಟೇಶ್, ಲಕ್ಷ್ಮಮ್ಮ ಅವರನ್ನು ಮಾತನಾಡಿಸಿದಾಗ ಪತಿ ಚಂದ್ರೇಗೌಡ ವಾಕಿಂಗ್ ಹೋಗಿರುವುದಾಗಿ ತಿಳಿಸಿದ್ದಾರೆ. ಇದೇ ಸಮಯಕ್ಕೆ ಕಾದಿದ್ದ ವೆಂಕಟೇಶ್, ವ್ಹೀಲ್ ಸ್ಪ್ಯಾನರ್‌ನಿಂದ ಬೆಡ್‌ರೂಂನಲ್ಲಿದ್ದ ಲಕ್ಷ್ಮಮ್ಮ ತಲೆಗೆ ಹೊಡೆದು ಕೊಲೆಮಾಡಿದ್ದಾನೆ. ಇದಾದ ಕೆಲಸಮಯದ ಬಳಿಕ ವಾಕಿಂಗ್ ಹೋಗಿದ್ದ ಚಂದ್ರೇಗೌಡ ಮನೆಯ ಬಳಿ ಬಂದಾಗ ಅರ್ಪಿತಾಳ ಮಗು ಅಳುತ್ತಿದ್ದನ್ನು ಗಮನಿಸಿ ಎತ್ತಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಅಂಗಡಿ ಬಳಿ ಕರೆದೊಯ್ದು ತಿಂಡಿ ಕೊಡಿಸಿಕೊಂಡು ಬಂದು ಅರ್ಪಿತಾಳ ಕೈಗೆ ನೀಡಿದ್ದಾರೆ. ಬಳಿಕ ಮನೆಯೊಳಗಡೆ ಹೋಗುತ್ತಿದ್ದಂತೆ ಬಾಗಿಲ ಹಿಂಭಾಗ ಅವಿತು ಕುಳಿತಿದ್ದ ವೆಂಕಟೇಶ್ ಅವರ ತಲೆಗೂ ಸ್ಪ್ಯಾನರ್‌ನಿಂದ ಹೊಡೆದು ಕೊಲೆ ಮಾಡಿ, ಮನೆಯಲ್ಲಿದ್ದ 305 ಗ್ರಾಂ ಚಿನ್ನಾಭರಣ ಹಾಗೂ 9500 ರೂ. ನಗದು ದೋಚಿ ದಂಪತಿ ಸಮೇತ ಪರಾರಿಯಾಗಿದ್ದಾನೆ. ಮಾರನೆ ದಿನ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಸ್ನೇಹಿತನ ಮನೆಯಲ್ಲಿ ಆಶ್ರಯ!: ಚಂದ್ರೇಗೌಡ ದಂಪತಿಯನ್ನು ಹತ್ಯೆ ಮಾಡಿದ ಆರೋಪಿಗಳು ಚಿನ್ನಾಭರಣವನ್ನು ಮಲ್ಲೇಶ್ವರದಲ್ಲಿರುವ ಧನಲಕ್ಷ್ಮೀ ಜ್ಯುಯಲರ್ ನಲ್ಲಿ 8.67 ಲಕ್ಷ ರೂ. ಗಳಿಗೆ ಅಡವಿಟ್ಟು ದಕ್ಷಿಣ ಕನ್ನಡ ಜಿಲ್ಲೆಯ ಮಿತ್ತಮಂಜಲ್ ಸ್ನೇಹಿತ ಗೌತಮ್ ಎಂಬುವವರ ಮನೆಯಲ್ಲಿ ಉಳಿದುಕೊಂಡಿದ್ದರು. ಪ್ರೀತಿಸಿ ವಿವಾಹ ಆಗಿದ್ದರಿಂದ ಮನೆಯಲ್ಲಿ ಗಲಾಟೆ ನಡೆಯುತ್ತಿದೆ. ಹೀಗಾಗಿ ಕೆಲವು ದಿನ ಉಳಿಯುವುದಾಗಿ ಸುಳ್ಳು ಹೇಳಿದ್ದರು. ಅವರನ್ನು ಬಂಧಿಸುವ ತನಕ ಗೌತಮ್‌ಗೆ ಇವರ ಕೃತ್ಯಗಳ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಪೊಲೀಸರು ಹೇಳಿದರು.
