ಮಂತ್ರ ಘೋಷದ ನಡುವೆ ಮರೆಯಾದ ಸಂತ
Team Udayavani, Dec 30, 2019, 3:20 AM IST
ಬೆಂಗಳೂರು: ಮಾಧ್ವಪಂಥದ ಶ್ರೇಷ್ಠ ಯತಿಯಾಗಿ, ಸರ್ವ ಸಮಾಜದೊಂದಿಗೆ ಬೆರೆತು, ಧಾರ್ಮಿಕ ವಿವಾದಗಳಿಗೆ ಸ್ಪಷ್ಟೀಕರಣ ನೀಡುತ್ತಾ, ಸಾಮರಸ್ಯದ ಆದರ್ಶ ಜೀವನ ಸವೆಸಿದ ವಿಶ್ವೇಶತೀರ್ಥರು ತಮ್ಮ ಇಚ್ಛೆಯಂತೆ ಪೂರ್ಣಪ್ರಜ್ಞ ವಿದ್ಯಾಪೀಠದ “ಗಂಧದ ಮರ’ವಿದ್ದ ಜಾಗದಲ್ಲೇ ವೃಂದಾವನೈಕ್ಯರಾದರು.
ಪಶ್ಚಿಮದಲ್ಲಿ ಸೂರ್ಯನು ಅಸ್ತಂಗತನಾಗುತ್ತಿದ್ದಂತೆ ವಿಶ್ವಮಾನ್ಯ ವಿಶ್ವೇಶತೀರ್ಥರ ಪಾರ್ಥಿವ ಶರೀರ ಪೂರ್ಣಪ್ರಜ್ಞಾ ಪ್ರವೇಶ ದ್ವಾರ ಸಮೀಪಿಸಿತು. ಅಲ್ಲಿಂದ ಪಾರ್ಥಿವ ಶರೀರವನ್ನು ಸರ್ಕಾರಿ ಗೌರವಕ್ಕಾಗಿ ನಿರ್ಮಿಸಿದ್ದ ವಿಶೇಷ ಪೀಠದ ಮೇಲೆ ಇರಿಸಲಾಯಿತು. ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥರ ಸಮಕ್ಷಮದಲ್ಲಿ ಸಕಲ ಸರ್ಕಾರಿ ಗೌರವ ನಡೆಯಿತು. ದೀಪದಾರತಿ ಎತ್ತಿ, ತಳಿರು ತೋರಣ, ಬಿರುದಾವಳಿಗಳೊಂದಿಗೆ ಪಾರ್ಥಿವ ಶರೀರವನ್ನು ಸಮೀಪದಲ್ಲಿದ್ದ ವೃಂದಾವನದ ಜಾಗಕ್ಕೆ ಕೊಂಡೊಯ್ಯಲಾಯಿತು. ಮಾಧ್ವ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರುತ್ತಿದ್ದಂತೆ ಸುತ್ತಲೂ ನೆರೆದಿದ್ದ ಜನಸ್ತೋಮ, ಭಕ್ತವೃಂದ, ಶಿಷ್ಯಗಣ ನಿರಂತರ ಶ್ಲೋಕ ಪಠಣದಲ್ಲಿ ತೊಡಗಿತ್ತು.
ಮಧ್ವಪಂಥದ ಶ್ರೇಷ್ಠ ಯತಿಗಳಲ್ಲಿ ಓರ್ವರಾಗಿ, ಸಣ್ಣ ವಯಸ್ಸಿನಲ್ಲೇ ಸನ್ಯಾಸತ್ವ ಸ್ವೀಕರಿಸಿ, ಎಲ್ಲ ಸಮಾಜದವರೂ ಮೆಚ್ಚಿ, ಪೂಜಿಸುವಂತ ಉತ್ತಮೋತ್ತಮರಾಗಿ ಬೆಳೆದು, ತಾವು ಸೃಷ್ಟಿಸಿದ ಶಿಷ್ಯವರ್ಗ, ಸಮಾಜಕ್ಕೆ ಹಾಕಿಕೊಟ್ಟ ಮೇಲ್ಪಂಕ್ತಿ ಹೇಗಿತ್ತು ಎಂಬುದಕ್ಕೆ ಅಂತಿಮ ಯಾತ್ರೆಯ ಧಾರ್ಮಿಕ ಕ್ಷಣಗಳು ಸಾಕ್ಷಿಯಾಗಿದ್ದವು. ಪಾರ್ಥಿವ ಶರೀರದ ಪಕ್ಕದಲ್ಲೇ ಕುಳಿತು ನಿರಂತರ ಶ್ಲೋಕಪಠಣ ಮಾಡುತ್ತಿದ್ದ ಹಿರಿಯ ಕಿರಿಯ ವಿದ್ವಾಂಸರ ತಂಡ. ಇನ್ನೊಂದೆಡೆ, ಭಕ್ತಿ¤ಭಾವದಿಂದ ಕೈಮುಗಿದು ನಿಂತಿದ್ದ ಭಕ್ತವೃಂದ.
