ನವೆಂಬರ್‌ನಲ್ಲಿ ನಾಲ್ಕು ದಿನ ಮಕ್ಕಳ ಹಬ್ಬ
Team Udayavani, Oct 9, 2017, 11:56 AM IST
ಬೆಂಗಳೂರು: ನಗರದ ಕಬ್ಬನ್ ಉದ್ಯಾನದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನಡೆಯಲಿರುವ ಮಕ್ಕಳ ಹಬ್ಬವನ್ನು ಇನ್ನಷ್ಟು ನಾವಿನ್ಯತೆಯೊಂದಿಗೆ ಆಚರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿದ್ಧತೆ ನಡೆಸುತ್ತಿದೆ.
ಈ ಹಿಂದೆ ಎರಡು ದಿನಕ್ಕೆ ಸೀಮಿತವಾಗಿದ್ದ ಮಕ್ಕಳ ಹಬ್ಬವನ್ನು ಈ ಬಾರಿ 4 ದಿನಗಳ ಕಾಲ ಅದ್ಧೂರಿಯಾಗಿ ನಡೆಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ತೀರ್ಮಾನಿಸಿದ್ದು, ಈಗಾಗಲೇ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಹಯಬ್ಬಕ್ಕೆ ಅಂದಾಜು 2 ಕೋಟಿ ರೂ. ವೆಚ್ಚವಾಗಲಿದ್ದು, ನ.11ರಿಂದ 14ರವರೆಗೆ ಕಬ್ಬನ್ ಪಾರ್ಕ್‌ನಲ್ಲಿ ಮಕ್ಕಳ ಕಲರವ ಕೇಳಿಬರಲಿದೆ.
ನಗರ ಪ್ರದೇಶದ ಇಂದಿನ ಆಧುನಿಕ ಜಗತ್ತಿನಲ್ಲಿ ಮುಳುಗಿ ಹೋಗಿರುವ ಮಕ್ಕಳಿಗೆ ಕಲೆ, ವಿಜ್ಞಾನ, ತಂತ್ರಜ್ಞಾನ, ಸಂಸ್ಕೃತಿಯ ಶ್ರೀಮಂತಿಕೆಯ ಅರಿವು ಮೂಡಿಸುವುದರ ಜತೆಗೆ ಗ್ರಾಮೀಣ ಸೊಗಡಿನ ಆಟ-ಪಾಠಗಳನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ, ದಾವಣಗೆರೆ, ಬಾಗಲಕೋಟೆ, ಉಡುಪಿ, ದಕ್ಷಿಣ ಕನ್ನಡ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಿಕ್ಕಮಗಳೂರು, ರಾಮನಗರ, ಮಂಡ್ಯ ಸೇರಿದಂತೆ ರಾಜ್ಯದ ಹಲವು ಕಡೆಗಳಿಂದ ಸುಮಾರು 25ರಿಂದ 30 ಸಾವಿರಕ್ಕೂ ಹೆಚ್ಚು ಮಕ್ಕಳು, ಪೋಷಕರು ಸೇರಿದಂತೆ 1 ಲಕ್ಷಕ್ಕೂ ಅಧಿಕ ಮಂದಿ ಈ ಮಕ್ಕಳ ಹಬ್ಬದಲ್ಲಿ ಭಾಗವಹಿಸಲಿದ್ದಾರೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನಪದ ಆಟ-ಪಾಠ: ಈ ಉತ್ಸವದಲ್ಲಿ ಮಕ್ಕಳಿಗೆ ಗ್ರಾಮೀಣ ಬದುಕಿನ ಮಜಲುಗಲುಗಳ ಪರಿಚಯವೂ ಸಿಗಲಿದೆ. ಬುಟ್ಟಿ ಹೆಣೆಯುವುದು, ಮಡಿಕೆ ಮಾಡುವುದು, ಇಟ್ಟಿಗೆ ತಯಾರಿಕೆ, ಬೆಣ್ಣೆ ಕಡೆಯುವುದು, ರಾಗಿ ಬೀಸುವುದು ಸೇರಿದಂತೆ ಹಲವು ಸಾಂಪ್ರದಾಯಿಕ ಕಲೆಗಳನ್ನು ಮಕ್ಕಳೊಂದಿಗೆ ಬೆರೆತು ನೋಡಿ, ಕಲಿಯುವ ಅವಕಾಶ ದೊಡ್ಡವರಿಗೂ ಲಭ್ಯವಾಗಲಿದೆ.