ಮತ್ತೊಂದು ಜೋಡಿ ಕೊಲೆ ರಹಸ್ಯ!: ವಿಚಾರಣೆ ವೇಳೆ ಆರೋಪಿ ವೆಂಕಟೇಶ್ ಮತ್ತೊಂದು ಜೋಡಿ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾರೆ. ಸಂಬಂಧಿಕರಾದ ಮಕ್ಕಳಿಲ್ಲದ ಕೆ.ಆರ್ ಪೇಟೆಯ ರಾಯಸಮುದ್ರ ನಿವಾಸಿ ಗುಂಡೇಗೌಡ ಅವರ ಮನೆಗೆ ಜು.12ರಂದು ತೆರಳಿ ರಾತ್ರಿ ಅಲ್ಲಿಯೇ ತಂಗಿದ್ದ ವೆಂಟೇಶ್ ನಡುರಾತ್ರಿ ಕಬ್ಬಿಣದ ರಾಡ್‌ನಿಂದ ಗುಂಡೇಗೌಡ, ಅವರ ಪತ್ನಿ ಲಲಿತಮ್ಮ ಅವರ ತಲೆಗೆ ಹೊಡೆದು ಕೊಲೆ ಮಾಡಿದ್ದ. ಬಳಿಕ 60 ಗ್ರಾಂ ಚಿನ್ನಾಭರಣ, 2000 ರೂ. ನಗದು ದೋಚಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರ ದಿಕ್ಕು ತಪ್ಪಿಸಿದ ದಂಪತಿ!: ಚಂದ್ರೇಗೌಡ ದಂಪತಿಯನ್ನು ಕೊಲೆ ಮಾಡಿದ ದಂಪತಿ ಪೊಲೀಸರಿಗೆ ಸಿಕ್ಕಿ ಬೀಳಬಾರದು ಎಂಬ ಉದ್ದೇಶದಿಂದ ಹಲವು ತಂತ್ರಗಳನ್ನು ಮಾಡಿದ್ದಾರೆ. ಮೊಬೈಲ್‌ಗಳ ಲೊಕೇಶನ್ ಪತ್ತೆ ಆಧಾರದಲ್ಲಿ ಪೊಲೀಸರು ಹಿಡಿಯಬಹುದು ಎಂದು ಎರಡೂ ಮೊಬೈಲ್‌ಗಳನ್ನು ಆನ್ ಮೋಡ್‌ನಲ್ಲಿಟ್ಟು ಅಮೃತಹಳ್ಳಿಯ ಬಾಡಿಗೆ ಮನೆಯಲ್ಲಿಯೇ ಇಟ್ಟು ಬೀಗ ಹಾಕಿಕೊಂಡು ಹೋಗಿದ್ದರು. ಅಷ್ಟೇ ಅಲ್ಲದೆ ವೆಂಕಟೇಶ್ ತನ್ನ ಕಾರಿಗೆ ಅಳವಡಿಕೆ ಆಗಿದ್ದ ಜಿಪಿಎಸ್ ಸಂಪರ್ಕವನ್ನು ಕಿತ್ತುಹಾಕಿ ಕಾರು ನಿಲ್ಲಿಸಿದ್ದ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಸುಳಿವು ನೀಡಿದ ಸಿಸಿಟಿವಿ ಫೂಟೇಜ್!: ಪೊಲೀಸರು ಕಾರ್ಯಾಚರಣೆ ವೇಳೆ ಸಮೀಪದ ಅಂಗಡಿಯವರನ್ನು ವಿಚಾರಿಸಿದ್ದಾರೆ. ಚಂದ್ರೇಗೌಡ ಮಗುವನ್ನು ತಿಂಡಿ ಕೊಡಿಸಲು ಎತ್ತಿಕೊಂಡು ಹೋಗುತ್ತಿದ್ದ ದೃಶ್ಯ ಸಮೀಪದ ಕಟ್ಟಡಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮೊದಲು ಮಗು ಯಾರದ್ದು ಎಂದು ಪತ್ತೆಯಾಯ್ತು. ಬಳಿಕ ದಂಪತಿ ವೆಂಕಟೇಶ್ ಅರ್ಪಿತಾ ಆರೋಪಿಗಳು ಎಂಬುದು ಖಚಿತವಾಗಿ. ತನಿಖೆ ನಡೆಸಿ ಆರೋಪಿಗಳನ್ನು ಬಂದಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.
ಆರೋಪಿ ದಂಪತಿ ಚಿನ್ನಾಭರಣ ದೋಚಲು ಪೂರ್ವನಿರ್ಧಾರಿತ ವ್ಯವಸ್ಥಿತ ಸಂಚು ರೂಪಿಸಿಯೇ ಚಂದ್ರೇಗೌಡ, ಪತ್ನಿಯನ್ನು ಕೊಲೆಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಪೊಲೀಸರಿಗೆ ಸಿಕ್ಕಿಬೀಳಬಾರದೆಂದು ಹಲವು ತಂತ್ರವನ್ನು ಮಾಡಿದ್ದಾರೆ. ಆದರೂ ತನಿಖಾ ತಂಡದ ಕಾರ್ಯತತ್ಪರತೆಯಿಂದಾಗಿ ಆರೋಪಿಗಳು ಬಂಧಿತರಾಗಿದ್ದಾರೆ.
-ಎಂ.ಎನ್ ಅನುಚೇತ್, ಡಿಸಿಪಿ, ವೈಟ್‌ಫೀಲ್ಡ್ ವಿಭಾಗ
ಹಿರಿಯ ನಾಗರಿಕರು ಹೆಚ್ಚು ವಾಸಿಸುವ ಭಾಗಗಳಲ್ಲಿ ಹೆಚ್ಚಿನ ಭದ್ರತೆ ಹಾಗೂ ರಕ್ಷಣೆ ಕಲ್ಪಿಸಲು ಕ್ರಮ ವಹಿಸಲಾಗುತ್ತದೆ. ಹಿರಿಯ ನಾಗರೀಕರು ಕೂಡ ತಮ್ಮ ವಾಸ ಸ್ಥಳದ ಬಗ್ಗೆ ಸ್ಥಳೀಯ ಠಾಣೆಗಳಿಗೆ ಮಾಹಿತಿ ನೀಡಿದರೆ ಅವರಿಗೆ ಹೆಚ್ಚಿನ ರಕ್ಷಣೆ ನೀಡಲು ಅನುಕೂಲವಾಗಲಿದೆ.
-ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.