ಹಿಂದೂ ಸಮಾಜದಲ್ಲಿ ಯಾವುದೇ ಧಾರ್ಮಿಕ ವಿವಾದ ಎದ್ದಾಗಲೂ ಅದಕ್ಕೆ ಮುಕ್ತ ಕಂಠದಿಂದ ಶ್ರೀಗಳು ಸ್ಪಷ್ಟೀಕರಣ ನೀಡುತ್ತಿದ್ದರು. ತಮ್ಮ ನಿಲುವನ್ನು ಕಡ್ಡಿಮುರಿದಷ್ಟೇ ಸ್ಪಷ್ಟವಾಗಿ ತೋರ್ಪಡಿಸುತ್ತಿದ್ದರು. ತಮ್ಮನ್ನು ವಿರೋಧಿಸುವವರನ್ನು ಎಂದೂ ವಿರೋಧಿಸಿದವರಲ್ಲ. ಮಾತುಕತೆ, ಸಂವಾದದ ಮೂಲಕ ಎಲ್ಲದಕ್ಕೂ ಮುಕ್ತ ವೇದಿಕೆ ಕಲ್ಪಿಸುತ್ತಿದ್ದವರು. ದಲಿತ ಕೇರಿಗೆ ಪ್ರವೇಶ, ರಾಮಮಂದಿರ ಹೋರಾಟದ ಮುಂದಾಳತ್ವ, ವಿದ್ವತ್ ಪೂರ್ಣ ಪ್ರವಚನ, ಶಿಷ್ಯರಿಗೆ ನಿತ್ಯಪಾಠ ಹೀಗೆ ಎಲ್ಲವನ್ನೂ ತನ್ನೊಳಗೆ ಇಟ್ಟುಕೊಂಡು, ಸಮಾಜಕ್ಕಾಗಿ ಸಮಷ್ಠಿ ದೃಷ್ಟಿಯಿಂದ ಯೋಚಿಸಿ, ಸರ್ವವನ್ನು ಸಮಾಜಕ್ಕಾಗಿಯೇ ತ್ಯಾಗ ಮಾಡಿದ ಯತಿಶ್ರೇಷ್ಠರ ಅಂತಿಮ ಯಾತ್ರೆಯೂ ಅಷ್ಠೆ ಶ್ರೇಷ್ಠವಾಗಿ ನಡೆಯಿತು.
ಯಾವುದೇ ವಿಚಾರದಲ್ಲೂ ವೈಮನಸ್ಸು ಇಲ್ಲದೆ, ಮುಕ್ತವಾಗಿ ಚರ್ಚೆಗೆ ಮುನ್ನುಡಿಯಿಡುತ್ತಿದ ಪೇಜಾವರ ಶ್ರೀಗಳ ಅಂತಿಮ ಗಳಿಗೆಯೂ ಹಾಗೆಯೇ ಇತ್ತು. ಪೂರ್ಣಪ್ರಜ್ಞಾ ವಿದ್ಯಾಪೀಠದ ಸುತ್ತಲೂ ವೇದ, ಮಂತ್ರಘೋಷಗಳು, ವಿಷ್ಣುಸಹಸ್ರನಾಮ ಪಠಣ ನಿರಂತರವಾಗಿ ನಡೆಯುತ್ತಿರುವಾಗಲೇ ಶ್ರೀಕೃಷ್ಣದೇವಸ್ಥಾನ, ಪೂಜಾ ಮಂದಿರ ಹಾಗೂ ತಾವು ವಾಸವಾಗಿದ್ದ ಕೊಠಡಿಯ ಸಮೀಪವೇ ಇದ್ದ ಗಂಧದ ಮರದ ಕೆಳಗೆ ನಿರ್ಮಿಸಿದ ವೃಂದಾವನದಲ್ಲಿ ಶಾಶ್ವತವಾಗಿ ನೆಲೆ ನಿಂತರು.