ನಗರ ಪ್ರದೇಶಗಳಲ್ಲಿ ವಿಡಿಯೋ ಗೇಮ್, ಮೊಬೈಲ್, ಟಿವಿಗಳಲ್ಲಿ ಮುಳುಗಿ ಹೋದ ಮಕ್ಕಳಿಗೆ ಮರೆತೇ ಹೋಗಿರುವ ಎತ್ತಿನ ಬಂಡಿಯ ಸವಾರಿ, ಕುದುರೆ ಟಾಂಗಾ ಸವಾರಿ, ಚಿತ್ರಬಿಡಿಸುವುದು, ಗಿಲ್ಲಿದಾಂಡು, ಲಗೋರಿ, ಕುಸ್ತಿ, ಬುಗುರಿ, ಚೌಕಾಬಾರ, ಮಲ್ಲಕಂಬ, ಚಿಣ್ಣೆಮಣೆ, ಸೈಕಲ್ ಟೈರ್ ಸ್ಪರ್ಧೆ, ಕವಡೆ ಆಟ ಸೇರಿದಂತೆ ಹಲವು ಗ್ರಾಮೀಣ ಸೊಗಡಿನ ಆಟಗಳನ್ನು ಪರಿಚಯಿಸಲಾಗುತ್ತಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳ ಪರಿಚಯ, ಬಿಇಎಲ್, ಎಚ್‌ಎಎಲ್, ಜವಾಹರ ನೆಹರು ತಾರಾಲಯದಿಂದ ವಿಜ್ಞಾನ, ತಂತ್ರಜ್ಞಾನದೊಂದಿಗೆ ಖಗೋಳಕ್ಕೆ ಸಂಬಂಧಿಸಿದ ಪ್ರಾತ್ಯಕ್ಷಿಕೆಗಳು ನಡೆಯಲಿವೆ. ಬ್ಯಾಂಡ್‌ಸ್ಟಾಂಡ್ ಮತ್ತು ಬಾಲಭವನದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಕಲಾವಾದ್ಯ, ನೃತ್ಯ, ಜನಪದ ಕುಣಿತ ಇರಲಿದೆ.
ಫಲಪುಷ್ಪ ಪ್ರದರ್ಶನ: ತೋಟಗಾರಿಕೆ ಇಲಾಖೆ ವತಿಯಿಂದ ಕಬ್ಬನ್‌ಪಾರ್ಕ್‌ನಲ್ಲಿ ನಾಲ್ಕೂ ದಿನ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಜತೆಗೆ ಮಹಡಿ ಉದ್ಯಾನವನ, ಕಿಚನ್ ಗಾರ್ಡನ್, ಅಣಬೆ ಬೇಸಾಯ, ಗಿಡ ನೆಟ್ಟು ಬೆಳೆಸುವ ಬಗ್ಗೆ ಪ್ರಾತ್ಯಕ್ಷಿಕೆ, ಮಕ್ಕಳಿಗಾಗಿ ಕ್ವಿಜ್ ಕೂಡ ಇರಲಿದೆ. ಮೀನುಗಾರಿಕೆ ಇಲಾಖೆ ಅಕ್ವೇರಿಯಂ, ಮೀನುಗಳ ಪರಿಚಯ ಮಾಡಿಸಲಿದೆ.
ಅರಣ್ಯ ಇಲಾಖೆಯು ಪ್ರಾಣಿಗಳ ಮಾದರಿಗಳನ್ನು ಪ್ರದರ್ಶಿಸಲಿದ್ದು, ನಕಲಿ ಅರಣ್ಯ ಸೃಷ್ಟಿಸಲಿದೆ. ಅರಣ್ಯ ಮತ್ತು ವನ್ಯಮೃಗಗಳ ಸಂರಕ್ಷಣೆ ಕುರಿತು ಅರಿವು ಹಾಗೂ ಸೇನಾ ವಾಹನಗಳು, ಆಹಾರ ಇಲಾಖೆಯಿಂದ ಪೌಷ್ಠಿಕಾಂಶ ಆಹಾರ ಸೇವನೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಲಿದೆ.
ಸಂಚಾರ ಬಂದ್?: ನ.11 ಮತ್ತು 12ರಂದು ಸರ್ಕಾರಿ ರಜೆ ಇದ್ದು, ಕಬ್ಬನ್‌ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧ ಇರುತ್ತದೆ. ಆದರೆ, ನ.13 ಮತ್ತು 14ರಂದು ರಜೆ ಇಲ್ಲ. ಆದರೂ ಮಕ್ಕಳ ಹಬ್ಬದ ಹಿನ್ನೆಲೆಯಲ್ಲಿ ಉದ್ಯಾನದಲ್ಲಿ ವಾಹನ ಸಂಚಾರ ಬಂದ್ ಮಾಡಲು ವಿಶೇಷ ಅನುಮತಿ ಪಡೆಯಲು ತೀರ್ಮಾನಿಸಲಾಗಿದೆ.
ರಸ್ತೆಗಿಳಿಯಲಿರುವ “ಕಾವೇರಿ’: ಕಬ್ಬನ್ ಉದ್ಯಾನದಲ್ಲಿ ಮಕ್ಕಳ ಹಬ್ಬಕ್ಕೆ ವಿಶೇಷ ಅತಿಥಿ ಆಗಮಿಸಿಲಿದೆ. ಸುಮಾರು ಎರಡು ದಶಕಗಳ ಹಿಂದಿನ “ಕಾವೇರಿ’ (ಡಬ್ಬಲ್ ಡೆಕ್ಕರ್ ಬಸ್) ಅಂದು ರಸ್ತೆಗಿಳಿಯಲಿದ್ದು, ಮಕ್ಕಳು ಇದರಲ್ಲಿ ಕುಣಿದು ಕುಪ್ಪಳಿಸಬಹುದು. ವಿವಿಧ ಶಾಲೆಗಳಿಂದ ಮಕ್ಕಳನ್ನು ಕರೆತರಲು ಬಿಎಂಟಿಸಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
* ಸಂಪತ್ ತರೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.