1950ರ ದಶಕದಲ್ಲಿ ಅತ್ಯಂತ ಶ್ರಮವಹಿಸಿ, ಶ್ರದ್ಧೆ ಹಾಗೂ ಹಲವು ಕಷ್ಟಗಳನ್ನು ಎದುರಿಸಿ, ಹೆಗಲಿಗೆ ಜೋಳಿಗೆ ಕಟ್ಟಿಕೊಂಡು, ಮನೆ ಮನೆಯಲ್ಲಿ ಭಿಕ್ಷೆ ಎತ್ತಿ 1956ರಲ್ಲಿ ಕಟ್ಟಿದ ಪೂರ್ಣಪ್ರಜ್ಞಾ ವಿದ್ಯಾಪೀಠದಲ್ಲಿ ತಾವೇ ಸ್ವತಃ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಜತೆಗೆ, ಪ್ರವಚನಗಳನ್ನು ಶ್ರೀಗಳು ನೀಡುತ್ತಿದ್ದರು. ಸದಾ ವಿದ್ಯಾರ್ಥಿಗಳೊಂದಿಗೆ ಇರುತ್ತಿದ್ದ ಪೇಜಾವರರು, ತಮ್ಮ ಕಾಲವಾದ ನಂತರವೂ ಇಲ್ಲೇ ಇರಬೇಕು ಎಂಬ ಇಚ್ಛೆಯನ್ನು ಬಹಳ ಸ್ಪಷ್ಟವಾಗಿ ಪೂರ್ಣಪ್ರಜ್ಞಾ ಪ್ರತಿಷ್ಠಾನಕ್ಕೆ ತಿಳಿಸಿದ್ದರು. ಅದರಂತೆ ಅವರ ಅಂತ್ಯಕ್ರಿಯೆಯನ್ನು ವಿದ್ಯಾಪೀಠದಲ್ಲೇ ವಿಧಿವತ್ತಾಗಿ ಮಾಡಲಾಯಿತು.
ಭಾನುವಾರ ಬೆಳಗ್ಗೆ ಇಹಲೋಕ ತ್ಯಜಿಸಿದ ಶ್ರೀಗಳ ಪಾರ್ಥಿವ ಶರೀರವನ್ನು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಮಧ್ಯಾಹ್ನ ವಿಶೇಷ ಹಾಲಿಕಾಪ್ಟರ್ ಮೂಲಕ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತರಲಾಯಿತು. ಅಲ್ಲಿಂದ ತೆರದ ವಾಹನದಲ್ಲಿ” ಹರಿ ಸರ್ವೋತ್ತಮ, ವಾಯು ಜೀವೋತ್ತಮ’ ಎಂಬ ಘೋಷಣೆಯೊಂದಿಗೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಅಲ್ಲಿಂದ ತೆರೆದ ವಾಹನದಲ್ಲಿ ಕತ್ರಿಗುಪ್ಪೆಯಲ್ಲಿರುವ ಪೂರ್ಣಪ್ರಜ್ಞಾ ವಿದ್ಯಾಪೀಠಕ್ಕೆ ಸಂಜೆ 6.20ಕ್ಕೆ ಸರಿಯಾಗಿ ಪಾರ್ಥಿವ ಶರೀರವನ್ನು ತರಲಾಯಿತು. ಸರ್ಕಾರಿ ಗೌರವ, ಧಾರ್ಮಿಕ ವಿಧಿವಿಧಾನಗಳೊಂದಿಗೆ ರಾತ್ರಿ ವೃಂದಾವನ ಪ್ರವೇಶ ಮಾಡಲಾಯಿತು.
ಹರಿದು ಬಂದ ಭಕ್ತಸಾಗರ
ಬೆಂಗಳೂರು: ಪೂರ್ಣಪ್ರಜ್ಞಾ ವಿದ್ಯಾಪೀಠಕ್ಕೆ ಭಾನುವಾರ ಬೆಳಗ್ಗೆಯಿಂದಲೇ ಭಕ್ತರು ಸಾಗರೋಪಾದಿಯಲ್ಲಿ ಭೇಟಿ ನೀಡಿದರು. ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಕೃಷ್ಣೆ„ಕ್ಯರಾಗಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಮಠದ ವಿದ್ಯಾರ್ಥಿಗಳು ದುಃಖ ತಪ್ತರಾದರು. ಗುರುಗಳನ್ನು ಕಳೆದುಕೊಂಡ ನೋವು ವಿದ್ಯಾರ್ಥಿಗಳಲ್ಲಿ ಕಾಣುತಿತ್ತು.
ಹೂಗಳಿಂದ ಅಲಂಕರಿಸಿದ ತೆರೆದ ವಾಹನ: ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನ ಮತ್ತು ಅಲ್ಲಿಂದ ವಿದ್ಯಾಪೀಠದವರೆಗೆ ಶ್ರೀಗಳ ಪಾರ್ಥಿವ ಶರೀರ ತರಲು ಹೂಗಳಿಂದ ಅಲಂಕರಿಸಿದ ತೆರೆದ ವಾಹನ ವ್ಯವಸ್ಥೆ ಮಾಡಲಾಗಿತ್ತು. ವಾಹನದಲ್ಲಿ ಪೀಠ ಅಳವಡಿಸಲಾಗಿತ್ತು. ಡಿಸಿಎಂ ಗೋವಿಂದ ಕಾರಜೋಳ, ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಮಣ್ಯ, ಬೆಳಗ್ಗೆಯೇ ವಿದ್ಯಾಪೀಠಕ್ಕೆ ತೆರಳಿ ಭದ್ರತೆ ಮತ್ತು ಸಿದ್ಧತೆಗಳನ್ನು ಪರಿಶೀಲಿಸಿದರು.
ಮಧ್ಯಾಹ್ನ ಊಟದ ವ್ಯವಸ್ಥೆ: ಪೂರ್ಣಪ್ರಜ್ಞಾ ವಿದ್ಯಾಪೀಠಕ್ಕೆ ಸಾವಿರಾರು ಭಕ್ತರು ಬಂದ ಹಿನ್ನೆಲೆಯಲ್ಲಿ, ಭಕ್ತರ ಅನುಕೂಲಕ್ಕೆ ಕುಡಿಯುವ ನೀರು, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಆ್ಯಂಬುಲೆನ್ಸ್ ಸ್ಥಳದಲ್ಲಿದ್ದವು.
ಎಲ್ಲ ರಸ್ತೆಯಲ್ಲೂ ಬೆಳಕಿನ ವ್ಯವಸ್ಥೆ: ಶ್ರೀಗಳ ಪಾರ್ಥಿವ ಶರೀರ ಪೂರ್ಣಪ್ರಜ್ಞಾ ವಿದ್ಯಾಪೀಠದ ಆವರಣಕ್ಕೆ ಸಂಜೆ ವೇಳೆ ಬರಲಿದ್ದ ಕಾರಣ ಸುತ್ತಲ ರಸ್ತೆಗಳಲ್ಲಿ ಬಿಬಿಎಂಪಿ ವಿದ್ಯುತ್ ವಿಭಾಗದಿಂದ ಬೆಳಗ್ಗೆ 11 ಗಂಟೆಗೆ ಬೀದಿ ದೀಪ, ಹೈಮಸ್ಟ್ ದೀಪಗಳ ವ್ಯವಸ್ಥೆ ಮಾಡಲಾಗಿತ್ತು.
ನಿರಂತರ ಮಂತ್ರ ಪಠಣ: ಪೇಜಾವರ ಶ್ರೀಗಳ ಪಾರ್ಥಿವ ಶರೀರ ಬಸವನ ಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಅಂತಿಮ ದರ್ಶನದ ಕಾರ್ಯ ಮುಗಿಯುತ್ತಿದ್ದಂತೆ ಪೂರ್ಣಪ್ರಜ್ಞಾ ವಿದ್ಯಾಪೀಠದಲ್ಲಿ ಸಕಲ ಸರ್ಕಾರಿ ಗೌರವಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪೀಠದ ಸಮೀಪದಲ್ಲಿ ಸುಮಾರು 50ಕ್ಕೂ ಅಧಿಕ ವೇದ ಪಂಡಿತರು ವಿಷ್ಣು ಸಹಸ್ರ ನಾಮ ಸಾಮೂಹಿಕ ಪಠಣ ನಿರಂತರವಾಗಿ ನಡೆಸಿದರು.
ಜ್ವರದ ಬಾಧೆಯಲ್ಲೇ ಎಡಬಿಡದ ಚಟುವಟಿಕೆ: ಡಿ. 17ರಂದು ತಿರುಪತಿಯ ಶ್ರೀನಿವಾಸನ ದರ್ಶನ ಪಡೆದ ಪೇಜಾವರ ಶ್ರೀಗಳಿಗೆ ಜ್ವರಬಾಧೆ ಕಂಡುಬಂದಿತ್ತು. ಡಿ. 18ರಂದು ಬೆಂಗಳೂರಿನಲ್ಲಿದ್ದು, ರಾತ್ರಿ ಹಾಸನಕ್ಕೆ ಬಂದು ತಂಗಿದ್ದರು. ಡಿ. 19ರ ಮಧ್ಯಾಹ್ನ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ರಾಮಕುಂಜ ಗ್ರಾಮದಲ್ಲಿರುವ ತಾವು ಹುಟ್ಟಿದ ಮನೆಯಲ್ಲಿ ಪೂಜೆ ಸಲ್ಲಿಸಿ ತಾವು ಕಲಿತ ಮತ್ತು ಉಸ್ತುವಾರಿ ವಹಿಸಿರುವ ಶಾಲೆಯ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.
ಬಳಿಕ ಉಡುಪಿ ಜಿಲ್ಲೆಯ ಕಾಪು ತಾಲೂಕು ಪಾಜಕದಲ್ಲಿರುವ ತಮ್ಮ ಕನಸಿನ ಕೂಸುಗಳಲ್ಲಿ ಒಂದಾದ ಆನಂದತೀರ್ಥ ವಿದ್ಯಾಲಯದ ವಾರ್ಷಿಕೋತ್ಸವದಲ್ಲೂ ಪಾಲ್ಗೊಂಡಿದ್ದರು. ಬಳಿಕ 2000-01ರ ತಮ್ಮ ಪರ್ಯಾಯ ಅವಧಿಯಲ್ಲಿ ನಿರ್ಮಿಸಿದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಒಂದು ಸಭೆಯಲ್ಲಿ ಪಾಲ್ಗೊಂಡು ಅರ್ಧಗಂಟೆ ಉಪನ್ಯಾಸವನ್ನೂ ನೀಡಿದ್ದರು.
ಇಷ್ಟೆಲ್ಲ ಚಟುವಟಿಕೆಗಳನ್ನು ಜ್ವರದಲ್ಲೇ ನಡೆಸಿದ್ದರು. ರಾತ್ರಿ ಉಸಿರಾಟದ ಸಮಸ್ಯೆ ಉಂಟಾದಾಗ ಅವರನ್ನು ಆದರ್ಶ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ದೊರಕಿದ ಚಿಕಿತ್ಸೆಯಿಂದ ಚೇತರಿಕೆಯಾದ ಕಾರಣ ಆಸ್ಪತ್ರೆಯಿಂದ ಮಠಕ್ಕೆ ಬಂದರು. ಡಿ. 20ರ ಬೆಳಗ್ಗೆ 3.30ರ ಹೊತ್ತಿಗೆ ಮತ್ತೆ ಉಸಿರಾಟದ ಸಮಸ್ಯೆ ತೀವ್ರವಾದಾಗ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಯಿತು.
ಆರಂಭದ ದಿನಗಳಲ್ಲಿ ತುಸು ಚೇತರಿಕೆ ಕಂಡುಬಂದರೂ ಡಿ. 26ರ ಬಳಿಕ ಅವರ ಆರೋಗ್ಯ ಮತ್ತೆ ಕ್ಷೀಣಿಸತೊಡಗಿತು. ಕೂಲಂಕಷ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ಡಿ.28ರಂದು ವೈದ್ಯರು ಪ್ರಕಟಿಸಿದರು. ಡಿ.29ರ ಬೆಳಗ್ಗೆ ವೆಂಟಿಲೇಟರ್ ಸಹಿತವಾಗಿ ಪೇಜಾವರ ಮಠಕ್ಕೆ ಕರೆತಂದ ಬಳಿಕ ಮಠದಲ್ಲಿ ಅವರು ಇಹಲೋಕ ತ್ಯಜಿಸಿದರು.
ಇಂಥ ಒಬ್ಬ ಮಹಾಯತಿಗಳನ್ನು ನೋಡುವ, ಅವರ ಮಾತನ್ನು ಕೇಳುವ, ಅವರೊಂದಿಗೆ ಮಾತಾಡುವ ಮಹಾಭಾಗ್ಯ ನನಗೆ ಸಿಕ್ಕಿದ್ದೇ ನನ್ನ ಜೀವನಕ್ಕೆ ಧನ್ಯತೆ ನೀಡಿದೆ. ಪೂಜ್ಯ ವಿಶ್ವೇಶ ತೀರ್ಥರು ಒಬ್ಬ ಯುಗಪುರುಷ. ಆಧ್ಯಾತ್ಮಿಕ ಮೇರುಗಿರಿ. ಸಾಮಾಜಿಕ ಕ್ರಾಂತಿಯ ಹರಿಕಾರ. ರಾಷ್ಟ್ರೀಯತೆಯ ಪರಮ ಆರಾಧಕ. ಮಾನವೀಯತೆಯ ಮಮತಾಮೂರ್ತಿ. ಪರಂಪರೆ-ಆಧುನಿಕತೆಗಳ ಸಮನ್ವಯಕ. ಧರ್ಮದ ಯುಗಾನುಕೂಲ ವ್ಯಾಖ್ಯಾನಕಾರ.
-ದತ್ತಾತ್ರೇಯ ಹೊಸಬಾಳೆ, ರಾಷ್ಟ್ರೀಯ ಸಹ ಸರಕಾರ್ಯವಾಹ, ಆರ್‌ಎಸ್‌ಎಸ್
ಅತ್ಯಂತ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಿದ ಕೀರ್ತಿ ಪೇಜಾ ವರ ಶ್ರೀಗಳದ್ದು. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಷ್ಟ್ರಾ ಭಿಮಾನ ಸಂಸ್ಕೃತಿ ಸಂವರ್ಧಿಸುವ ನಿಟ್ಟಿನಲ್ಲಿ ಶ್ರೀಗಳು ಮಾಡಿದ ಸೇವೆ ಅವಿಸ್ಮರಣೀಯ. ಹಿಂದೂ ಸಂಸ್ಕೃತಿಯ ಪುನರುತ್ಥಾನ ಮತ್ತು ಧರ್ಮ ಪರಂಪರೆ ಸಂರಕ್ಷಿಸುವ ಕಾರ್ಯದಲ್ಲಿ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿ ಕೊಂಡಿದ್ದರು. ಅವರ ಆದರ್ಶ ಮೌಲ್ಯಗಳು ಉಳಿಯಲಿ, ಬೆಳೆಯಲಿ.
-ಡಾ| ವೀರಸೋಮೇಶ್ವರ ಶಿವಾಚಾರ್ಯ, ಶ್ರೀ, ಶ್ರೀ ರಂಭಾಪುರಿ ಪೀಠ, ಬಾಳೆಹೊನ್ನೂರು
ಪೇಜಾವರ ಸ್ವಾಮೀಜಿಗಳ ಅಗಲುವಿಕೆಯಿಂದ ಬಹಳ ದುಃಖವಾಗಿದೆ. ವಾಮನಮೂರ್ತಿಯಾಗಿದ್ದುಕೊಂಡು ತ್ರಿವಿಕ್ರಮನಾಗಿ ದೇಶವ್ಯಾಪಿ ಬೆಳೆದದ್ದು ಅಚ್ಚರಿ. ಈ ಭಾಗದಲ್ಲಿಯ ಯಾವುದೇ ಸಮಸ್ಯೆಗಳನ್ನೂ ಸಮರ್ಪಕವಾಗಿ ಬಗೆಹರಿಸುತ್ತಿದ್ದರು. ಶ್ರೀಮಠ ಮತ್ತು ತಮ್ಮ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಇತ್ತು. ಅದನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಕಂಡಿದ್ದೇವೆ. ಅವರ ಸೇವೆ ಮರೆಯುವಂತಿಲ್ಲ.
-ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಸೋಂದಾ ಸ್ವರ್ಣವಲ್ಲೀ
ಸತತ ಐವತ್ತು ವರ್ಷಗಳಿಂದ ಪೇಜಾವರ ಶ್ರೀಗಳು ಜನಸೇವೆ, ರಾಷ್ಟ್ರಸೇವೆ ಮಾಡಿಕೊಂಡು ಬಂದಿದ್ದಾರೆ. ಉಮಾಭಾರತಿ ಅವರಿಗೆ ದಿಧೀಕ್ಷೆ ನೀಡುವ ಮೂಲಕ ಲಿಂಗ ತಾರತಮ್ಯ ಹೋಗಲಾಡಿಸುವ ಪ್ರಯತ್ನ ಮಾಡಿದ್ದರು. ಹರಿಜನ ಕೇರಿಯಲ್ಲಿ ಪಾದಯಾತ್ರೆ ಮಾಡುವ ಮೂಲಕ ಸಮಾಜ ಪರಿವರ್ತನೆಗೆ ಮುಂದಾಗಿದ್ದರು. ಸಾಮಾಜಿಕ ಸಾಮರಸ್ಯ ಬೆಸೆಯುವ ಅವರಲ್ಲಿನ ಆದರ್ಶ ಗುಣ ಸದಾ ಸ್ಮರಣೀಯ.
-ಡಾ| ಶಿವಮೂರ್ತಿ ಮುರುಘಾ ಶರಣರು, ಮುರುಘಾ ಮಠ, ಚಿತ್ರದುರ್ಗ
ಕೆಲವರ ಜತೆ ವಿಶ್ವಾಸ ಮಾಡಿದರೆ ಜಗಳ ಆಡುವಂತಿಲ್ಲ, ಜಗಳ ಮಾಡಿದರೆ ವಿಶ್ವಾಸದಲ್ಲಿ ಇರುವಂತೆ ಇಲ್ಲ. ಆದರೆ ಪೇಜಾವರ ಶ್ರೀಗಳೊಡನೆ ವಿಶ್ವಾಸ ಮತ್ತು ಜಗಳ ಎರಡೂ ಸಾಧ್ಯವಿತ್ತು. ಅವರ ಜತೆ ಮುಕ್ತ ಸಂವಾದ-ಚರ್ಚೆಗೆ ಅವಕಾಶವಿತ್ತು. ಶ್ರೀಗಳ ಜನಪರ ಕಾಳಜಿಯನ್ನು ವಿಚಾರಭೇದ ಹೊಂದಿದ್ದವರೂ ಒಪ್ಪುತ್ತಿದ್ದರು. ನಮ್ಮ ಹಾಗೂ ಪೂಜ್ಯರ ನಡುವೆ ವೈಚಾರಿಕ ಭಿನ್ನಾಭಿಪ್ರಾಯಗಳಿದ್ದವೇ ಹೊರತು ಮಾನವೀಯ ಪ್ರೀತಿ-ವಿಶ್ವಾಸಗಳಿಗೆ ಎಂದೂ ಕೊರತೆಯಾಗಿರಲಿಲ್ಲ.
-ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾಣೇಹಳ್ಳಿ ಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.